ಶನಿ ಪ್ರಭಾವಕ್ಕೆ ಒಳಗಾಗಿದ್ದೀರಾ? ಶನಿ ಜಯಂತಿ ಸೇರಿದಂತೆ ಜೂನ್‌ನಲ್ಲಿ ಈ 2 ದಿನಗಳು ಶನೈಶ್ಚರನ ಆಶೀರ್ವಾದ ಪಡೆಯಲು ಸೂಕ್ತ ದಿನ
Shani Blesssing: ಶನಿ ದೇವರ ದೃಷ್ಟಿ ಬಿದ್ದರೆ ಜೀವನದಲ್ಲಿ ಬಹಳ ಸಮಸ್ಯೆ ಎದುರಿಸಬೇಕು ಎಂದು ಎಲ್ಲರೂ ಹೆದರುತ್ತಾರೆ. ಆದರೆ ನ್ಯಾಯ ಮಾರ್ಗದಲ್ಲಿ ನಡೆದರೆ ಶನಿ ಎಲ್ಲರನ್ನೂ ಆಶೀರ್ವದಿಸುತ್ತಾನೆ. ಶನಿ ಜಯಂತಿ ಸೇರಿದಂತೆ ಜೂನ್‌ನಲ್ಲಿ ಈ 2 ದಿನಗಳು ಶನೈಶ್ಚರನ ಆಶೀರ್ವಾದ ಪಡೆಯಲು ಸೂಕ್ತ ದಿನವಾಗಿದೆ.
ಗ್ರಹಗಳಲ್ಲಿ ಹೆಚ್ಚಿನವರು ಕುಜ, ಶನಿಗೆ ಬಹಳ ಹೆದರುತ್ತಾರೆ. ಕುಜ ದೋಷ ಇದ್ದರೆ ಮದುವೆ ತಡವಾಗುತ್ತದೆ. ಶನಿ ಕೃಪೆ ಇಲ್ಲದಿದ್ದಲ್ಲಿ ಜೀವನದಲ್ಲಿ ಬಹಳ ಕಷ್ಟ ಪಡಬೇಕಾಗುತ್ತದೆ. ಅದರಲ್ಲು ಶನಿ ಸಾಡೇಸಾತಿ ಇದ್ದರಂತೂ ಬಹಳ ಕಷ್ಟ. ಆದ್ದರಿಂದ ಜನರು ಕಷ್ಟಗಳಿಂದ ಪಾರಾಗಲು, ಶನಿದೇವನ ಆಶೀರ್ವಾದ ಪಡೆಯಲು ಪ್ರತಿ ಶನಿವಾರ ಶನೈಶ್ವರ ದೇವಾಲಯಕ್ಕೆ ಹೋಗಿ ನಮಸ್ಕರಿಸಿ ಬರುತ್ತಾರೆ. ಹನುಮಾನ್ ಚಾಲೀಸಾ ಓದುತ್ತಾರೆ.
ಜೂನ್ ತಿಂಗಳಿನಲ್ಲಿ ಶನಿ ದೇವರಿಗೆ ಸಂಬಂಧಿಸಿದ 2 ದಿನಗಳು ಬಹಳ ವಿಶೇಷವಾಗಿದೆ. ಈ ಎರಡೂ ದಿನಗಳು ನೀವು ಶನಿಯನ್ನು ಪೂಜಿಸುವುದರಿಂದ ಆತನ ಅನುಗ್ರಹ ಪಡೆಯಬಹುದು. ಶನಿ ಪ್ರಭಾವದಿಂದ ಪಾರಾಗಬಹುದು. ಆ ಎರಡು ದಿನಗಳು ಯಾವುದು? ಯಾವ ರೀತಿ ಶನಿಯನ್ನು ಆರಾಧಿಸಬೇಕು ಎಂಬುದರ ಬಗ್ಗೆ ಇಲ್ಲಿ ಮಾಹಿತಿ ಇದೆ.
ಜೂನ್ 6 ರಂದು ಶನಿ ಜಯಂತಿ
ಜೂನ್ ತಿಂಗಳಲ್ಲಿ ಶನಿ ಜಯಂತಿ ಇದ್ದು ಈ ದಿನ ಬಹಳ ವಿಶೇಷವಾದುದು, ಈ ದಿನ ನೀವು ಶನಿದೇವನನ್ನು ನಿಯಮಾನುಸಾರ ಪೂಜಿಸಿದರೆ ನೀವು ಶನಿಯಿಂದ ಎದುರಿಸುತ್ತಿರುವ ಎಲ್ಲಾ ಸಮಸ್ಯೆಗಳಿಂದ ಹೊರ ಬರಬಹುದು. ಈ ಬಾರಿ ಜೂನ್ 6 ರಂದು ಶನಿ ಜಯಂತಿ ಆಚರಿಸಲಾಗುತ್ತಿದೆ. ಆ ದಿನ ಅಮವಾಸ್ಯೆಯ ಜೊತೆಗೆ ಅದೇ ದಿನ ಶನಿ ಜಯಂತಿಯೂ ಬಂದಿದೆ. ಶನಿ ಪ್ರಭಾವದಿಂದ ಬಳಲುತ್ತಿರುವವರಿಗೆ ಇಂದು ಅತ್ಯಂತ ಮಂಗಳಕರ ದಿನ. ಶನಿಯ ಅಶುಭ ಫಲಗಳಿಂದ ಮುಕ್ತಿ ಹೊಂದಲು ಶನಿ ಜಯಂತಿ ಬಹಳ ಒಳ್ಳೆಯ ದಿನ. ಕುಂಭ, ಮಕರ ಮತ್ತು ಮೀನ ರಾಶಿಯವರಿಗೆ ಈ ವರ್ಷ ಶನಿಗ್ರಹ ಪ್ರಭಾವ ಬೀರುತ್ತದೆ. ಆದ್ದರಿಂದ ಈ ರಾಶಿಯವರು ಬಹಳ ಎಚ್ಚರಿಕೆಯಿಂದ ಇರಬೇಕು.
ಜೂನ್ ತಿಂಗಳಲ್ಲಿ ಶನಿ ಜಯಂತಿ ಹೊರತುಪಡಿಸಿ ಜೂನ್ 29 ರಂದು ಕೂಡಾ ಶನಿದೇವನ್ನು ಪೂಜಿಸಲು ಒಳ್ಳೆಯ ದಿನವಾಗಿದೆ. ಶನಿಯು ಇಂದು ತನ್ನ ಚಲನೆಯನ್ನು ಬದಲಾಯಿಸಲಿದ್ದಾನೆ. ಸದ್ಯಕ್ಕೆ ನೇರವಾಗಿ ಸಂಚರಿಸುತ್ತಿರುವ ಶನಿಯು ಜೂನ್ 29, ಶನಿವಾರದಿಂದ ತನ್ನ ಸ್ಥಾನ ಬದಲಿಸುತ್ತಿದ್ದಾನೆ. ಈ ದಿನ ಶನಿಯು ಹಿಮ್ಮುಖ ಚಲನೆ ಆರಂಭಿಸಲಿದ್ದಾನೆ. ಆದ್ದರಿಂದ ಶನಿಯ ಕೃಪೆಯನ್ನು ಪಡೆಯಲು ಇದೂ ಕೂಡಾ ಉತ್ತಮ ಸಮಯ. ವಿವಿಧ ಪರಿಹಾರಗಳನ್ನು ಮಾಡುವ ಮೂಲಕ ಶನಿಯ ವಕ್ರದೃಷ್ಟಿಯಿಂದ ನೀವು ಪಾರಾಗಬಹುದು. ಈ ದಿನ ಶನಿಯ ಪ್ರಭಾವಕ್ಕೆ ಒಳಗಾಗಿರುವವರು ತಪ್ಪದೆ ಶನಿ ದೇವಾಲಯಕ್ಕೆ ತೆರಳಿ ಎಳ್ಳೆಣ್ಣೆಯನ್ನು ಸಮರ್ಪಿಸಿ ಪ್ರಾರ್ಥಿಸಿ ಬರಬೇಕು.
ಶನಿ ದೇವರನ್ನು ಮೆಚ್ಚಿಸುವ ಮಾರ್ಗಗಳು
ಶನಿ ದೇವನ ಅನುಗ್ರಹ ಪಡೆಯಲು ಸುಲಭವಾದ ಮಾರ್ಗವೊಂದಿದೆ. ಯಾವುದೇ ಪ್ರತಿಫಲವನ್ನು ನಿರೀಕ್ಷಿಸದೆ ಬಡವರಿಗೆ ಮತ್ತು ನಿರ್ಗತಿಕರಿಗೆ ಸಹಾಯ ಮಾಡುವ ಮೂಲಕ ಶನಿಯನ್ನು ಸಂತೋಷಪಡಿಸಬಹುದು. ಹಾಗೆಯೇ ಪ್ರತಿ ಶನಿವಾರ ಹನುಮಾನ್ ಚಾಲೀಸಾ ಪಠಿಸಬೇಕು. ಹನುಮಂತನಿಗೆ ಸಾಸಿವೆ ಎಣ್ಣೆಯ ದೀಪವನ್ನು ಹಚ್ಚಿ. ಶನಿ ದೇವರನ್ನು ಮೆಚ್ಚಿಸಲು ಪ್ರತಿ ಶನಿವಾರ ಸಾಸಿವೆ ಎಣ್ಣೆಯನ್ನು ದಾನ ಮಾಡಬೇಕು. ಎಳ್ಳೆಣ್ಣೆಯನ್ನು ಕೂಡಾ ದಾನ ಮಾಡಬಹುದು. ಈ ಎರಡೂ ದಿನಗಳಲ್ಲಿ ಅರಳಿ ಮರಕ್ಕೆ ವಿಶೇಷ ಪೂಜೆ ಮಾಡಬೇಕು. ಅರಳಿ ಮರಕ್ಕೆ ನೀರು ಅರ್ಪಿಸಿ ಮರಕ್ಕೆ ಪ್ರದಕ್ಷಿಣೆ ಹಾಕಿ. ಹಾಗೆಯೇ ಶನಿವಾರದಂದು ಕಪ್ಪು ಎಳ್ಳನ್ನು ದಾನ ಮಾಡಬೇಕು. ಶನಿ ದೇವರನ್ನು ಮೆಚ್ಚಿಸಲು ಇನ್ನೊಂದು ಮಾರ್ಗವೆಂದರೆ ಶಮಿ ವೃಕ್ಷವನ್ನು ಪೂಜಿಸುವುದು. ಅಲ್ಲದೆ, ಶನಿದೇವರ ದೇವಸ್ಥಾನಕ್ಕೆ ಹೋಗಿ ಎಣ್ಣೆಯ ದೀಪ ಹಚ್ಚಿದ ನಂತರ ಯಾವುದೇ ಕಾರಣಕ್ಕೂ ಶನಿದೇವನ ಕಣ್ಣುಗಳನ್ನು ನೋಡಬೇಡಿ. ದರ್ಶನ ಮಾಡುವಾಗ ಶನಿದೇವನ ಪಾದವನ್ನು ಮಾತ್ರ ನೋಡಬೇಕು. ಆಗ ಮಾತ್ರ ಶನಿಯ ಆಶೀರ್ವಾದ ಸಿಗುತ್ತದೆ.
ಈ ಮಂತ್ರಗಳನ್ನು ಪಠಿಸಿದರೆ ಒಳ್ಳೆಯದು
ಶನೈಶ್ಚರನನ್ನು ಮೆಚ್ಚಿಸಲು
ಓಂ ಶನಿ ಅಭಯಹಸ್ತಾಯ ನಮಃ
ಓಂ ಶನೈಶ್ಚರಾಯ ನಮಃ
ಓಂ ನೀಲಾಂಜನಸಮಾಭಂ ರವಿಪುತ್ರಂ ಯಮಗ್ರಹಂ ಛಾಯಾಮಾರ್ತಾಂಡಸಂಭೂತಂ ತ್ವಂ ನಮಾಮಿಮಿ ಶನೈಶ್ಚರಮ್
ಮಂತ್ರಗಳನ್ನು ಪಠಿಸಿ
ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.
(ಕನ್ನಡದಲ್ಲಿ ಕ್ರಿಕೆಟ್, ಎಚ್‌ಟಿ ಕನ್ನಡ ಬೆಸ್ಟ್. ಐಪಿಎಲ್, ಟಿ20 ವರ್ಲ್ಡ್‌ಕಪ್ ಸೇರಿದಂತೆ ಕ್ರಿಕೆಟ್ ಲೋಕದ ಸಮಗ್ರ ಮಾಹಿತಿ, ತಾಜಾ ವಿದ್ಯಮಾನ, ರನ್-ವಿಕೆಟ್, ಪ್ಲೇಆಫ್, ಟೀಮ್ ಸ್ಟಾಟ್ ವಿಶ್ಲೇಷಣೆಗಳಿಗಾಗಿ kannada.hindustantimes.com/cricket ಕ್ಕೆ ಭೇಟಿ ನೀಡಿ.)