ಹಿಂದೂ ಧರ್ಮದಲ್ಲಿ ನಿಜವಾಗಿಯೂ 33 ಕೋಟಿ ದೇವರಿದ್ದಾರಾ, ಯಾರು ಆ ದೇವತೆಗಳು? ಈ ಪ್ರಶ್ನೆಗೆ ಇಲ್ಲಿದೆ ನಿಖರ ಉತ್ತರ
ದೇವರ ಬಗ್ಗೆ ಮಾತನಾಡಿದಾಗಲೆಲ್ಲಾ ಎಷ್ಟು ದೇವರು ಇದ್ದಾರೆ ಎಂಬ ಪ್ರಶ್ನೆ ಕಾಡುತ್ತದೆ. ಸಾಮಾನ್ಯವಾಗಿ ಹಿಂದೂ ಧರ್ಮದಲ್ಲಿ 33 ಕೋಟಿ ದೇವರುಗಳಿದ್ದಾರೆ ಎಂದು ಹೇಳಲಾಗುತ್ತದೆ. ಇದರ ಬಗ್ಗೆ ಯಾವಾಗಲೂ ಚರ್ಚೆ ನಡೆಯುತ್ತಲೇ ಇರುತ್ತದೆ. ಅಸಲಿಗೆ 33 ಕೋಟಿ ದೇವರೆಂದರೆ ಯಾರು? ಅವರೆಲ್ಲರೂ ನೆಲೆಸಿರುವುದಾದರೂ ಎಲ್ಲಿ? ಈ ಪ್ರಶ್ನೆಗೆ ಉತ್ತರ ತಿಳಿಯಲು ಮುಂದೆ ಓದಿ.
ಹಿಂದೂ ಧರ್ಮದಲ್ಲಿ ದೇವರ ಆರಾಧನೆಗೆ ಬಹಳ ಮಹತ್ವ ನೀಡಲಾಗಿದೆ. ದೇವರು ಕಷ್ಟಗಳನ್ನು ಪರಿಹರಿಸುತ್ತಾನೆ ಎಂಬ ನಂಬಿಕೆಯಿಂದ ಯಾಗ, ಪೂಜೆ, ಸ್ತೋತ್ರ, ಭಜನೆ, ಕೀರ್ತನೆಗಳನ್ನು ಮಾಡಲಾಗುತ್ತದೆ. ಸನಾತನ ಧರ್ಮದಲ್ಲಿ ಬ್ರಹ್ಮ, ವಿಷ್ಣು, ಮಹೇಶ್ವರ, ಗಣೇಶ, ಸುಬ್ರಹ್ಮಣ್ಯ, ದುರ್ಗಾ, ಲಕ್ಷ್ಮೀ, ಸರಸ್ವತಿ ಎಂದೆಲ್ಲಾ ಬಹಳಷ್ಟು ದೇವರನ್ನು ಪೂಜಿಸಲಾಗುತ್ತದೆ. ಹಿಂದೂ ಧರ್ಮದಲ್ಲಿ 33 ಕೋಟಿ ದೇವರುಗಳಿದ್ದಾರೆ ಎಂಬುದನ್ನು ನಾವು ಕೇಳಿರುತ್ತೇವೆ ಇಲ್ಲ ಓದಿರುತ್ತೇವೆ. ಹಾಗಾದರೆ ನಿಜವಾಗಿಯೂ 33 ಕೋಟಿ ದೇವರುಗಳು ಇದ್ದಾರೆಯೇ ಈ ಪ್ರಶ್ನೆ ಸಾಮಾನ್ಯವಾಗಿ ಎಲ್ಲರನ್ನೂ ಕಾಡುತ್ತಿರುತ್ತದೆ. ವಾಸ್ತವದಲ್ಲಿ ಈ ಸಂಖ್ಯೆ ಭಿನ್ನವಾಗಿದೆ. ಹಾಗಾದರೆ ಹಿಂದೂ ಧರ್ಮದಲ್ಲಿ ದೇವರುಗಳ ನಿಜವಾದ ಸಂಖ್ಯೆ ಎಷ್ಟು? ಈ ಪ್ರಶ್ನೆಗೆ ಉತ್ತರ ತಿಳಿಯಲು ಮುಂದೆ ಓದಿ.
ಕೋಟಿ ಎಂದರೇನು?
ಕೋಟಿ ಈ ಶಬ್ದಕ್ಕೆ ಸಂಸ್ಕೃತದಲ್ಲಿ ಎರಡು ಅರ್ಥಗಳಿವೆ. ಒಂದು ಸಂಖ್ಯೆಯನ್ನು ಸೂಚಿಸುವ ಶಬ್ದವಾಗಿದೆ. ಮತ್ತೊಂದು ಕೋಟಿ ಎಂದರೆ ಸರ್ವೋಚ್ಛ ಎಂದು ಅರ್ಥ. ಆದರೆ ಆಡುಭಾಷೆಯಲ್ಲಿ ಕೋಟಿ ಎಂದರೆ ಸಂಖ್ಯಾ ಪದ್ಧತಿಯಲ್ಲಿ ಬರುವ ಕೋಟಿ ಎಂದೇ ನೋಡಲಾಗುತ್ತಿದೆ. ಇದರಿಂದಾಗಿ ಹಿಂದೂ ಧರ್ಮದಲ್ಲಿ ದೇವರುಗಳ ಸಂಖ್ಯೆಯನ್ನು 33 ಕೋಟಿ ಎಂದು ನಂಬಲಾಗಿದೆ. ಆದರೆ ವಾಸ್ತವದಲ್ಲಿ 33 ಕೋಟಿ ದೇವರು ಎಂದರೆ 33 ಸರ್ವೋಚ್ಛ ದೇವರುಗಳು ಎಂಬುದಾಗಿದೆ.
ಯಾರು ಆ 33 ಕೋಟಿ ದೇವರು ?
33 ಕೋಟಿ ದೇವರುಗಳೆಂದರೆ 33 ಸರ್ವೋಚ್ಛ ದೇವರುಗಳು ಎಂದು ಅರ್ಥ. ಅದರಲ್ಲಿ ಅಷ್ಟಾವಸುಗಳು, ಏಕಾದಶ ರುದ್ರರು, ದ್ವಾದಶ ಆದಿತ್ಯರು, ಇಂದ್ರ ಮತ್ತು ಪ್ರಜಾಪತಿ ಸೇರಿದ್ದಾರೆ.
1) ಅಷ್ಟಾವಸುಗಳು – ಧರ, ಧ್ರುವ, ಸೋಮ, ಅಹ, ಅನಿಲ, ಅನಲ, ಪ್ರತ್ಯೂಷ, ಮತ್ತು ಪ್ರಭಾಸ.
2) ಏಕಾದಶ ರುದ್ರರು – ಮನ್ಯು, ಮನು, ಶಿವ, ಮಹತ, ಋತುಧ್ವಜ, ಮಹಿನಸ, ಉಮ್ರತೇರಸ, ಕಾಲ, ವಾಸದೇವ, ಭವ, ಮತ್ತು ಧೃತಧ್ವಜ
3) ದ್ವಾದಶ ಆದಿತ್ಯರು – ಅಂಶುಮಾನ್, ಆರ್ಯಮನ್, ಇಂದ್ರ, ತ್ವಸ್ಟಾ, ಧಾತು, ಪರ್ಜನ್ಯ, ಪೂಷಾ, ಭಗ, ಮಿತ್ರ, ವರುಣ, ವೈವಸ್ವತ, ಮತ್ತು ವಿಷ್ಣು
4) ಇಂದ್ರ
5) ಪ್ರಜಾಪತಿ
ಸೇರಿ ಒಟ್ಟು 33 ದೇವತೆಗಳು
ಗೋಮಾತೆಯಲ್ಲಿ ನೆಲೆಸಿದ್ದಾರೆ 33 ಕೋಟಿ ದೇವತೆಗಳು
ಸನಾತನ ನಂಬಿಕೆಗಳ ಪ್ರಕಾರ, ಗೋಮಾತೆಯಲ್ಲಿ 33 ಕೋಟಿ ದೇವರುಗಳು ನೆಲೆಸಿದ್ದಾರೆ ಎಂದು ಹೇಳಲಾಗುತ್ತದೆ. ಅದಕ್ಕಾಗಿಯೇ ಹಿಂದೂ ಧರ್ಮದಲ್ಲಿ ಗೋ ಸೇವೆಗೆ ಹೆಚ್ಚಿನ ಪ್ರಾಮುಖ್ಯತೆ ನೀಡಲಾಗಿದೆ. ಧಾರ್ಮಿಕ ಗ್ರಂಥಗಳ ಪ್ರಕಾರ, ಶಿವ ಮತ್ತು ವಿಷ್ಣುವು ಹಸುವಿನ ಕೊಂಬಿನಲ್ಲಿ ನೆಲೆಸಿದ್ದಾರೆ. ಅದೇ ರೀತಿ ಹಸುವಿನ ಹೊಟ್ಟೆಯಲ್ಲಿ ಕಾರ್ತಿಕೇಯ, ತಲೆಯಲ್ಲಿ ಬ್ರಹ್ಮ, ಹಣೆಯಲ್ಲಿ 11 ರುದ್ರರು, ಕೊಂಬಿನ ತುದಿಯಲ್ಲಿ ಇಂದ್ರ, ಎರಡೂ ಕಿವಿಗಳಲ್ಲಿ ಅಶ್ವಿನಿ ಕುಮಾರರು, ಎರಡೂ ಕಣ್ಣುಗಳಲ್ಲಿ ಸೂರ್ಯ ಮತ್ತು ಚಂದ್ರರು, ಹಲ್ಲುಗಳಲ್ಲಿ ಗರುಡರು ವಾಸವಾಗಿದ್ದಾನೆ. ನಾಲಿಗೆಯಲ್ಲಿ ಸರಸ್ವತಿ ಮಾತೆಯು ,ಮುಖದಲ್ಲಿ ಗಂಧರ್ವರು, ಮೂಗಿನ ಮುಂಭಾಗದಲ್ಲಿ ಸರ್ಪಗಳು ಮತ್ತು ಗೊರಸಿನ ಹಿಂಭಾಗದಲ್ಲಿ ಅಪ್ಸರೆಯರು ವಾಸಿಸುತ್ತಾರೆ. ಇದರ ಬಗ್ಗೆ ಭವಿಷ್ಯ ಪುರಾಣ, ಸ್ಕಂದ ಪುರಾಣ ಮತ್ತು ಬ್ರಹ್ಮಾಂಡ ಪುರಾಣಗಳಲ್ಲಿ ವಿವರವಾಗಿ ಹೇಳಲಾಗಿದೆ.
ಬರಹ: ಅರ್ಚನಾ ಹೆಗ್ಡೆ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.