ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Ramayana: ರಾಮನನ್ನು ನದಿ ದಾಟಿಸಿದ ಕೇವತ್‌, ರಾಮಸೇತು ನಿರ್ಮಿಸಿದ ನಳ ನೀಲಾ; ರಾಮಾಯಣ ಮಹಾಕಾವ್ಯದ ಅದ್ಭುತ ಪಾತ್ರಗಳ ಪರಿಚಯ

Ramayana: ರಾಮನನ್ನು ನದಿ ದಾಟಿಸಿದ ಕೇವತ್‌, ರಾಮಸೇತು ನಿರ್ಮಿಸಿದ ನಳ ನೀಲಾ; ರಾಮಾಯಣ ಮಹಾಕಾವ್ಯದ ಅದ್ಭುತ ಪಾತ್ರಗಳ ಪರಿಚಯ

Ramayana: ರಾಮಾಯಣ ಮಹಾಕಾವ್ಯದ ಕೆಲವೇ ಕೆಲವು ಪಾತ್ರಗಳು ಜನರಿಗೆ ಗೊತ್ತು. ಅದರೆ ಬಹಳಷ್ಟು ಮಂದಿಗೆ ರಾಮನನ್ನು ನದಿ ದಾಟಿಸಿದ ಕೇವತ್‌, ರಾಮಸೇತು ನಿರ್ಮಿಸಿದ ನಳ ನೀಲಾ ಸೇರಿದಂತೆ ಇನ್ನೂ ಅನೇಕ ಪಾತ್ರಗಳ ಪರಿಚಯ ಇಲ್ಲ. ಇಲ್ಲಿದೆ ರಾಮಾಯಣದ 8 ಅದ್ಭುತ ಪಾತ್ರಗಳ ಬಗ್ಗೆ ಕಿರುಪರಿಚಯ.

ರಾಮಾಯಣ ಮಹಾಕಾವ್ಯದ ಅದ್ಭುತ ಪಾತ್ರಗಳ ಪರಿಚಯ
ರಾಮಾಯಣ ಮಹಾಕಾವ್ಯದ ಅದ್ಭುತ ಪಾತ್ರಗಳ ಪರಿಚಯ (PC: Wikimedia Commons)

ರಾಮಾಯಣದ ಪಾತ್ರಗಳು: ರಾಮ, ಸೀತೆ, ಲಕ್ಷ್ಮಣ, ದಶರಥ, ರಾವಣ, ಮಂಡೋದರಿ ಹೀಗೆ, ಧಾರ್ಮಿಕ ಗ್ರಂಥವಾದ ರಾಮಾಯಣದಲ್ಲಿನ ಕೆಲವೇ ಕೆಲವು ಪಾತ್ರಗಳು ಜನರಿಗೆ ಬಹಳ ಪರಿಚಿತ ಆದರೆ ರಾಮಾಯಣದಲ್ಲಿ ಬರುವ ಇನ್ನೂ ಕೆಲವೊಂದು ಪಾತ್ರಗಳ ಬಗ್ಗೆ ಅನೇಕ ಜನರಿಗೆ ಗೊತ್ತಿಲ್ಲ. ರಾಮಾಯಣ ಮಹಾಕಾವ್ಯದ ಇನ್ನಷ್ಟು ಅದ್ಭುತ ಪಾತ್ರಗಳ ಪರಿಚಯ ಇಲ್ಲಿದೆ.

ಗರುಡ: ರಾಮಾಯಣದಂಥ ಹಲವಾರು ಹಿಂದೂ ಪೌರಾಣಿಕ ಮಹಾಕಾವ್ಯಗಳಲ್ಲಿ, ಗರುಡನನ್ನು ಪಕ್ಷಿಗಳ ರಾಜ ಎಂದು ಪೂಜಿಸಲಾಗುತ್ತದೆ ಮತ್ತು ಭಗವಾನ್ ವಿಷ್ಣುವಿನ ವಾಹನ ಎಂದು ನಂಬಲಾಗಿದೆ. ಯುದ್ಧ ಕಾಂಡದಲ್ಲಿ, ಗರುಡನು ಧೈರ್ಯದಿಂದ ಆಕಾಶಕ್ಕೆ ಜಿಗಿದು ತನ್ನ ಬೃಹತ್ ರೆಕ್ಕೆಗಳನ್ನು ಹರಡುತ್ತಾನೆ. ರಾಮ ಮತ್ತು ಲಕ್ಷ್ಮಣನನ್ನು ನಾಗಪಾಶ ಎಂಬ ಸರ್ಪದ ಮಾರಣಾಂತಿಕ ಕುಣಿಕೆಯಿಂದ ರಕ್ಷಿಸುತ್ತಾನೆ.

ಕೇವತ್: ಈತ ದೋಣಿ ನಡೆಸುವ ಅಂಬಿಗ, ತನ್ನ ಜೀವನವನ್ನು ಭಗವಾನ್ ರಾಮನ ಸೇವೆಗಾಗಿ ಮುಡಿಪಾಗಿಟ್ಟ ವ್ಯಕ್ತಿ. ರಾಮನು ತನ್ನ ವನವಾಸದ ಸಮಯದಲ್ಲಿ ಗಂಗಾ ನದಿಯನ್ನು ದಾಟಬೇಕಾದಾಗ ಕೇವತ್, ತನ್ನ ದೋಣೆಯಲ್ಲಿ ರಾಮ, ಲಕ್ಷ್ಮಣ, ಸೀತಾಮಾತೆಯನ್ನು ನದಿ ದಾಟಿಸುತ್ತಾನೆ. ನದಿ ದಾಟಿದ ನಂತರ ಶ್ರೀರಾಮನು ಆತನಿಗೆ ಉಡುಗೊರೆಯಾಗಿ ಕೊಡುವ ಉಂಗುರವನ್ನು ನಿರಾಕರಿಸುತ್ತಾನೆ.

ಊರ್ಮಿಳೆ: ಈಕೆ ಲಕ್ಷ್ಮಣನ ಪತ್ನಿ. ಪತಿ ವನವಾಸಕ್ಕೆ ಹೋಗುವಾಗ ಊರ್ಮಿಳೆ ಕೂಡಾ ಅವರೊಂದಿಗೆ ಹೋಗಲು ಬಯಸುತ್ತಾಳೆ. ಆದರೆ ಅದಕ್ಕೆ ಲಕ್ಷ್ಮಣ‌ ಒಪ್ಪುವುದಿಲ್ಲ. ತಂದೆ ತಾಯಿಯನ್ನು ನೋಡಿಕೊಳ್ಳುವಂತೆ ಹೇಳಿ ಪತ್ನಿಯನ್ನು ಬಿಟ್ಟು ಅಣ್ಣನೊಂದಿಗೆ ವನವಾಸಕ್ಕೆ ಹೋಗುತ್ತಾನೆ. ಇತ್ತ ಊರ್ಮಿಳೆ ಪತಿ ವನವಾಸ ಮುಗಿಸುವರೆಗೂ ತಮ್ಮ ಮಕ್ಕಳಾದ ಅಂಗದ ಹಾಗೂ ಚಂದ್ರಕೇತುವಿನೊಂದಿಗೆ ಕಾಯುತ್ತಾಳೆ. ಹಾಗೇ ನಿದ್ರಾದೇವಿಯ ಸಲಹೆಯಂತೆ ಪತಿ ಲಕ್ಷ್ಮಣನ ಪರವಾಗಿ ಊರ್ಮಿಳಾ ನಿದ್ರೆ ಮಾಡುತ್ತಾಳೆ. ರಾಮನು ಸೀತೆಯನ್ನು ಕಾಡಿಗೆ ಕಳಿಸುವಾಗ ಅದನ್ನು ವಿರೋಧಿಸಿದ್ದು ಊರ್ಮಿಳೆ ಮಾತ್ರ ಎಂದು ರಾಮಾಯಣದಲ್ಲಿ ಉಲ್ಲೇಖಿಸಲಾಗಿದೆ.

ಸಂಪಾತಿ: ರಾವಣನು ಸೀತೆಯನ್ನು ಅಪಹರಿಸಿದಾಗ ಆತನ ಹುಡುಕಾಟದಲ್ಲಿ ಪ್ರಮುಖ ಪಾತ್ರ ವಹಿಸಿದ್ದು ಜಟಾಯುವಿನ ಸಹೋದರ ಸಂಪಾತಿ. ಯಾರು ಎತ್ತರಕ್ಕೆ ಹಾರುತ್ತಾರೆ ಎಂದು ಜಟಾಯು ಹಾಗೂ ಸಂಪಾತಿ ಬಾಲ್ಯದಲ್ಲಿ ಪೈಪೋಟಿ ನಡೆಸುತ್ತಾರೆ. ಆ ಸಮಯದಲ್ಲಿ ಜಟಾಯು ಬಹಳ ಎತ್ತರಕ್ಕೆ ಹಾರುತ್ತಾನೆ. ಆದರೆ ಸೂರ್ಯನ ಜ್ವಾಲೆಯಿಂದ ಸುಟ್ಟುಹೋಗುವಾಗ ಸಂಪಾತಿಯು ತನ್ನ ರೆಕ್ಕೆಗಳನ್ನು ಚಾಚಿ ಸಹೋದರನನ್ನು ಉಳಿಸಿಕೊಳ್ಳುತ್ತಾನೆ. ಆದರೆ ತನ್ನ ರೆಕ್ಕೆಗಳನ್ನು ಕಳೆದುಕೊಂದು ಜೀವನದುದ್ದಕ್ಕೂ ರೆಕ್ಕೆಗಳೇ ಇಲ್ಲದೆ ಬದುಕುತ್ತಾನೆ.

ಮಾರೀಚ: ಈತ ರಾಕ್ಷಸ, ರಾಮ ಹಾಗೂ ಲಕ್ಷ್ಮಣರು ವಿಶ್ವಾಮಿತ್ರರ ಬಳಿ ವಿದ್ಯಾಭ್ಯಾಸ ಕಲಿಯುವಾಗ ಮಾರೀಚ ಹಾಗೂ ಸುಬಾಹು ಎಂಬ ರಾಕ್ಷಸರು ವಿಶ್ವಾಮಿತ್ರರ ಹೋಮಕ್ಕೆ ಧಕ್ಕೆ ತರುತ್ತಾರೆ. ವಿಶ್ವಾಮಿತ್ರರ ಅಪ್ಪಣೆ ಪಡೆದು ರಾಮ, ಲಕ್ಷ್ಮಣರು ರಾಕ್ಷಸರ ಮೇಲೆ ದಾಳಿ ಮಾಡಿದಾಗ ಸುಬಾಹು ಮೃತನಾಗುತ್ತಾನೆ. ಮುಂದೆ ರಾವಣನು ಸೀತೆಯನ್ನು ಅಪಹರಣ ಮಾಡಲು ನಿರ್ಧರಿಸಿದಾಗ ರಾಮ ಲಕ್ಷ್ಮಣರ ಮೇಲಿನ ಕೋಪದಿಂದ ಮಾರೀಚ ಚಿನ್ನದ ಜಿಂಕೆಯಾಗಿ ಬದಲಾಗಿ ಸೀತೆಯ ಮುಂದೆ ನಿಲ್ಲುತ್ತಾನೆ. ಕೊನೆಗೆ ರಾಮನು ಈ ಮಾಯಾಮೃಗವನ್ನು ಕೊಲ್ಲುತ್ತಾನೆ.

ನಳ-ನೀಲಾ: ಇವರು ವಾನರ ಸಹೋದರರು. ಸೀತೆಯನ್ನು ಹುಡುಕಲು ಶ್ರೀರಾಮನು ಲಂಕೆಗೆ ಹೋಗಬೇಕಿರುತ್ತದೆ. ಆಗ ರಾಮೇಶ್ವರಂನಿಂದ ಲಂಕಾವರೆಗೂ ರಾಮಸೇತುವನ್ನು ನಿರ್ಮಿಸಿದವರು ಇವರು. ದೇವತೆಗಳ ವಾಸ್ತುಶಿಲ್ಪಿ ವಿಶ್ವಕರ್ಮನ ಮಕ್ಕಳಾದ ಇವರು ವಾಸ್ತುಶಿಲ್ಪದಲ್ಲಿ ಅಸಾಧಾರಣ ಕಲೆಯನ್ನು ಹೊಂದಿದ್ದರು. ಆದ್ದರಿಂದಲೇ ರಾಮಸೇತುವಂಥ ಸೇತುವೆಯನ್ನು ನಿರ್ಮಿಸುವಲ್ಲಿ ಯಶಸ್ವಿಯಾದನು.

ಜಾಂಬವಂತ: ಸೀತಾನ್ವೇಷಣೆ ಸಮಯದಲ್ಲಿ ಹನುಮಂತನ ಜೊತೆಗಾರನಾಗಿದ್ದನು. ಹನುಮನನ್ನು ಸಮುದ್ರಲಂಘನಕ್ಕೆ ಹುರಿದುಂಬಿಸಿದ್ದು ಇದೇ ಜಾಂಬವಂತ. ರಾವಣನೊಂದಿಗೆ ನಡೆದ ಯುದ್ಧದಲ್ಲಿ ರಾಮನಿಗೆ ಸಹಾಯ ಮಾಡಿದನು. ಅಷ್ಟೇ ಅಲ್ಲ ಯುದ್ಧದಲ್ಲಿ ಮೂರ್ಛೆ ತಪ್ಪಿ ಬಿದ್ದ ಲಕ್ಷ್ಮಣನಿಗಾಗಿ ಸಂಜೀವಿನಿಯನ್ನು ತರುವಂತೆ ಹನುಮಂತನಿಗೆ ಸಲಹೆ ಮಾಡಿದ್ದು ಈತನೇ.

ಶಬರಿ: ಈಕೆ ರಾಮನ ಪರಮ ಭಕ್ತೆ. ಮಾತಂಗ ಋಷಿಗಳ ಬಳಿ ಇದ್ದು ಅನೇಕ ವರ್ಷಗಳ ಕಾಲ ಭಕ್ತಿಯಿಂದ ಸೇವೆ ಸಲ್ಲಿಸುತ್ತಾಳೆ. ಆಕೆಯ ಸೇವೆಗೆ ಮೆಚ್ಚಿದ ಮಾತಂಗ ಋಷಿ ರಾಮನ ದರ್ಶನಕ್ಕೆ ಅವಕಾಶ ಮಾಡಿಕೊಟ್ಟರು. ಪ್ರತಿದಿನ ಆಶ್ರಮದಿಂದ ಕಾಡಿಗೆ ಹೋಗಿ ರಾಮನಿಗಾಗಿ ಹಣ್ಣುಗಳನ್ನು ತರುತ್ತಿದ್ದಳು. ಅದು ಸಿಹಿ ಇದೆಯೇ ಇಲ್ಲವೇ ಎಂಬುದನ್ನು ಪರೀಕ್ಷಿಸಲು ಕಚ್ಚಿ ರುಚಿ ನೋಡುತ್ತಿದ್ದಳು. ಎಷ್ಟೋ ಮಂದಿ ರಾಮನ ದರ್ಶನಕ್ಕಾಗಿ ಕಾಯುತ್ತಿದ್ದರೂ ಶ್ರೀರಾಮ ಮಾತ್ರ ಶಬರಿಯ ಭಕ್ತಿಗೆ ಮೆಚ್ಚಿ ಆಕೆಯ ಬಳಿ ಹೋಗಿ ದರ್ಶನ ನೀಡುತ್ತಾನೆ. ಶಬರಿಯು ಕಚ್ಚಿ ರುಚಿ ನೋಡಿದ ಹಣ್ಣುಗಳನ್ನು ತಿಂದು, ಇದುವರೆಗೂ ನಾನು ತಿಂದ ಹಣ್ಣುಗಳಲ್ಲಿ ಇದಕ್ಕಿಂತ ಸರಿ ಸಾಟಿ ಯಾವುದೂ ಇಲ್ಲ ಎನ್ನುತ್ತಾನೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.