ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Powerful Mantras: ಪೂಜೆಗೆ ಮಾತ್ರವಲ್ಲ‌, ಆರೋಗ್ಯ ಸಮಸ್ಯೆಯಿಂದ ಹೊರ ಬರಲು ನೆರವಾಗಲಿದೆ ಈ ಶಕ್ತಿಶಾಲಿ ಮಂತ್ರಗಳು

Powerful Mantras: ಪೂಜೆಗೆ ಮಾತ್ರವಲ್ಲ‌, ಆರೋಗ್ಯ ಸಮಸ್ಯೆಯಿಂದ ಹೊರ ಬರಲು ನೆರವಾಗಲಿದೆ ಈ ಶಕ್ತಿಶಾಲಿ ಮಂತ್ರಗಳು

Powerful Mantras: ದೇವರನ್ನು ಪೂಜಿಸುವಾಗ ನಾವು ಅನೇಕ ಮಂತ್ರಗಳನ್ನು ಪಠಿಸುತ್ತೇವೆ. ಆದರೆ ಕೆಲವೊಂದು ಪ್ರಭಾವಶಾಲಿ ಮಂತ್ರಗಳು ಪೂಜೆಗೆ ಮಾತ್ರವಲ್ಲ, ಆರೋಗ್ಯ ಸಮಸ್ಯೆಯನ್ನು ಹೋಗಲಾಡಿಸಲು ಕೂಡಾ ಬಹಳ ಉಪಯುಕ್ತವಾಗಿದೆ. ಹೆಚ್ಚಾಗಿ ಮಾನಸಿಕ ಸಮಸ್ಯೆಯಿಂದ ಹೊರ ಬರಲು ಈ ಶಕ್ತಿಶಾಲಿ ಮಂತ್ರಗಳು ಬಹಳ ಸಹಾಯಕಾರಿಯಾಗಿದೆ.

 ಪೂಜೆಗೆ ಮಾತ್ರವಲ್ಲ‌, ಆರೋಗ್ಯ ಸಮಸ್ಯೆಯಿಂದ ಹೊರ ಬರಲು ನೆರವಾಗಲಿದೆ ಈ ಶಕ್ತಿಶಾಲಿ ಮಂತ್ರಗಳು
ಪೂಜೆಗೆ ಮಾತ್ರವಲ್ಲ‌, ಆರೋಗ್ಯ ಸಮಸ್ಯೆಯಿಂದ ಹೊರ ಬರಲು ನೆರವಾಗಲಿದೆ ಈ ಶಕ್ತಿಶಾಲಿ ಮಂತ್ರಗಳು (PC: Freepik)

ಪ್ರತಿಯೊಬ್ಬರ ಜೀವನದಲ್ಲಿ ಒಂದಲ್ಲಾ ಒಂದು ಸಮಸ್ಯೆ ಇದ್ದೇ ಇರುತ್ತದೆ. ವೈಯಕ್ತಿಕ ಜೀವನ, ಉದ್ಯೋಗದಲ್ಲಿನ ಒತ್ತಡದಿಂದ ಎಷ್ಟೋ ಮಂದಿ ಖಿನ್ನತೆಗೆ ಒಳಗಾಗುತ್ತಾರೆ. ಇದರಿಂದ ದೈಹಿಕವಾಗಿ ಸಾಕಷ್ಟು ಸಮಸ್ಯೆಗಳೂ ಉಂಟಾಗಬಹುದು. ಇದನ್ನು ಕಡೆಗಣಿಸಿದರೆ ಆರೋಗ್ಯ ಸಮಸ್ಯೆ ಇನ್ನಷ್ಟು ಉಲ್ಬಣಿಸುತ್ತದೆ.

ಮಾನಸಿಕ, ದೈಹಿಕ ಸಮಸ್ಯೆಗಳ ವಿರುದ್ಧ ಹೋರಾಡುವವರಲ್ಲಿ ಅನಾರೋಗ್ಯದಿಂದ ಹೊರ ಬರಲು ಹೆಚ್ಚಾಗಿ ಔಷಧಗಳನ್ನು ಬಳಸುತ್ತಾರೆ. ಇನ್ನೂ ಹೆಚ್ಚಿನವರು ಧ್ಯಾನ ಹಾಗೂ ಯೋಗದ ಮೊರೆ ಹೋಗುತ್ತಾರೆ. ಔಷಧಗಳು ತಾತ್ಕಾಲಿಕ ಪರಿಹಾರವಾಗಿರಬಹುದು, ಆದರೆ ಅದು ಶಾಶ್ವತ ಪರಿಹಾರ ನೀಡುವುದಿಲ್ಲ. ನೀವು ಆಧ್ಯಾತ್ಮಿಕವಾಗಿ ಬಲಶಾಲಿಯಾಗಿದ್ದರೆ, ನೀವು ಸಂತೋಷವಾಗಿರಬಹುದು. ಇದರಿಂದ ಖಿನ್ನತೆ ಕೂಡಾ ನಿವಾರಣೆಯಾಗುತ್ತವೆ. ಅದಕ್ಕಾಗಿ ಪ್ರತಿದಿನ ಕೆಲವೊಂದು ಮಂತ್ರಗಳನ್ನು ಪಠಿಸುವುದರಿಂದ ನಿಮ್ಮೊಳಗಿನ ಅದ್ಭುತ ಶಕ್ತಿಯು ಜಾಗೃತಗೊಳ್ಳುತ್ತದೆ. ಸೂಕ್ತ ನಿಯಮಗಳನ್ನು ಅನುಸರಿಸುವ ಮೂಲಕ ಈ ಶ್ಲೋಕಗಳನ್ನು ಪಠಿಸುವುದರಿಂದ ಜೀವನದಲ್ಲಿ ಏನನ್ನಾದರೂ ಸಾಧಿಸಬಹುದು. ಈ ಶಕ್ತಿಯುತ ಮಂತ್ರಗಳು ನಿಮ್ಮ ಆರೋಗ್ಯ ಸಮಸ್ಯೆಗಳನ್ನು ನಿವಾರಿಸುತ್ತದೆ ಮತ್ತು ನಿಮ್ಮ ಮನಸ್ಸಿಗೆ ಶಾಂತಿ ನೀಡುತ್ತದೆ.

ಮಹಾ ಮೃತ್ಯುಂಜಯ ಮಂತ್ರ

ಮಹಾ ಮೃತ್ಯುಂಜಯ ಮಂತ್ರವು ಸಾವಿನ ಭಯವನ್ನು ಹೋಗಲಾಡಿಸುವುದು ಮಾತ್ರವಲ್ಲದೆ ಇತರ ಅನೇಕ ರೋಗಗಳನ್ನು ತೊಡೆದುಹಾಕಲು ಸಹ ಉಪಯುಕ್ತವಾಗಿದೆ. ಆತಂಕದಿಂದ ಬಳಲುತ್ತಿರುವವರು ರುದ್ರಾಕ್ಷ ಮಾಲೆಯ ಜಪದೊಂದಿಗೆ ಪ್ರತಿದಿನ 108 ಬಾರಿ ಈ ಶಕ್ತಿಶಾಲಿ ಶಿವ ಮಂತ್ರವನ್ನು ಪಠಿಸಿದರೆ ನಿಮ್ಮ ಅರ್ಧ ಸಮಸ್ಯೆ ಬಗೆಹರಿದಂತೆ. "ಓಂ ತ್ರ್ಯಂಬಕಂ ಯಜಾಮಹೇ, ಸುಗಂಧಿಂ ಪುಷ್ಟಿವರ್ಧನಂ, ಉರ್ವಾರುಕಮಿವ ಬಂಧನನ್, ಮೃತ್ಯೋರ್ ಮುಕ್ಷೀಯ ಮಾಮೃತಾತ್" ಎಂದು ಪಠಿಸಬೇಕು.

ಶ್ರೀ ನರಸಿಂಹ ಮಂತ್ರ

ಶ್ರೀ ನರಸಿಂಹ ಮಂತ್ರವು ಅತ್ಯಂತ ಶಕ್ತಿಶಾಲಿಯಾಗಿದೆ. ಓಂ ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋಮುಖಂ|

ನರಸಿಂಹಂ ಭೀಷಣಂ ಭದ್ರಂ ಮೃತ್ಯುಮೃತ್ಯುಂ ನಮಾಮ್ಯಹಂ ಮಂತ್ರವನ್ನು 108 ಬಾರಿ ಪಠಿಸುವುದರಿಂದ ಜನರಿಗೆ ತ್ವರಿತ ಪರಿಹಾರ ಸಿಗುತ್ತದೆ. ತುಳಸಿ ಮಾಲೆಯನ್ನು ಹಿಡಿದುಕೊಂಡು ಈ ಮಂತ್ರವನ್ನು ಪಠಿಸಬೇಕು. ಇದರಿಂದ ನೀವು ಎಲ್ಲಾ ಸಮಸ್ಯೆಗಳಿಂದ ಪರಿಹಾರವನ್ನು ಪಡೆಯುತ್ತೀರಿ. ಆರೋಗ್ಯ ಸಮಸ್ಯೆಗಳಿಂದ ಮುಕ್ತಿ ಹೊಂದುವಿರಿ.

ದುರ್ಗಾ ದೇವಿಯ 32 ಹೆಸರು 

ದುರ್ಗಾ ದೇವಿಯ 32 ನಾಮಗಳನ್ನು ಪಠಿಸುವುದು ಅತ್ಯಂತ ಪರಿಣಾಮಕಾರಿಯಾಗಿದೆ. ಪೂರ್ಣ ವಿಶ್ವಾಸದಿಂದ ಇದನ್ನು ನಿಯಮಿತವಾಗಿ ಪಠಿಸುವುದರಿಂದ ಜೀವನದಲ್ಲಿ ಎಲ್ಲಾ ಕಷ್ಟಗಳು ಕೊನೆಗೊಳ್ಳುತ್ತವೆ. ದುರ್ಗಾ ದೇವಿಯ 32 ಹೆಸರುಗಳನ್ನು ದ್ವಾತ್ರಿಂಶ ನಾಮಾವಳಿ ಎಂದು ಕರೆಯಲಾಗುತ್ತದೆ. ಕೆಂಪು ಚಂದನದ ಜಪಮಾಲೆಯೊಂದಿಗೆ ದುರ್ಗಾ ದೇವಿಯ 32 ಹೆಸರುಗಳನ್ನು 108 ಬಾರಿ ಜಪಿಸಿ.

ಗಾಯತ್ರಿ ಮಂತ್ರ

ಅತ್ಯಂತ ಶಕ್ತಿಶಾಲಿ ಮಂತ್ರಗಳಲ್ಲಿ ಒಂದು ಗಾಯತ್ರಿ ಮಂತ್ರ. ಓಂ ಭೂರ್ಭುವಃ ಸ್ವಃ ತತ್ಸವಿತುರ್ವರೇಣ್ಯಂ ಭರ್ಗೋ ದೇವಸ್ಯ ಧೀಮಹಿ ಧಿಯೋ ಯೋ ನಃ ಪ್ರಚೋದಯಾತ್‌ ಮಂತ್ರವನ್ನು ಪಠಿಸುವುದರಿಂದ ಜೀವನದಲ್ಲಿ ಅನೇಕ ಪ್ರಯೋಜನಗಳಿವೆ. ನಕಾರಾತ್ಮಕ ಆಲೋಚನೆಗಳು ಮತ್ತು ಭ್ರಮೆಗಳು ದೂರವಾಗುತ್ತವೆ ಮತ್ತು ಜೀವನದಲ್ಲಿ ಸ್ಪಷ್ಟತೆ ಬರುತ್ತದೆ. ಈ ಮಂತ್ರವನ್ನು ರುದ್ರಾಕ್ಷ ಜಪಗಳೊಂದಿಗೆ ಪ್ರತಿದಿನ 108 ಬಾರಿ ಜಪಿಸಬೇಕು. ಹೀಗೆ ಮಾಡುವುದರಿಂದ 6 ತಿಂಗಳಿಂದ ಒಂದು ವರ್ಷದೊಳಗೆ ನಿಮ್ಮ ಜೀವನದಲ್ಲಿ ಅದ್ಭುತ ಬದಲಾವಣೆಗಳನ್ನು ಕಾಣುತ್ತೀರಿ. ಮದ್ಯಪಾನ, ಧೂಮಪಾನದಂಥ ಚಟಗಳಿಂದ ದೂರವಿದ್ದು, ಭಕ್ತಿಯಿಂದ ಈ ಮಂತ್ರವನ್ನು ಪಠಿಸುವುದರಿಂದ ಆರೋಗ್ಯ ಸಮಸ್ಯೆಗಳು ದೂರವಾಗುತ್ತವೆ.

ಹನುಮಾನ್ ಚಾಲೀಸಾ

ಹನುಮಾನ್ ಚಾಲೀಸಾವನ್ನು ಪ್ರತಿದಿನ 11 ಬಾರಿ ಪಠಿಸುವುದರಿಂದ ಜೀವನದಲ್ಲಿ ಅನೇಕ ಬದಲಾವಣೆಗಳನ್ನು ತರುತ್ತದೆ. ಸುಮಾರು 6 ತಿಂಗಳ ಕಾಲ ಇದನ್ನು ಪುನರಾವರ್ತಿಸಿ. ಹೀಗೆ ಮಾಡುವುದರಿಂದ ಮನೆ, ಮನದಿಂದ ನಕಾರಾತ್ಮಕತೆ ದೂರವಾಗುವುದಲ್ಲದೆ ನಿಮ್ಮ ಜೀವನದಲ್ಲಿ ದುಃಖವೂ ದೂರವಾಗುತ್ತದೆ. ಈ ಮಂತ್ರಗಳನ್ನು ಪಠಿಸುವುದರಿಂದ ನಿಮ್ಮ ಆರೋಗ್ಯ ಕೂಡಾ ವೃದ್ಧಿಯಾಗುತ್ತದೆ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.