ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುತ್ತಾರೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸು; ಮೊಟಕಾದ ಮೂಗು ಹೊಂದಿರುವವರ ಗುಣ ಸ್ವಭಾವ-horoscope astrological prediction by shape of nose characteristic of people who has short nose sts ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುತ್ತಾರೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸು; ಮೊಟಕಾದ ಮೂಗು ಹೊಂದಿರುವವರ ಗುಣ ಸ್ವಭಾವ

ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುತ್ತಾರೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸು; ಮೊಟಕಾದ ಮೂಗು ಹೊಂದಿರುವವರ ಗುಣ ಸ್ವಭಾವ

ಜನ್ಮ ದಿನಾಂಕ ಆಧರಿಸಿ ಭವಿಷ್ಯವನ್ನು ತಿಳಿಯಬಹುದು. ಆದರೆ ನಮ್ಮ ದೇಹದದಲ್ಲಿ ಕಣ್ಣು, ಕಿವಿ, ಮೂಗಿನ ಆಕಾರ ತಿಳಿದು ಆಯಾ ವ್ಯಕ್ತಿಗಳ ಸ್ವಭಾವವನ್ನೂ ತಿಳಿಯಬಹುದು. ಈ ಲೇಖನದಲ್ಲಿ ಮೂಗಿನ ಆಕಾರದಿಂದ ವ್ಯಕ್ತಿಗಳ ಗುಣ ಸ್ವಭಾವವನ್ನು ಹೇಗೆ ತಿಳಿಯಬಹುದು ಎಂದು ವಿವರಿಸಲಾಗಿದೆ. (ಬರಹ: ಎಚ್‌. ಸತೀಶ್, ಜ್ಯೋತಿಷಿ)

ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುತ್ತಾರೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸು; ಮೊಟಕಾದ ಮೂಗು ಹೊಂದಿರುವವರ ಗುಣ ಸ್ವಭಾವ (ಸಾಂದರ್ಭಿಕ ಚಿತ್ರ)
ವಿದ್ಯಾಭ್ಯಾಸದಲ್ಲಿ ಸಾಧನೆ ಮಾಡುತ್ತಾರೆ, ಕಷ್ಟದಲ್ಲಿರುವವರಿಗೆ ನೆರವಾಗುವ ಮನಸ್ಸು; ಮೊಟಕಾದ ಮೂಗು ಹೊಂದಿರುವವರ ಗುಣ ಸ್ವಭಾವ (ಸಾಂದರ್ಭಿಕ ಚಿತ್ರ) (PC: Unsplash)

ಕೆಲವರ ಮೂಗು ಮೊಟಕಾಗಿರುತ್ತದೆ. ಅಂತಹವರು ಯಾವುದೇ ವಿಚಾರದಲ್ಲಿ ಸ್ವಂತ ನಿರ್ಧಾರವನ್ನು ತೆಗೆದುಕೊಳ್ಳುವುದಿಲ್ಲ. ಹಣಕಾಸಿನ ವಿಚಾರದಲ್ಲಿ ತೊಂದರೆ ಇರುವುದಿಲ್ಲ. ಆದರೆ ಇರುವ ಅನುಕೂಲತೆಗಳನ್ನು ಬಳಸಿಕೊಳ್ಳಲು ವಿಫಲರಾಗುತ್ತಾರೆ. ವಿದ್ಯಾಭ್ಯಾಸದಲ್ಲಿ ಉನ್ನತ ಸಾಧನೆ ಮಾಡುತ್ತಾರೆ. ಬೇರೆಯವರ ಸಹಾಯ ಸಹಕಾರವಿಲ್ಲದೆ ಯಾವುದೇ ಕೆಲಸ ಮಾಡಲಾರರು. ಚಿಕ್ಕ ವಯಸ್ಸಿನಲ್ಲಿ ಸಾಮಾನ್ಯವಾಗಿ ಇವರು ಸಂಪೂರ್ಣವಾಗಿ ಬೇರೆಯವರನ್ನು ಆಶ್ರಯಿಸುತ್ತಾರೆ. ಆದರೆ ದಿನ ಕಳೆದಂತೆ ತಮ್ಮ ಸ್ವಂತ ಜವಾಬ್ದಾರಿಯನ್ನು ಅರಿತು ಸ್ವತಂತ್ರ ಜೀವನ ನಿರ್ವಹಿಸುತ್ತಾರೆ.

ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ಗಳಿಸುತ್ತಾರೆ

ಇವರಿಗೆ ಹಣದ ಮೇಲೆ ವ್ಯಾಮೋಹವಿರುತ್ತದೆ. ಹಣ ಉಳಿತಾಯ ಮಾಡುತ್ತಾರೆ. ಇವರು ಅತಿ ಸ್ವಾಭಿಮಾನಿಗಳು. ತಮಗೆ ಅವಮಾನವಾದರೂ ಅದನ್ನು ಖಂಡಿಸದೆ ಅವರಿಂದ ದೂರ ಉಳಿಯುತ್ತಾರೆ. ಕ್ರಮೇಣವಾಗಿ ಇವರು ಬೇರೆಯವರಿಗೂ ನೆರವಾಗುವ ಮಟ್ಟಕ್ಕೆ ತಲುಪುತ್ತಾರೆ. ಇವರ ಮನಸ್ಸಿನ ಆಸೆ ಆಕಾಂಕ್ಷೆಗಳು ತಡವಾಗಿ ಪೂರ್ಣಗೊಳ್ಳುತ್ತವೆ. ಇವರಿಗೆ ಹೊಸ ವಿಚಾರಗಳನ್ನು ಕಲಿಯುವ ಹಂಬಲ ಹೆಚ್ಚಾಗಿರುತ್ತದೆ. ಯಾವುದೇ ವಿಚಾರದಿಂದ ಅಥವಾ ವಿಷಯದಿಂದ ಅನುಕೂಲವಾಗುವಂತಿದ್ದರೆ ಅದರ ಬಗ್ಗೆ ಕಷ್ಟಪಟ್ಟು ಅಧ್ಯಯನ ನಡೆಸುತ್ತಾರೆ.

ಇವರ ವಿದ್ಯಾಭ್ಯಾಸಕ್ಕೆ ತಕ್ಕಂತೆ ಉದ್ಯೋಗ ದೊರೆಯುತ್ತದೆ. ಅತಿಯಾದ ಆಸೆ ಇಲ್ಲದೆ ಮನೆ ಮಂದಿಯೊಡನೆ ಸುಖ ಸಂತೋಷದ ಬಾಳ್ವೆ ನಡೆಸುತ್ತಾರೆ. ಬಡ ವಿದ್ಯಾರ್ಥಿಗಳಿಗೆ ಸಹಾಯ ಮಾಡುವುದೆಂದರೆ ಇವರಿಗೆ ಎಲ್ಲಿಲ್ಲದ ಸಂತೋಷ. ಅವಶ್ಯಕತೆ ಇದ್ದಲ್ಲಿ ಅನ್ನದಾನಕ್ಕೆ ಸಹಾಯ ಮಾಡುತ್ತಾರೆ. ದೇವರಲ್ಲಿ ವಿಶೇಷವಾದ ಭಕ್ತಿ ಇರುತ್ತದೆ. ಆದರೆ ದುರಾಸೆಯಿಂದ ದೇವರಲ್ಲಿಯೂ ಕೂಡಾ ಏನನ್ನು ಬೇಡುವುದಿಲ್ಲ. ಇದ್ದುದ್ದರಲ್ಲಿ ಸಂತೋಷದಿಂದ ಬಾಳುತ್ತಾರೆ. ಯಾತ್ರಾ ಸ್ಥಳಗಳಿಗೆ ಭೇಟಿ ನೀಡುವ ಅವಕಾಶ ಇವರಿಗೆ ದೊರೆಯುತ್ತದೆ.

ಧಾರ್ಮಿಕ ಕಾರ್ಯಗಳಲ್ಲಿ ಹೆಚ್ಚಿನ ಆಸಕ್ತಿ

ಆತ್ಮೀಯರ ಸಹಾಯದಿಂದ ಧಾರ್ಮಿಕ ಕಾರ್ಯಗಳನ್ನು ಯಶಸ್ವಿಯಾಗಿ ಮಾಡುತ್ತಾರೆ. ಇವರ ಮನಸ್ಸನ್ನು ಅರಿತು ನಡೆಯುವ ಸಂಗಾತಿಯೊಂದಿಗೆ ವಿವಾಹವಾಗುತ್ತದೆ. ನಿರಾಸೆಯಾದಾಗ ಸಹನೆ ಕಳೆದುಕೊಂಡು ಉಗ್ರವಾಗಿ ವರ್ತಿಸುತ್ತಾರೆ. ತಪ್ಪು ಮಾಡಿದವರನ್ನು ಮನ್ನಿಸುವುದು ಇಲ್ಲ ಅಥವಾ ಶಿಕ್ಷಿಸುವುದೂ ಇಲ್ಲ ಆದರೆ ಅವರಿಂದ ದೂರ ಉಳಿಯುತ್ತಾರೆ. ತಮ್ಮ ತಪ್ಪನ್ನು ಮರೆ ಮಾಚುವುದಿಲ್ಲ. ಮಾಡಿದ ತಪ್ಪಿಗೆ ಕ್ಷಮೆ ಯಾಚಿಸುವುದು ಇಲ್ಲ. ಉದ್ಯೋಗದಲ್ಲಿ ಇವರಿಂದ ಹಲವಾರು ಜನ ಸಹಾಯ ಪಡೆಯುತ್ತಾರೆ. ಆದರೆ ಸಹಾಯ ಪಡೆದವರಿಂದಲೇ ಸಮಸ್ಯೆ ಉಂಟಾಗುತ್ತದೆ. ಜೀವನದಲ್ಲಿ ಉನ್ನತ ಮಟ್ಟ ತಲುಪಲು ಆತ್ಮೀಯರೇ ಅಡ್ಡಿ ಮಾಡುತ್ತಾರೆ.

ಸಭೆ ಸಮಾರಂಭಗಳಲ್ಲಿ ಭಾಗವಹಿಸಲು ಹೆಚ್ಚಿನ ಆಸಕ್ತಿ ಇರುತ್ತದೆ. ಕ್ರಮೇಣವಾಗಿ ಆಸ್ತಿ ಅಂತಸ್ತನ್ನು ಗಳಿಸುತ್ತಾರೆ. ಒಂದಕ್ಕಿಂತಲೂ ಹೆಚ್ಚಿನ ಆದಾಯ ದಾಂಪತ್ಯದಲ್ಲಿ ಸಣ್ಣಪುಟ್ಟ ಸಮಸ್ಯೆಗಳು ಎದುರಾದರೂ ಅದರಿಂದ ಪಾರಾಗುತ್ತಾರೆ. ಮಕ್ಕಳಿಗಾಗಿ ವಿಶೇಷ ಆಸ್ತಿಯನ್ನಾಗಲಿ ಹಣವನ್ನಾಗಲಿ ಮಾಡುವುದಿಲ್ಲ. ಆದರೆ ಮಕ್ಕಳಿಗೆ ಉತ್ತಮ ವಿದ್ಯಾಭ್ಯಾಸವನ್ನು ಕೊಡಿಸುತ್ತಾರೆ. ಸ್ವತಂತ್ಯ್ರ ಜೀವನ ನಡೆಸಲು ಬೇಕಾದ ಅನುಕೂಲತೆಗಳನ್ನು ಮಾಡಿಕೊಡುತ್ತಾರೆ. ಮಕ್ಕಳ ಜೊತೆ ಉತ್ತಮ ಬಾಂಧವ್ಯ ಇರುವುದಿಲ್ಲ. ಆದರೆ ಮಗಳ ಜೊತೆಯಲ್ಲಿ ಸದಾ ಕಾಲ ಸಂತೋಷದಿಂದ ಕಾಲ ಕಳೆಯುತ್ತಾರೆ.

ತಡವಾದರೂ ಸ್ವಂತ ಮನೆ ಕನಸು ನೆರವೇರುತ್ತದೆ

ಯಾವುದೇ ಒತ್ತಡಕ್ಕೆ ಮಣಿಯದೆ ತಮ್ಮ ಜವಾಬ್ದಾರಿಯನ್ನು ಕಷ್ಟವೆನಿಸಿದರೂ ಪೂರ್ಣಗೊಳಿಸುತ್ತಾರೆ. ಅನಾವಶ್ಯಕವಾಗಿ ಇವರು ಬೇರೆಯವರನ್ನು ಅವಲಂಬಿಸುವುದಿಲ್ಲ. ತಮ್ಮ ಕೊನೆಯ ದಿನಗಳಲ್ಲಿಯೂ ಸಹ ಸ್ವತಂತ್ಯ್ರ ಜೀವನ ನಡೆಸುತ್ತಾರೆ. ಕಣ್ಣಿನ ತೊಂದರೆ ಬಿಟ್ಟರೆ ಸಾಮಾನ್ಯವಾಗಿ ಇವರಿಗೆ ಯಾವುದೇ ರೀತಿಯ ಅನಾರೋಗ್ಯದ ತೊಂದರೆ ಕಂಡು ಬರುವುದಿಲ್ಲ. ಸ್ವಂತ ಮನೆಯ ಕನಸು ಕೊನೆ ದಿನಗಳಲ್ಲಿ ಈಡೇರುತ್ತದೆ. ಸಾಲ ಮಾಡಿ ಶೋಕಿ ಮಾಡುವ ಜನ ಇವರಲ್ಲ. ಇವರನ್ನು ಕಂಡು ಚಿಕ್ಕವರಲ್ಲದೆ ದೊಡ್ಡವರು ಸಹ ಕಲಿಯಬೇಕಾದ ವಿಚಾರಗಳು ಬಹಳ ಇರುತ್ತವೆ. ಇವರಿಗೆ ಆಯುರ್ವೇದದ ವಿಚಾರದಲ್ಲಿ ಉತ್ತಮ ಜ್ಞಾನ ಲಭಿಸುತ್ತದೆ.

ಬರಹ: ಎಚ್‌. ಸತೀಶ್, ಜ್ಯೋತಿಷಿ

ಮೊಬೈಲ್:‌ 8546865832

(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.