ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  Raja Sankranti: ಸ್ತ್ರೀಯರಿಗೆ ಗೌರವ ಸಲ್ಲಿಸುವ, ಭೂದೇವಿಯನ್ನು ಆರಾಧಿಸುವ ಹಬ್ಬ; ರಜಾ ಸಂಕ್ರಾತಿ ಹಬ್ಬದ ವೈಶಿಷ್ಟ್ಯ ಹೀಗಿದೆ

Raja Sankranti: ಸ್ತ್ರೀಯರಿಗೆ ಗೌರವ ಸಲ್ಲಿಸುವ, ಭೂದೇವಿಯನ್ನು ಆರಾಧಿಸುವ ಹಬ್ಬ; ರಜಾ ಸಂಕ್ರಾತಿ ಹಬ್ಬದ ವೈಶಿಷ್ಟ್ಯ ಹೀಗಿದೆ

ಪ್ರತಿ ವರ್ಷ ಒಡಿಸ್ಸಾದಲ್ಲಿ 3 ದಿನಗಳ ಕಾಲ ರಜಾ ಪರ್ಬ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಜಗನ್ನಾಥನ ಪತ್ನಿ ಭೂದೇವಿಯನ್ನು ಆರಾಧಿಸುವ ಹಬ್ಬವಾಗಿದೆ. ಭೂಮಿ ತಾಯಿಗೆ ಮೂರು ದಿನಗಳ ಋತುಚಕ್ರವಿದೆ ಎಂದು ನಂಬಿ, ಕೃಷಿ ಚಟುವಟಿಕೆಗಳಿಂದ ಬಿಡುವ ನೀಡುವ ಹಬ್ಬವಾಗಿದೆ. ರೈತರ ಪ್ರೀತಿಯ ಹಬ್ಬವಾದ ರಜಾ ಸಂಕ್ರಾತಿಯ ವೈಶಿಷ್ಟ್ಯ ತಿಳಿಯಿರಿ.

 ಭೂದೇವಿಯನ್ನು ಆರಾಧಿಸುವ ಹಬ್ಬ; ರಜಾ ಸಂಕ್ರಾತಿ ಹಬ್ಬದ ವೈಶಿಷ್ಟ್ಯ ಹೀಗಿದೆ
ಭೂದೇವಿಯನ್ನು ಆರಾಧಿಸುವ ಹಬ್ಬ; ರಜಾ ಸಂಕ್ರಾತಿ ಹಬ್ಬದ ವೈಶಿಷ್ಟ್ಯ ಹೀಗಿದೆ (ANI)

ಒಡಿಶಾ ಎಂದ ತಕ್ಷಣ ನಮಗೆ ನೆನಪಾಗುವುದು ಪುರಿಯ ಜಗನ್ನಾಥ ಮಂದಿರ. ಜಗನ್ನಾಥ ಸ್ವಾಮಿಯ ವೈಭವದ ರಥೋತ್ಸವ ಕಣ್ಣಿಗೆ ಹಬ್ಬವನ್ನುಂಟು ಮಾಡುತ್ತದೆ. ಬಂಗಾಳ ಕೊಲ್ಲಿಯ ದಂಡೆಯ ಮೇಲಿರುವ ಜಗನ್ನಾಥ ದೇವಾಲಯವು ಭಗವಾನ್‌ ಮಹಾವಿಷ್ಣುವಿಗೆ ಸಮರ್ಪಿತವಾದ ಮಂದಿರವಾಗಿದೆ. ಪ್ರತಿ ವರ್ಷ ಒಡಿಶಾದಲ್ಲಿ ರಜಾ ಪರ್ಬ ಹಬ್ಬವನ್ನು ಆಚರಿಸಲಾಗುತ್ತದೆ. ಇದು ಸ್ತ್ರೀಯನ್ನು ಗೌರವಿಸುವ ಹಬ್ಬವಾಗಿದೆ. ಈ ಹಬ್ಬವನ್ನು ಆಚರಿಸಲು ಕಾರಣವೇನೆಂದರೆ ಜಗನ್ನಾಥ ಸ್ವಾಮಿಯ ಮಡದಿಯಾದ ಮತ್ತು ಸಾಕ್ಷಾತ್‌ ಭೂತಾಯಿಯಾದ ಭೂದೇವಿಯನ್ನು ಆರಾಧಿಸುವ ಹಬ್ಬವಾಗಿದೆ. ಈ ಹಬ್ಬದಲ್ಲಿ ಭೂದೇವಿಗೆ ಮೂರು ದಿನಗಳ ಋತುಚಕ್ರವಿದೆ ಎಂದು ನಂಬಲಾಗಿದೆ. ನಾಲ್ಕನೇ ದಿನ ಮಂಗಳ ಸ್ನಾನವೂ ಈ ಹಬ್ಬದ ಭಾಗವಾಗಿದೆ. ಒಡಿಶಾದಲ್ಲಿ ಈ ಹಬ್ಬವನ್ನು ರಜಾ ಪರ್ಬ ಅಥವಾ ರಜಾ ಸಂಕ್ರಾಂತಿ ಎಂದು ಆಚರಿಸಲಾಗುತ್ತದೆ.

ರಜಾ ಸಂಕ್ರಾಂತಿ ಹಬ್ಬದ ಆಚರಣೆಗಳು

ರಜಾ ಸಂಕ್ರಾತಿ ಅಥವಾ ರಜಾ ಪರ್ಬ ಇದು ಮೂರು ದಿನಗಳ ಕಾಲ ನಡೆಯುವ ಹಬ್ಬವಾಗಿದೆ. ಮೊದಲನೇ ದಿನವನ್ನು ಪಹಿಲಿ ರಜಾ ಎಂದು ಕರೆಯಲಾಗುತ್ತದೆ. ಇದು ಜ್ಯೇಷ್ಠ ಮಾಸದ ಕೊನೆಯ ದಿನ ಅಂದರೆ ಬೇಸಿಗೆ ಕೊನೆ ದಿನ ಎಂದು ಪರಿಗಣಿಸಲಾಗಿದೆ. ಎರಡನೇ ದಿನವು ಆಷಾಢ ಮಾಸದ ಮೊದಲನೇ ದಿನವನ್ನು ಮಿಥುನ ಸಂಕ್ರಾತಿ, ಅಂದರೆ ಮುಂಗಾರಿನ ಆರಂಭವನ್ನು ಸೂಚಿಸುತ್ತದೆ. ಮೂರನೇ ದಿನವನ್ನು ಬಸಿ ರಜಾ ಎಂದು ಕರೆಯಲಾಗುತ್ತದೆ. ನಾಲ್ಕು ದಿನಗಳ ಕಾಲ ನಡೆಯುವ ಈ ಹಬ್ಬದ ಕೊನೆಯ ದಿನದಂದು ಭೂಮಿ ತಾಯಿಗೆ ವಿಶೇಷ ಪ್ರಾರ್ಥನೆ ಮತ್ತು ಅಭಿಷೇಕವಿರುತ್ತದೆ. ಅದನ್ನು ಬಸುಮಾತಾ ಪೂಜೆ ಅಥವಾ ಬಸುಮಾತಾ ಗಧುವಾ ಎಂದು ಆಚರಿಸುತ್ತಾರೆ.

ರಜಾ ಸಂಕ್ರಾಂತಿ ಅಥವಾ ರಜಾ ಪರ್ಬ ಹಬ್ಬವು ಬಹಳ ಮಹತ್ವದ ಹಬ್ಬವಾಗಿದೆ. ಇದು ಭೂಮಿತಾಯಿಯನ್ನೇ ನಂಬಿ ಬದುಕುವ ಕೃಷಿಕರ ಹಬ್ಬವಾಗಿದೆ. ಒಡಿಯಾ ಭಾಷೆಯಲ್ಲಿ ರಜಾ ಈ ಶಬ್ದವನ್ನು ಮುಟ್ಟು ಅಥವಾ ಋತುಚಕ್ರದ ಅರ್ಥಕ್ಕೆ ಬಳಸಲಾಗುತ್ತದೆ. ಭೂಮಿತಾಯಿಯು ಮೂರು ದಿನಗಳ ಕಾಲ ಋತುಚಕ್ರವನ್ನು ಹೊಂದಿದ್ದಾಳೆ ಎಂದು ನಂಬಲಾದ ಹಬ್ಬ ಇದಾಗಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿಯ ಉಳುಮೆ, ಬಿತ್ತನೆಗಳಂಥ ಕೃಷಿ ಚಟುವಟಿಕೆಗಳನ್ನು ನಡೆಸಲಾಗುವುದಿಲ್ಲ. ಭೂದೇವಿಗೆ ಹಾನಿಯಾಗುವಂಥ ಯಾವುದೇ ಕೆಲಸಗಳನ್ನು ಮಾಡಲಾಗುವುದಿಲ್ಲ.

ಈ ಆಚರಣೆಯ ಪ್ರಮುಖ ಆಕರ್ಷಣೆಯೆಂದರೆ ರಜಾ ಡೋಲಿ. ಹೂವು ಮತ್ತು ಮಾವಿನ ಎಲೆಗಳಿಂದ ಸಿಂಗರಿಸಿದ ಉಯ್ಯಾಲೆಯಲ್ಲಿ ನಾರಿಯರು ಹಬ್ಬದ ಹಾಡುಗಳನ್ನು ಹಾಡುತ್ತಾ ಆಟವಾಡುತ್ತಾರೆ. ಈ ಹಬ್ಬದಲ್ಲಿ ಒಳಾಂಗಣ ಮತ್ತು ಹೊರಾಂಗಣ ಕ್ರೀಡೆಗಳನ್ನು ಆಡಲಾಗುತ್ತದೆ. ಈ ಹಬ್ಬದ ಸಂದರ್ಭದಲ್ಲಿ ಸ್ತ್ರೀಯರು ದಿನನಿತ್ಯದ ಗೃಹಕಾರ್ಯಗಳಿಂದ ದೂರವಿದ್ದು ಚಟುವಟಿಕೆಗಳಲ್ಲಿ ಸಂತೋಷದಿಂದ ಭಾಗವಹಿಸುತ್ತಾರೆ. ಮದುವೆಯಾಗದ ಹೆಣ್ಣು ಮಕ್ಕಳು ಹೊಚ್ಚ ಹೊಸ ಬಟ್ಟೆಗಳನ್ನು ಧರಿಸುತ್ತಾರೆ. ಹೆಚ್ಚಾಗಿ ಅಲಾಟಾ ಎಂದು ಕರೆಯಲ್ಪಡುವ ಕೆಂಪು ಅಂಚಿನ ಸಾಂಪ್ರದಾಯಿಕ ಸೀರೆಗಳನ್ನು ಧರಿಸುತ್ತಾರೆ. ಎಲ್ಲಾ ಕೃಷಿ ಚಟುವಟಿಕೆಗಳಿಗೆ ಬಿಡುವು ಇರುವುದರಿಂದ ಯುವಕರಿಗೆ ಕಬಡ್ಡಿ ಪಂದ್ಯಾವಳಿಗಳನ್ನು ಆಯೋಜಿಸಲಾಗುತ್ತದೆ. ಗೊಟಿಪುವಾ ನೃತ್ಯಗಳನ್ನು ಮಾಡುತ್ತಾರೆ. ವೃತ್ತಿಪರ ತಂಡಗಳಿಂದ ಸಾಂಪ್ರದಾಯಿಕ ನೃತ್ಯ, ನಾಟಕಗಳನ್ನು ಆಯೋಜಿಸುತ್ತಾರೆ.

ನಾಲ್ಕನೇ ದಿನ ಭೂದೇವಿಯ ಮಂಗಳ ಸ್ನಾನದಿಂದ ಈ ಹಬ್ಬ ಮುಕ್ತಾಯಗೊಳ್ಳುತ್ತದೆ. ಆ ದಿನ ಭೂದೇವಿಗೆ ಅರಿಶಿಣದ ನೀರಿನಲ್ಲಿ ಅಭಿಷೇಕ ಮಾಡಿ, ಸಿಂಧೂರ, ಹೂವುಗಳನ್ನು ಸಮರ್ಪಿಸಲಾಗುತ್ತದೆ. ಈ ಹಬ್ಬದ ಇನ್ನೊಂದು ವಿಶೇಷವೆಂದರೆ ಒಡಿಸ್ಸಾದ ಪ್ರತಿ ಮನೆಯಲ್ಲೂ ಪೊಡಾ ಪಿತಾ ಎಂಬ ಹೆಸರಿನ ತಿಂಡಿ ತಯಾರಿಸಲಾಗುತ್ತದೆ. ಒಡಿಯಾ ಜನರ ಸಾಂಪ್ರದಾಯಿಕ ಅಡುಗೆಯಾದ ಪೊಡಾ ಪಿತಾ ಅದರ ವಿಶಿಷ್ಟ ಪರಿಮಳ ಮತ್ತು ರುಚಿಯಿಂದ ಹೆಸರುವಾಸಿಯಾಗಿದೆ.‌

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.