ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ; 46 ಕಿಮೀ ಅವಳಿ ಸುರಂಗ ಮಾರ್ಗ, 125 ಕಿಮೀ ಫ್ಲೈಓವರ್ ನಿರ್ಮಾಣ ಕಾರ್ಯಸಾಧ್ಯತಾ ವರದಿಯ 5 ಮುಖ್ಯ ಅಂಶಗಳು
Bengaluru Tunnel Road: ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆಗೆ ಸಂಬಂಧಿಸಿ ನಿನ್ನೆ ಆಲ್ಟಿನೋಕ್ ಕಂಪನಿ ಕಾರ್ಯಸಾಧ್ಯತಾ ವರದಿಯನ್ನು ಬಿಬಿಎಂಪಿಗೆ ಸಲ್ಲಿಸಿದೆ. ಇದರಲ್ಲಿ 46 ಕಿಮೀ ಅವಳಿ ಸುರಂಗ ಮಾರ್ಗ, 125 ಕಿಮೀ ಫ್ಲೈಓವರ್ ನಿರ್ಮಾಣ ಕಾರ್ಯಸಾಧ್ಯತೆ ಅಂಶಗಳಿದ್ದು, ವರದಿಯ 5 ಮುಖ್ಯ ಅಂಶಗಳ ವಿವರ ಇಲ್ಲಿದೆ.
Bengaluru Tunnel Road: ಬೆಂಗಳೂರು ಸಂಚಾರ ದಟ್ಟಣೆ ನಿರ್ವಹಣೆಗಾಗಿ ಮೂಲಸೌಕರ್ಯ ಅಭಿವೃದ್ಧಿ ಪಡಿಸುವ ಮಹತ್ವ ಯೋಜನೆಗೆ ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ ಮುಂದಾಗಿದೆ. ಈ ಹಿನ್ನೆಲೆಯಲ್ಲಿ ಈಗಾಗಲೇ ಅವಳಿ ಸುರಂಗ ಮಾರ್ಗ ನಿರ್ಮಿಸುವ ಮಹತ್ವಾಕಾಂಕ್ಷೆಯ ಯೋಜನೆಯನ್ನು ಪ್ರಕಟಿಸಿರುವ ಸರ್ಕಾರ, ಕಾರ್ಯಸಾಧ್ಯತಾ ವರದಿ ಸಲ್ಲಿಸಲು ಸೂಚಿಸಿತ್ತು. ಇದರಂತೆ, ಆಲ್ಟಿನೋಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಕಂಪನಿ ನಿನ್ನೆ (ಡಿಸೆಂಬರ್ 20) ಕಾರ್ಯಸಾಧ್ಯತಾ ವರದಿಯನ್ನು ಸಲ್ಲಿಸಿದೆ. ಇದು 54,964 ಕೋಟಿ ರೂಪಾಯಿ ಯೋಜನಾ ವೆಚ್ಚವನ್ನು ಉಲ್ಲೇಖಿಸಿದೆ.
ಬೆಂಗಳೂರು ಸಮಗ್ರ ಸಂಚಾರ ನಿರ್ವಹಣೆ; ಕಾರ್ಯಸಾಧ್ಯತಾ ವರದಿಯ 4 ಮುಖ್ಯ ಅಂಶಗಳು
ಬೆಂಗಳೂರಿನಲ್ಲಿ ರಸ್ತೆ ಮೂಲಸೌಕರ್ಯ ಯೋಜನೆಗಳ ಅನುಷ್ಠಾನಕ್ಕೆ ಒಟ್ಟು 54,964 ಕೋಟಿ ರೂಪಾಯಿ ವೆಚ್ಚದ ಕಾರ್ಯಸಾಧ್ಯತಾ ವರದಿಯನ್ನು ಆಲ್ಟಿನೋಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಕಂಪನಿ ನಿನ್ನೆ ಬಿಬಿಎಂಪಿಗೆ ಸಲ್ಲಿಸಿದೆ. ಇದರಂತೆ, 46 ಕಿಲೋಮೀಟರ್ ಅವಳಿ ಸುರಂಗ ರಸ್ತೆಗಳು, 124.7 ಕಿಮೀ ಎತ್ತರದ ಕಾರಿಡಾರ್‌ಗಳು, ಡಬಲ್ ಡೆಕ್ಕರ್‌ಗಳು ಮತ್ತು ಅಂಡರ್‌ಪಾಸ್‌ಗಳು ಬೆಂಗಳೂರು ಮಹಾನಗರ ಪಾಲಿಕೆಯ ಸಮಗ್ರ ಸಂಚಾರ ನಿರ್ವಹಣೆ ಮೂಲಸೌಕರ್ಯ ಯೋಜನೆಯಲ್ಲಿ ಸೇರಿವೆ.
1) ಆಲ್ಟಿನೋಕ್ ಕನ್ಸಲ್ಟಿಂಗ್ ಇಂಜಿನಿಯರಿಂಗ್ ಕಂಪನಿ ವರದಿ ಪ್ರಕಾರ, ಎಂಇಐ ಜಂಕ್ಷನ್‌ನಲ್ಲಿ ಸ್ಪ್ಲಿಟ್ ಫ್ಲೈಓವರ್, ಅಡ್ಯಾರ್ ಆನಂದ ಭವನದಲ್ಲಿನ ಫ್ಲೈಓವರ್, ರಘುವನಹಳ್ಳಿ, ಕನಕಪುರ ರಸ್ತೆ, ಆನಂದ ರಾವ್ ವೃತ್ತದ ಮೇಲ್ಸೇತುವೆ ಕೆ.ಆರ್.ವೃತ್ತದವರೆಗೆ ಮುಂದುವರಿಕೆ, ನೃಪತುಂಗ ರಸ್ತೆಯ ಕಡೆಗೆ, ಟ್ಯಾನರಿ ರಸ್ತೆಯ ಉದ್ದಕ್ಕೂ ಎಲಿವೇಟೆಡ್ ಕಾರಿಡಾರ್ ಮಾಧವ ಮುದಲಿಯಾರ್ ರಸ್ತೆಯಿಂದ ನಾಗವಾರ ಜಂಕ್ಷನ್, ಉತ್ತರ-ದಕ್ಷಿಣ, ಪೂರ್ವ-ಪಶ್ಚಿಮ ಸುರಂಗ ರಸ್ತೆ ಕಾರಿಡಾರ್‌ಗಳು ಮತ್ತು ಇತರೆ ಸೇರಿ ಒಟ್ಟು 20 ಪ್ರಸ್ತಾವಿತ ರಸ್ತೆ ಮೂಲಸೌಕರ್ಯ ಯೋಜನೆಗಳ ಕಾರ್ಯಸಾಧ್ಯತೆಯ ಅಧ್ಯಯನ ನಡೆಸಲಾಗಿದೆ.
2) 124.7-ಕಿಮೀ ರಸ್ತೆ ವಿಸ್ತರಣೆ, ಎಲಿವೇಟೆಡ್ ಕಾರಿಡಾರ್‌ಗಳು, ಡಬಲ್ ಡೆಕ್ಕರ್‌ಗಳು, ಅಂಡರ್‌ಪಾಸ್‌ಗಳ ವೆಚ್ಚ 14,964 ಕೋಟಿ ರೂಪಾಯಿ ಎಂದು ಅಂದಾಜಿಸಲಾಗಿದೆ. ಇದರ ಜತೆಗೆ 46 ಕಿಮೀ ಸುರಂಗ ರಸ್ತೆ ಯೋಜನೆಯ ಅಂದಾಜು ವೆಚ್ಚ 40,000 ಕೋಟಿ ರೂಪಾಯಿ ಎಂದು ಕಾರ್ಯಸಾಧ್ಯತಾ ವರದಿ ಹೇಳಿದೆ.
3) ಉತ್ತರ-ದಕ್ಷಿಣ ಮತ್ತು ಪೂರ್ವ-ಪಶ್ಚಿಮ ಎರಡೂ ಸುರಂಗ ಯೋಜನೆಗಳಿಗೆ ಪ್ರತಿ ಕಿಲೋಮೀಟರ್‌ಗೆ 889 ಕೋಟಿ ರೂಪಾಯಿ ಅಂದಾಜು ವೆಚ್ಚ, ಸುರಂಗ ರಸ್ತೆಗಳಲ್ಲದೆ ಕೆ.ಆರ್ ಪುರಂ ಮತ್ತು ಯಶವಂತಪುರ ನಡುವಿನ 27 ಕಿ.ಮೀ.ರಸ್ತೆ ಅಗಲಗೊಳಿಸುವ ಯೋಜನೆಗೆ ಅಂದಾಜು ವೆಚ್ಚ 3,240 ಕೋಟಿ ರೂಪಾಯಿ ಎಂದು ವರದಿ ಅಂದಾಜಿಸಿದೆ.
4) ಹಡ್ಸನ್ ವೃತ್ತದಿಂದ ಮಿನರ್ವ ವೃತ್ತದವರೆಗಿನ 2.7 ಕಿಮೀ ಸಮಗ್ರ ಎತ್ತರದ ಯೋಜನೆಗೆ ಅಂದಾಜು ವೆಚ್ಚ 324 ಕೋಟಿ ರೂಪಾಯಿ, ಆನಂದ ರಾವ್ ಸರ್ಕಲ್ ಮೇಲ್ಸೇತುವೆಯ ಮುಂದುವರಿಕೆ ಪ್ರಸ್ತಾವಿತ ಕೆ.ಆರ್. ಸರ್ಕಲ್ ಅಂದಾಜು ವೆಚ್ಚ 204 ಕೋಟಿ ರೂಪಾಯಿ, ಆನೆಪಾಳ್ಯ ಜಂಕ್ಷನ್‌ನಿಂದ ಸಿಲ್ಕ್ ಬೋರ್ಡ್ ಜಂಕ್ಷನ್‌ವರೆಗೆ 7.4 ಕಿಮೀ ಉದ್ದೇಶಿತ ಚತುಷ್ಪಥ, ದ್ವಿಮುಖ ಎಲಿವೇಟೆಡ್ ವಿಭಜಿತ ರಚನೆಯು 888 ಕೋಟಿ ರೂಪಾಯಿ, ಶಿರಸಿ ವೃತ್ತದಿಂದ ನಾಯಂಡಹಳ್ಳಿವರೆಗಿನ 3.5 ಕಿ.ಮೀ ಉದ್ದದ ಎಲಿವೇಟೆಡ್ ಕಾರಿಡಾರ್‌ಗೆ ಅಂದಾಜು ವೆಚ್ಚ 420 ಕೋಟಿ ರೂಪಾಯಿ ಎಂದು ಕಾರ್ಯಸಾಧ್ಯತಾ ವರದಿ ವಿವರಿಸಿದೆ.
5) ಮೊದಲ ಹಂತದಲ್ಲಿ ಕೈಗೆತ್ತಿಕೊಳ್ಳಲಿರುವ ಉತ್ತರ-ದಕ್ಷಿಣ ಸುರಂಗ ಮಾರ್ಗ (ಹೆಬ್ಬಾಳದಿಂದ ಸಿಲ್ಕ್ ಬೋರ್ಡ್) ಈಗ ಇರುವಂತಹ ಪ್ರಯಾಣದ ಸಮಯವನ್ನು 90 ನಿಮಿಷಗಳಿಂದ 20 ನಿಮಿಷಗಳಿಗೆ ಇಳಿಸುವ ನಿರೀಕ್ಷೆಯಿದೆ.
ಕಾರ್ಯಸಾಧ್ಯತಾ ವರದಿ; ಬಿಬಿಎಂಪಿ ಚಿಂತನೆ ಏನು
ಅವಳಿ-ಸುರಂಗ ಮಾರ್ಗ ಯೋಜನೆಗಾಗಿ ₹19,000 ಸಾಲವನ್ನು ಪಡೆಯಲು ನಾಗರಿಕ ಸಂಸ್ಥೆ ಯೋಜಿಸುತ್ತಿದೆ. ಇದಕ್ಕೆ ಪೂರಕವಾಗಿ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ)ವು ವಸತಿ ಮತ್ತು ನಗರಾಭಿವೃದ್ಧಿ ನಿಗಮ ನಿಯಮಿತ (ಹುಡ್ಕೊ) ನಿಂದ 73 ಕಿಮೀ ಉದ್ದದ ಪೆರಿಫೆರಲ್ ರಿಂಗ್ ರೋಡ್ (ಪಿಆರ್‌ಆರ್) ನಿರ್ಮಾಣಕ್ಕಾಗಿ ಸಾಲವನ್ನು ಪಡೆಯಲಿದೆ ಎಂದು ಬಿಬಿಎಂಪಿ ಮೂಲಗಳು ತಿಳಿಸಿವೆ ಎಂದು ಹಿಂದೂ ವರದಿ ಮಾಡಿದೆ. ಇದೇ ವೇಳೆ, ಬೆಂಗಳೂರು ಸಮಗ್ರ ಸಂಚಾರ ನಿರ್ವಹಣಾ ಮೂಲಸೌಕರ್ಯ ಅಭಿವೃದ್ಧಿ ವಿಚಾರ ಸಾರ್ವಜನಿಕವಾಗಿ ವ್ಯಾಪಕ ಚರ್ಚೆಗೆ ಒಳಗಾಗಿದೆ. ಇದು ಟೀಕೆಗಳನ್ನೂ ಎದುರಿಸುತ್ತಿದ್ದು, ಸುರಂಗ ಮಾರ್ಗ ಬೇಕಾಗಿಲ್ಲ ಎಂಬ ಮಾತು ಕೇಳತೊಡಗಿದೆ. ಅದರ ಬದಲು ಈಗ ಇರುವ ವ್ಯವಸ್ಥೆಯಲ್ಲೆ ಜನರು ಸಾರ್ವಜನಿಕ ಸಾರಿಗೆ ಬಳಸುವಂತೆ ಮಾಡಬೇಕು. ಅದಕ್ಕೆ ಕ್ರಮ ತಗೊಳ್ಳಿ ಎಂಬ ಆಗ್ರಹ ವ್ಯಕ್ತವಾಗಿದೆ.