ಕನ್ನಡ ಸುದ್ದಿ  /  ರಾಶಿ ಭವಿಷ್ಯ  /  ಸಂಬಂಧದಲ್ಲಿ ಆಗ್ಗಾಗ್ಗೆ ಮನಸ್ತಾಪ ಉಂಟಾಗುತ್ತಿದ್ರೆ ಫೆಂಗ್‌ ಶೂಯಿ ಟಿಪ್ಸ್‌ ಅನುಸರಿಸಿ, ಸಮಸ್ಯೆಯಿಂದ ಹೊರ ಬನ್ನಿ

ಸಂಬಂಧದಲ್ಲಿ ಆಗ್ಗಾಗ್ಗೆ ಮನಸ್ತಾಪ ಉಂಟಾಗುತ್ತಿದ್ರೆ ಫೆಂಗ್‌ ಶೂಯಿ ಟಿಪ್ಸ್‌ ಅನುಸರಿಸಿ, ಸಮಸ್ಯೆಯಿಂದ ಹೊರ ಬನ್ನಿ

ನಿಜವಾದ ಪ್ರೀತಿ ಸಿಗುವುದು ಅಷ್ಟು ಸುಲಭವಲ್ಲ. ಒಂದು ವೇಳೆ ಪ್ರೀತಿಯಿದ್ದರೂ ಚಿಕ್ಕಪುಟ್ಟ ಮನಸ್ತಾಪದಿಂದ ಸಂಬಂಧದಲ್ಲಿ ಬಿರುಕು ಮೂಡುತ್ತದೆ. ಹಾಗಾಗಿ ನಿಜವಾದ ಪ್ರೀತಿ ಮತ್ತು ಸಂಬಂಧದಲ್ಲಿರುವ ಸಮಸ್ಯೆಗಳನ್ನು ತೊಡೆದುಹಾಕಲು ಫೆಂಗ್‌ ಶೂಯಿ ಸಲಹೆಗಳನ್ನು ಪಾಲಿಸಿ. (ಬರಹ: ಅರ್ಚನಾ ವಿ. ಭಟ್‌)

ಸಂಬಂಧದಲ್ಲಿ ಆಗ್ಗಾಗ್ಗೆ ಮನಸ್ತಾಪ ಉಂಟಾಗುತ್ತಿದ್ರೆ ಫೆಂಗ್‌ ಶೂಯಿ ಟಿಪ್ಸ್‌ ಅನುಸರಿಸಿ, ಸಮಸ್ಯೆಯಿಂದ ಹೊರ ಬನ್ನಿ
ಸಂಬಂಧದಲ್ಲಿ ಆಗ್ಗಾಗ್ಗೆ ಮನಸ್ತಾಪ ಉಂಟಾಗುತ್ತಿದ್ರೆ ಫೆಂಗ್‌ ಶೂಯಿ ಟಿಪ್ಸ್‌ ಅನುಸರಿಸಿ, ಸಮಸ್ಯೆಯಿಂದ ಹೊರ ಬನ್ನಿ

ಸಂಬಂಧಗಳಲ್ಲಿ ಪ್ರೀತಿಯ ಕೊರತೆಯಾದಾಗ ಸಮಸ್ಯೆಗಳು ಉದ್ಭವಿಸುತ್ತದೆ. ಅದು ನಕಾರಾತ್ಮಕ ಆಲೋಚನೆಗಳನ್ನು ಸಹ ಸೃಷ್ಟಿ ಮಾಡುತ್ತದೆ. ಜೀವನದಲ್ಲಿ ಸಂತೋಷವಾಗಿರಲು ಸುತ್ತಲಿನ ಪರಿಸರವೂ ಅಷ್ಟೇ ಕಾರಣವಾಗಿದೆ ಎಂದು ಫೆಂಗ್‌ ಶೂಯಿ ಶಾಸ್ತ್ರ ಹೇಳುತ್ತದೆ. ನೀವು ವಾಸಿಸುವ ಪರಿಸರ ಬಹಳ ಮಹತ್ವದ್ದಾಗಿದೆ. ಅದು ಸುಂದರವಾಗಿದ್ದರೆ ಸಂಗಾತಿ ನಡುವೆ ಪ್ರೀತಿ ಹೆಚ್ಚುತ್ತದೆ ಎಂದು ಹೇಳುತ್ತದೆ. ನಿಜವಾದ ಪ್ರೀತಿಯನ್ನು ಆಕರ್ಷಿಸಲು ಮತ್ತು ಸಂಬಂಧಗಳ ನಡುವೆ ಇರುವ ಸಮಸ್ಯೆಗಳನ್ನು ಸುಧಾರಿಸಲು ಫೆಂಗ್‌ ಶೂಯಿ ಹೇಳಿದ ಈ 7 ಸಲಹೆಗಳನ್ನು ಪಾಲಿಸಿ.

1) ಕೆಂಪು ಮತ್ತು ಗುಲಾಬಿ ಬಣ್ಣ ಬಳಸಿ

ಫೆಂಗ್‌ ಶೂಯಿಯಲ್ಲಿ ಬಣ್ಣಗಳು ಮಹತ್ವದ ಪಾತ್ರವಹಿಸುತ್ತವೆ. ಗುಲಾಬಿ ಮತ್ತು ಕೆಂಪು ಬಣ್ಣಗಳು ರೊಮ್ಯಾನ್ಸ್‌ ಮತ್ತು ಉತ್ಸಾಹಕ್ಕೆ ಸಂಬಂಧಿಸಿದೆ. ನಿಮ್ಮ ಕೋಣೆಯ ರೊಮ್ಯಾಂಟಿಕ್‌ ವಾತಾವರಣವನ್ನು ಹೆಚ್ಚಿಸಲು ಒಳಾಂಗಣದ ವಿನ್ಯಾಸಕ್ಕೆ ಈ ಬಣ್ಣವನ್ನು ಬಳಸಿ. ದಿಂಬು, ಪರದೆ, ಕಲಾಕೃತಿಗಳು ಮುಂತಾದ ಅಲಂಕಾರಿಕ ವಸ್ತುಗಳನ್ನು ಸಹ ಕೆಂಪು ಮತ್ತು ಗುಲಾಬಿ ಬಣ್ಣವನ್ನೇ ಆಯ್ದುಕೊಳ್ಳಿ.

2) ಪ್ರೀತಿಯ ಚಿಹ್ನೆ ಬಳಸಿ

ನಿಮ್ಮ ಸಂಬಂಧವನ್ನು ಬಲಪಡಿಸಿಕೊಳ್ಳಲು ರೊಮ್ಯಾಂಟಿಕ್‌ ಚಿಹ್ನೆಗಳಿರುವ ವಸ್ತುಗಳನ್ನು ಬಳಸಿ. ಹಾರ್ಟ್‌ ಸಿಂಬಲ್‌ ಇರುವ ವಸ್ತುಗಳಿಂದ ಮನೆಯನ್ನು ಅಲಂಕರಿಸಿ. ಜೊತೆಗೆ ಸಂತೋಷದಿಂದಿರುವ ಸಂಗಾತಿಯ ಫೋಟೋ ಮತ್ತು ಆರ್ಟ್‌ವರ್ಕ್‌ಗಳನ್ನು ಗೋಡೆಯ ಮೇಲೆ ಹಾಕಿ. ಇವೆಲ್ಲವುಗಳು ನಿಮ್ಮ ಉದ್ದೇಶವನ್ನು ಆಗಾಗ ನೆನಪಿಸುತ್ತಿರುತ್ತವೆ. ಅದು ಆರೋಗ್ಯಕರ ವಾತಾವರಣವನ್ನು ನಿರ್ಮಿಸಿ ರೊಮ್ಯಾಂಟಿಕ್‌ ಆಗಿರಲು ಪ್ರೋತ್ಸಾಹಿಸುತ್ತದೆ.

3) ಮನೆಯ ಮುಂಬಾಗಿಲು ಆಕರ್ಷಕವಾಗಿರಲಿ

ಮನೆಯ ಒಳಗೆ ಸಂತೋಷದ ವಾತಾವರಣವಿರಬೇಕೆಂದರೆ ಮೊದಲು ಮನೆಯ ಮುಂಭಾಗ ಚೆನ್ನಾಗಿ ಕಾಣುವಂತಿರಬೇಕು. ಅದು ಸಕಾರಾತ್ಮಕ ಶಕ್ತಿಯನ್ನು ಆಹ್ವಾನಿಸುವಂತಿರಬೇಕು. ಪ್ರವೇಶದ್ವಾರ ಆಕರ್ಷಕವಾಗಿದ್ದು ಸಂತೋಷ ನೀಡುವಂತಿದ್ದರೆ ಜೀವನದಲ್ಲಿ ಪ್ರೀತಿ ಪ್ರವೇಶಿಸಲು ದಾರಿ ನಿರ್ಮಿಸಿದಂತೆ ಎಂದು ಫೆಂಗ್‌ ಶೂಯಿ ಶಾಸ್ತ್ರ ಹೇಳುತ್ತದೆ. ಅದಕ್ಕಾಗಿ ಸುಂದರ ಡೋರ್‌ಮ್ಯಾಟ್‌, ಆಕರ್ಷಕ ಕಲಾಕೃತಿಗಳು, ಸುಂದರ ಸಸ್ಯಗಳು, ಕಣ್ಮನ ಸೆಳೆಯುವ ಲೈಟಿಂಗ್‌ನಿಂದ ಮನೆಯ ಮುಂದಿನ ಭಾಗವನ್ನು ವಿನ್ಯಾಸ ಮಾಡಬಹುದು.

4) ಒಂದೇ ರೀತಿಯ ಜೋಡಿ ವಸ್ತುಗಳನ್ನು ಬಳಸಿ

ಫೆಂಗ್‌ ಶೂಯಿ ಸಂಕೇತಗಳಿಗೆ ಹೆಚ್ಚು ಒತ್ತುನೀಡುತ್ತದೆ. ಪ್ರೀತಿಯನ್ನು ಆಕರ್ಷಿಸಲು ನಿಮ್ಮ ಮನೆಯಲ್ಲಿ ಒಂದೇ ರೀತಿಯ ಜೋಡಿ ವಸ್ತುಗಳನ್ನು ಬಳಸಿ. ಅಂದರೆ ಕುರ್ಚಿ, ಹಾಸಿಗೆ, ಅಲಂಕಾರಿಕ ವಸ್ತು, ಕಪಲ್‌ ವಾಚ್‌ ಮುಂತಾದವುಗಳು ಒಂದೇ ರೀತಿಯಾಗಿದ್ದರೆ ಅದು ಜೀವನದಲ್ಲಿ ಪ್ರೀತಿ ಹೆಚ್ಚುವಂತೆ ಮಾಡುತ್ತದೆ ಎಂದು ಫೆಂಗ್‌ ಶೂಯಿ ಹೇಳುತ್ತದೆ. ಜೋಡಿ ವಸ್ತುಗಳು ಸಂಗಾತಿಗಳಲ್ಲಿ ಪ್ರೀತಿಯಿರುವುದನ್ನು ತೋರಿಸುತ್ತದೆ. ನಿಮ್ಮ ಪ್ರೀತಿಯ ಸಂಗಾತಿಗಾಗಿ ಅಲಂಕಾರಿಕ ದೀಪಗಳಿಂದ ಕೋಣೆಯನ್ನು ಅಲಂಕರಿಸಬಹುದು.

5) ತಾಜಾ ಹೂವು ಮತ್ತು ಗಿಡಗಳನ್ನು ಬಳಸಿ

ಹೂವುಗಳು ಪ್ರೀತಿಯನ್ನು ವ್ಯಕ್ತಪಡಿಸುವ ಮತ್ತೊಂದು ಬಗೆಯಾಗಿದೆ. ಸುಂದರ ತಾಜಾ ಹೂವುಗಳು ನೀವೆಷ್ಟು ರೊಮ್ಯಾಂಟಿಕ್‌ ಅನ್ನುವುದನ್ನು ಹೇಳುತ್ತದೆ. ಮತ್ತು ನಿಮ್ಮ ನಡುವೆ ಪ್ರೀತಿಯನ್ನು ಹೆಚ್ಚಿಸುತ್ತದೆ. ಮನೆ ಅಥವಾ ನಿಮ್ಮ ಕೋಣೆಯನ್ನು ಸಿಂಗರಿಸಲು ಗುಲಾಬಿ, ಪಿಯೋನಿಸ್‌ ಮತ್ತುಆರ್ಕಿಡ್‌ಗಳನ್ನು ಬಳಸಿಕೊಳ್ಳಿ. ಇದು ಸಂಗಾತಿಗಳ ನಡುವೆ ಸ್ನೇಹ ಮತ್ತು ಪ್ರೀತಿಯ ವಾತಾವರಣವನ್ನು ಹೆಚ್ಚಿಸಲು ನಿಮಗೆ ಸಹಾಯ ಮಾಡುತ್ತದೆ. ಅವು ಚೈತನ್ಯ ನೀಡುವುದರ ಜೊತೆಗೆ ನಿಮ್ಮ ಕೋಣೆ ಅಥವಾ ಮನೆಯಲ್ಲಿ ಶಕ್ತಿಯನ್ನು ಹೆಚ್ಚಿಸುತ್ತದೆ ಎಂದು ಫೆಂಗ್‌ ಶೂಯಿ ಹೇಳುತ್ತದೆ.

6) ಧನಾತ್ಮಕ ಅಂಶಗಳನ್ನು ಹೆಚ್ಚಿಸಿಕೊಳ್ಳಿ

ಫೆಂಗ್ ಶೂಯಿ ಸಲಹೆಗಳನ್ನು ಪಾಲಿಸುವುದರಿಂದ ಜೀವನದಲ್ಲಿ ಪ್ರೀತಿ ಮತ್ತು ಉತ್ಸಾಹವನ್ನು ಹೆಚ್ಚಿಸಿಕೊಳ್ಳಬಹುದು ಎಂದು ಹೇಳಲಾಗುತ್ತದೆ. ಒಳ್ಳೆಯ ಆಟಿಟ್ಯೂಡ್‌ ಕಾಪಾಡಿಕೊಳ್ಳುವುದು ಸಹ ಮುಖ್ಯವಾಗಿದೆ. ಒಬ್ಬರಿಗೊಬ್ಬರು ಕಾಳಜಿ ಮಾಡುವುದರಿಂದ ಸಂಗಾತಿ ನಡುವೆ ಪ್ರೀತಿ ಹೆಚ್ಚಾಗುತ್ತದೆ. ಸಂಗಾತಿಗಳ ನಡುವೆ ನಂಬಿಕೆ ಸಹ ಅಷ್ಟೇ ಮುಖ್ಯವಾಗಿದೆ.

7) ಮನೆಯ ಸಾಮಗ್ರಿಗಳನ್ನು ಸುಂದರವಾಗಿ ಜೋಡಿಸಿ

ಅವ್ಯವಸ್ಥೆಯ ಮನೆಯು ಕಲಹಗಳಿಗೆ ಕಾರಣವಾಗುತ್ತದೆ. ಅಲ್ಲಿ ಧನಾತ್ಮಕ ಶಕ್ತಿಗಳು ತುಂಬಿರಲು ಅಡ್ಡಿಪಡಿಸುತ್ತದೆ. ಮನೆ ಮತ್ತು ನಿಮ್ಮ ಕೋಣೆಯಲ್ಲಿರುವ ಅನಗತ್ಯ ವಸ್ತುಗಳನ್ನು ತೆಗೆದುಹಾಕಿ. ಆಗ ಧನಾತ್ಮಕ ಶಕ್ತಿ ನಿಮ್ಮ ಮನೆಯೊಳಗೆ ಹರಿದು ಬರುತ್ತದೆ. ಮನೆಯೊಳಗೆ ಅತಿಯಾದ ವಸ್ತುಗಳನ್ನು ತಂದು ಇಡಬೇಡಿ, ಅಗತ್ಯಕ್ಕೆ ತಕ್ಕಂತೆ ವಸ್ತುಗಳನ್ನು ಖರೀದಿಸಿ.

ಗಮನಿಸಿ: ಇದು ನಂಬಿಕೆ ಮತ್ತು ಶಾಸ್ತ್ರವನ್ನು ಆಧರಿಸಿದ ಬರಹ. ಇದರಲ್ಲಿರುವ ಎಲ್ಲ ಅಂಶಗಳನ್ನೂ "ಹಿಂದೂಸ್ತಾನ್ ಟೈಮ್ಸ್ ಕನ್ನಡ" ಪುಷ್ಟೀಕರಿಸುವುದಿಲ್ಲ. ನಿಮ್ಮ ಸ್ವಂತ ವಿವೇಚನೆ ಬಳಸಿ ನಿರ್ಧಾರಗಳನ್ನು ತೆಗೆದುಕೊಳ್ಳಿ.

ಬರಹ: ಅರ್ಚನಾ ವಿ. ಭಟ್‌