ಮಿಥುನ ರಾಶಿ ದೀಪಾವಳಿ ಭವಿಷ್ಯ: ಸಣ್ಣ ಕೆಲಸವಾದರೂ ಪ್ರಯತ್ನ ದೊಡ್ಡದಾಗಿರುತ್ತೆ, ಆರೋಗ್ಯ ಕಾಪಾಡಿಕೊಳ್ಳಲು ಧ್ಯಾನ, ಯೋಗಕ್ಕೆ ಒತ್ತು ನೀಡುತ್ತೀರಿ
Deepavali Gemini Horoscope 2024: ದೀಪಾವಳಿಯನ್ನು ಹಲವರು ಹಣಕಾಸು ವರ್ಷದ ಆರಂಭ ಎಂದೇ ಪರಿಗಣಿಸುತ್ತಾರೆ. ಉದ್ಯೋಗ, ಹಣಕಾಸು, ವ್ಯಾಪಾರಗಳನ್ನೇ ದೃಷ್ಟಿಯಲ್ಲಿಟ್ಟುಕೊಂಡು ದೀಪಾವಳಿ ಪ್ರಯುಕ್ತ ವೈದಿಕ ಜ್ಯೋತಿಷ್ಯದ ರೀತಿಯಲ್ಲಿ ಲೆಕ್ಕ ಹಾಕಿ ಮಿಥುನ ರಾಶಿಯ ದೀಪಾವಳಿ ವರ್ಷ ಭವಿಷ್ಯ ಇಲ್ಲಿದೆ. (ಬರಹ: ಎಚ್.ಸತೀಶ್)
Deepavali Gemini Horoscope 2024: ದೀಪಾವಳಿ ಅಮಾವಾಸ್ಯೆಯಂದು ಲಕ್ಷ್ಮೀಪೂಜೆ ಮಾಡುವ ಸಂಪ್ರದಾಯ ಕರ್ನಾಟಕದಲ್ಲಿದೆ. ಎಷ್ಟೋ ಅಂಗಡಿಗಳ ಮಾಲೀಕರು, ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ಮಾಡುವವರು ದೀಪಾವಳಿಯಿಂದ ದೀಪಾವಳಿಗೆ ಲಾಭ ನಷ್ಟಗಳ ಲೆಕ್ಕಾಚಾರ ಹಾಕುತ್ತಾರೆ. ಮಿಥುನ ರಾಶಿಯವರಿಗೆ ದೀಪಾವಳಿ ವರ್ಷ ಭವಿಷ್ಯದ ಫಲಾಫಲಗಳು ಹೇಗಿದೆ ಎನ್ನುವ ವಿವರ ಇಲ್ಲಿದೆ.
ಮಿಥುನ ರಾಶಿಯವರ ದೀಪಾವಳಿ ವರ್ಷ ಭವಿಷ್ಯದಲ್ಲಿ ಅಂತರರಾಷ್ಟ್ರೀಯ ಮಟ್ಟದ ವ್ಯಾಪಾರ ವ್ಯವಹಾರಗಳಲ್ಲಿ ಉತ್ತಮ ಲಾಭವನ್ನು ಗಳಿಸುವಿರಿ. ಆಡುವ ಮಾತಿನ ಮೇಲೆ ಹತೋಟಿ ಇರದೆ ಹೋದಲ್ಲಿ ವಿವಾದಕ್ಕೆ ಗುರಿಯಾಗುವಿರಿ. ಹಣಕಾಸಿನ ವ್ಯವಹಾರಗಳಲ್ಲಿ ಎಚ್ಚರಿಕೆ ಇರಬೇಕು. ಹೆಣ್ಣು ಮಕ್ಕಳ ಪ್ರತಿಭೆಗೆ ತಕ್ಕಂತಹ ಅವಕಾಶ ಮತ್ತು ಪ್ರಶಂಸೆಯು ಲಭ್ಯವಾಗುತ್ತದೆ. ಸದಾಕಾಲ ಯಾವುದಾದರೂ ಒಂದು ಒತ್ತಡವು ನಿಮ್ಮನ್ನು ಕಾಡುತ್ತದೆ. ಕಷ್ಟವೆನಿಸುವ ಕೆಲಸ ಕಾರ್ಯಗಳಿಂದ ದೂರ ಉಳಿಯುವಿರಿ. ನಿಮ್ಮ ಗೌರವ ಘನತೆಯನ್ನು ಹೆಚ್ಚಿಸಿಕೊಳ್ಳುವ ಯತ್ನದಲ್ಲಿ ತಪ್ಪು ನಿರ್ಧಾರಗಳನ್ನು ತೆಗೆದುಕೊಳ್ಳುವ ಸಾಧ್ಯತೆ ಇರುತ್ತದೆ.
ನಿಮ್ಮ ಪ್ರತಿಯೊಂದು ಕೆಲಸದಲ್ಲಿಯೂ ಬೇರೆಯವರ ಪ್ರಭಾವವು ಕಂಡು ಬರುತ್ತದೆ. ಸ್ವತಂತ್ರವಾಗಿ ಕೆಲಸ ಕಾರ್ಯಗಳನ್ನು ನಿರ್ವಹಿಸಿರುವುದು ಅನುಕೂಲಕರವಾಗುತ್ತದೆ. ಬೇರೆಯವರನ್ನು ಟೀಕಿಸುವ ವೇಳೆ ಎಚ್ಚರಿಕೆ ವಹಿಸಿ. ಕುಟುಂಬಕ್ಕೆ ಸಂಬಂಧಿಸಿದ ಆತುರದ ನಿರ್ಧಾರಗಳು ಸಮಸ್ಯೆಗಳಿಗೆ ಕಾರಣವಾಗುತ್ತವೆ. ಗುರು ಹಿರಿಯರ ಆದೇಶವನ್ನು ಪಾಲಿಸುವುದು ಒಳ್ಳೆಯದು. ಬೇರೆಯವರು ಮಾಡುವ ತಪ್ಪಿನಿಂದಾಗಿ ನೀವು ಕಷ್ಟ ನಷ್ಟವನ್ನು ಅನುಭವಿಸುವಿರಿ. ಆದ್ದರಿಂದ ಪಾಲುಗಾರಿಕೆಯ ವ್ಯಾಪಾರ ಇದ್ದಲ್ಲಿ ಎಚ್ಚರಿಕೆಯಿಂದ ವ್ಯವಹರಿಸಿ. ಸಾಲಾ ಕೊಡುವುದು ಮತ್ತು ತೆಗೆದುಕೊಳ್ಳುವುದು ವಿವಾದಕ್ಕೆ ಕಾರಣವಾಗುತ್ತದೆ. ಸಣ್ಣ ಪ್ರಮಾಣದ ಕೆಲಸ ಕಾರ್ಯವಾದರೂ ಪ್ರಯತ್ನವೂ ಹೆಚ್ಚಿನದಾಗಿರುತ್ತದೆ. ನಿಮ್ಮ ಆರೋಗ್ಯವನ್ನು ಕಾಪಾಡಿಕೊಳ್ಳಲು ಯೋಗ ಪ್ರಾಣಾಯಾಮವನ್ನು ಅನುಸರಿಸುವಿರಿ.
ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವ ಸಾಧ್ಯತೆ ಇರುತ್ತೆ
ದೊರೆಯುವ ಹೊಸ ಅವಕಾಶಗಳನ್ನು ಸದುಪಯೋಗ ಮಾಡಿಕೊಳ್ಳುತ್ತೀರಿ. ಖ್ಯಾತ ಸಂಸ್ಥೆಗಳ ಆಡಳಿತವು ನಿಮ್ಮದಾಗುತ್ತದೆ. ಹಣಕಾಸಿನ ವಿಚಾರದಲ್ಲಿ ಕುಟುಂಬದಲ್ಲಿ ಒಮ್ಮತವಿರುತ್ತದೆ. ಖರ್ಚು ವೆಚ್ಚಗಳು ಹೆಚ್ಚಲಿವೆ. ಹಣದ ಹೂಡಿಕೆಗಳಿಂದ ಉತ್ತಮ ಲಾಭ ಗಳಿಸುವುದು ಸಾಧ್ಯತೆ ಇರುತ್ತದೆ. ಉದ್ಯೋಗದಲ್ಲಿ ಬೇರೆಯವರ ಸಲಹೆಯನ್ನು ಒಪ್ಪಲೇಬೇಕಾಗುತ್ತದೆ. ನಿಮ್ಮ ಮನದ ಯೋಜನೆಗಳನ್ನು ಕಾರ್ಯರೂಪಕ್ಕೆ ತರಲು ಸಾಧ್ಯವಾಗುವುದಿಲ್ಲ. ಆತ್ಮೀಯರೊಬ್ಬರ ಭೇಟಿ ಮಾಡುವಿರಿ. ಪುರುಷರಿಗಿಂತಲೂ ಸ್ತ್ರೀಯರು ಈ ಅವಧಿಯಲ್ಲಿ ಹೆಚ್ಚಿನ ಧನಾತ್ಮಕ ಫಲಗಳನ್ನು ಪಡೆಯುತ್ತಾರೆ. ನಿಮ್ಮಲ್ಲಿನ ಸಾಮಾಜಿಕ ಕಳಕಳಿಯನ್ನು ಎಲ್ಲರೂ ಮೆಚ್ಚುತ್ತಾರೆ. ಬೇರೆಯವರ ಹಣದ ವ್ಯವಹಾರದಲ್ಲಿ ಸಾಕ್ಷಿದಾರರಾದಲ್ಲಿ ತೊಂದರೆಗೆ ಸಿಲುಕುವಿರಿ.
ಸಹೋದ್ಯೋಗಿಗಳನ್ನು ಸೋದರ ಭಾವನೆಯಿಂದ ಕಾಣುವಿರಿ. ವಿದ್ಯಾರ್ಥಿಗಳ ಜೀವನದಲ್ಲಿ ಅನಿರೀಕ್ಷಿತ ತಿರುವುಗಳು ಕಂಡು ಬರುತ್ತವೆ. ಕಲಿಕೆಯಲ್ಲಿ ಉನ್ನತ ಮಟ್ಟದ ಸಾಧನೆಯನ್ನು ಮಾಡುವಿರಿ. ಸೋದರೊಂದಿಗೆ ಇದ್ದ ಹಳೆಯ ವೈಮನಸ್ಸು ನಿಮ್ಮ ಪ್ರಯತ್ನದಿಂದ ದೂರವಾಗುತ್ತದೆ. ಹಣವನ್ನು ಉಳಿಸುವ ಸಲುವಾಗಿ ಹಿರಿಯರ ಸಲಹೆಯನ್ನು ಒಪ್ಪುವಿರಿ. ಸಹ ಬಾಳ್ವೆಗೆ ಮೊದಲ ಆದ್ಯತೆಯನ್ನು ನೀಡುವಿರಿ ಅನಾವಶ್ಯಕವಾಗಿ ಎದುರಾಗುವ ವಿವಾದಗಳಿಗೆ ತ್ವರಿತ ಪರಿಹಾರವನ್ನು ಕಂಡುಹಿಡಿಯುವಿರಿ. ನಿಮ್ಮ ಸಂಗಾತಿಯ ಜವಾಬ್ದಾರಿಯುತ ನಡಿಗೆಯು ನಿಮ್ಮಲ್ಲಿ ಹೊಸ ಆಶಾಭಾವನೆಯನ್ನು ಮೂಡಿಸುತ್ತದೆ.
ಶಾಸ್ತ್ರ ಸಂಪ್ರದಾಯಗಳಲ್ಲಿ ಆಸಕ್ತಿ ಹೆಚ್ಚಾಗುತ್ತದೆ. ಬಹುತೇಕ ಸಮಯವನ್ನು ಹೊಸ ವಿಚಾರವನ್ನು ಕಲಿಯುವ ಅಥವಾ ಪುಸ್ತಕವನ್ನು ಓದುವುದರಲ್ಲಿ ಕಳೆಯುವಿರಿ. ಕವಿಗಳು ಮತ್ತು ಲೇಖಕರಿಗೆ ವಿನೂತನ ದಿನಗಳಾಗಲಿವೆ. ನಿಮ್ಮಲ್ಲಿ ಹುದುಗಿರುವ ಪ್ರತಿಭೆಗೆ ತಕ್ಕಂತಹ ಅವಕಾಶಗಳು ದೊರೆಯಲಿವೆ. ಮನಸ್ಥಿತಿಗೆ ತಕ್ಕಂತಹ ಸ್ನೇಹಿತರು ದೊರೆಯುತ್ತಾರೆ. ಮಾತಿನ ಮೂಲಕ ಜನರ ಮನಸ್ಸನ್ನು ಗೆಲ್ಲಲು ಪ್ರಯತ್ನಿಸುವಿರಿ. ದಂಪತಿ ನಡುವೆ ಉತ್ತಮ ಹೊಂದಾಣಿಕೆ ಏರ್ಪಡುತ್ತದೆ. ಅಧಿಕಾರಿಗಳಾಗಿದ್ದಲ್ಲಿ ನಿಮ್ಮ ಸಹೋದ್ಯೋಗಿಗಳು ಸಂಪೂರ್ಣ ಸಹಕಾರವನ್ನು ನೀಡುತ್ತಾರೆ. ಹವ್ಯಾಸಿ ಕಲಾವಿದರು ತಮ್ಮಲ್ಲಿರುವ ಪ್ರತಿಭೆಯನ್ನು ಬಳಸಿಕೊಳ್ಳಬೇಕು. ಮಗಳೊಂದಿಗೆ ಭಿನ್ನಾಭಿಪ್ರಾಯಗಳು ಇರುತ್ತವೆ. ಕುಟುಂಬದ ರಕ್ಷಣೆಗೆ ಹೆಚ್ಚಿನ ಹೊತ್ತು ನೀಡುವಿರಿ.
ಹಠದಿಂದ ಕೈಹಿಡಿದ ಕೆಲಸ ಕಾರ್ಯಗಳನ್ನು ಪೂರ್ಣಗೊಳಿಸುವಿರಿ. ಅನಾವಶ್ಯಕವಾಗಿ ಬೇರೆಯವರ ವಿಚಾರಗಳಲ್ಲಿ ತಲೆ ಹಾಕುವುದಿಲ್ಲ. ವಾದ ವಿವಾದಗಳಿಂದ ದೂರ ಉಳಿಯುವಿರಿ. ದಾಂಪತ್ಯ ಜೀವನವುಸುಖ ಶಾಂತಿ ನೆಮ್ಮದಿಯಿಂದ ಕೂಡಿರುತ್ತದೆ. ಹೆಣ್ಣು ಮಕ್ಕಳಿಗೆ ತವರಿನಿಂದ ಹಣದ ಸಹಾಯದೊರೆಯಲಿದೆ. ನೂತನ ದಂಪತಿಗೆ ಸಂತಾನ ಯೋಗವಿದೆ. ನೀವು ಇರುವ ಕಡೆಯಲ್ಲಿ ಹಾಸ್ಯಕ್ಕೆ ಕೊರತೆ ಇರುವುದಿಲ್ಲ. ಪ್ರವಾಸದ ವೇಳೆ ಹಣ ಅಥವಾ ನೆಚ್ಚಿನ ವಸ್ತುವನ್ನು ಪಡೆದುಕೊಳ್ಳುವ ಸಂಭವವಿದೆ. ಸಂಕಷ್ಟದಲ್ಲಿ ಸಿಲುಕಿದರು ಸುಳ್ಳನ್ನು ಹೇಳುವುದಿಲ್ಲ. ಕುಟುಂಬದ ಹೊರಗಿನವರನ್ನು ಸುಲಭವಾಗಿ ನಂಬುವುದಿಲ್ಲ. ಆತ್ಮೀಯರಾದರು ನಿಮ್ಮ ಕೆಲಸ ಕಾರ್ಯಗಳು ಪೂರ್ಣಗೊಳ್ಳುವವರೆಗೂ ಅವರಿಗೆ ಹೆಚ್ಚಿನ ಪ್ರಾಶಸ್ತ್ಯ ನೀಡುವುದಿಲ್ಲ.
ದೀಪಾವಳಿ 2024 ನಿಮಗೆ ತಿಳಿದಿರಬೇಕಾದ ವಿವರಗಳಿವು
ಕ್ರೋಧಿನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯ ಲಕ್ಷ್ಮೀಪೂಜೆ ಮುಹೂರ್ತವು ನವೆಂಬರ್ 1 ರಂದು ಬಂದಿದೆ. ಇದೇ ಅಕ್ಟೋಬರ್ 31 ರ ನರಕ ಚತುರ್ದಶಿಯಿಂದ ದೀಪಾವಳಿ ಆಚರಣೆ ಮನೆಗಳಲ್ಲಿ ಆರಂಭವಾಗುತ್ತವೆ. ಮುಂದಿನ ವರ್ಷದ ದೀಪಾವಳಿ ಅಮಾವಾಸ್ಯೆಯವರೆಗೆ ಅಂದರೆ ವಿಶ್ವಾವಸುನಾಮ ಸಂವತ್ಸರದ ದೀಪಾವಳಿ ಅಮಾವಾಸ್ಯೆಯು 2025ರ ಅಕ್ಟೋಬರ್ 20 ಕ್ಕೆ ಬಂದಿದೆ. 2024 ರ ದೀಪಾವಳಿಯಿಂದ 2025 ರ ದೀಪಾವಳಿಯವರೆಗಿನ ಅವಧಿಯಲ್ಲಿ ಮೇಷ ರಾಶಿಯವರ ಸಾಂಸಾರಿಕ, ಔದ್ಯೋಗಿಕ, ವ್ಯಾವಹಾರಿಕ ಬದುಕಿನ ಮೇಲೆ ಗ್ರಹಗತಿಗಳ ಪ್ರಭಾವ ಹೇಗಿರಬಹುದು ಎನ್ನುವ ಇಣುಕು ನೋಟವನ್ನು ಈ ಬರಹದ ಮೂಲಕ ತಿಳಿದುಕೊಂಡಿರಿ. ದ್ವಾದಶ ರಾಶಿಗಳ ದೀಪಾವಳಿ ವರ್ಷ ಭವಿಷ್ಯ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಲಭ್ಯ.
ಮಿಥುನ ರಾಶಿಯವರ ಗುಣಲಕ್ಷಣಗಳು
ಮಿಥುನ ರಾಶಿಯ ಮಹಿಳೆಯರು ಸಾಮಾನ್ಯವಾಗಿ ಬುದ್ಧಿವಂತರಾಗಿರುತ್ತಾರೆ. ಯಾವುದೇ ವಿಚಾರವಾದರೂ ಸುಲಭವಾಗಿ ಅರಿತುಕೊಳ್ಳಬಲ್ಲರು. ಸೋಲು-ಗೆಲುವನ್ನು ಸಮಾನ ಭಾವನೆಯಿಂದ ಸ್ವೀಕರಿಸುತ್ತಾರೆ. ಯಾವುದಾದರೂ ನಿರ್ಧಾರ ತೆಗೆದುಕೊಂಡು, ಅದರಿಂದ ನಿರೀಕ್ಷಿತ ಪ್ರಯೋಜನ ಸಿಗುತ್ತಿಲ್ಲ ಎಂದಾದರೆ ಅಂಥವನ್ನು ದಿಢೀರನೆ ಬದಲಾಯಿಸಬಲ್ಲರು. ಯಾವುದೇ ಕೆಲಸ ಕಾರ್ಯಗಳನ್ನು ಅವಸರದಲ್ಲಿ ಆರಂಭಿಸುವುದಿಲ್ಲ. ಹಾಸ್ಯ ಪ್ರಿಯರು. ತಪ್ಪು ಕಂಡಾಗ ನಿಷ್ಠುರವಾಗಿ ಮಾತನಾಡುವವರು.
ಮಿಥುನ ರಾಶಿಯಲ್ಲಿ ಜನಿಸಿದ ಪುರುಷರು ಸಹ ಬುದ್ದಿವಂತರಾಗಿರುತ್ತಾರೆ. ಸದಾಕಾಲ ಉತ್ಸಾಹದಿಂದ ವರ್ತಿಸುತ್ತಾರೆ. ಯಾವುದೇ ಸಂದರ್ಭದಲ್ಲಿ ಸುಲಭವಾಗಿ ಹೊಂದಿಕೊಂಡು ಹೋಗಬಲ್ಲರು. ಮಾನಸಿಕವಾಗಿ ಸದೃಢವಾಗಿರುತ್ತಾರೆ. ಇವರು ಇದ್ದ ಕಡೆ ಹಾಸ್ಯಕ್ಕೆ ಬರವಿರುವುದಿಲ್ಲ. ಯಾವುದೇ ವಿಚಾರವನ್ನು ಸುಲಭವಾಗಿ ಅರ್ಥಮಾಡಿಕೊಳ್ಳಬಲ್ಲರು. ನಿರೀಕ್ಷಿಸಿದಂತೆ ತಮ್ಮ ಗುರಿಯನ್ನು ಸಾಧಿಸುತ್ತಾರೆ.
ಮಿಥುನ ರಾಶಿಯವರ ಶುಭ ದಿನಾಂಕ, ವಾರ ಬಣ್ಣ
ಮಿಥುನ ರಾಶಿಯ ಅಧಿಪತಿ: ಬುಧ, ಮಿಥುನ ರಾಶಿಯವರಿಗೆ ಶುಭ ದಿನಾಂಕಗಳು: 1, 4, 12, 20, 29, 30. ಭಾನುವಾರ, ಸೋಮವಾರ, ಮಂಗಳವಾರ, ಬುಧವಾರ ಮತ್ತು ಗುರುವಾರ. ಮಿಥುನ ರಾಶಿಯವರಿಗೆ ಶುಭ ವರ್ಣ: ಕೆಂಪು, ಹಳದಿ, ಬಿಳಿ ಮತ್ತು ಹಸಿರು. ಮಿಥುನ ರಾಶಿಯವರಿಗೆ ಅಶುಭ ವರ್ಣ: ನೀಲಿ ಮಿಶ್ರಿತ ಹಸಿರು, ಮಿಥುನ ರಾಶಿಯವರಿಗೆ ಶುಭ ದಿಕ್ಕು: ಉತ್ತರ ಮತ್ತು ಪಶ್ಚಿಮ, ಮಿಥುನ ರಾಶಿಯವರಿಗೆ ಶುಭ ತಿಂಗಳು: ಜುಲೈ 15ರಿಂದ ಆಗಸ್ಟ್ 15 ಮತ್ತು ಮಾರ್ಚ್ 15ರಿಂದ ಮೇ 14. ಮಿಥುನ ರಾಶಿಯವರಿಗೆ ಶುಭ ಹರಳು: ಪಚ್ಚೆ ಹಸಿರು, ಝೆರ್ಕೋನ್ ಮತ್ತು ನೀಲಮಣಿ. ಮಿಥುನ ರಾಶಿಯವರಿಗೆ ಶುಭ ರಾಶಿ: ತುಲಾ ಮತ್ತು ಕುಂಭ. ಮಿಥುನ ರಾಶಿಯವರಿಗೆ ಅಶುಭ ರಾಶಿ: ಸಿಂಹ, ವೃಶ್ಚಿಕ ಮತ್ತು ಮೇಷ.
ಮಿಥುನ ರಾಶಿಯವರಿಗೆ ಪರಿಹಾರಗಳು
1)ವಿಷ್ಣುಸಹಸ್ರನಾಮ: ಪ್ರತಿದಿನ ಶ್ರೀ ವಿಷ್ಣುಸಹಸ್ರನಾಮವನ್ನು ಪಠಿಸುವುದರಿಂದ ಅಥವಾ ಕೇಳಿಸಿಕೊಳ್ಳುವುದರಿಂದ ಆತ್ಮಶಕ್ತಿಯು ಹೆಚ್ಚುತ್ತದೆ. ಕುಟುಂಬದ ಎಲ್ಲಾ ಸದಸ್ಯರ ಆರೋಗ್ಯದಲ್ಲಿ ಸುಧಾರಣೆ ಕಂಡುಬರುತ್ತದೆ.
2)ಈ ದಾನಗಳಿಂದ ಶುಭ ಫಲ: ಕೆಂಪು ಅಥವಾ ಕೇಸರಿ ಬಣ್ಣದ ಬಟ್ಟೆ ಮತ್ತು ಕಡಲೆಬೇಳೆಯನ್ನು ದಾನ ನೀಡುವುದರಿಂದ ಖರ್ಚು ಕಡಿಮೆ ಆಗಲಿವೆ.
3) ದೇವಾಲಯ ಮತ್ತು ದೇವರ ಪೂಜೆ: ದುರ್ಗಾ ದೇವಾಲಯಕ್ಕೆ ಮಡಿಲು ತುಂಬುವ ಪದಾರ್ಥಗಳನ್ನು ನೀಡಿ ಹೊಸ ಕೆಲಸ ಆರಂಭಿಸಿರಿ. ಹೀಗೆ ಮಾಡುವ ಮೂಲಕ ಶುಭ ಫಲ ಸಿಗುವ ಸಾಧ್ಯತೆ ಹೆಚ್ಚಾಗುತ್ತದೆ. ಲಕ್ಷ್ಮೀದೇವಿ ಅಥವಾ ಅನ್ನಪೂರ್ಣೇಶ್ವರಿಗೆ ಪಂಚಾಮೃತ ಅಭಿಷೇಕ ಮಾಡಿಸುವುದು ಕ್ಷೇಮಕರ. ಪ್ರತಿದಿನ ಮನೆಯಲ್ಲಿರುವ ಚಿಕ್ಕ ಹೆಣ್ಣುಮಕ್ಕಳಿಗೆ ಕುಡಿಯಲು ಹಾಲನ್ನುನೀಡಿ ದಿನದ ಕೆಲಸ ಆರಂಭಿಸಿರಿ. ಒಣಗಿದ ಹೂ ಬಿಡುವ ಗಿಡಗಳನ್ನು ವಿಲೇವಾರಿ ಮಾಡಿ. ಹಳದಿ ಹೂ ಬಿಡುವ ಗಿಡಗಳಿಗೆ ನೀರು ಎರೆದರೆ ಎಲ್ಲಾ ರೀತಿಯ ಸಮಸ್ಯೆಗಳು ದೂರವಾಗುತ್ತವೆ. ಹೂ ಗಳನ್ನು ಕಸದಲ್ಲಿ ಎಸೆಯದಿರಿ.
4)ಈ ಬಣ್ಣದ ಕರವಸ್ತ್ರ ಉಪಯೋಗಿಸಿ: ಹಸಿರು, ನೀಲಿ ಅಥವಾ ಹಾಲಿನ ಬಣ್ಣದ ಕರವಸ್ತ್ರ ಬಳಸಿದರೆ ನಿರೀಕ್ಷಿತ ಫಲಗಳು ದೊರೆಯಲಿವೆ.
(ಈ ಬರಹವು ಮೊದಲ ಬಾರಿಗೆ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಪ್ರಕಟವಾಗಿದೆ. ದೀಪಾವಳಿ ಹಬ್ಬದ ಸಮಗ್ರಹ ಮಾಹಿತಿ, ಜ್ಯೋತಿಷ್ಯ, ಅಧ್ಯಾತ್ಮ ಕುರಿತ ಮತ್ತಷ್ಟು ವಿಚಾರಗಳನ್ನು ತಿಳಿಯಲು kannada.hindustantimes.com ವೆಬ್‌ಸೈಟ್‌ಗೆ ಭೇಟಿ ನೀಡಿ)
ಗಮನಿಸಿ: ಇದು ಶಾಸ್ತ್ರ, ಸಂಪ್ರದಾಯ ಮತ್ತು ಪ್ರಚಲಿತದಲ್ಲಿರುವ ನಂಬಿಕೆಗಳನ್ನು ಆಧರಿಸಿದ ಬರಹ. ಓದುಗರಿಗೆ ಮಾಹಿತಿ ನೀಡುವ ಉದ್ದೇಶದಿಂದ ಈ ಮಾಹಿತಿ ಪ್ರಕಟಿಸಲಾಗಿದೆ. ಇದನ್ನು ನಂಬಿ, ಅನುಸರಿಸುವ ಮೊದಲು ನಿಮ್ಮ ಕುಲಗುರುಗಳು ಅಥವಾ ಪ್ರಾಜ್ಞರೊಂದಿಗೆ ಪರಾಮರ್ಶೆ ಮಾಡಿಕೊಳ್ಳಬೇಕು.
ವಿಭಾಗ