Anuraadha nakshatra: ಅನುರಾಧ ನಕ್ಷತ್ರ ಹೊಂದಿರುವವರ ಜಾತಕಫಲ, ಈ ನಕ್ಷತ್ರ ಹೊಂದಿರುವವರು ಅಪರೂಪದ ಅಸಾಧಾರಣ ವ್ಯಕ್ತಿಗಳು, ಇಲ್ಲಿದೆ ವಿವರ
lucky star Anuraadha nakshatra: ಅನುರಾಧ ನಕ್ಷತ್ರವನ್ನು ಜ್ಯೋತಿಷಗ್ರಂಥಗಳಲ್ಲಿ ಮಹಾನಕ್ಷತ್ರ ಎಂದು ಕರೆಯಲಾಗುತ್ತದೆ. ಈ ನಕ್ಷತ್ರದ ದೇವತೆ ಮಿತ್ರ. ಇದು ಶನಿಯ ನಕ್ಷತ್ರವಾಗಿದೆ. ಈ ನಕ್ಷತ್ರ ಹೊಂದಿರುವವರ ಜಾತಕಫಲ ಇಲ್ಲಿದೆ.
ಜ್ಯೋತಿಷ್ಯ ಗ್ರಂಥಗಳಲ್ಲಿ ಈ ನಕ್ಷತ್ರವನ್ನು ಮಹಾ ನಕ್ಷತ್ರ ಎಂದು ಪರಿಗಣಿಸಿದ್ದಾರೆ. ಈ ನಕ್ಷತ್ರ ಇರುವ ದಿನ ಚಂದ್ರನು ನೀಚನಾಗಿದ್ದರೂ ಸಹ ಹಲವು ಕೆಲಸ ಕಾರ್ಯಗಳನ್ನು ಮಾಡಬಹುದಾಗಿದೆ. ವಿವಾಹದ ಕೂಟ ಮತ್ತು ಗುಣವನ್ನು ನೋಡುವಾಗಲೂ ಸಹ ಅನುರಾಧ ನಕ್ಷತ್ರವನ್ನು ಶುಭ ನಕ್ಷತ್ರ ಎಂದೇ ಪರಿಗಣಿಸುತ್ತಾರೆ.
ಈ ನಕ್ಷತ್ರದ ದೇವತೆ ಮಿತ್ರ. ಇದು ಶನಿಯ ನಕ್ಷತ್ರವಾಗಿದೆ. ಅಂದರೆ ಇದರ ದಶಾಕಾಲ 19 ವರ್ಷಗಳಾಗುತ್ತವೆ. ಕೇವಲ ಚಂದ್ರನಲ್ಲದೆ ಸೂರ್ಯಗ್ರಹ ಈ ನಕ್ಷತ್ರದಲ್ಲಿ ಸಂಚರಿಸುತ್ತಿದ್ದಾಗಲೂ ಅದನ್ನು ಮಹಾ ನಕ್ಷತ್ರವೆಂದೇ ಪರಿಗಣಿಸುತ್ತೇವೆ. ಸಾಮಾನ್ಯವಾಗಿ ಇವರು ಸಮಾಜದ ಗಣ್ಯ ವ್ಯಕ್ತಿಗಳ ಸಂಪರ್ಕದಲ್ಲಿ ಇರುತ್ತಾರೆ. ಧೈರ್ಯಕ್ಕೆ ಕೊರತೆ ಇರದು. ಸರಳತೆ ಮನೆ ಮಾಡಿರುತ್ತದೆ. ಒಡವೆಗಳ ಬಗ್ಗೆ ಅನಗತ್ಯ ಆಸೆ ಆಕಾಂಕ್ಷೆಗಳು ಎಂದಿಗೂ ಇರುವುದಿಲ್ಲ. ಮನಸ್ಸಿಗೆ ಒಪ್ಪುವ ಕೆಲಸವನ್ನಷ್ಟೇ ಮಾಡುತ್ತಾರೆ. ಸರಿಯೋ ತಪ್ಪೋ ಸುಲಭವಾಗಿ ಇವರು ಯಾರ ಮಾತನ್ನು ಕೇಳುವುದಿಲ್ಲ. ಬೇಡದ ವಿಚಾರಗಳಿಗೆ ಮಾನಸಿಕ ಚಿಂತೆಗೆ ಒಳಗಾಗುತ್ತಾರೆ. ಎಲ್ಲರನ್ನು ನಂಬುವವರು ಸುಲಭವಾಗಿ ಮೋಸ ಹೋಗುತ್ತಾರೆ. ಹಣದ ತೊಂದರೆ ಕಂಡು ಬರದು. ಹೋರಾಟ ಎಂದರೆ ಬರಿ ಇಷ್ಟ. ಸೇಡು ತೀರಿಸುವ ವ್ಯಕ್ತಿತ್ವ ಇವರಲ್ಲಿ ಇರುವುದಿಲ್ಲ.
ಹಸಿವೆಯನ್ನು ತಡೆಯಲಾರರು. ಸ್ತ್ರೀಯರಾಗಲಿ ಪುರುಷರಾಗಲಿ ತಮಗೆ ಇಷ್ಟ ಬಂದ ಕೆಲಸವನ್ನಷ್ಟೇ ಮಾಡುತ್ತಾರೆ. ಕೇವಲ ಕುಟುಂಬದ ಒಳಗಷ್ಟೇ ಅಲ್ಲದೆ ಹೊರವಲಯದಲ್ಲಿಯೂ ಜನಪ್ರಿಯತೆ ಗಳಿಸುತ್ತಾರೆ. ಬಂಧು-ಬಳಗದವರಲ್ಲಿ ಏನನ್ನು ಆಶಿಸುವುದಿಲ್ಲ. ಆರೋಗ್ಯದ ಬಗ್ಗೆ ಕಾಳಜಿ ತೋರುವುದಿಲ್ಲ. ಇನ್ನೊಬ್ಬರಿಗೆ ಬುದ್ಧಿವಾದ ಮಾಡುವುದೆಂದರೆ ಪ್ರೀತಿ. ಪ್ರವಾಸ ಪ್ರಿಯರು. ಇವರಿದ್ದರೆ ಸಂತೋಷ ಹಾಸ್ಯಕ್ಕೆ ಪಾರವೇ ಇರುವುದಿಲ್ಲ. ಬುದ್ದಿವಂತಿಕೆಯಿಂದ ಮಾತನಾಡುತ್ತಾರೆ. ತಾವೊಬ್ಬರೇ ಬುದ್ಧಿವಂತರೆಂದು ತೋರಿಸಿ ಅಪಹಾಸ್ಯಕ್ಕೆ ಒಳಗಾಗುತ್ತಾರೆ. ಇವರಿಂದ ಸಹಾಯ ಪಡೆದವರು ದೂರವಾಗುತ್ತಾರೆ. ಇವರೆಷ್ಟು ಮುಗ್ಧರೆಂದರೆ ಒಳ್ಳೆಯರು ಕೆಟ್ಟವರು ಎಂಬ ಭೇದ ಭಾವವನ್ನೇ ತೋರುವುದಿಲ್ಲ. ಇವರಿಗೆ ತೊಂದರೆ ನೀಡಿದವರಿಗೂ ಸಹ ಅವರ ಕಷ್ಟದ ಸಮಯದಲ್ಲಿ ಸಹಾಯ ಮಾಡುತ್ತಾರೆ.
ಎಚ್ಚರ ತಪ್ಪಿದರೆ ಸ್ತ್ರೀಯರಿಗೆ ಗರ್ಭಕೋಶದ ತೊಂದರೆ ಇರುತ್ತದೆ. ಪುರುಷರಿಗೆ ಮೂತ್ರದ ಸೋಂಕು ಸಾಮಾನ್ಯವಾಗುತ್ತದೆ. ಆದರೆ ಆತ್ಮಸ್ಥೈರ್ಯದಿಂದ ಎಲ್ಲವನ್ನು ಗೆಲ್ಲಬಲ್ಲವರಾಗಿರುತ್ತಾರೆ. ಬುದ್ಧಿವಾದ ಹೇಳುವುದರಲ್ಲಿ ನಿಸ್ಸೀಮರು. ಒಂದೇ ಬಾರಿ ಹಲವು ಕೆಲಸಗಳನ್ನು ಮಾಡಬಲ್ಲ ಚಾತುರ್ಯತೆ ಇರುತ್ತದೆ. ಸಾಧು ಸಂತರಲ್ಲಿ ಹೆಚ್ಚಿನ ನಂಬಿಕೆ ಗೌರವ ತೋರುತ್ತಾರೆ.
ತಂದೆಯ ಆಸ್ತಿಯಲ್ಲಿ ಸ್ವಲ್ಪ ಭಾಗವಾದರೂ ಇವರಿಗೆ ದೊರೆಯುತ್ತದೆ. ಸೋದರರು ಸೋದರಿಯ ಜೊತೆಯಲ್ಲಿ ವಿಶೇಷವಾದಂತಹ ಸಂಪರ್ಕವಿರುತ್ತದೆ. ಬದಲಾಗುವ ಆಧುನಿಕ ತಂತ್ರಜ್ಞಾನವನ್ನು ಬಳಸುವುದರಲ್ಲಿ ಇವರು ಪ್ರಥಮರು. ಯಾವುದೇ ವಿಚಾರವನ್ನು ಸಂಪೂರ್ಣವಾಗಿ ಕಲಿತಿರುವುದಿಲ್ಲ. ತಿಳಿಯದ ವಿಚಾರಗಳ ಬಗ್ಗೆಯೂ ವಾದ ಮಂಡಿಸುತ್ತಾರೆ. ಒಟ್ಟಾರೆ ಅಪರೂಪದ ವ್ಯಕ್ತಿತ್ವದ ಅಸಾಧಾರಣ ವ್ಯಕ್ತಿಯಾಗಿ ಬಾಳುತ್ತಾರೆ.
(ಎಚ್. ಸತೀಶ್, ಜ್ಯೋತಿಷಿ ಬೆಂಗಳೂರು)
ವಿಭಾಗ