‌ದೇಗುಲ ದರ್ಶನ: ಶುದ್ಧರತ್ನೇಶ್ವರ ದೇಗುಲದ ಬ್ರಹ್ಮತೀರ್ಥದಿಂದ ಕಿಡ್ನಿ ಸಮಸ್ಯೆ ದೂರಾಗುತ್ತೆ ಎಂಬ ಪ್ರತೀತಿ, ಇದು ಬ್ರಹ್ಮನ ಶಾಪ ವಿಮೋಚನೆಯಾದ ಜಾಗ-spiritual suddha rathneshwarar temple ootathur in trichy dist tamilnadu story behind brahmma theertham rst ,ರಾಶಿ ಭವಿಷ್ಯ ಸುದ್ದಿ
ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ‌ದೇಗುಲ ದರ್ಶನ: ಶುದ್ಧರತ್ನೇಶ್ವರ ದೇಗುಲದ ಬ್ರಹ್ಮತೀರ್ಥದಿಂದ ಕಿಡ್ನಿ ಸಮಸ್ಯೆ ದೂರಾಗುತ್ತೆ ಎಂಬ ಪ್ರತೀತಿ, ಇದು ಬ್ರಹ್ಮನ ಶಾಪ ವಿಮೋಚನೆಯಾದ ಜಾಗ

‌ದೇಗುಲ ದರ್ಶನ: ಶುದ್ಧರತ್ನೇಶ್ವರ ದೇಗುಲದ ಬ್ರಹ್ಮತೀರ್ಥದಿಂದ ಕಿಡ್ನಿ ಸಮಸ್ಯೆ ದೂರಾಗುತ್ತೆ ಎಂಬ ಪ್ರತೀತಿ, ಇದು ಬ್ರಹ್ಮನ ಶಾಪ ವಿಮೋಚನೆಯಾದ ಜಾಗ

ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಊಟತ್ತೂರ್ ಎಂಬಲ್ಲಿ ಇತಿಹಾಸ ಪ್ರಸಿದ್ಧ ಶಿವ ದೇಗುಲವಿದೆ. ಕಿಡ್ನಿ ಸಮಸ್ಯೆಗಳಿಗೆ ಪರಿಹಾರ ದೊರೆಯುವ ಸ್ಥಳ ಇದು ಎಂಬ ನಂಬಿಕೆ ಇದೆ. ಬ್ರಹ್ಮನು ಶಾಪ ವಿಮೋಚನೆಗೊಂಡ ಈ ಜಾಗದಲ್ಲಿ ಬ್ರಹ್ಮತೀರ್ಥ ವಿಶೇಷ. ಶುದ್ಧ ರತ್ನೇಶ್ವರ ದೇಗುಲ ಐತಿಹ್ಯ ಹೀಗಿದೆ.

ಶುದ್ಧ ರತ್ನೇಶ್ವರ ದೇಗುಲ ಊಟತ್ತೂರ್
ಶುದ್ಧ ರತ್ನೇಶ್ವರ ದೇಗುಲ ಊಟತ್ತೂರ್

ಭಾರತದ ಕೆಲ ದೇಗುಲಗಳು ಕಾಯಿಲೆಗಳನ್ನು ಗುಣಪಡಿಸುವ ಶಕ್ತಿಯನ್ನು ಹೊಂದಿರುವ ಕುರಿತು ಸಾಕಷ್ಟು ವಿಚಾರಗಳು ಜನಮಾನಸದಲ್ಲಿ ನಂಬಿಕೆಯಾಗಿ ನೆಲೆ ನಿಂತಿವೆ. ದೇಗುಲಗಳ ಸಮೀಪವಿರುವ ಕಲ್ಯಾಣಿಗಳಲ್ಲಿ (ಕೊಳ, ಕೆರೆ) ತೀರ್ಥಸ್ನಾನ ಮಾಡಿದರೆ ಅಥವಾ ತೀರ್ಥ ಸೇವಿಸಿದರೆ ಚರ್ಮರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆ ಇದೆ. ದೈಹಿಕ ರೋಗಗಳಷ್ಟೇ ಅಲ್ಲ, ಹಲವು ಬಗೆಯ ಮಾನಸಿಕ ಸಮಸ್ಯೆಗಳಿಗೂ ಈ ದೇವಸ್ಥಾನಗಳಲ್ಲಿ ಪರಿಹಾರ ದೊರೆಯುತ್ತದೆ. ತಮಿಳುನಾಡಿನಲ್ಲಿರುವ ಹಲವು ಮಹತ್ವದ ದೇಗುಲಗಳ ಪೈಕಿ ಶ್ರೀ ಅಖಿಲಾಂಡೇಶ್ವರಿ ಸಮೇತ ಶುದ್ಧ ರತ್ನೇಶ್ವರ ದೇವಸ್ಥಾನವೂ ಒಂದು.

ತಮಿಳುನಾಡಿನ ತಿರುಚ್ಚಿ ಜಿಲ್ಲೆಯ ಊಟತ್ತೂರ್ ಎಂಬ ಹಳ್ಳಿಯಲ್ಲಿ ಇರುವ ಈ ದೇಗುಲವು ಪ್ರಸಿದ್ಧ ಪುರಾತನ ಶಿವನ ದೇಗುಲಗಳಲ್ಲಿ ಒಂದಾಗಿದೆ. 7ನೇ ಶತಮಾನದಲ್ಲಿ ಈ ದೇಗುಲವನ್ನು ನಿರ್ಮಿಸಲಾಯಿತು ಎಂದು ಹೇಳಲಾಗುತ್ತದೆ. ಚೋಳ ಸಾಮ್ರಾಜ್ಯದ ಮಹಾರಾಜ ರಾಜರಾಜ ಚೋಳ ಈ ದೇವಾಲಯದ ಜೀರ್ಣೋದ್ಧಾರ ಮಾಡಿದ. ಅವನ ಮಗ ರಾಜೇಂದ್ರ ಚೋಳ ಮತ್ತು ಅವನ ಮೊಮ್ಮಗ ರಾಜಾಧಿರಾಜ ಚೋಳ ಸಹ ಈ ದೇವಾಲಯದ ಜೀರ್ಣೋದ್ಧಾರ ಮಾಡಿಸಿದರು. ಈ ದೇವಾಲಯದಲ್ಲಿ ಪೂಜೆ ಸಲ್ಲಿಸಿದರೆ ಕಿಡ್ನಿಗೆ ಸಂಬಂಧಿಸಿದ ಎಲ್ಲ ಸಮಸ್ಯೆಗಳು ನಿವಾರಣೆಯಾಗುತ್ತವೆ ಎಂಬ ನಂಬಿಕೆಯಿದೆ.

ಇದು ಶಿವನ ಆಲಯವಾಗಿದ್ದು, ಪರಮೇಶ್ವರನು ಶುದ್ಧ ಮಾಣಿಕ್ಯದಿಂದ ರೂಪುಗೊಂಡಿರುವ ಶಿವಲಿಂಗದ ರೂಪದಲ್ಲಿ ಭಕ್ತರಿಗೆ ದರ್ಶನ ನೀಡುತ್ತಾನೆ. ಆ ಕಾರಣಕ್ಕಾಗಿಯೇ ಇಲ್ಲಿರುವ ಪ್ರತಿಷ್ಠಾಪನೆಯಾಗಿರುವ ಶಿವನನ್ನು “ಸುದ್ಧ ರತ್ನೇಶ್ವರರ್” ಎಂದು ತಮಿಳಿನಲ್ಲಿ ಕರೆಯುತ್ತಾರೆ. ಅಂದರೆ ಶುದ್ಧ ರತ್ನದ ಭಗವಂತ ಅಥವಾ ಈಶ್ವರ ಎಂದರ್ಥ. ಮಾಘ ಮಾಸ ಮತ್ತು ವೈಶಾಖ ಮಾಸದ ಮೂರು ದಿನ (12, 13, 14) ಇಲ್ಲಿ ಶಿವಲಿಂಗದ ಮೇಲೆ ನೇರವಾಗಿ ಸೂರ್ಯನ ಕಿರಣಗಳು ಬೀಳುತ್ತವೆ.

ಬ್ರಹ್ಮ ತೀರ್ಥ

ಶುದ್ಧ ರತ್ನೇಶ್ವರ ದೇಗುಲದ ಪ್ರಮುಖ ವೈಶಿಷ್ಟ್ಯವೆಂದರೆ ಇಲ್ಲಿರುವ ಬ್ರಹ್ಮ ತೀರ್ಥ. ಇದೊಂದು ಪವಿತ್ರ ತೀರ್ಥವಾಗಿದ್ದು, ಗರ್ಭಗುಡಿಯ ಮುಂದೆ ನೀರು ಚಿಲುಮೆಯಂತೆ ಉಕ್ಕುತ್ತದೆ. ಪ್ರಪಂಚದ ಎಲ್ಲಾ ಪವಿತ್ರ ನದಿಗಳ ನೀರನ್ನು ತೆಗೆದುಕೊಂಡು ಬ್ರಹ್ಮದೇವನು ಬ್ರಹ್ಮ ತೀರ್ಥವನ್ನು ನಿರ್ಮಿಸಿದನೆಂಬ ಪ್ರತೀತಿಯಿದೆ. ಇಲ್ಲಿ ನೀರು ಎಂದಿಗೂ ಬತ್ತುವುದಿಲ್ಲ. ಈ ಪವಿತ್ರ ತೀರ್ಥದ ನೀರನ್ನು ಅಭಿಷೇಕಕ್ಕಾಗಿ ತೆಗೆದುಕೊಳ್ಳಲಾಗುತ್ತದೆ. ಈ ನೀರು ಔಷಧೀಯ ಗುಣಗಳನ್ನು ಹೊಂದಿದ್ದು, ಹಲವು ಕಾಯಿಲೆಗಳನ್ನು ಗುಣಪಡಿಸುವ ಸಾಮರ್ಥ್ಯ ಹೊಂದಿದೆ ಎಂಬುದು ಜನರ ನಂಬಿಕೆ. ರಾಜರಾಜ ಚೋಳನಿಗೆ ಅನಾರೋಗ್ಯವಾದಾಗ ಈ ಬ್ರಹ್ಮತೀರ್ಥದ ನೀರನ್ನು ಸಿಂಪಡಿಸಿದರು. ನಂತರ ಆತ ಸಂಪೂರ್ಣವಾಗಿ ಗುಣಮುಖನಾದ ಎಂಬ ಕಥೆಯು ಚಾಲ್ತಿಯಲ್ಲಿದೆ.

ಶುದ್ಧ ರತ್ನೇಶ್ವರ ದೇವಾಲಯದ ವೈಶಿಷ್ಟ್ಯ

ಈ ದೇವಾಲಯದ ಪ್ರಮುಖ ವೈಶಿಷ್ಟ್ಯವೆಂದರೆ ಭಗವಾನ್ ನಟರಾಜ. ಮುಖ್ಯ ಗರ್ಭಗುಡಿಯ ಎಡಭಾಗದಲ್ಲಿ ನಟರಾಜನು ತನ್ನ ಪತ್ನಿ ಶಿವಗಾಮಿಯೊಂದಿಗೆ ಪ್ರತ್ಯೇಕ ಗರ್ಭಗುಡಿಯಲ್ಲಿರುವು ಕಂಡುಬರುತ್ತದೆ. ಇಲ್ಲಿ ನಟರಾಜನ ವಿಗ್ರಹವನ್ನು ವಿಶೇಷ ಶಿಲೆಯಿಂದ ಕೆತ್ತಲಾಗಿದೆ. ಸಾಮಾನ್ಯವಾಗಿ, ವಿಗ್ರಹಗಳನ್ನು ಐದು ವಿಧದ ಕಲ್ಲುಗಳಿಂದ ತಯಾರಿಸಲಾಗುತ್ತದೆ - ಆಲಿಂಗ ನಾದನಂ, ಪಂಚ ನಾದನಂ, ಸಿಂಗ ನಾದನಂ, ಯಾನೈ ನಾದನಂ ಮತ್ತು ಯಾಝಿ ನಾದನಂ.ಈ ಪಂಚನಾದನ ಶಿಲೆಗೆ ಸೂರ್ಯನ ಕಿರಣಗಳನ್ನು ಹೀರಿಕೊಳ್ಳುವ ಸಾಮರ್ಥ್ಯವಿದೆ ಎಂದು ಆಸ್ತಿಕರು ನಂಬುತ್ತಾರೆ.

ಕಿಡ್ನಿಗೆ ಸಂಬಂಧಿಸಿದ ಸಮಸ್ಯೆಯಿಂದ ಬಳಲುವವರು ಈ ದೇಗುಲದಲ್ಲಿ ಪೂಜೆ ಸಲ್ಲಿಸಿದರೆ ಸಂಪೂರ್ಣ ಗುಣಮುಖರಾಗುತ್ತಾರೆ ಎಂಬ ನಂಬಿಕೆ ಇದೆ. ನಟರಾಜನಿಗೆ 45 ಸಣ್ಣ ವೆಟ್ಟಿವರ್ (ಲಾವಂಚದ ಬೇರುಗಳು) ಕಟ್ಟುಗಳಿಂದ ಮಾಡಿದ ಮಾಲೆಯಿಂದ ಮಾಲೆಯನ್ನು ಮಾಡುತ್ತಾರೆ. ಬ್ರಹ್ಮ ತೀರ್ಥದ ನೀರಿನಿಂದ ಅಭಿಷೇಕವನ್ನು ಮಾಡುತ್ತಾರೆ. ನಂತರ ಈ ನೀರನ್ನು ಸಂಗ್ರಹಿಸಿ ಪೂಜೆ ಮಾಡಿಸಿದವರಿಗೆ ನೀಡಲಾಗುತ್ತದೆ. ಪ್ರತಿದಿನ ಒಂದೊಂದು ವೆಟ್ಟಿ ಅಥವಾ ಲಾವಂಚದ ಬೇರನ್ನು ಅದ್ದಿ 45 ದಿನಗಳ ಕಾಲ ನೀರನ್ನು ಸೇವಿಸುವುದರಿಂದ ರೋಗಿಗಳು ತಮ್ಮ ಕಾಯಿಲೆಗಳಿಂದ ಸಂಪೂರ್ಣವಾಗಿ ಮುಕ್ತರಾಗುತ್ತಾರೆ ಎನ್ನುವುದು ಪ್ರತೀತಿ.

ಬ್ರಹ್ಮ ತೀರ್ಥವು ಉದ್ಭವವಾದದ್ದು ಹೀಗೆ

ಒಮ್ಮೆ ವಿಷ್ಣು ಹಾಗೂ ಬ್ರಹ್ಮನಿಗೆ ತಮ್ಮಿಬ್ಬರ ನಡುವೆ ಯಾರು ಶ್ರೇಷ್ಠರು ಎಂದು ವಿಚಾರಕ್ಕೆ ವಾದ ನಡೆಯಿತು. ಆದರೆ ಇಬ್ಬರೂ ತಾನೇ ಶ್ರೇಷ್ಠ ಎಂದು ಹೇಳಿದಾಗ ಅದನ್ನು ನಿರ್ಧಾರ ಮಾಡಲು ಋಷಿಗಳು ಒಂದು ತಂತ್ರ ಮಾಡುತ್ತಾರೆ. ಶಿವನು ಸ್ಥಾಣು (ಕಂಬ) ಆಗುತ್ತಾನೆ. ಅವನ ತಲೆಯನ್ನು ಒಬ್ಬರು, ಪಾದವನ್ನು ಮತ್ತೊಬ್ಬರು ಕಂಡು ಹಿಡಿಯಬೇಕು ಎಂದು ಸೂಚಿಸುತ್ತಾರೆ. ಬ್ರಹ್ಮನು ಹಂಸದ ರೂಪ ತಾಳಿ ಶಿವನ ತಲೆ ಮೇಲ್ಘಾಗ ಅಂದರೆ ನೆತ್ತಿಯನ್ನು ಹುಡುಕಲು ಹೋಗುತ್ತಾನೆ. ವಿಷ್ಣುವು ವರಾಹ (ಹಂದಿಯ) ರೂಪ ತಾಳಿ ಶಿವನ ಪಾದಗಳನ್ನು ಹುಡುಕಲು ನೆಲ ಅಗೆಯಲು ಆರಂಭಿಸುತ್ತಾನೆ. ಎಷ್ಟು ಆಳಕ್ಕೆ ಹೋದರೂ ಹಂದಿ ರೂಪದಲ್ಲಿರುವ ವಿಷ್ಣುವಿಗೆ ಪಾದ ಕಾಣಿಸುವುದಿಲ್ಲ.

ಇತ್ತ ಬ್ರಹ್ಮ ಹಂಸದ ರೂಪದಲ್ಲಿ ಮೇಲೆ ಸಾಗುವಾಗ ಶಿವನ ತಲೆಯಿಂದ ಬಿದ್ದ ಕೇದಿಗೆ ಹೂ ಸಿಗುತ್ತದೆ. ಆಗ ಬ್ರಹ್ಮ ತಾನು ಶಿವನ ತಲೆ ನೋಡಿದ್ದೇನೆ ಎಂದರೆ ನೀವು ಸಾಕ್ಷಿ ಹೇಳುತ್ತೀಯಾ ಎಂದು ಹೂವಿನ ಬಳಿ ಕೇಳುತ್ತಾನೆ. ಇದಕ್ಕೆ ಕೇದಿಗೆ ಹೂ ಒಪ್ಪುತ್ತದೆ. ಆಗ ಬ್ರಹ್ಮ ತಾನು ಶಿವನ ತಲೆ ನೋಡಿದೆ ನಾನೇ ಶ್ರೇಷ್ಠ ಎಂದು ಹೇಳುತ್ತಾನೆ. ವಿಷ್ಣು ವಿನಮ್ರನಾಗಿ ತನ್ನ ಸೋಲನ್ನು ಒಪ್ಪಿಕೊಳ್ಳುತ್ತಾನೆ. ಸುಳ್ಳು ಸಾಕ್ಷಿ ಸೃಷ್ಟಿಸಿದ ಬ್ರಹ್ಮನ ಮೇಲೆ ಕೋಪಗೊಳ್ಳುವ ಈಶ್ವರ ಬ್ರಹನಿಗೆ ಎಲ್ಲಿಯೂ ಪ್ರತ್ಯೇಕ ದೇವಾಲಯ ಇರಬಾರದು ಹಾಗೂ ಶಿವನ ಪೂಜೆಗೆ ಕೇದಿಗೆ ಹೂ ಇರಬಾರದು ಎಂದು ಶಾಪ ನೀಡುತ್ತಾನೆ.

ಆಗ ಬ್ರಹ್ಮನು ಶಿವನ ಬಳಿ ಕ್ಷಮೆಯಾಚಿಸಿ, ತನಗೆ ಶಾಪದಿಂದ ಮುಕ್ತಿ ಕೊಡು ಎಂದು ಕೇಳಿಕೊಳ್ಳುತ್ತಾನೆ. ಆಗ ಶಿವ ಬ್ರಹ್ಮನಲ್ಲಿ ಪ್ರಪಂಚದಲ್ಲಿರುವ ಎಲ್ಲಾ ಪವಿತ್ರ ನದಿಗಳ ನೀರನ್ನು ತಂದು ಪೂಜೆ ಮಾಡುವಂತೆ ಹೇಳುತ್ತಾನೆ. ಆ ಸಂದರ್ಭದಲ್ಲಿ ಬ್ರಹ್ಮನು ಊಟತ್ತೂರಿಗೆ ಬಂದು ನೀರಿನ ಬುಗ್ಗೆ ಸೃಷ್ಟಿಸುತ್ತಾನೆ. ಶಿವನ ಆಲಯದ ಮುಂದೆ ಬ್ರಹ್ಮ ಸೃಷ್ಟಿಸಿದ ನೀರಿನ ಚಿಲುಮೆಯೇ ಈ ಬ್ರಹ್ಮ ತೀರ್ಥ. ಇಂದಿಗೂ ಈ ದೇವಾಲಯದಲ್ಲಿ ರತ್ನೇಶ್ವರ ದೇವರಿಗೆ ಅಭಿಷೇಕ ಮಾಡಲು ಬ್ರಹ್ಮತೀರ್ಥ ನೀರನ್ನೇ ಬಳಸಲಾಗುತ್ತಿದೆ. ಎಲ್ಲಾ ದೇವಸ್ಥಾನಗಳಲ್ಲೂ ನಂದಿಯು ಶಿವನಿಗೆ ಎದುರು ಮುಖವಾಗಿದ್ದರೆ ಈ ದೇವಸ್ಥಾನದಲ್ಲಿ ನಂದಿಯು ಪೂರ್ವಕ್ಕೆ ಮುಖ ಮಾಡಿರುವುದು ವಿಶೇಷ.

ಶುದ್ಧ ರತ್ನೇಶ್ವರ ದೇಗುಲಕ್ಕೆ ಹೋಗುವ ಮಾರ್ಗ

ಈ ದೇವಾಲಯವು ಅಂದರೆ ಊಟತ್ತೂರ್ ಹಳ್ಳಿಯು ತಿರುಚ್ಚಿಯಿಂದ 35ಕಿಲೋಮೀಟರ್ ದೂರದಲ್ಲಿದೆ. ಪಡಲೂರಿನಿಂದ 5 ಕಿಲೋಮೀಟರ್ ದೂರದಲ್ಲಿದೆ. ಬೆಂಗಳೂರಿನಿಂದ ತಿರುಚ್ಚಿಗೆ ಬಸ್‌, ರೈಲು, ವಿಮಾನ, ಟ್ಯಾಕ್ಸಿ ಅಥವಾ ನಿಮ್ಮ ಸ್ವಂತ ವಾಹನದಲ್ಲಿ ಪ್ರಯಾಣ ಮಾಡಬಹುದು. ಈ ದೇವಾಲಯವು ಬೆಂಗಳೂರಿನಿಂದ 359 ಕಿಲೋಮೀಟರ್ ದೂರದಲ್ಲಿದೆ. ಗೂಗಲ್ ರೂಟ್‌ ಮ್ಯಾಪ್‌ಗಾಗಿ ಇಲ್ಲಿ ಕ್ಲಿಕ್ ಮಾಡಿ.

ದೇಗುಲ ದರ್ಶನ ಸಮಯ: ಬೆಳಿಗ್ಗೆ 5 ರಿಂದ 12.30 ಹಾಗೂ ಸಂಜೆ 4 ರಿಂದ 8.30 ರವರೆಗೆ ಈ ದೇವಸ್ಥಾನ ತೆರೆದಿರುತ್ತದೆ.

(ಗಮನಿಸಿ: ಇದು ನಂಬಿಕೆ ಮತ್ತು ಪ್ರಚಲಿತ ಕಥೆಗಳನ್ನು ಆಧರಿಸಿದ ಬರಹ. ಇಲ್ಲಿರುವ ಯಾವ ಸಂಗತಿಯನ್ನೂ 'ಹಿಂದೂಸ್ತಾನ್ ಟೈಮ್ಸ್‌ ಕನ್ನಡ' ಜಾಲತಾಣದ ಸಿಬ್ಬಂದಿ ಪುಷ್ಟೀಕರಿಸುವುದೂ ಇಲ್ಲ, ನಿರಾಕರಿಸುವುದೂ ಇಲ್ಲ. ಓದುಗರಿಗೆ ಮಾಹಿತಿ ಕೊಡುವ ಉದ್ದೇಶದಿಂದ ಈ ಬರಹ ಪ್ರಕಟಿಸಲಾಗಿದೆ.)

ದೇವಾಲಯಗಳು, ಅಧ್ಯಾತ್ಮ, ದಿನ ಭವಿಷ್ಯ, ಗ್ರಹಗಳ ಸಂಚಾರ, ವಾಸ್ತು ಶಾಸ್ತ್ರ, ಪೂಜಾ ವಿಧಾನ, ವ್ರತ ವಿಧಾನ, ಹಬ್ಬ, ಸಂಸ್ಕೃತಿ, ಭಗವದ್ಗೀತೆ ಸೇರಿದಂತೆ ಜ್ಯೋತಿಷ್ಯಕ್ಕೆ ಸಂಬಂಧಿಸಿದ ಸಮಗ್ರ ಮಾಹಿತಿಗಾಗಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ರಾಶಿ ಭವಿಷ್ಯ ವಿಭಾಗ ನೋಡಿ.