ಮನೆ ಬಳಿ ಮೂರು ದಾರಿ ಕೂಡಿದ್ರೆ ಕೆಲವರು ಭಯ ಪಡೋದು ಯಾಕೆ? ದಕ್ಷಿಣ ದಿಕ್ಕಿಗೆ ಮನೆ ಬಾಗಿಲಿನ ಶುಭಫಲ ತಿಳಿಯಿರಿ
ಮೂರು ದಾರಿಗಳು ಕೂಡಿರುವ ಸ್ಥಳದಲ್ಲಿ ಓಡಾಡುವುದು ಒಳ್ಳೆಯದಲ್ವಾ? ಅದರಲ್ಲೂ ಕೆಲವರು ಮನೆಯ ಬಳಿ ಮೂರು ದಾರಿ ಕೂಡಿದ್ರೆ ಭಯ ಪಡ್ತಾರೆ. ಅಮಾವಾಸೆ ದಿನ ಆ ಕಡೆ ಹೋಗೋದಿಲ್ಲ. ಮೂರು ದಾರಿ ಹಾಗೂ ಮನೆಯ ಬಾಗಿಲು ದಕ್ಷಿಣ ದಿಕ್ಕಿಗೆ ಇದ್ದರೆ ಏನಲ್ಲಾ ಶುಭಫಲಗಳಿವೆ ಎಂಬುದನ್ನು ಬಗ್ಗೆ ಜ್ಯೋತಿಷಿ ಎಚ್ ಸತೀಶ್ ಅವರು ವಿವರಿಸಿದ್ದಾರೆ.
ಸಾಮಾನ್ಯವಾಗಿ ಮೂರು ದಾರಿ ಸೇರುವ ಜಾಗವನ್ನು ಅಪಾಯಕಾರಿ ಎಂದು ಹೇಳುತ್ತಾರೆ. ಅದರಲ್ಲಿಯೂ ಈ ಹುಣ್ಣಿಮೆ ಅಮಾವಾಸ್ಯೆಗಳೆಂದು ಅಂತಹ ಸ್ಥಳದಲ್ಲಿ ಓಡಾಡಲು ಸಹ ಭಯಪಡುತ್ತೇವೆ. ಖರೀದಿಸಿದ ಜಮೀನು ಅಥವಾ ಮನೆಯ ಬಳಿ ಮೂರು ದಾರಿಗಳು ಸೇರಿದಲ್ಲಿ ಕೆಲವರು ಭಯದಿಂದಲೇ ಜೀವನ ನಡೆಸುತ್ತಾರೆ. ನಿಮ್ಮ ಮನೆಯ ಬಾಗಿಲು ದಕ್ಷಿಣ ದಿಕ್ಕಿನಲ್ಲಿದ್ದು ನೈರುತ್ಯ ಮೂಲೆಗೆ ಸಂಬಂಧಿಸಿದಂತೆ ಮೂರು ಬಾರಿ ಸೇರಿದ್ದಲ್ಲಿ, ಆ ಮನೆಯಲ್ಲಿ ವಾಸಿಸುವವರೆಗೆ ಮಧ್ಯಮ ಮಟ್ಟದ ಫಲಿತಾಂಶಗಳು ದೊರೆಯುತ್ತವೆ. ಆದರೆ ಅನಾವಶ್ಯಕವಾದಂತಹ ತೊಂದರೆಗಳು ಎದುರಾಗುವುದಿಲ್ಲ. ಮುಖ್ಯ ವಿಚಾರವೆಂದರೆ ಇವರ ಜೀವನವು ಅವರು ತೆಗೆದುಕೊಳ್ಳುವ ತೀರ್ಮಾನಗಳನ್ನು ಅವಲಂಬಿಸಿರುತ್ತದೆ. ಸಣ್ಣಪುಟ್ಟ ವಿಚಾರಗಳಿಗೂ ಮಾನಸಿಕ ಒತ್ತಡಕ್ಕೆ ಒಳಗಾಗುತ್ತಾರೆ. ದಕ್ಷಿಣ ಮತ್ತು ಪಶ್ಚಿಮ ದಿಕ್ಕಿನಲ್ಲಿ ರಸ್ತೆಗಳಿದ್ದರೂ ಇನ್ನೊಂದು ರಸ್ತೆಯು ಪೂರ್ವ ದಿಕ್ಕಿಗೆ ಬೆಳೆದಿರುತ್ತದೆ. ಇದರಿಂದ ತೊಂದರೆ ಇರುವುದಿಲ್ಲ. ಆದರೆ ದಕ್ಷಿಣ ದಿಕ್ಕಿನಲ್ಲಿ ನೀಲಿ ಬಣ್ಣದ ದೀಪವು ಸದಾಕಾಲ ಬೆಳಗಿರಬೇಕು. ಇದರಿಂದಾಗಿ ಆ ಮನೆಗೆ ಋಣಾತ್ಮಕ ಶಕ್ತಿಗಳ ಪ್ರಭಾವ ಕಡಿಮೆಯಾಗುತ್ತದೆ.
ಮನೆಯ ಮುಂಭಾಗದ ಮೇಲೆ ಕಪ್ಪು ಅಥವಾ ಕೆಂಪು ಬಣ್ಣವನ್ನು ಬಳಸಬಾರದು. ಹಾಗೆಯೇ ಹಬ್ಬ ಹರಿದಿನಗಳಂದು ಕಟ್ಟಿದ ತೋರಣವು ಒಣಗಿದ್ದಲ್ಲಿ ಅದನ್ನು ತೆಗೆಯಬೇಕು. ಮನೆಯ ಮುಂಭಾಗದ ಎಡಗಡೆ ಅಥವಾ ಬಲಗಡೆಯಲ್ಲಿ ಕಸದ ಬುಟ್ಟಿಯನ್ನು ಇರಿಸಬಾರದು. ಮನೆಯ ಅಂಗಳದ ಈಶಾನ್ಯ ದಿಕ್ಕಿನಲ್ಲಿ ತೂಗು ಗಂಟೆಯನ್ನು ಕಟ್ಟಿರಬೇಕು. ಇದರಿಂದಾಗಿ ಆ ಮನೆಯಲ್ಲಿ ಅನೇಕ ಶುಭ ಸಮಾರಂಭಗಳು ನಡೆಯುತ್ತವೆ. ಬಂಧು-ಬಳಗದವರ ಜೊತೆ ಉತ್ತಮ ಬಾಂಧವ್ಯವಿದ್ದು ಅಗತ್ಯವಿದ್ದಾಗ ಅವರ ಸಹಾಯ ದೊರೆಯುತ್ತದೆ.
ವಿದ್ಯಾರ್ಥಿಗಳು ಪೂರ್ವ ದಿಕ್ಕಿಗೆ ಮುಖ ಮಾಡಿ ಕುಳಿತು ಓದಿದಲ್ಲಿ ಉತ್ತಮ ಫಲಿತಾಂಶ ದೊರೆಯುತ್ತದೆ. ಯಾವುದೇ ಕಾರಣಕ್ಕೂ ಮುಂಬಾಗಿಲಿಗೆ ಬೆನ್ನು ಮಾಡಿಕೊಂಡು ಊಟವನ್ನು ಮಾಡಬಾರದು. ಅದೇ ರೀತಿ ಮುಂಬಾಗಿಲ ಹೊರಗೆ ಆಹಾರವನ್ನು ಸ್ವೀಕರಿಸಬಾರದು. ಇದರ ಫಲವಾಗಿ ಉತ್ತಮ ಆರೋಗ್ಯ ಸದಾಕಾಲವು ಇರುತ್ತದೆ. ಹಣಕಾಸಿನ ವಿಚಾರದಲ್ಲಿ ಒತ್ತಡವಿದ್ದರೂ ತೊಂದರೆ ಉಂಟಾಗದು. ಉದ್ಯೋಗಸ್ಥರು ಶಾಂತಿ ಸಹನೆಯನ್ನು ಪಾಲಿಸುವುದು ಬಲುಮುಖ್ಯ. ಕುಟುಂಬದಲ್ಲಿ ಪರಸ್ಪರ ಗೌರವ ಮತ್ತು ವಿಶ್ವಾಸಗಳು ನೆಲೆಯೂರುತ್ತವೆ. ದಂಪತಿ ನಡುವೆ ವಾದ ವಿವಾದಗಳಿದ್ದರೂ ಪ್ರೀತಿ ವಿಶ್ವಾಸವು ಮರುಕಳಿಸುತ್ತವೆ.
ಪಶ್ಚಿಮ ದಿಕ್ಕಿನಲ್ಲಿ ವಾಯುವ್ಯ ಮೂಲೆಗೆ ಹತ್ತಿರವಾಗಿ ಮೂರು ರಸ್ತೆಗಳು ಸಂಧಿಸುವಂತೆ ಇದ್ದಲ್ಲಿ ಯಾವುದೇ ತೊಂದರೆ ಎದುರಾಗುವುದಿಲ್ಲ. ದಕ್ಷಿಣ ಮತ್ತು ಪಶ್ಚಿಮಕ್ಕೆ ರಸ್ತೆಗಳು ವೃದ್ಧಿಯಾಗಿದ್ದರೂ ಸಹ ಉತ್ತರ ದಿಕ್ಕಿಗೆ ಇರುವ ರಸ್ತೆಯು ವೃದ್ಧಿಯಾಗಿರುತ್ತದೆ. ಆದ್ದರಿಂದ ಇಲ್ಲಿ ಹೆಚ್ಚಿನ ದೋಷ ಕಂಡುಬರುವುದಿಲ್ಲ. ಈ ಮನೆಯಲ್ಲಿ ವಾಸವಿರುವ ಪುರುಷರಿಗೆ ವಿಶೇಷವಾದಂತಹ ಅಧಿಕಾರ ದೊರೆಯುತ್ತದೆ.
ಕೇವಲ ಮನೆಯಲ್ಲದೆ ಉದ್ಯೋಗ ಮಾಡುವ ಕಡೆಯೂ ಇವರ ಮಾತಿಗೆ ಉತ್ತಮ ಮನ್ನಣೆ ದೊರೆಯುತ್ತದೆ. ಇವರ ಮನೆಯ ಮುಂದೆ ಉತ್ತರ ದಿಕ್ಕನ್ನು ಹೆಚ್ಚಾಗಿ ಬಳಸಿಕೊಂಡು ಅಲ್ಲಿ ಮುಳ್ಳು ಇರದ ಕೆಂಪು ಹೂ ಬಿಡುವ ಗಿಡಗಳನ್ನು ಬೆಳೆಸಬೇಕು. ಮನೆಯ ಹೊರಗಿನ ಗೋಡೆಗೆ ಕೆಂಪು, ಹಸಿರು ಮುಂತಾದ ಗಾಢವಾಗಿ ಕಾಣುವ ಬಣ್ಣಗಳನ್ನು ಉಪಯೋಗಿಸಬಾರದು. ಇದರಿಂದಾಗಿ ಕುಟುಂಬದಲ್ಲಿ ನೆಮ್ಮದಿಯ ವಾತಾವರಣ ಕಂಡು ಬರುತ್ತದೆ. ಮನೆಯ ಮುಂಭಾಗದಲ್ಲಿ ಸಣ್ಣ ಪಾತ್ರೆಯಲ್ಲಿ ಹಕ್ಕಿಗಳಿಗೆ ಕುಡಿಯುವ ನೀರನ್ನು ಇಡುವುದು ಲಾಭದಾಯಕ.
ಅನುಕೂಲವಿದ್ದರೆ ಪಕ್ಷಿಗಳಿಗಾಗಿ ಕಾಳು ಮತ್ತು ನೀರನ್ನು ಮಹಡಿಯ ಮೇಲೆ ಇರಿಸಬಹುದು. ವಿದ್ಯಾರ್ಥಿಗಳಿಗೆ ಸೋಮಾರಿತನ ಕಾಡುತ್ತದೆ. ಆದ್ದರಿಂದ ಕುಟುಂಬದ ಹಿರಿಯರು ಅವರನ್ನು ಶಿಕ್ಷಿಸದೆ ಪ್ರೀತಿ ವಿಶ್ವಾಸದಿಂದ ಅವರ ಮನಸ್ಸನ್ನು ಗೆಲ್ಲಬೇಕು. ಸಾಲ ಕೊಡುವುದು ಅಥವಾ ತೆಗೆದುಕೊಳ್ಳುವುದು ಕಡಿಮೆ ಮಾಡುವುದು ಒಳಿತು. ಸಾಲ ಪಡೆದುಕೊಂಡರೆ ಸುಲಭವಾಗಿ ಮರಳಿ ನೀಡಲು ಸಾಧ್ಯವಾಗುವುದಿಲ್ಲ. ಸಾಲವಾಗಿ ಹಣವನ್ನು ನೀಡಿದರೆ ಸುಲಭವಾಗಿ ಮರಳಿಕೈಸೇರುವುದಿಲ್ಲ.