Sabarimala: ಆರಾನ್‌ಮುಲ್ಲಾದಿಂದ ಶಬರಿಮಲೆಗೆ 451 ಪವನ್ ತೂಕದ ತಂಗ ಅಂಗಿ ಮೆರವಣಿಗೆ ಶುರು, 3 ದಿನಗಳ ಯಾತ್ರಾ ವೈಶಿಷ್ಟ್ಯ
Sabarimala: ಕೇರಳದ ಪ್ರಸಿದ್ಧ ಶಬರಿಮಲೆ ಅಯ್ಯಪ್ಪ ಸ್ವಾಮಿ ಕ್ಷೇತ್ರ ಮಂಡಲ ಪೂಜಾ ಉತ್ಸವಕ್ಕೆ ಸಜ್ಜಾಗತೊಡಗಿದೆ. ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಗೆ ತೊಡಿಸುವ ವಿಶೇಷ ಚಿನ್ನದ ಉಡುಪು ತೊಡಿಸುತ್ತಾರೆ. ತನ್ನಿಮಿತ್ತವಾಗಿ, ಆರಾನ್‌ಮುಲ್ಲಾದಿಂದ ಶಬರಿಮಲೆಗೆ 451 ಪವನ್ ತೂಕದ ತಂಗ ಅಂಗಿ ಮೆರವಣಿಗೆ ಶುರುವಾಗಿದೆ. 3 ದಿನಗಳ ಯಾತ್ರಾ ವೈಶಿಷ್ಟ್ಯದ ವಿವರ ಇಲ್ಲಿದೆ.
Sabarimala:ಶಬರಿಮಲೆ ಶ್ರೀ ಅಯ್ಯಪ್ಪ ಸ್ವಾಮಿ ಕ್ಷೇತ್ರ ತನ್ನ ವಾರ್ಷಿಕ ಮಂಡಲ ಪೂಜಾ ಉತ್ಸವಕ್ಕೆ ಸಿದ್ಧತೆ ನಡೆಸಿದೆ. ಈ ಮಂಡಲ ಪೂಜಾ ಉತ್ಸವದ ಸಂದರ್ಭದಲ್ಲಿ ಹರಿಹರ ಪುತ್ರನಿಗೆ ತಂಗ ಅಂಗಿ (Thanka Anki) ತೊಡಿಸುವುದು ವಾಡಿಕೆ. ತಂಗ ಅಂಗಿ ಅಂದರೆ ಚಿನ್ನದ ಅಂಗಿ ಎಂದು ಶಬ್ದಶಃ ಅರ್ಥ. ಈ ತಂಗ ಅಂಗಿ ಅರ್ಥಾತ್ ಚಿನ್ನಾಭರಣಗಳನ್ನು ಒಳಗೊಂಡ ಉಡುಪು ಪತ್ತನಂತಿಟ್ಟ ಸಮೀಪದ ಆರಾನ್‌ಮುಲ್ಲಾ ಪಾರ್ಥಸಾರಥಿ ಕ್ಷೇತ್ರದಿಂದ ಕೊಂಡೊಯ್ಯಲಾಗುತ್ತದೆ. ಪ್ರತಿ ವರ್ಷದಂತೆ ಈ ಬಾರಿಯೂ ಭಾನುವಾರ (ಡಿಸೆಂಬರ್ 22) ಬೆಳಗ್ಗೆ ಮೆರವಣಿಗೆ ಹೊರಟಿದೆ. ಇದು ಡಿಸೆಂಬರ್ 25ರ ಸಂಜೆ ಅಯ್ಯಪ್ಪ ಸನ್ನಿಧಾನ ಸೇರಲಿದೆ. ಡಿಸೆಂಬರ್ 26ರಂದು ಮಧ್ಯಾಹ್ನ ಮಂಡಲ ಪೂಜೆ ಉತ್ಸವ ನಡೆಯಲಿದೆ. ಅದಾಗಿ ಸಂಜೆ ದೀಪಾರಾಧನೆಯೊಂದಿಗೆ ಸನ್ನಿದಾನದ ಬಾಗಿಲು ಹಾಕಲಿದ್ದು, ನಂತರ ಮಕರ ಜ್ಯೋತಿ ಉತ್ಸವದ ದಿನಗಳಿಗಾಗಿ ಡಿಸೆಂಬರ್ 30ಕ್ಕೆ ಬಾಗಿಲು ತೆರೆಯಲಿದೆ.
ಶಬರಿಮಲೆ ಅಯ್ಯಪ್ಪಸ್ವಾಮಿ ತಂಗ ಅಂಗಿ ಪೆಟ್ಟಿಗೆಯಲ್ಲಿ ಏನೇನಿರುತ್ತೆ
ಪಂಪಾ ನದಿಯ ದಂಡೆಯಲ್ಲಿ ದಕ್ಷಿಣ ಭಾಗಕ್ಕಿರುವ ಆರಾನ್‌ಮುಲ್ಲಾ ಗ್ರಾಮದ ಪಾರ್ಥಸಾರಥಿ ದೇವಸ್ಥಾನದಲ್ಲಿ ಶಬರಿಮಲೆ ಅಯ್ಯಪ್ಪ ಸ್ವಾಮಿಗೆ ತಿರುವಾಂಕೂರು ಮಹಾರಾಜ ಶ್ರೀ ಚಿತ್ತಿರ ತಿರುನಾಳ್ ಬಲರಾಮ ವರ್ಮ ಕಾಣಿಕೆಯಾಗಿ ನೀಡಿದ ತಂಗ ಅಂಗಿ ಇರಿಸಲಾಗುತ್ತದೆ. ಈ ತಂಗ ಅಂಗಿ ಪೆಟ್ಟಿಗೆಯಲ್ಲಿ 451 ಪವನ್ ತೂಕದ ಚಿನ್ನದ ಸಿಂಹಾಸನ, ಸ್ಯಾಂಡಲ್‌ಗಳು, ಕೈಗವಸುಗಳು, ಮುಖದ ಹೊದಿಕೆ ಮತ್ತು ಕಿರೀಟವನ್ನೂ ಒಳಗೊಂಡ ಉಡುಪು ಚಿನ್ನಾಭರಣಗಳಿವೆ. ಪ್ರತಿ ವರ್ಷ ಡಿಸೆಂಬರ್ 22 ರಂದು ಬೆಳಗ್ಗೆ ಮೆರವಣಿಗೆ ಮೂಲಕ ಈ ತಂಗ ಅಂಗಿಯನ್ನು ಕೊಂಡೊಯ್ಯಲಾಗುತ್ತದೆ.
ಆರಾನ್‌ಮುಲ್ಲಾದಿಂದ ಶಬರಿಮಲೆಗೆ ತಂಗ ಅಂಗಿ ಮೆರವಣಿಗೆ
ಅದರಂತೆ, ಈ ಸಲವೂ ಡಿಸೆಂಬರ್ 22 ರಂದು ಮುಂಜಾನೆ 5 ಗಂಟೆಗೆ ತಂಗ ಅಂಗಿಯನ್ನು ಲಾಕರ್‌ನಿಂದ ಹೊರ ತೆಗೆಯಲಾಗಿದೆ. ಬಳಿಕ ದೇವಸ್ಥಾನದ ಆನೆ ಚಾವಡಿಯಲ್ಲಿ ಸಾರ್ವಜನಿಕ ದರ್ಶನಕ್ಕೆ ಇರಿಸಲಾಯಿತು. ತಂಗ ಅಂಗಿ ಮೂಲಕ ಶಬರಿ ಮಲೆ ಅಯ್ಯಪ್ಪ ಸ್ವಾಮಿಯ ದರ್ಶನ ಪಡೆಯುವುದಕ್ಕೆ ಯುವತಿಯರು, ಮಹಿಳೆಯರಿಗೆ ಅವಕಾಶ ಇರುವುದು ಇಲ್ಲಿ ಮಾತ್ರ. ಹೀಗಾಗಿ ಯುವತಿಯರು, ಮಹಿಳೆಯರು ಸೇರಿ ಸಾವಿರಾರು ಭಕ್ತರು ಅಯ್ಯಪ್ಪ ಸ್ವಾಮಿಯ ತಂಗ ಅಂಗಿ ದರ್ಶನ ಪಡೆದರು. ಬಳಿಕ ತಂಗ ಅಂಗಿಯನ್ನು ಶಬರಿಮಲೆಯಿಂದ ಕಳುಹಿಸಲಾದ ಅಲಂಕೃತ ರಥದಲ್ಲಿ ಕುಳ್ಳಿರಿಸಿ ಬೆಳಗ್ಗೆ 7.30ಕ್ಕೆ ಮೆರವಣಿಗೆ ಯಾತ್ರೆ ಶುರುವಾಗಿದೆ. ಈ ರಥಕ್ಕೆ ಬಿಗಿ ಪೊಲೀಸ್ ಬಂದೋಬಸ್ತ್ ಇದ್ದು, ದಾರಿಯುದ್ದಕ್ಕೂ ವಿವಿಧೆಡೆ ಪೂಜೆ, ಕಾಣಿಕೆಗಳನ್ನು ಸ್ವೀಕರಿಸುತ್ತ ಮುಂದೆ ಸಾಗುತ್ತದೆ. ಈ ರಥ ದಾರಿ ಮಧ್ಯೆ ಓಮಲ್ಲೂರು ಶ್ರೀ ರಕ್ತಕಂಡ ಸ್ವಾಮಿ ದೇವಸ್ಥಾನ, ಕೊನ್ನಿ ಮುರಿಂಗಮಂಗಲಂ ದೇವಸ್ಥಾನ, ಪೆರುನಾಡು ಶಾಸ್ತಾ ದೇವಸ್ಥಾನ ಸೇರಿದಂತೆ ದಾರಿಯುದ್ದಕ್ಕೂ ಹಲವು ದೇವಸ್ಥಾನಗಳಲ್ಲಿ ಕಿರು ವಿಶ್ರಾಂತಿ ಪಡೆಯಲಿದೆ. ಮೆರವಣಿಗೆ ಸಾಗುವ ಮಾರ್ಗದಲ್ಲಿ ಭದ್ರತೆಗಾಗಿ ಪೊಲೀಸರನ್ನು ನಿಯೋಜಿಸಲಾಗಿದೆ.
ಪಂಪಾ ತೀರದಿಂದ ಶಬರಿಮಲೆಗೆ ಕಾಲ್ನಡಿಗೆ ಮೆರವಣಿಗೆ
ಆರಾನ್‌ಮುಲ್ಲಾದಿಂದ ಹೊರಟ ತಂಗ ಅಂಗಿ ಮೆರವಣಿಗೆ ಡಿಸೆಂಬರ್ 25ರಂದು ಮಧ್ಯಾಹ್ನ 1.30ಕ್ಕೆ ಪಂಪಾ ನದಿ ತೀರಕ್ಕೆ ತಲುಪುತ್ತದೆ. ಅಲ್ಲಿವರೆಗೆ ರಥದಲ್ಲಿ ಸಾಗುವ ಮೆರವಣಿಗೆ, ನಂತರ ಕಾಲ್ನಡಿಗೆ ಮೂಲಕ ಸಾಗುತ್ತದೆ. ಪಂಪಾ ತೀರದಿಂದ ಶಬರಿಮಲೆ (Sabarimala) ಏರುವ ತಂಗ ಅಂಗಿ ಮೆರವಣಿಗೆ ಶರಂಕುತ್ತಿ (ಬಿಲ್ಲು ಚುಚ್ಚಿಡುವ ಸ್ಥಳ) ತಲುಪಿದಾಗ ಅಲ್ಲಿ ತಿರುವಾಂಕೂರು ದೇವಸ್ವಂ ಬೋರ್ಡ್ ಅಧಿಕಾರಿಗಳು ತಂಗ ಅಂಗಿ ಮೆರವಣಿಗೆಯನ್ನು ವಿದ್ಯುಕ್ತವಾಗಿ ಸ್ವಾಗತಿಸಿ ಮುಂದೆ ಕರೆದೊಯ್ಯುತ್ತಾರೆ. ಡಿಸೆಂಬರ್ 25 ರ ಸಂಜೆ 6 ಗಂಟೆಗೆ ಅಯ್ಯಪ್ಪ ಸನ್ನಿದಾನ ತಲುಪುತ್ತದೆ. ತಲುಪಿದ ಕೂಡಲೇ ಅಲ್ಲಿ ಅಯ್ಯಪ್ಪ ಸ್ವಾಮಿಗೆ ತಂಗ ಅಂಗಿ (Thanka Anki) ತೊಡಿಸುತ್ತಾರೆ. ಸಂಜೆ 7 ಗಂಟೆ ಸುಮಾರಿಗೆ ಮಹಾದೀಪಾರಾಧನೆ ನಡೆಯುತ್ತದೆ. ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ಸಹಸ್ರಾರು ಅಯ್ಯಪ್ಪ ಭಕ್ತರು ಶ್ರದ್ಧಾಭಕ್ತಿ ಕಾತರದೊಂದಿಗೆ ಕಾಯುತ್ತಿರುತ್ತಾರೆ. ಮಾರನೇ ದಿನ ಮಧ್ಯಾಹ್ನ ಮಂಡಲ ಪೂಜೆ ನೆರವೇರುತ್ತದೆ.
ವಿಭಾಗ