ಮನೆಯ ಬಳಿ ಮೂರು ದಾರಿ ಕೂಡಿದ್ರೆ ಅದೃಷ್ಟವೋ ದುರಾದೃಷ್ಟವೋ? ನೈರುತ್ಯ ದಿಕ್ಕಿನಿಂದ ರಸ್ತೆ ಸೇರಿದ್ರೆ ಏನಾಗುತ್ತೆ ನೋಡಿ
ಮೂರು ದಾರಿ ಕೂಡಿದರೆ ಕೆಲವರು ಅದನ್ನು ಶುಭ ಎಂದು ಪರಿಗಣಿಸಿದರೆ ಇನ್ನೂ ಕೆಲವರು ಇದನ್ನು ಅಶುಭ ಎಂದು ಪರಿಗಣಿಸುತ್ತಾರೆ. ಮನೆಯ ಸಮೀಪ ದಕ್ಷಿಣ ದಿಕ್ಕಿನಲ್ಲಿನ ರಸ್ತೆಗೆ ಸೇರಿದಂತೆ ನೈರುತ್ಯ ದಿಕ್ಕಿನಲ್ಲಿ ಮೂರು ದಾರಿಗಳು ಸೇರಿದಂತೆ ಏನಾಗುತ್ತದೆ ಎಂಬುದನ್ನು ಇಲ್ಲಿ ವಿವರಿಸಿದ್ದಾರೆ ಜ್ಯೋತಿಷಿ ಎಚ್. ಸತೀಶ್.
ಹಿಂದೂ ಧರ್ಮದಲ್ಲಿ ಕೆಲವೊಂದು ನಂಬಿಕೆಗಳಿವೆ. ಆ ನಂಬಿಕೆಗಳ ಪ್ರಕಾರವೇ ಜನರು ನಡೆದುಕೊಳ್ಳುತ್ತಾರೆ. ಮೂರು ದಾರಿ ಕೂಡುವ ಜಾಗದ ಬಗ್ಗೆ ಜನರಲ್ಲಿ ಶುಭ ನಂಬಿಕೆಗಿಂತ ಅಪನಂಬಿಕೆಯೇ ಹೆಚ್ಚಿದೆ. ಊರು ದಾರಿ ಕೂಡಿದ ಜಾಗವು ಮಾಟ ಮಾಡಿಸಿದಷ್ಟು ಅಪಾಯ ಎಂಬ ನಂಬಿಕೆಯೂ ಕೆಲವು ಕಡೆ ಇದೆ. ಹಾಗಾದರೆ ದಕ್ಷಿಣ ದಿಕ್ಕಿನಲ್ಲಿನ ರಸ್ತೆಗೆ ಸೇರಿದಂತೆ ನೈರುತ್ಯ ದಿಕ್ಕಿನಲ್ಲಿ ಮೂರು ದಾರಿಗಳು ಸೇರಿದಂತೆ ಏನಾಗುತ್ತದೆ ಎಂಬುದನ್ನು ನೋಡಿ.
ಕೆಲವೊಂದು ಬಾರಿ ಮೂರು ದಾರಿ ಅಥವಾ ರಸ್ತೆ ಸೇರುವ ಸ್ಥಳದಿಂದ ತೊಂದರೆ ಉಂಟಾಗುತ್ತದೆ. ಆದರೆ ಅದಕ್ಕೆ ಸರಿಯಾದ ಪರಿಹಾರವನ್ನು ಮಾಡಿದಲ್ಲಿ ಯಾವುದೇ ತೊಂದರೆ ಉಂಟಾಗುವುದಿಲ್ಲ. ಪರಿಸ್ಥಿಯ ಕಡೆಗಣನೆಯಿಂದ ಮಾತ್ರ ಅಸಮಂಜಸ ಫಲಿತಾಂಶಗಳನ್ನು ಪಡೆಯಬೇಕಾಗುತ್ತದೆ.
ದಕ್ಷಿಣ ದಿಕ್ಕಿನ ರಸ್ತೆಗೆ ನೈರುತ್ಯ ದಿಕ್ಕಿನಲ್ಲಿ ಮೂರು ದಾರಿಗಳು ಸೇರುವುದು
ದಕ್ಷಿಣ ದಿಕ್ಕಿನಲ್ಲಿನ ರಸ್ತೆಗೆ ಸೇರಿದಂತೆ ನೈರುತ್ಯ ದಿಕ್ಕಿನಲ್ಲಿ ಮೂರು ದಾರಿಗಳು ಸೇರಿದಲ್ಲಿ ತೊಂದರೆಗಳು ಉಂಟಾಗುವ ಸಾಧ್ಯತೆ ಕಂಡು ಬರುತ್ತದೆ. ಇಂತಹ ಮನೆಯಲ್ಲಿ ವಾಸಿಸುವ ಮಹಿಳೆಯರ ಮನಸ್ಸಿಗೆ ನೆಮ್ಮದಿ ಇರುವುದಿಲ್ಲ. ಮಾಡದ ತಪ್ಪಿಗೆ ಪಶ್ಚಾತ್ತಾಪ ಪಡಬೇಕಾಗುತ್ತದೆ. ಸಂಗಾತಿಯ ಜೊತೆಯಲ್ಲಿ ಅನಾವಶ್ಯಕ ಮನಸ್ತಾಪವಿರುತ್ತದೆ. ಇವರ ಆರೋಗ್ಯದಲ್ಲಿಯೂ ಸಹ ಏರಿಳಿತಗಳು ಕಂಡು ಬರುತ್ತದೆ. ಇವರು ಆಡುವ ಪ್ರತಿಯೊಂದು ಮಾತುಗಳಿಗೂ ತಪ್ಪಾದ ಅರ್ಥವು ಉಂಟಾಗುತ್ತದೆ. ಸ್ತ್ರೀಯರಾಗಲಿ ಪುರುಷರಾಗಲಿ ಅವರ ನಡವಳಿಕೆಯಲ್ಲಿ ಯಾವುದೇ ತೊಂದರೆ ಕಂಡು ಬರುವುದಿಲ್ಲ, ಆದರೆ ಬೇರೆಯವರು ಇದನ್ನು ತಪ್ಪಾಗಿ ಗ್ರಹಿಸುತ್ತಾರೆ.
ದೀರ್ಘಕಾಲ ಕಾಡಬಹುದಾದ ಅನಾರೋಗ್ಯವಿದ್ದಲ್ಲಿ ಎಚ್ಚರಿಕೆಯನ್ನು ವಹಿಸಬೇಕು. ಕೇವಲ ಔಷಧಿ ಸೇವಿಸುವುದಲ್ಲದೆ ತಮ್ಮ ಆಹಾರ ಪದ್ಧತಿಯನ್ನು ಬದಲಾಯಿಸಿಕೊಂಡಲ್ಲಿ ಮತ್ತು ಸರಳ ವ್ಯಾಯಾಮವನ್ನು ಅನುಸರಿಸಿದಲ್ಲಿ ಉತ್ತಮ ಆರೋಗ್ಯ ಲಭಿಸುತ್ತದೆ. ಉದ್ಯೋಗದಲ್ಲಿ ನಿರೀಕ್ಷಿಸಿದಂತೆ ಶುಭಫಲಗಳು ದೊರೆಯುವುದಿಲ್ಲ. ಏಕಾಂಗಿಯಾಗಿ ಯಾವುದೇ ಕೆಲಸ ಕಾರ್ಯಗಳನ್ನು ನಿರ್ವಹಿಸಿದರು ಅಪೂರ್ಣಗೊಳ್ಳುತ್ತದೆ. ಬೇರೆಯವರ ಸಹಾಯ ಸಹಕಾರ ಇವರಿಗೆ ಹೊಸ ಚೈತನ್ಯ ನೀಡುತ್ತದೆ. ವಾಹನ ಚಾಲನೆ ಮಾಡುವ ವೇಳೆಯಲ್ಲಿ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಅಪಘಾತದಿಂದ ಕೈಕಾಲುಗಳಿಗೆ ಪೆಟ್ಟಾಗಬಹುದು. ದಿಢೀರನೆ ಆರೋಗ್ಯ ಕೆಡಬಹುದು. ಸ್ವಂತ ಮನೆಯನ್ನು ಕಟ್ಟಲು ಬೇಕಾದ ಅನುಕೂಲವನ್ನು ಕುಟುಂಬದ ಹಿರಿಯರಿಂದ ಸಹಾಯ ಪಡೆಯುವಿರಿ.
ದಾಂಪತ್ಯ ಜೀವನದಲ್ಲಿ ಅನಾವಶ್ಯಕ ವಾದ ವಿವಾದಗಳು ಇರುತ್ತವೆ. ಇವರು ಶಾಂತಿ ಸಹನೆಯಿಂದ ಇದ್ದರು ಅದನ್ನು ಕದಡುವ ಸಾಮರ್ಥ್ಯ ಬೇರೆಯವರಿಗೆ ಮೂಡುತ್ತದೆ. ಪದೇ ಪದೇ ಉದ್ಯೋಗವನ್ನು ಬದಲಾಯಿಸುವಿರಿ. ಸ್ವತಂತ್ರವಾಗಿ ನಿರ್ವಹಿಸುವ ವ್ಯಾಪಾರ ವ್ಯವಹಾರಗಳಲ್ಲಿ ಸಾಮಾನ್ಯ ಗತಿಯ ಲಾಭ ದೊರೆಯುತ್ತದೆ. ಮಕ್ಕಳ ಆರೋಗ್ಯದಲ್ಲಿ ಸ್ಥಿರತೆ ಇರುವುದಿಲ್ಲ. ಆದರೆ ಮನೆಯಲ್ಲಿ ದೇವಮೂಲೆಯಲ್ಲಿ ಅಥವಾ ಪೂರ್ವ ದಿಕ್ಕಿನಲ್ಲಿ ಪಿರಮಿಡ್ ಇರುವುದರಿಂದ ಮೇಲೆ ತಿಳಿಸಿರುವ ನಕಾರಾತ್ಮಕ ವಿಚಾರಗಳು ದೂರವಾಗುತ್ತದೆ. ಮನೆಯ ಹೊರಗೆ ನೈರುತ್ಯ ದಿಕ್ಕಿನಲ್ಲಿ ತೂಗು ಗಂಟೆಯನ್ನು ಹಾಕಬಹುದು. ಜಪ ತಪಗಳಿಗೆ ನೈರುತ್ಯ ದಿಕ್ಕು ಒಳ್ಳೆಯದು.
ಪಶ್ಚಿಮ ದಿಕ್ಕಿನ ರಸ್ತೆಗೆ ನೈರುತ್ಯ ದಿಕ್ಕಿನಲ್ಲಿ ಮೂರು ರಸ್ತೆ ಸೇರುವುದು
ಪಶ್ಚಿಮ ದಿಕ್ಕಿಗೆ ಇರುವ ರಸ್ತೆಯಲ್ಲಿ ನೈರುತ್ಯ ದಿಕ್ಕಿನಲ್ಲಿ ಇರುವ ಮೂರು ರಸ್ತೆಗಳು ಸೇರಿದಲ್ಲಿ, ಅಂತಹ ಮನೆಯಲ್ಲಿ ವಾಸಿಸಿದರೆ ನಕಾರಾತ್ಮಕ ಫಲಿತಾಂಶಗಳು ದೊರೆಯುತ್ತದೆ. ಕುಟುಂಬದ ಮುಖ್ಯಸ್ಥರಿಗೆ ಜೀವನದಲ್ಲಿ ಎರಡು ತೊಡರುಗಳು ಸಾಮಾನ್ಯವಾಗಿ ಕಂಡುಬರುತ್ತವೆ. ಕುಟುಂಬದ ಹಿರಿಯರಿಗೆ ಸಹನೆಯ ಕೊರತೆ ಇರುತ್ತದೆ. ದುಡುಕಿ ಮಾಡುವ ತಪ್ಪಾದ ಕೆಲಸ ದೊಡ್ಡದಾಗಿ ಬಿಂಬಿಸಲ್ಪಡುತ್ತದೆ. ಇದರಿಂದ ಮಾಡದ ತಪ್ಪನ್ನು ಒಪ್ಪಬೇಕಾಗುತ್ತದೆ. ವಾಹನಗಳಿಂದ ಅಥವಾ ಯಂತ್ರೋಪಕರಣಗಳಿಂದ ತೊಂದರೆ ಉಂಟಾಗುವ ಸಾಧ್ಯತೆಗಳಿವೆ. ಆದ್ದರಿಂದ ಎಚ್ಚರಿಕೆಯ ನಡೆ ನುಡಿ ಮುಖ್ಯವಾಗುತ್ತದೆ.
ಅನಾವಶ್ಯಕವಾಗಿ ಮನಸ್ಸಿಗೆ ಬೇಸರವಿರುತ್ತದೆ. ಆರೋಗ್ಯದಲ್ಲಿ ತೊಂದರೆ ಉಂಟಾಗುತ್ತದೆ. ಉದ್ಯೋಗದಲ್ಲಿ ಅಧಿಕ ಮಟ್ಟದ ಜವಾಬ್ದಾರಿ ಇವರಿಗಿರುತ್ತದೆ. ವೃತ್ತಿಯಲ್ಲಿ ಬೇಸರ ಉಂಟಾಗುತ್ತದೆ. ಮಾಡುವ ಕೆಲಸಕ್ಕೆ ತಕ್ಕಂತೆ ಪ್ರಶಂಸೆ ಲಭಿಸುವುದಿಲ್ಲ. ಆದರೆ ಮಹಿಳೆಯರಿಗೆ ಶುಭಫಲಗಳು ಹೇರಳವಾಗಿ ದೊರೆಯುತ್ತವೆ. ಇಂತಹ ಮನೆಯ ಉತ್ತರ ದಿಕ್ಕಿನಲ್ಲಿ ಪಿರಮಿಡ್ ಸ್ಥಾಪಿಸುವುದರಿಂದ ಧನಾತ್ಮಕ ಫಲಗಳು ದೊರೆಯುತ್ತವೆ. ಮನೆಯ ಒಳಗಾಗಲಿ ಅಥವಾ ಹೊರಗಾಗಲಿ ಗಾಢವಾದ ಬಣ್ಣವನ್ನು ಗೋಡೆಗಳಿಗೆ ಬಳಸಬಾರದು. ತಿಳಿಯಾದ ಬಣ್ಣವನ್ನು ಬಳಸುವುದರಿಂದ ಕುಟುಂಬದಲ್ಲಿ ಶಾಂತಿ ನೆಮ್ಮದಿ ನೆಲೆಸುತ್ತದೆ. ಉತ್ತರದ ಗೋಡೆಯಲ್ಲಿ ಏಳು ಕುದುರೆಗಳಿರುವ ಭಾವಚಿತ್ರವಿದ್ದರೆ ಒಳ್ಳೆಯದು. ಇದರಿಂದ ಉತ್ತಮ ಫಲಗಳನ್ನು ಪಡೆಯಬಹುದು.
ಬರಹ: ಎಚ್. ಸತೀಶ್, ಜ್ಯೋತಿಷಿ