UI Movie quotes: ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ- ನಟ ಉಪೇಂದ್ರ ಉವಾಚ
ಕನ್ನಡ ಸುದ್ದಿ  /  ಮನರಂಜನೆ  /  Ui Movie Quotes: ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ- ನಟ ಉಪೇಂದ್ರ ಉವಾಚ

UI Movie quotes: ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ- ನಟ ಉಪೇಂದ್ರ ಉವಾಚ

UI Movie: ಯುಐ ಸಿನಿಮಾದಲ್ಲಿ ಉಪೇಂದ್ರ ಹೇಳುವ ಡೈಲಾಗ್‌ಗಳು ಚಿಂತನೆಗೆ ಹಚ್ಚುತ್ತವೆ. ಸಾಕಷ್ಟು ಒಳಾರ್ಥಗಳನ್ನು ಹೊಂದಿರುತ್ತವೆ. ಇದೇ ಸಿನಿಮಾದಲ್ಲಿ "ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ನಾನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ" ಎಂಬ ಡೈಲಾಗ್‌ ನಾನಾ ಅರ್ಥ ಹೊಂದಿದೆ.

ಯುಐ ಸಿನಿಮಾ
ಯುಐ ಸಿನಿಮಾ

UI Movie: ಯುಐ ಸಿನಿಮಾದಲ್ಲಿ ಉಪೇಂದ್ರ ಹೇಳುವ ಡೈಲಾಗ್‌ಗಳು ಚಿಂತನೆಗೆ ಹಚ್ಚುತ್ತವೆ. ಸಾಕಷ್ಟು ಒಳಾರ್ಥಗಳನ್ನು ಹೊಂದಿರುತ್ತವೆ. ಇದೇ ಸಿನಿಮಾದಲ್ಲಿ "ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ನಾನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ" ಎಂಬ ಡೈಲಾಗ್‌ ಅನ್ನು ಯುಐ ಸಿನಿಮಾದ ನಾಯಕ ಸತ್ಯ (ಉಪೇಂದ್ರ) ಹೇಳುತ್ತಾರೆ. ಸಿನಿಮಾದಲ್ಲಿ ತನಗೆ ಏನು ಅನಿಸಿತ್ತೋ ಅದನ್ನು ನೇರವಾಗಿ ಹೇಳುವ ಉಪೇಂದ್ರರ ಈ ಡೈಲಾಗ್‌ ಚಿಂತನೆಗೆ ಹಚ್ಚುತ್ತದೆ. ಇದು ಸಾಕಷ್ಟು ಅರ್ಥಗಳನ್ನು ಹೊಂದಿದೆ.

ಯುಐ ಸಿನಿಮಾದಲ್ಲಿ ಉಪೇಂದ್ರ ಈ ಡೈಲಾಗ್‌ ಯಾಕೆ ಹೇಳಿದರು? ಯಾವ ಸಂದರ್ಭದಲ್ಲಿ ಹೇಳಿದ್ದಾರೆ? ಎನ್ನುವುದು ಮುಖ್ಯವಾಗುತ್ತದೆ. ಸಿನಿಮಾದ ಕಥೆಯನ್ನು ಹೆಚ್ಚು ಬಿಚ್ಚಿಡದೆ ಈ ಸಂದರ್ಭದ ಕುರಿತು ತಿಳಿದುಕೊಳ್ಳೋಣ. ಯುಐನ ಒಬ್ಬ ನಾಯಕ ಸತ್ಯ, ಮತ್ತೊಬ್ಬ ವಿಲನ್‌ ಕಲ್ಕಿ. ಇದು ಉಪೇಂದ್ರರ ಡಬಲ್‌ ರೋಲ್‌. ಇಲ್ಲಿ ಸತ್ಯನನ್ನು ಉಪೇಂದ್ರರನ್ನು ಒಂದು ಸೆರೆಮನೆಯಲ್ಲಿ ಲಾಕ್‌ ಮಾಡಿ ಹೋಗಿರುತ್ತಾರೆ. ಅಲ್ಲಿಂದ ಸತ್ಯ ಹೊರಗೆ ಬರಬೇಕು. ಅಲ್ಲಿ ನೂರಾರು ಕೀಗಳು ನೆಲದಲ್ಲಿ ಬಿದ್ದಿರುತ್ತವೆ. ನೂರಾರು ಕೀಗಳು ಆ ಕಂಬಿಯ ಸೆರೆಮನೆಯಲ್ಲಿ ನೇತಾಡುತ್ತ ಇರುತ್ತವೆ. ಇಂತಹ ಕಂಬಿಯ ಒಳಗಿನಿಂದ ಸತ್ಯ ಹೊರಗೆ ಬರುವುದು ಹೇಗೆ?

ಇಲ್ಲಿ ಸತ್ಯ ಪಾತ್ರಧಾರಿ ಬಂಧನದಲ್ಲಿದ್ದಾನೆ. ಸುತ್ತಮುತ್ತ ರಾಶಿ ಬಿದ್ದಿರುವ ಕೀಗಳು ಆತನನ್ನು ಗೊಂದಲಕ್ಕೆ ಈಡು ಮಾಡಬಹುದು. ಈ ಸಮಯದಲ್ಲಿ ಆ ಸೆರೆಮನೆಗೆ ಕೀ ಹಾಕಿರುವುದೇ ಎಂದು ಯೋಚಿಸದೆ ಇರಬಹುದು. ಇಲ್ಲಿ ಸತ್ಯ ಸುತ್ತಲಿನ ಗೊಂದಲಗಳನ್ನು ಮರೆತು ಆ ಕಾರಾಗೃಹದ ಕಂಬಿಯ ಒಂದು ಸ್ಕ್ರೂ ಸಡಿಲ ಮಾಡಿ ಕಳಚಿ ಹೊರಬರುತ್ತಾನೆ. ಇದೇ ರೀತಿಯ ಹಲವು ಟ್ರಿಕ್‌ಗಳನ್ನು ಬಳಸಿ ಫೋಕಸ್‌ ಆಗಿ ಯೋಚಿಸಿ ಮಿದುಳು ಆಕಾರದ ಮಾಯಾ ಲೋಕದ ಬಂಧನದಿಂದ ಬರುತ್ತಾನೆ. ಉಪೇಂದ್ರ ತನ್ನ ಸಿನಿಮಾದ ಮೂಲಕ ಜನರಿಗೆ ಈ ರೀತಿಯ ಅರಿವು ಮೂಡಿಸುವ, ಫೋಕಸ್‌ ಆಗಿರುವಂತೆ ಸೂಚಿಸುವ ಸಾಕಷ್ಟು ದೃಶ್ಯಗಳಿವೆ.

ಈ ರೀತಿ ಹೊರಬಂದ ಸತ್ಯ ದೇವರಂತೆ ಒಳ್ಳೆಯ ವ್ಯಕ್ತಿಯಾಗುತ್ತಾನೆ. ಸತ್ಯಯುಗದವನಾಗುತ್ತಾನೆ. ಜನರೆಲ್ಲರೂ ಅವನ ಬಳಿ ಇರುತ್ತಾರೆ. ಜನರನ್ನು ತನ್ನ ಕಡೆಗೆ ಮಾಡಿಕೊಳ್ಳಲು ಕಲ್ಕಿ ಜಾತಿ ಧರ್ಮ ಅಸ್ತ್ರವನ್ನು ಬಳಸುತ್ತಾನೆ. ಸತ್ಯಯುಗದ ಜನರು ಧರ್ಮ, ಜಾತಿ ಏನೆಂದು ತಿಳಿಯದೆ ಬದುಕುತ್ತ ಇರುತ್ತಾರೆ. ಸತ್ಯಯುಗದಲ್ಲಿರುವ ಜನರ ಮುಂದೆ ವಿವಿಧ ಧರ್ಮಗಳ ದೇವರು ಇರುವ ಚಿತ್ರಗಳ ಉದ್ದವಾದ ಹಾಳೆಯನ್ನು ಕಲ್ಕಿ ನೆಲದ ಮೇಲೆ ಹರಡುತ್ತಾನೆ. ಸತ್ಯ ಲೋಕದಲ್ಲಿರುವ ಜನರ ಮನಸ್ಸಲ್ಲಿ ಜಾತಿ ಧರ್ಮದ ವಿಷಬೀಜ ಬಿತ್ತುತ್ತಾನೆ ಕಲ್ಕಿ. ಇದರ ಮೇಲೆ ನಡೆದಾಡಿ ಎಂದಾಗ ಎಲ್ಲರೂ ಭಯಗೊಳ್ಳುತ್ತಾರೆ, ಹಿಂಜರಿಯುತ್ತಾರೆ.

ಅಲ್ಲಿವರೆಗೆ ಜಾತಿ ಧರ್ಮದ ಬಗ್ಗೆ ಚಿಂತಿಸದ ಜನ ಆ ಚಿತ್ರಗಳನ್ನು ನೋಡಿ ಭಕ್ತಿಭಾವ, ಬೇಧಭಾವದದ ಮನಸ್ಥಿತಿ ಹೊಂದುತ್ತಾರೆ. ಆಗ ಅಲ್ಲಿಗೆ ಬಂದ ಸತ್ಯನೇ ಇವರ ಮನಸ್ಸು ಬದಲಾಯಿಸಲು ಯತ್ನಿಸುತ್ತಾನೆ. ನಾನು ಈ ಚಿತ್ರಗಳ ಮೇಲೆ ನಡೆಯಬಲ್ಲೆ ಎನ್ನುತ್ತಾನೆ. "ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ನಾನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ" ಎಂಬ ಡೈಲಾಗ್‌ ಆಗ ಸತ್ಯನ ಬಾಯಿಂದ ಬರುತ್ತದೆ. ಸತ್ಯ ಆ ಚಿತ್ರಗಳ ಮೇಲೆ ನಡೆಯುತ್ತಾನೆ. ಅಲ್ಲಿಯವರೆಗೆ ಸತ್ಯನನ್ನು ದೇವರಂತೆ ಕಂಡವರೇ ಸತ್ಯನ ವಿರುದ್ಧ ತಿರುಗಿ ಬೀಳುತ್ತಾರೆ.

ನನ್ನನ್ನು ಸೃಷ್ಟಿ ಮಾಡಿದ ದೇವರನ್ನು ನಾನು ತುಳಿಯುವುದಿಲ್ಲ, ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ ಎಂಬ ಡೈಲಾಗ್‌ ನಾನಾ ಅರ್ಥ ಹೊಂದಿರಬಹುದು. ನಿಜವಾದ ದೇವರ ಮೇಲೆ ನನಗೆ ನಂಬಿಕೆ ಇದೆ. ಆದರೆ, ಮನುಷ್ಯರು ತಮ್ಮ ಸ್ವಾರ್ಥಕ್ಕಾಗಿ ವಿವಿಧ ಸ್ಥಳಗಳಲ್ಲಿ ಕೃತಕವಾಗಿ ಸೃಷ್ಟಿಸಿದ ದೇವರು, ದೇವಸ್ಥಾನಗಳ ಮೇಲೆ ನನಗೆ ನಂಬಿಕೆ ಇಲ್ಲ ಎಂದೂ ಇದನ್ನು ಅರ್ಥ ಮಾಡಿಕೊಳ್ಳಬಹುದು. ನನ್ನನ್ನು ಸೃಷ್ಟಿ ಮಾಡಿದ ಪ್ರಕೃತಿ ದೇವರ ಮೇಲೆ ನನಗೆ ನಂಬಿಕೆಯಿದೆ. ಆದರೆ, ನಾನೇ ಸ್ವತಃ ಸೃಷ್ಟಿಸಿರುವ ದೇವರನ್ನು ತುಳಿಯಬಲ್ಲೆ ಎಂದಿರಬಹುದು.

ಈಗ ಯಾವುದಾದರೂ ಭೂಮಿ ಸರಕಾರದ ಪಾಲಾಗುವದನ್ನು ತಪ್ಪಿಸಲು ಅಲ್ಲೊಂದು ಗುಡಿ, ಮಸೀದಿ, ಚರ್ಚ್‌ ಕಟ್ಟುವವರು ಇರಬಹುದು. ಇದು ನಾವೇ ಸೃಷ್ಟಿ ಮಾಡಿದ ದೇವರು. "ನಾನು ಸೃಷ್ಟಿ ಮಾಡಿದ ದೇವರನ್ನು ತುಳಿಯಬಲ್ಲೆ" ಎಂಬ ಮಾತನ್ನು ಈ ಅರ್ಥದಲ್ಲಿಯೂ ಅರ್ಥ ಮಾಡಿಕೊಳ್ಳಬಹುದು.

Whats_app_banner