ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಪಾಪಕ್ಷಯ ಘಾಟ್; ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತಂತೆ; ಚಂದ್ರಗ್ರಹಣದ ಪುಣ್ಯಸ್ನಾನಕ್ಕಿದೆ ಐತಿಹಾಸಿಕ ಮಹತ್ವ

ಪಾಪಕ್ಷಯ ಘಾಟ್; ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತಂತೆ; ಚಂದ್ರಗ್ರಹಣದ ಪುಣ್ಯಸ್ನಾನಕ್ಕಿದೆ ಐತಿಹಾಸಿಕ ಮಹತ್ವ

Papakshya ghat: ಪಾಪಪ್ರಜ್ಞೆ ನಿಮ್ಮನ್ನು ನಿರಂತರವಾಗಿ ಕಾಡುತ್ತಿದ್ದರೆ ಅದಕ್ಕೊಂದು ಪರಿಹಾರ ಕಂಡುಕೊಳ್ಳುವುದು ಮುಖ್ಯ. ಮನಸ್ಸಿಗೆ ಸಮಾಧಾನವಾದರೆ ಮಾತ್ರ ನೆಮ್ಮದಿಯ ಬದುಕು ಸಾಧ್ಯ. ಹೀಗಾಗಬೇಕಾದರೆ ಪಾಪಗಳಿಂದ ಮುಕ್ತರಾಗಬೇಕು. ಇದಕ್ಕೊಂದು ಮಾರ್ಗ ನಾವು ಹೇಳುತ್ತೇವೆ ನೋಡಿ. ಅದುವೇ ಪಾಪಕ್ಷಯ ಘಾಟ್.

ಪಾಪಕ್ಷಯ ಘಾಟ್; ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತಂತೆ
ಪಾಪಕ್ಷಯ ಘಾಟ್; ಈ ಕ್ಷೇತ್ರದಲ್ಲಿ ಸ್ನಾನ ಮಾಡಿದರೆ ಪಾಪ ಪರಿಹಾರವಾಗುತ್ತಂತೆ

ಮಾಡಿದ ಪಾಪಕ್ಕೆ ಶಿಕ್ಷೆ ಸಿಕ್ಕೇ ಸಿಗುತ್ತದೆ ಎಂದು ಹೇಳುತ್ತೇವೆ. ಮನುಷ್ಯ ತಪ್ಪು ಮಾಡುವುದು ಸಹಜ. ಹಾಗಂತಾ ಒಮ್ಮೆ ಮಾಡಿದ ತಪ್ಪನ್ನೇ ಮತ್ತೆ ಮತ್ತೆ ಮಾಡಬಾರದು. ತಪ್ಪು ಹಾಗೂ ಪ್ರಮಾದಗಳನ್ನು ಬೇಕು ಬೇಕೆಂದೇ ಪುನರಾವರ್ತಿಸಿದರೆ, ಮುಂದೆ ಆಗಬಾರದ್ದು ಸಂಭವಿಸಬಹುದು. ಕೆಲವೊಬ್ಬರು ತಪ್ಪು ಮಾಡಿದ್ದಕ್ಕಾಗಿ ಅಥವಾ ಕೆಟ್ಟ ಕೆಲಸಗಳನ್ನು ಮಾಡಿ ಜೀವನಪರ್ಯಂತ ಪಶ್ಚಾತ್ತಾಪ ಪಡುತ್ತಾರೆ. ಎಲ್ಲಿ ತನ್ನನ್ನು ದೇವರು ಶಿಕ್ಷಿಸುವರೋ ಎಂಬ ಭಯ ಅವರದ್ದು. ಜೀವನದಲ್ಲಿ ಮಾಡಿದ ಪಾಪ ಪರಿಹಾರಕ್ಕೆ ತೀರ್ಥಕ್ಷೇತ್ರಗಳಿಗೆ ಭೇಟಿ ನೀಡಿ ದೇವರ ಮೊರೆ ಹೋಗುವವರ ಸಂಖ್ಯೆ ಸಾಕಷ್ಟಿದೆ. ದೇವರ ಬಳಿ ಪಾಪವನ್ನು ತೊಡೆದುಹಾಕಲು ಪ್ರಾರ್ಥಿಸುವುದು ರೂಢಿ. ಪಾಪದಿಂದ ಮುಕ್ತಿ ಪಡೆದರೆ ನೆಮ್ಮದಿಯ ಜೀವನ ನಡೆಸಬಹುದು ಎಂಬ ನಂಬಿಕೆ ಜನರದ್ದು.

ನೆಮ್ಮದಿಯ ಜೀವನ ಸಾಗಬೇಕಾದರೆ ಮನಸಿಗೆ ಶಾಂತಿ ಮುಖ್ಯ. ಆಧ್ಯಾತ್ಮಿಕ ಆರೋಗ್ಯ ಹೆಚ್ಚಿದರೆ, ಬದುಕಿನಲ್ಲಿ ಖುಷಿಯಾಗಿರಬಹುದು. ಇದಕ್ಕೆ ಯಾವುದೇ ಗೀಳು ಮನಸ್ಸಿನಲ್ಲಿ ಇರಬಾರದು. ಮಾಡಿದ ಪಾಪಗಳಿಂದ ಮುಕ್ತಿ ಸಿಗಬೇಕು ಎಂದು ನೀವು ಬಯಸಿದರೆ, ತೀರ್ಥಕ್ಷೇತ್ರಕ್ಕೆ ಹೋಗಬೇಕೆಂಬ ಇರಾದೆ ನಿಮ್ಮದಾಗಿದ್ದರೆ, ನಿಮಗೆ ಒಂದು ಪುಣ್ಯ ಕ್ಷೇತ್ರವನ್ನು ಪರಿಚಯಿಸುತ್ತೇವೆ. ಪಾಪ ಪರಿಹಾರಕ್ಕೆ ಒಡಿಶಾದಲ್ಲೊಂದು ಪುಣ್ಯಕ್ಷೇತ್ರವಿದೆ. ಅದರ ಹೆಸರು ಪಾಪಕ್ಷಯ ಘಾಟ್.

ಪಾಪಕ್ಷಯ ಘಾಟ್ ಎಂಬ ಹೆಸರಿನಲ್ಲೇ ನಿಮಗೊಂದು ಸುಳಿವು ಸಿಕ್ಕಿರಬಹುದು. ಹೆಸರೇ ಹೇಳುವಂತೆ, ಪಾಪ ಪರಿಹಾರಕ್ಕೆ ಈ ಕ್ಷೇತ್ರ ಪ್ರಸಿದ್ಧ ಎಂಬ ನಂಬಿಕೆ ಅನಾದಿಕಾಲದಿಂದಲೂ ಬಂದಿದೆ. ಪಾಪಕ್ಷಯ ಎಂದರೆ ಪಾಪ ವಿನಾಶ ಎಂದು ಅರ್ಥ. ಘಾಟ್‌ನಲ್ಲಿ ಮೂರು ಬಾರಿ ಸ್ನಾನ ಮಾಡಿದರೆ ಅನಿಷ್ಟ ಕರ್ಮಗಳಿಂದ ಮುಕ್ತಿ ಸಿಗುತ್ತದೆ ಎಂಬ ಪ್ರತೀತಿ ಚಾಲ್ತಿಯಲ್ಲಿದೆ.

ಪಾಪಕ್ಷಯ ಘಾಟ್‌ಗೆ ಹೋಗುವುದು ಹೇಗೆ?

ಪಾಪಕ್ಷಯಕ್ಕೆ ಹೋಗುವವರು ಮೊದಲು ಒಡಿಶಾದ ಸೋನೆಪುರ ಪಟ್ಟಣಕ್ಕೆ ಹೋಗಬೇಕು. ಅಲ್ಲಿಂದ 29 ಕಿ.ಮೀ ದೂರದಲ್ಲಿ ಈ ಕ್ಷೇತ್ರವಿದೆ. ಪಾಪಕ್ಷಯ್ ಘಾಟ್ ಬಿನಿಕ ಎಂಬ ಪ್ರದೇಶದಲ್ಲಿದೆ. ಬಸ್ಸಿನಲ್ಲಿ ಹೋಗುವುದಾದರೆ ಸೋನೆಪುರ ತಲುಪಿ ಅಲ್ಲಿಂದ ಬಸ್ಸಿನಲ್ಲಿ ಹೋಗಬಹುದು. ಪಾಪಕ್ಷಯ ಮಂದಿರಕ್ಕೆ ಸಮೀಪದ ರೈಲು ನಿಲ್ದಾಣ ಬರ್ಗರ್. ಇದು ಈ ಕ್ಷೇತ್ರದಿಂದ 46 ಕಿ.ಮೀ ದೂರದಲ್ಲಿದೆ. ಈ ದೇವಸ್ಥಾನವು ಎಲ್ಲಾ ದಿನಗಳಲ್ಲೂ ತೆರೆದಿರುತ್ತದೆ. ಪ್ರತಿದಿನ ಬೆಳಗ್ಗೆ ಐದು ಗಂಟೆಯಿಂದ ಸಂಜೆ ಆರು ಗಂಟೆಯವರೆಗೆ ಇಲ್ಲಿಗೆ ಹೋಗಬಹುದು.

ಪಾಪಕ್ಷಯ ಘಾಟ್ ​​ಇತಿಹಾಸ

ಪ್ರತಿಯೊಂದು ಪುಣ್ಯಕ್ಷೇತ್ರಗಳ ಹಿಂದೆಯೂ ಒಂದು ಐತಿಹ್ಯ ಇರುತ್ತದೆ. ಅದರಂತೆಯೇ ಪಾಪಕ್ಷಯ ಘಾಟ್ ಇತಿಹಾಸ ಕೂಡಾ ರೋಚಕವಾಗಿದೆ. ಹಿಂದೆ ಆಳ್ವಿಕೆ ನಡೆಸುತ್ತಿದ್ದ ಭೀಮದೇವ್ ಎಂಬ ರಾಜನಿಂದಾಗಿ ಈ ಸ್ಥಳ ಹೆಚ್ಚು ಪ್ರಸಿದ್ಧಿಯಾಗಿದೆ ಎಂದು‌ ಪುರಾಣ ಹೇಳುತ್ತದೆ. ಜ್ಞಾನ ಮತ್ತು ಪರಾಕ್ರಮಕ್ಕೆ ಹೆಸರಾಗಿದ್ದ ಈ ರಾಜನು ತನ್ನ ಆಳ್ವಿಕೆಯ ಕಾಲದಲ್ಲಿ ಕೆಲವೊಂದು ಪಾಪಗಳನ್ನು ಮಾಡಿದ್ದ. ಹೀಗಾಗಿ ಕ್ರಮೇಣ ಆತ ಕುಷ್ಠರೋಗದ ದಾಸನಾದ. ನೊಂದ ರಾಜ ತನ್ನ ಪಾಪಗಳಿಗೆ ಪರಿಹಾರ ಕಂಡುಕೊಳ್ಳಲು ಋಷಿಮುನಿಯನ್ನು ಭೇಟಿಯಾದನು. ಅವರು, ಒಡಿಶಾದ ಪಾಪಕ್ಷಯ ಘಾಟ್‌ಗೆ ಹೋಗಿ ಸ್ನಾನ ಮಾಡುವಂತೆ ಸೂಚಿಸಿದರು. ಋಷಿಯ ಸಲಹೆಯಂತೆ ರಾಜನು ಪಾಪಕ್ಷಯ ಘಾಟ್‌ನಲ್ಲಿ ಸ್ನಾನ ಮಾಡುತ್ತಾನೆ. ನಂತರ ರಾಜನ ಕುಷ್ಠರೋಗವೂ ದೂರವಾಗಿ ಆತ ತನ್ನ ಪಾಪಕರ್ಮಗಳಿಂದ ಮುಕ್ತನಾಗುತ್ತಾನೆ. ಅಂದಿನಿಂದ ರಾಜ ತನ್ನ ಹೆಸರಿಗೆ ತಕ್ಕನಾಗಿ ನೀತಿವಂತನಾಗಿ ಬದುಕಿದ ಎನ್ನುತ್ತದೆ ಇತಿಹಾಸ.‌

ಚಂದ್ರಗ್ರಹಣದಂದು ಸ್ನಾನ ಮಾಡಿದರೆ ಒಳ್ಳೆಯದು

ಈ ಸ್ಥಳದಲ್ಲಿ ವಿಶೇಷವಾಗಿ ಚಂದ್ರಗ್ರಹಣದ ಸಮಯದಲ್ಲಿ ಸ್ನಾನ ಮಾಡಿದರೆ ತುಂಬಾ ಒಳ್ಳೆಯದು ಎಂಬ ನಂಬಿಕೆ ಇದೆ. ಹೀಗಾಗಿ ಈ ಸಮಯದಲ್ಲಿ ಸ್ಥಳೀಯರು‌ ಮಾತ್ರವಲ್ಲದೆ ಸಾವಿರಾರು ಜನರು ಪವಿತ್ರ ಸ್ನಾನ ಮಾಡಲು ಇಲ್ಲಿಗೆ ಬರುತ್ತಾರೆ. ಚಂದ್ರಗ್ರಹಣದ ಸಮಯದಲ್ಲಿ ಈ ಪಾಪಕ್ಷಯ ಘಾಟ್ ಭಕ್ತರಿಂದ ತುಂಬಿ ತುಳುಕುತ್ತದೆ.

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.