ವರಗಳನ್ನು ನೀಡುವ ಶಕ್ತಿ ದೇವತೆಗೆ ನಿತ್ಯ ಪೂಜೆ; ಬೆಂಗಳೂರಿನ ಆರ್‌ಆರ್‌ ನಗರದ ನಿಮಿಷಾಂಬ ದೇವಿಯ ನವರಾತ್ರಿ ಅಲಂಕಾರ, ಮಹತ್ವ ತಿಳಿಯಿರಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ವರಗಳನ್ನು ನೀಡುವ ಶಕ್ತಿ ದೇವತೆಗೆ ನಿತ್ಯ ಪೂಜೆ; ಬೆಂಗಳೂರಿನ ಆರ್‌ಆರ್‌ ನಗರದ ನಿಮಿಷಾಂಬ ದೇವಿಯ ನವರಾತ್ರಿ ಅಲಂಕಾರ, ಮಹತ್ವ ತಿಳಿಯಿರಿ

ವರಗಳನ್ನು ನೀಡುವ ಶಕ್ತಿ ದೇವತೆಗೆ ನಿತ್ಯ ಪೂಜೆ; ಬೆಂಗಳೂರಿನ ಆರ್‌ಆರ್‌ ನಗರದ ನಿಮಿಷಾಂಬ ದೇವಿಯ ನವರಾತ್ರಿ ಅಲಂಕಾರ, ಮಹತ್ವ ತಿಳಿಯಿರಿ

ಬೆಂಗಳೂರಿನ ಆರ್‌ಆರ್‌ ನಗರದಲ್ಲಿರುವ ನಿಮಿಷಾಂಬ ದೇವಿ ವರಗಳನ್ನು ನೀಡುವ ಶಕ್ತಿ ದೇವತೆ. ಈ ದೇವಾಲಯದಲ್ಲಿ ನವರಾತ್ರಿಯ ಉತ್ಸವ ಅದ್ಧೂರಿಯಾಗಿ ನಡೆಯುತ್ತಿವೆ. ದೇವಾಲಯ ಯಾವಾಗ, ದೇವಿಯ ಪೂಜೆ, ಮಹತ್ವ ಸೇರಿ ಪ್ರಮುಖ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.

ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿಮಿಷಾಂಬ ದೇವಾಲಯ. ದೇವಿಯ ಮಹಿಮೆ, ನವರಾತ್ರಿ ಉತ್ಸವದ ಮಾಹಿತಿ ಇಲ್ಲಿದೆ.
ಬೆಂಗಳೂರಿನ ರಾಜರಾಜೇಶ್ವರಿ ನಗರದಲ್ಲಿರುವ ನಿಮಿಷಾಂಬ ದೇವಾಲಯ. ದೇವಿಯ ಮಹಿಮೆ, ನವರಾತ್ರಿ ಉತ್ಸವದ ಮಾಹಿತಿ ಇಲ್ಲಿದೆ.

ನವರಾತ್ರಿಯ ಉತ್ಸವ ಎಲ್ಲೆಡೆ ಅದ್ಧೂರಿಯಾಗಿ ನಡೆಯುತ್ತಿದೆ. ಉದ್ಯಾನ ನಗರಿ ಬೆಂಗಳೂರಿನ ದೇವಾಲಯಗಳಲ್ಲಿ ನವರಾತ್ರಿ ಉತ್ಸವ ಜೋರಾಗಿದೆ. ವಿಶೇಷವಾಗಿ ದೇವತೆಗಳಿಗೆ ಶರನ್ನವರಾತ್ರಿ ಪೂಜೆ, ಹೋಮವನ್ನು ಅರ್ಪಿಸಲಾಗುತ್ತಿದೆ. ಆರ್‌ಆರ್‌ ನಗರದಲ್ಲಿರುವ ಶಕ್ತಿ ದೇವತೆ ನಿಮಿಷಾಂಬ ದೇವಾಲಯದಲ್ಲಿ ನವರಾತ್ರಿಯ ಉತ್ಸವ ಗಮನ ಸಳೆಯುತ್ತಿದ್ದು, ದೇವಿಗೆ ವಿವಿಧ ಬಗೆಯ ಅಲಂಕಾರಗಳನ್ನು ಮಾಡಲಾಗುತ್ತಿದೆ. ಅಕ್ಟೋಬರ್ 2 ರಂದು ಮಹಾಲಯ ಅಮಾವಾಸ್ಯೆಯ ದಿನ ದೇವಿಗೆ ಹರಿದ್ರಾ ಅಲಂಕಾರದೊಂದಿಗೆ ವಿಶೇಷ ಪೂಜೆ ಸಲ್ಲಿಸಲಾಗಿದೆ. ಅಕ್ಟೋಬರ್ 3 ರಿಂದ ನವರಾತ್ರಿ ಅಲಂಕಾರಗಳನ್ನು ಆರಂಭಿಸಲಾಗಿದೆ.

ನಿಮಿಷಾಂಬ ದೇವಿಗೆ ನವರಾತ್ರಿಯ ಅಲಂಕಾರ ಹೇಗಿದೆ

2024ರ ಅಕ್ಟೋಬರ್ 3 ರಿಂದ ನವರಾತ್ರಿ ಆರಂಭವಾಗಿದೆ. ಅಂದಿನಿಂದಲೇ ದೇವಿಗೆ ಅಲಂಕಾರಗಳನ್ನು ಮಾಡುತ್ತಾ ಬರಲಾಗಿದೆ. ನವರಾತ್ರಿಯ ಮೊದಲ ದಿನ (ಅಕ್ಟೋಬರ್ 3, ಗುರುವಾರ) ಮಧುಮಗಳ ಅಲಂಕಾರ, 2ನೇ ದಿನ (ಅಕ್ಟೋಬರ್ 4, ಶುಕ್ರವಾರ) ಗಾಯಿತ್ರಿ ಅಲಂಕಾರ, 3ನೇ ದಿನ (ಅಕ್ಟೋಬರ್ 5, ಶನಿವಾರ) ನಾರಾಯಣಿ ಅಲಂಕಾರ, 4ನೇ ದಿನ (ಅಕ್ಟೋಬರ್ 6, ಭಾನುವಾರ) ಕೋಲ್ಹಾಪುರ ಮಹಾಲಕ್ಷ್ಮಿ ಅಲಂಕಾರ, 5ನೇ ದಿನ (ಅಕ್ಟೋಬರ್ 7, ಸೋಮವಾರ) ಕಂಚಿಕಾಮಾಕ್ಷಿ ಅಲಂಕಾರ, 6ನೇ ದಿನ (ಅಕ್ಟೋಬರ್ 8, ಮಂಗಳವಾರ) ಸ್ಕಂದಮಾತಾ ದೇವಿ ಅಲಂಕಾರ, 7ನೇ ದಿನ (ಅಕ್ಟೋಬರ್ 9, ಬುಧವಾರ) ವೀಣಾ ಸರಸ್ವತಿ ಅಲಂಕಾರ, 8ನೇ ದಿನ (ಅಕ್ಟೋಬರ್ 10, ಗುರುವಾರ) ದುರ್ಗಾ ದೇವಿ ಅಲಂಕಾರ, 9ನೇ ದಿನ (ಅಕ್ಟೋಬರ್ 11, ಶುಕ್ರವಾರ) ಅನ್ನಪೂರ್ಣ ದೇವಿ ಅಲಂಕಾರ ಹಾಗೂ 10ನೇ ದಿನ ಅಂದರೆ ವಿಜಯದಶಮಿಯಂದು ತ್ರಿಪುರಾ ಸುಂದಿಯ ಅಲಂಕಾರವನ್ನು ದೇವಿಗೆ ಮಾಡಲಾಗುತ್ತದೆ. ದೇವಾಲಯದಲ್ಲಿ ನಿತ್ಯ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತವೆ.

ಆರ್‌ಆರ್‌ ನಗರದ ನಿಮಿಷಾಂಬ ದೇವಾಲಯ ಇತಿಹಾಸ

ಕೇರಳ ಮೂಲದ ಕೃಷ್ಣನ್ ನಂಬೂದರಿ ಎಂಬುವರು ತಮ್ಮ ಸ್ನೇಹಿತರ ಬಳಗದೊಂದಿಗೆ ಸೇರಿಕೊಂಡು ಈ ದೇವಾಲಯವನ್ನು 2006 ರಲ್ಲಿ ನಿರ್ಮಿಸಿದ್ದಾರೆ. ಕೇರಳ ದೇವಾಲಯಗಳ ಶೈಲಿಯಲ್ಲಿ ನಿಮಿಷಾಂಬ ದೇವಾಲಯವನ್ನು ನಿರ್ಮಿಸಲಾಗಿದ್ದು, ದೇವಿಯ ಪ್ರತಿಮೆಯ ಜೊತೆಗೆ ಸಿದ್ಧಿ ವಿನಾಯಕ, ಲಕ್ಷ್ಮಿ ನಾರಾಯಣ, ಮೌಕ್ತಿಕೇಶ್ವರ, ಸರಸ್ವತಿ, ಆಂಜನೇಯ ಹಾಗೂ ಮುಂಡಿನಿ ದೇವರುಗಳ ವಿಗ್ರಗಳಿವೆ. ಇಲ್ಲಿ ನವಗ್ರಹಗಳನ್ನು ಕಾಣಬಹುದು. ದೇವಸ್ಥಾನ ಮತ್ತೊಂದು ವಿಶೇಷವೆಂದರೆ ಮೇಲ್ಛಾವಣಿಯನ್ನು ಸಂಪೂರ್ಣವಾಗಿ ಹಂಚುಗಳಿಂದಲೇ ನಿರ್ಮಾಣ ಮಾಡಲಾಗಿದೆ.

ದೇವಸ್ಥಾನದ ಧರ್ಮಾಧಿಕಾರಿ ಕೃಷ್ಣನ್ ನಂಬೂದರಿ ಅವರು ಸುಮಾರು 45 ವರ್ಷಗಳ ಹಿಂದೆ ಕೆಲಸದ ನಿಮಿತ್ತ ಬೆಂಗಳೂರಿಗೆ ಬಂದು ಇಲ್ಲೇ ನೆಲೆಸಿದ್ದಾರೆ. ಇಲ್ಲಿನ ನಿಮಿಷಾಂಬ ಭಕ್ತರು ಮತ್ತು ತಾವು ಸೇರಿಕೊಂಡು ದೇವಾಲಯವನ್ನು ನಿರ್ಮಿಸಿದ್ದೇವೆ. ಇಲ್ಲಿ ದೇವಾಲಯವನ್ನು ನಿರ್ಮಿಸಬೇಕೆಂದು ದೈವ ಪ್ರೇರಣೆಯಾಗಿತ್ತು, ಹೀಗಾಗಿ ಆರ್‌ಆರ್‌ ನಗರದಲ್ಲಿ ಒಂದು ಸುಂದರವಾದ ದೇವಾಲಯ ನಿರ್ಮಾಣವಾಗಲು ಸಾಧ್ಯವಾಯಿತು. ಪ್ರತಿ ವರ್ಷದ ಏಪ್ರಿಲ್-ಮೇನಲ್ಲಿ ನಿಮಿಷಾಂಬ ಜಯಂತಿಯನ್ನು ಅದ್ಧೂರಿಯಾಗಿ ಆಚರಿಸಲಾಗುತ್ತದೆ. ಇದರ ಜೊತೆಗೆ ನವರಾತ್ರಿ ಉತ್ಸವ ಇರುತ್ತದೆ ಎಂದು ಕೃಷ್ಣನ್ ಮಾಹಿತಿ ಹಂಚಿಕೊಂಡಿದ್ದಾರೆ.

ದೇವಾಲಯ ನಿರ್ಮಾಣವಾಗಿನಿಂದ ನಿತ್ಯವೂ ಪೂಜೆ, ದೇವಿಗೆ ಪಂಚಾಮೃತ ಅಭಿಷೇಕ, ಮಹಾ ಸಂಕಲ್ಪ ಪೂಜೆ, ಪ್ರತಿ ಮಂಗಳವಾರ ರಾಹುಕಾಲದಲ್ಲಿ ವ್ಯಾದಿ ನಿವಾರಣೆ ಪೂಜೆ ಇರುತ್ತದೆ. ತಿಂಗಳ ಪೂಜೆ ಇರುತ್ತದೆ. ಅಮಾವಾಸ್ಯೆಗೆ ಸಂಕಷ್ಟಹರ ಪೂಜೆ, ಸಾಮೂಹಿಕ ಸತ್ಯಾನಾರಾಯಣ ಪೂಜೆ, ನವಗ್ರಹಗಳ ಹೋಮ ಮಾಡಲಾಗುತ್ತದೆ. ಹುಣ್ಣಿಗೆ ಸಾಮೂಹಿಕ ಚಂಡಿಕಾ ಹೋಮ ಇರುತ್ತದೆ ಎಂದು ದೇವಾಲಯದ ಭಕ್ತರಾದ ಶೈಲಜಾ ಅವರು ವಿವರಿಸಿದ್ದಾರೆ. ಭಕ್ತರ ಇಷ್ಟಾರ್ಥಗಳನ್ನು ಈಡೇರಿಸುವ ನಿಮಿಷಾಂಬ ದೇವಿಗೆ ಹರಕೆಯನ್ನು ತೀರಿಸಲು ಹೆಚ್ಚಾಗಿ ಸೀರೆಗಳನ್ನು ಅರ್ಪಿಸಲಾಗುತ್ತದೆ.

ಭಕ್ತರು ದೇವಾಲಯಕ್ಕೆ ಭೇಟಿ ನೀಡುವ ಸಮಯ: ಬೆಳಗ್ಗೆ 6.30 ರಿಂದ ಮಧ್ಯಾಹ್ನ 1.30 ರವರೆಗೆ ಹಾಗೂ ಸಂಜೆ 4 ರಿಂದ 8.30 ರವರೆಗೆ ದೇವಾಲಯದಲ್ಲಿ ಭಕ್ತರ ಭೇಟಿಗೆ ಅವಕಾಶವನ್ನು ಕಲ್ಪಿಸಲಾಗಿದೆ.

Whats_app_banner
ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.