ಹಿಡಿತ ಇಲ್ಲದೆ ಹಣ ಖರ್ಚು ಮಾಡುವ ರಾಶಿಗಳಿವು; ನೀವೂ ಇದೇ ರೀತೀನಾ, ನಿಮ್ಮದು ಯಾವ ರಾಶಿ?
ಹಣ ಇಂದಿನ ದಿನಗಳಲ್ಲಿ ಅತ್ಯಂತ ಅಗತ್ಯವಾದದ್ದು. ಏನೇ ಖರೀದಿಸಿಬೇಕೆಂದಿದ್ದರೂ ಹಣ ಬೇಕೇ ಬೇಕು. ಕಷ್ಟಪಟ್ಟು ದುಡಿದ ಹಣವನ್ನು ಜೋಪಾನವಾಗಿ ಇಟ್ಟುಕೊಳ್ಳುವುದು, ಅಗತ್ಯಕ್ಕೆ ತಕ್ಕಂತೆ ಬಳಸುವುದು ಜಾಣತನ. ಆದರೆ ಕೆಲವರು ತಮ್ಮ ಮನಸ್ಸಿಗೆ ಬಂದಂತೆ ಹಣ ವ್ಯಯ ಮಾಡುತ್ತಾರೆ. ಯಾವೆಲ್ಲಾ ರಾಶಿಗಳು ಹೀಗೆ ನೋಡೋಣ. (ಬರಹ: ಅರ್ಚನಾ ವಿ ಭಟ್)
ಆಧುನಿಕ ಜಗತ್ತಿನಲ್ಲಿ ಹಣ ಅತ್ಯಂತ ಅವಶ್ಯಕವಾಗಿದೆ. ಹಣವನ್ನು ಹಿತ ಮಿತವಾಗಿ ಖರ್ಚು ಮಾಡುವುದು ಜಾಣತನ. ಆದರೆ ಕೆಲವರು ಹಣ ನಿರ್ವಹಣೆಯಲ್ಲಿ ಜಾಣತನ ತೋರಿಸುವುದೇ ಇಲ್ಲ. ಅಂತಹವರನ್ನು ಕಂಡಾಗ ಏನಪ್ಪಾ ಇವ್ರು ಹಣವನ್ನು ನೀರಿನಂತೆ ಖರ್ಚು ಮಾಡುತ್ತಾರೆ ಎಂದು ಹೇಳುವುದನ್ನು ಕೇಳಿರಬಹುದು.
ನಮ್ಮಲ್ಲಿ ಕೆಲವರಿಗೆ ಹಣವನ್ನು ಅತಿಯಾಗಿ ಖರ್ಚು ಮಾಡುವ ಅಭ್ಯಾಸವಿರುತ್ತದೆ. ಜ್ಯೋತಿಷ್ಯ ಶಾಸ್ತ್ರದ ನಂಬಿಕೆಯ ಪ್ರಕಾರ ಕೆಲವು ರಾಶಿಗೆ ಸೇರಿದವರಲ್ಲಿ ಈ ಗುಣವಿರುತ್ತದೆ. ಅವರು ಅನಾವಶ್ಯಕ ವಸ್ತುಗಳ ಮೇಲೆ ಹಣ ಖರ್ಚು ಮಾಡುತ್ತಾರೆ. ಅವರಲ್ಲಿ ಹಣಕಾಸಿನ ನಿರ್ವಹಣೆ ಅತಿ ಕಳಪೆಯಾಗಿರುತ್ತದೆ. ಲೆಕ್ಕವಿಲ್ಲದಷ್ಟು ಹಣ ವ್ಯಯಮಾಡುತ್ತಾರೆ. ಅದರಲ್ಲೂ ಮನಃಸ್ಥತಿ ಸರಿಯಿಲ್ಲವೆಂದು ಶಾಪಿಂಗ್‌ಗಳಿಗೆ ಹೋಗಿ ಕಂಡ ಕಂಡ ವಸ್ತುಗಳನ್ನು ಖರೀದಿಸಿ ಕೈ ಬರಿದಾಗಿಸಿಕೊಂಡು ಬರುತ್ತಾರೆ. ಈ ಗುಣ ಕೆಲವು ರಾಶಿಯವರಲ್ಲಿ ಸ್ವಲ್ಪ ಹೆಚ್ಚಾಗಿರುತ್ತದೆ ಎಂದು ಹೇಳುತ್ತದೆ ಜ್ಯೋತಿಷ್ಯ ಶಾಸ್ತ್ರ.
ಅಧಿಕ ಹಣ ಖರ್ಚು ಮಾಡುವ 5 ರಾಶಿಗಳು
ಮೇಷ ರಾಶಿ
ಇವರು ವಸ್ತುಗಳನ್ನು ಕೊಂಡುಕೊಳ್ಳಲು ಅತಿ ಉತ್ಸುಕರಾಗಿರುತ್ತಾರೆ. ಅದರಲ್ಲೇ ಆನಂದ ಕಾಣುತ್ತಾರೆ. ಯಾವಾಗಲೂ ಇತರ ಬಳಿ ಇರುವ ವಸ್ತುಗಳನ್ನು ತಾವೂ ಖರೀದಿಸಬೇಕೆಂಬ ಆಸೆಯಲ್ಲಿರುತ್ತಾರೆ. ಈ ಆಸೆಯೇ ಅವರು ಅಗತ್ಯಕ್ಕಿಂತಲೂ ಹೆಚ್ಚು ಹಣ ಖರ್ಚು ಮಾಡುವಂತೆ ಮಾಡುತ್ತದೆ. ಹಾಗಾಗಿ ದಿನದ ಕೊನೆಯಲ್ಲಿ ಇವರ ಬಳಿ ಹಣ ಉಳಿಯುವುದೇ ಇಲ್ಲ. ಮಂಗಳ ಗ್ರಹವು ಮೇಷ ರಾಶಿಯನ್ನು ಆಳುವುದರಿಂದ ಅದು ಎಲ್ಲಾ ವಸ್ತುಗಳ ಮೇಲೂ ಅತಿ ಆಸೆಯನ್ನು ಮೂಡಿಸುತ್ತದೆ. ಹಾಗಾಗಿ ಆಡಂಬರದ ಜೀವನ ಇವರದ್ದಾಗಿದೆ.
ಮಿಥುನ ರಾಶಿ
ಹಣದ ವಿಚಾರದಲ್ಲಿ ಈ ರಾಶಿಯವರದು ವಿಭಿನ್ನ ಸ್ವಭಾವವಾಗಿದೆ. ಅವರು ಹಣವನ್ನು ಹೇಗೆ ಖರ್ಚು ಮಾಡುತ್ತಾರೆ ಎಂದು ಊಹಿಸುವುದು ಕಷ್ಟವಾಗಿದೆ. ಇವರದ್ದು ದ್ವಂಧ್ವ ಸ್ವಭಾವ. ಕೆಲವೊಮ್ಮೆ ಅವಶ್ಯಕತೆಯಿರುವ ಸಂದರ್ಭಗಳಲ್ಲಿ ಹಣ ವ್ಯಯ ಮಾಡಲು ಹಿಂದೇಟು ಹಾಕುತ್ತಾರೆ. ಅದೇ ಶಾಪಿಂಗ್, ಆಡಂಬರದಂತಹ ಅನಗತ್ಯ ವಸ್ತುಗಳ ಖರೀದಿಗೆ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಮಿಥುನ ರಾಶಿಯವರ ಈ ರೀತಿಯ ಮನಸ್ಸಿನಿಂದಾಗಿ ಆಗಾಗ ಅವರನ್ನು ಎಚ್ಚರಿಸುತ್ತಿರಬೇಕಾಗುತ್ತದೆ. ಯಾವುದಕ್ಕೆ ಹಣ ಖರ್ಚು ಮಾಡಬೇಕು ಮತ್ತು ಯಾವುದಕ್ಕೆ ಮಾಡಬಾರದು ಎಂಬ ವಿಷಯದ ಬಗ್ಗೆ ಅವರ ಹತ್ತಿರ ಚರ್ಚೆ ನಡೆಸಬೇಕಾಗುತ್ತದೆ. ಅದು ಅವರಲ್ಲಿ ಸಕಾರಾತ್ಮಕ ಬದಲಾವಣೆ ತರಲು ಸಹಾಯ ಮಾಡುತ್ತದೆ. ಹಾಗಾಗಿ ಮಿಥುನ ರಾಶಿಯವರು ಹೆಚ್ಚು ಹಣ ಖರ್ಚು ಮಾಡುವ ರಾಶಿಯಾಗಿರುವುದರ ಜೊತೆಗೆ ಅವರಲ್ಲಿ ನಿರಂತರ ಬದಲಾವಣೆಯನ್ನು ಕಾಣಬಹುದು ಎಂದು ಶಾಸ್ತ್ರ ಹೇಳುತ್ತದೆ.
ತುಲಾ ರಾಶಿ
ತುಲಾ ರಾಶಿಯವರು ತಮ್ಮ ಭಾವನೆಗಳನ್ನು ನಿರ್ವಹಿಸುವಲ್ಲಿ ನಿಪುಣರು. ಆದರೆ ಹಣ ನಿರ್ವಹಣೆ ಬಂದಾಗ ಹೆಚ್ಚು ಖರ್ಚು ಮಾಡುವ ರಾಶಿಯಲ್ಲಿ ಇವರು ಮೊದಲಿಗರು. ತುಲಾ ರಾಶಿಯು ಭೌತಿಕ ಆಕಾಂಕ್ಷೆಗಳಿಗೆ ಸಂಬಂಧಪಟ್ಟ ಶುಕ್ರ ಗ್ರಹದಿಂದ ಆಳಲ್ಪಡುತ್ತದೆ. ಹಾಗಾಗಿ ಇವರು ಖರ್ಚು ವೆಚ್ಚಗಳು ಮೇಲೆ ಅಷ್ಟಾಗಿ ಗಮನ ಹರಿಸುವುದಿಲ್ಲ. ಇವರು ತಮ್ಮ ವ್ಯಕ್ತಿತ್ವದ ಬಗ್ಗೆ ಹೆಚ್ಚು ತಿಳಿದಿರುತ್ತಾರೆ ಆದರೂ ಅದನ್ನು ಸರಿಪಡಿಸಿಕೊಳ್ಳದೇ ಇರುವುದರಿಂದ ಕಿರಿಕಿರಿಯನ್ನುಂಟು ಮಾಡುತ್ತಾರೆ. ಇವರ ಈ ಸ್ವಭಾವವನ್ನು ಬದಲಾಯಿಸುವುದು ಕಷ್ಟವೇ ಆಗಿದೆ.
ಧನು ರಾಶಿ
ಈ ರಾಶಿಯವರು ತಮ್ಮ ಬಳಿ ಹಣವಿದ್ದಾಗ ಖರ್ಚು ಮಾಡಬೇಕು ಎಂಬವರ ಸಾಲಿಗೆ ಸೇರುವುದಿಲ್ಲ. ಧನು ರಾಶಿಯವರು ಮಹತ್ವಕಾಂಕ್ಷಿಗಳು. ಅದು ಎಷ್ಟೇ ದುಬಾರಿಯಾಗಿದ್ದರೂ ಸರಿ ವಸ್ತುಗಳನ್ನು ಖರೀದಿಸಲು ಪ್ರಯತ್ನಿಸುತ್ತಾರೆ. ಇವರು ಹಣ ಖರ್ಚಾಗುವುದಕ್ಕೆ ಹೆಚ್ಚು ಚಿಂತಿಸುವುದಿಲ್ಲ. ಆಹಾರ, ಬಟ್ಟೆ ಮತ್ತು ಇತರೆ ವಸ್ತುಗಳಿಗಾಗಿ ಹಣವನ್ನು ಖರ್ಚು ಮಾಡುತ್ತಾರೆ.
ಮೀನ ರಾಶಿ
ಈ ರಾಶಿಯವರು ತಮಗಿಂತ ಇತರರ ಸಲುವಾಗಿಯೇ ಹೆಚ್ಚು ಹಣ ಖರ್ಚು ಮಾಡುತ್ತಾರೆ. ಗುರು ಗ್ರಹವು ಮೀನ ರಾಶಿಯನ್ನು ನಿಯಂತ್ರಿಸುತ್ತದೆ. ಅವರು ಅನುಭವಗಳಿಂದ ಹಣ ಗಳಿಸುತ್ತಾರೆ. ಈ ರಾಶಿಯವರು ಅವರ ಮೂಡ್ ಸರಿಯಿಲ್ಲದಿದ್ದಾಗ ಹೆಚ್ಚೆಚ್ಚು ಶಾಪಿಂಗ್ ಮಾಡುವುದು ಮತ್ತು ಮೂವಿ ನೋಡುವಂತಹ ಹವ್ಯಾಸಗಳನ್ನು ಹೊಂದಿರುತ್ತಾರೆ. ಅದರಿಂದ ಹಣ ಹೆಚ್ಚು ವ್ಯಯವಾಗುತ್ತದೆ. ಮೀನ ರಾಶಿಯವರು ಮೃದು ಸ್ವಭಾವದವರು ಹಾಗಾಗಿ ಹಣ ಉಳಿಸಲು ಕಷ್ಟ ಪಡುತ್ತಾರೆ. ಕರುಣೆ, ದಯೆ ಹೊಂದಿರುವ ಇವರು ಯಾರಾದರೂ ಹಣ ಕೇಳಿದರೆ ಅವರಿಗೆ ಧಾರಾಳವಾಗಿ ಹಣ ನೀಡುತ್ತಾರೆ. ಹಾಗೆ ಕೊಟ್ಟ ಹಣವನ್ನು ತಿರುಗಿ ಕೇಳಲು ಹೋಗುವುದಿಲ್ಲ. ಇದರಿಂದ ಅವರು ಹಣ ಕೂಡಿಡುವ ವಿಚಾರದಲ್ಲಿ ಹಿಂದೆ ಉಳಿದಿದ್ದಾರೆ.
(ಗಮನಿಸಿ: ಜ್ಯೋತಿಷ್ಯ ಶಾಸ್ತ್ರದ ಲೆಕ್ಕಾಚಾರಕ್ಕೆ ಹಲವು ಸೂತ್ರಗಳಿವೆ. ನಿರ್ದಿಷ್ಟ ರೀತಿಯಲ್ಲಿ ಕ್ರಮಬದ್ಧವಾಗಿ ಈ ರಾಶಿ ಭವಿಷ್ಯ ನೀಡಲಾಗಿದೆ. ಆದರೆ ಒಟ್ಟಾರೆಯಾಗಿ ಜ್ಯೋತಿಷ್ಯ ಎನ್ನುವುದು ನಂಬಿಕೆಯ ಮಾತು. ಓದುಗರ ನಂಬಿಕೆಯನ್ನು ‘ಹಿಂದೂಸ್ತಾನ್ ಟೈಮ್ಸ್ ಕನ್ನಡ’ ಗೌರವಿಸುತ್ತದೆ. ಇಲ್ಲಿರುವ ಯಾವುದೇ ಶಿಫಾರಸು ಅಥವಾ ಸಲಹೆಗಳನ್ನು ಪಾಲಿಸುವುದು ಓದುಗರ ವಿವೇಚನೆ, ನಂಬಿಕೆಗೆ ಬಿಟ್ಟ ವಿಷಯವಾಗಿರುತ್ತದೆ).