ಶಿವ ಶಕ್ತಿ ಪೂಜೆಯಲ್ಲಿ ಪಾಲ್ಗೊಂಡ ಅನಂತ್‌ ಅಂಬಾನಿ, ರಾಧಿಕಾ ಮರ್ಚೆಂಟ್‌; ಮದುವೆಗೂ ಮುನ್ನ ಈ ಪೂಜೆ ಮಾಡುವುದು ಏಕೆ?
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಶಿವ ಶಕ್ತಿ ಪೂಜೆಯಲ್ಲಿ ಪಾಲ್ಗೊಂಡ ಅನಂತ್‌ ಅಂಬಾನಿ, ರಾಧಿಕಾ ಮರ್ಚೆಂಟ್‌; ಮದುವೆಗೂ ಮುನ್ನ ಈ ಪೂಜೆ ಮಾಡುವುದು ಏಕೆ?

ಶಿವ ಶಕ್ತಿ ಪೂಜೆಯಲ್ಲಿ ಪಾಲ್ಗೊಂಡ ಅನಂತ್‌ ಅಂಬಾನಿ, ರಾಧಿಕಾ ಮರ್ಚೆಂಟ್‌; ಮದುವೆಗೂ ಮುನ್ನ ಈ ಪೂಜೆ ಮಾಡುವುದು ಏಕೆ?

ಮುಖೇಶ್‌ ಅಂಬಾನಿ-ನೀತಾ ಅಂಬಾನಿ ಪುತ್ರ ಅನಂತ್‌ ಅಂಬಾನಿ ಹಾಗೂ ರಾಧಿಕಾ ಮರ್ಚೆಂಟ್‌ ಜುಲೈ 12 ರಂದು ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಮದುವೆಗೂ ಮುನ್ನ ಈ ಜೋಡಿ ಶಿವಶಕ್ತಿ ಪೂಜೆಯಲ್ಲಿ ಪಾಲ್ಗೊಂಡಿದೆ. ಈ ಪೂಜೆ ಮಾಡುವುದೇಕೆ? ದೊರೆಯುವ ಫಲಗಳೇನು? ಇಲ್ಲಿದೆ ಮಾಹಿತಿ.

ಶಿವಶಕ್ತಿ ಪೂಜೆಯಲ್ಲಿ ಪಾಲ್ಗೊಂಡ ಅನಂತ್‌ ಅಂಬಾನಿ, ರಾಧಿಕಾ ಮರ್ಚೆಂಟ್‌; ಮದುವೆಗೂ ಮುನ್ನ ಈ ಪೂಜೆ ಮಾಡುವುದು ಏಕೆ?
ಶಿವಶಕ್ತಿ ಪೂಜೆಯಲ್ಲಿ ಪಾಲ್ಗೊಂಡ ಅನಂತ್‌ ಅಂಬಾನಿ, ರಾಧಿಕಾ ಮರ್ಚೆಂಟ್‌; ಮದುವೆಗೂ ಮುನ್ನ ಈ ಪೂಜೆ ಮಾಡುವುದು ಏಕೆ?

ಕಳೆದ ಕೆಲವು ದಿನಗಳಿಂದ ಅನಂತ್ ಅಂಬಾನಿ ಮತ್ತು ರಾಧಿಕಾ ಮರ್ಚೆಂಟ್ ಮದುವೆ ಸಾಕಷ್ಟು ಸದ್ದು ಮಾಡುತ್ತಿದೆ. ಜುಲೈ 12 ರಂದು ಈ ಜೋಡಿ ದಾಂಪತ್ಯ ಜೀವನಕ್ಕೆ ಕಾಲಿಟ್ಟಿದ್ದಾರೆ. ಬಾಲಿವುಡ್‌, ರಾಜಕೀಯ, ಕ್ರೀಡೆ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಇವರ ಮದುವೆ ಆಗಮಿಸಿದ್ದು ಹೊಸ ವಧು-ವರರಿಗೆ ಶುಭ ಹಾರೈಸಿದ್ದಾರೆ.

ಅನಂತ್‌, ರಾಧಿಕಾ ಎರಡೂ ಕುಟುಂಬ ಮದುವೆಗೂ ಮುನ್ನ ಶಿವ ಶಕ್ತಿ ಪೂಜೆ ಮತ್ತು ಗ್ರಹಶಾಂತಿ ಪೂಜೆ ನೆರವೇರಿಸಿದರು. ಮದುವೆಗೆ ಮುನ್ನ ಈ ಶಿವಶಕ್ತಿ ಪೂಜೆ ಯಾಕೆ ಮಾಡಬೇಕು? ಪೂಜೆ ಮಾಡುವುದರಿಂದ ಆಗುವ ಲಾಭಗಳನ್ನು ತಿಳಿಯೋಣ.

ಶಿವ ಶಕ್ತಿ ಪೂಜೆ ಎಂದರೇನು?

ಶಿವಶಕ್ತಿ ಪೂಜೆಯು ಶಿವ ಮತ್ತು ಶಕ್ತಿಗೆ ಸಮರ್ಪಿತವಾದ ಪ್ರಾಚೀನ ಹಿಂದೂ ಆಚರಣೆಯಾಗಿದೆ. ಇದು ಪುರುಷ ಮತ್ತು ಸ್ತ್ರೀ ಶಕ್ತಿಗಳನ್ನು ಪ್ರತಿನಿಧಿಸುತ್ತದೆ. ವೈದಿಕ ಸಂಪ್ರದಾಯಗಳಲ್ಲಿ ಆಳವಾಗಿ ಬೇರೂರಿರುವ ಈ ಪೂಜೆಯು ಸಮತೋಲನ, ಸಾಮರಸ್ಯ, ಆಧ್ಯಾತ್ಮಿಕತೆ ಮತ್ತು ಜ್ಞಾನೋದಯದ ಸಾರವನ್ನು ಒಳಗೊಂಡಿದೆ. ಈ ಪೂಜೆಯ ಬೇರುಗಳು ವೈದಿಕ ಯುಗದಿಂದ ಬಂದದ್ದಾಗಿದೆ. ರಾಮಾಯಣದಲ್ಲಿ ಒಳ್ಳೆ ಪತಿಯನ್ನು ಪಡೆಯಲು ಸೀತಾದೇವಿ ಕೂಡಾ ಶಿವಶಕ್ತಿ ಪೂಜೆ ಮಾಡಿದ್ದರ ಉಲ್ಲೇಖವಿದೆ. ಹಾಗೆಯೇ ಮಹಾಭಾರತದಲ್ಲಿ ಸುಭದ್ರೆಯು ಅರ್ಜುನನ ಪ್ರೀತಿಯನ್ನು ಪಡೆಯಲು ಶಿವಶಕ್ತಿ ಪೂಜೆ ಮಾಡಿದಳು ಎಂದು ಪುರಾಣಗಳು ಹೇಳುತ್ತವೆ. ಇಷ್ಟು ಮಹಿಮೆ ಹೊಂದಿರುವ ಶಿವಶಕ್ತಿ ಪೂಜೆಯನ್ನು ಮದುವೆಗೆ ಮುನ್ನ ನಡೆಸುವುದು ಅತ್ಯಂತ ಶ್ರೇಯಸ್ಕರ ಎನ್ನುತ್ತಾರೆ.

ಈ ಪೂಜೆಯಲ್ಲಿ ಸೃಷ್ಟಿಕರ್ತನಾದ ಶಿವನಿಗೆ ಮತ್ತು ಶಕ್ತಿಯನ್ನು ಪ್ರತಿನಿಧಿಸುವ ದೇವತೆಗೆ ಪೂಜೆ ಮಾಡಲಾಗುತ್ತದೆದೆ. ಶಿವ ಶಕ್ತಿ ಪೂಜೆಯ ಆಚರಣೆಗಳು ಭಾರತದ ವಿವಿಧ ಭಾಗಗಳಲ್ಲಿ ಒಂದೊಂದು ರೀತಿ ಇರುತ್ತದೆ. ಕೆಲವು ರಾಜ್ಯಗಳಲ್ಲಿ ಈ ಪೂಜೆಯನ್ನು ಮದುವೆಗೆ ಮೊದಲು ಮಾತ್ರ ಮಾಡಲಾಗುತ್ತದೆ. ಕೆಲವೆಡೆ ಹುಡುಗಿಯರು ಮದುವೆಯ ವಯಸ್ಸಿಗೆ ಬಂದಾಗ ಬಯಸಿದ ವರನನ್ನು ಪಡೆಯಲು ಈ ಪೂಜೆಯನ್ನು ಮಾಡುತ್ತಾರೆ. ಅಲ್ಲದೆ ಹೊಸದಾಗಿ ಮದುವೆಯಾದ ಜೋಡಿ ಮದುವೆಯ ನಂತರವೂ ಶಿವ ಶಕ್ತಿ ಪೂಜೆಯನ್ನು ಮಾಡುತ್ತಾರೆ.

ಶಿವ ಶಕ್ತಿ ಪೂಜೆಯ ಮಹತ್ವ

ಹಿಂದೂ ಧರ್ಮದಲ್ಲಿ ಶಿವ ಶಕ್ತಿ ಪೂಜೆಗೆ ಧಾರ್ಮಿಕ ಮಹತ್ವವಿದೆ. ಇದು ಪುರುಷರು ಮತ್ತು ಮಹಿಳೆಯರ ನಡುವಿನ ಸಮತೋಲನ ಮತ್ತು ಸಾಮರಸ್ಯದ ಸಂಕೇತವೆಂದು ಪರಿಗಣಿಸಲಾಗಿದೆ. ಈ ಪೂಜೆಯನ್ನು ಮಾಡುವುದರಿಂದ ಆಧ್ಯಾತ್ಮಿಕ ಜ್ಞಾನವನ್ನು ಪಡೆಯಲು ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಇದು ಮನಸ್ಸು ಮತ್ತು ಆತ್ಮವನ್ನು ಶುದ್ಧೀಕರಿಸಲು ಆಧ್ಯಾತ್ಮಿಕ ಸುಧಾರಣೆಗೆ ಸಹಾಯ ಮಾಡುತ್ತದೆ ಎಂದು ನಂಬಲಾಗಿದೆ. ಶಿವಶಕ್ತಿಯ ಆರಾಧನೆಯು ಸಮೃದ್ಧಿ, ಆರೋಗ್ಯ ಮತ್ತು ಆಶೀರ್ವಾದ ತರುತ್ತದೆ ಎಂದು ನಂಬಲಾಗಿದೆ. ಭಗವಾನ್ ಶಿವ ಹಾಗೂ ಶಕ್ತಿಯು ಎಲ್ಲಾ ಅಡೆತಡೆಗಳನ್ನು ನಿವಾರಿಸುತ್ತಾರೆ, ನಕಾರಾತ್ಮಕತೆಯನ್ನು ಹೋಗಲಾಡಿಸಿ ಜೀವನದಲ್ಲಿ ಸಕಾರಾತ್ಮಕ ಬದಲಾವಣೆಗಳನ್ನು ತರುತ್ತಾರೆ ಎಂದು ಭಕ್ತರು ನಂಬುತ್ತಾರೆ. ವೈಯಕ್ತಿಕ ಮತ್ತು ವೃತ್ತಿಪರ ಸವಾಲುಗಳನ್ನು ಜಯಿಸಲು ದೈವಿಕ ಸಹಾಯವನ್ನು ಪಡೆಯಲು ಈ ಪೂಜೆ ಮಾಡಲಾಗುತ್ತದೆ.

ಶಿವಶಕ್ತಿ ಪೂಜೆಯನ್ನು ವಿಶೇಷವಾಗಿ ದಂಪತಿ ಮಾಡುತ್ತಾರೆ. ವೈವಾಹಿಕ ಜೀವನ ಸುಖಮಯ ಮತ್ತು ಆನಂದಮಯವಾಗಿರಲು ದೇವರ ಆಶೀರ್ವಾದ ಕೋರಿ ಈ ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆಯು ದಂಪತಿ ನಡುವಿನ ಗೌರವ, ಪರಸ್ಪರ ತಿಳುವಳಿಕೆ ಮತ್ತು ಪ್ರೀತಿಯ ಮಹತ್ವವನ್ನು ಒತ್ತಿ ಹೇಳುತ್ತದೆ. ಅಡೆತಡೆಗಳನ್ನು ನಿವಾರಿಸುವ ಗಣಪತಿಗೆ ಶಿವಶಕ್ತಿ ಪೂಜೆಯು ಸುಗಮವಾಗಿ ನಡೆಯುವಂತೆ ಮೊದಲ ಪೂಜೆಯನ್ನು ಮಾಡಲಾಗುತ್ತದೆ. ನಂತರ, ಮಂತ್ರಗಳು ಮತ್ತು ಶ್ಲೋಕಗಳನ್ನು ಪಠಿಸಿ , ಭಗವಾನ್ ಶಿವ ಮತ್ತು ಶಕ್ತಿಯನ್ನು ಆವಾಹನೆ ಮಾಡಿ, ಪೂಜೆಯನ್ನು ಮಾಡಿ, ಶಿವಲಿಂಗಕ್ಕೆ ಪಂಚಾಮೃತ ಅಭಿಷೇಕ ಮಾಡಲಾಗುತ್ತದೆ . ಇದು ಶುದ್ಧತೆಯನ್ನು ಸಂಕೇತಿಸುತ್ತದೆ. ಶಿವನ ಅನುಗ್ರಹಕ್ಕಾಗಿ ಮಂತ್ರಗಳು ಮತ್ತು ಶಕ್ತಿಗಾಗಿ ದೇವಿ ಸೂಕ್ತಗಳಂತಹ ವೇದ ಮಂತ್ರಗಳ ಪಠಣವು ಪೂಜೆಯ ಪ್ರಮುಖ ಭಾಗವಾಗಿದೆ. ಭಕ್ತರು ಏಕಾಗ್ರತೆಯಿಂದ ಈ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ.

ಗ್ರಹಶಾಂತಿ ಪೂಜೆ ಎಂದರೇನು?

ಗ್ರಹಗಳ ದುಷ್ಪರಿಣಾಮಗಳನ್ನು ಕಡಿಮೆ ಮಾಡಲು ಈ ಪೂಜೆಯು ಬಹಳ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ. ಹಿಂದೂ ಸಂಸ್ಕೃತಿಯಲ್ಲಿ, ಈ ಪೂಜೆಯನ್ನು ಮದುವೆ , ಗೃಹಪ್ರವೇಶ ಮತ್ತು ಹೊಸ ವ್ಯವಹಾರಗಳನ್ನು ಪ್ರಾರಂಭಿಸುವ ಮೊದಲು ನೆರವೇರಿಸಲಾಗುವುದು. ಶಾಂತಿ ಮತ್ತು ಸಮೃದ್ಧಿಯನ್ನು ನೀಡುವಂತೆ ಪ್ರಾರ್ಥಿಸಿ, ಗ್ರಹಶಾಂತಿ ಪೂಜೆಯಲ್ಲಿ, 9 ಗ್ರಹಗಳ ಅನುಗ್ರಹವನ್ನು ಕೋರಿ ಪೂಜೆ ಮಾಡಲಾಗುತ್ತದೆ. ಸೂರ್ಯ, ಚಂದ್ರ, ಮಂಗಳ, ಬುಧ , ಗುರು, ಶುಕ್ರ, ಶನಿ, ರಾಹು ಮತ್ತು ಕೇತುಗಳನ್ನು ನವಗ್ರಹಗಳು ಎಂದು ಕರೆಯಲಾಗುತ್ತದೆ. ಈ ನವಗ್ರಹಗಳು ಜೀವನದ ವಿವಿಧ ಅಂಶಗಳ ಮೇಲೆ ಪ್ರಭಾವ ಬೀರುತ್ತವೆ.

ಗ್ರಹಶಾಂತಿ ಪೂಜೆಯ ಅಂಗವಾಗಿ, ನವಗ್ರಹಗಳಿಗೆ ಸಂಬಂಧಿಸಿದ ಕೆಲವು ವಸ್ತುಗಳನ್ನು ಅರ್ಪಿಸುವ ಮೂಲಕ ಶಕ್ತಿಗಳನ್ನು ಶಾಂತಗೊಳಿಸಲು ಪೂಜೆಯನ್ನು ಮಾಡಲಾಗುತ್ತದೆ. ಈ ಪೂಜೆ ಮಾಡುವುದರಿಂದ ಗ್ರಹಗಳ ದುಷ್ಪರಿಣಾಮಗಳು ದೂರವಾಗುತ್ತವೆ. ಜೀವನದಲ್ಲಿ ಅಡೆತಡೆಗಳು ಸವಾಲುಗಳನ್ನು ಕಡಿಮೆ ಮಾಡುತ್ತದೆ. ನಕಾರಾತ್ಮಕ ಶಕ್ತಿಯನ್ನು ಕಡಿಮೆ ಮಾಡಿ, ಧನಾತ್ಮಕ ಪರಿಣಾಮಗಳನ್ನು ಹೆಚ್ಚಿಸುವ ಸಲುವಾಗಿ ಇದು ಉಪಯುಕ್ತವಾಗಿದೆ. ಆರೋಗ್ಯ, ಸಂಪತ್ತು, ಸಮೃದ್ಧಿ, ವೃತ್ತಿ ಜೀವನದ ಮೇಲೆ ಧನಾತ್ಮಕ ಪರಿಣಾಮಗಳನ್ನು ಹೆಚ್ಚಿಸುತ್ತದೆ. ಜೀವನದಲ್ಲಿ ಶಾಂತಿ, ಸಾಮರಸ್ಯ ಮತ್ತು ಶಾಂತಿಯುತ ವಾತಾವರಣವನ್ನು ಉತ್ತೇಜಿಸುತ್ತದೆ. ಒತ್ತಡವನ್ನು ದೂರ ಮಾಡುತ್ತದೆ. ಮಾನಸಿಕ ನೆಮ್ಮದಿಯನ್ನು ನೀಡುತ್ತದೆ. ಈ ಪೂಜೆಯನ್ನು ಮಾಡುವುದರಿಂದ ಕುಟುಂಬ ಸದಸ್ಯರಲ್ಲಿ ಸಾಮರಸ್ಯ ಮೂಡುತ್ತದೆ. ಒಟ್ಟಿನಲ್ಲಿ, ಈ ಪೂಜೆ ಮಾಡುವುದರಿಂದ ಸುಖ, ಸಂತೋಷದಿಂದ ಜೀವನ ಮಾಡಬಹುದು.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.