Who is Dattatreya god: ಹೊಸ್ತಿಲ ಹುಣ್ಣಿಮೆಯಂದು ಜನಿಸಿದ ಭಗವಾನ್ ದತ್ತಾತ್ರೇಯ ಯಾರು? ಪುರಾಣ ಕಥೆಯಲ್ಲಿರುವುದೇನು?
Who is Dattatreya god: ಈ ಸಲ ಡಿಸೆಂಬರ್ 7ರಂದು ದತ್ತ ಜಯಂತಿ ಅಥವಾ ದತ್ತಾತ್ರೇಯ ಜಯಂತಿ. ಭಗವಾನ್ ದತ್ತಾತ್ರೇಯರ ಬಗ್ಗೆ ಗೊತ್ತಿಲ್ಲದವರಿಗೆ ಕಾಡುವ ಪ್ರಶ್ನೆ ಒಂದಿದೆ. ಭಗವಾನ್ ದತ್ತಾತ್ರೇಯ ಯಾರು? ಅವರ ಜನನಕ್ಕೊಂದು ಕಥೆ ಇದೆಯಾ? ಪುರಾಣ ಕಥೆ ಹೇಳುವುದೇನು?
ಮಾರ್ಗಶೀರ್ಷ ಅಥವಾ ಮಾರ್ಗಶಿರ ಮಾಸದ ಶುಕ್ಲಪಕ್ಷದ ಹುಣ್ಣಿಮೆಯಂದೇ ದತ್ತ ಜಯಂತಿ ಅಥವಾ ದತ್ತಾತ್ರೇಯ ಜಯಂತಿ. ಈ ಶುಭದಿನದಂದು ಭಗವಾನ್ ದತ್ತಾತ್ರೇಯರ ಜನನ. ಹೀಗಾಗಿ ಇದೇ ದಿನ ದತ್ತ ಜಯಂತಿ ಆಚರಣೆ. ಈ ಸಲ ಇದು ಡಿಸೆಂಬರ್ 7ರಂದು ಬಂದಿದೆ. ಭಗವಾನ್ ದತ್ತಾತ್ರೇಯರ ಬಗ್ಗೆ ಗೊತ್ತಿಲ್ಲದವರಿಗೆ ಕಾಡುವ ಪ್ರಶ್ನೆ ಒಂದಿದೆ. ಭಗವಾನ್ ದತ್ತಾತ್ರೇಯ ಯಾರು? ಅವರ ಜನನಕ್ಕೊಂದು ಕಥೆ ಇದೆಯಾ? ಪುರಾಣ ಕಥೆ ಹೇಳುವುದೇನು?
ಹಿಂದು ಧರ್ಮಗ್ರಂಥ, ಪುರಾಣಗಳ ಪ್ರಕಾರ, ದತ್ತಾತ್ರೇಯನು ಅತ್ರಿ ಮತ್ತು ಅನಸೂಯ ಋಷಿಗಳ ಮಗ. ಈ ಋಷಿ ದಂಪತಿ ದತ್ತಾತ್ರೇಯನನ್ನು ಮಗನಾಗಿ ಪಡೆದುದರ ಹಿಂದೊಂದು ಕಥೆ ಇದೆ. ಅದನ್ನು ಸಂಕ್ಷಿಪ್ತವಾಗಿ ಹೀಗೆ ಉಲ್ಲೇಖಿಸಬಹುದು.
ಹಿಂದು ಪುರಾಣಗಳ ಪ್ರಕಾರ, ಅತ್ರಿ ಮಹರ್ಷಿಗಳ ಪತ್ನಿ ಅನಸೂಯಾ ಬಹಳ ಧರ್ಮನಿಷ್ಠೆ ಹೊಂದಿದವರಾಗಿದ್ದರು. ಸದ್ಗುಣ ಸಂಪನ್ನೆಯೂ ಆಗಿದ್ದರು. ಆಕೆಗೆ ಇದ್ದುದು ಒಂದೇ ಆಸೆ. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರ ತ್ರಿಮೂರ್ತಿಗಳಿಗೆ ಸಮಾನವಾದ ಒಬ್ಬ ಪುತ್ರ ಬೇಕು ಎಂಬುದು ಆ ಆಸೆಯಾಗಿತ್ತು. ಇದಕ್ಕಾಗಿ ಆಕೆ ಕಠಿಣ ತಪಸ್ಸಿನಲ್ಲಿದ್ದರು. ಪತಿ ಧರ್ಮವೇ ಪರಮಧರ್ಮ ಎಂದು ನಂಬಿಕೊಂಡು ದಾಂಪತ್ಯ ನಡೆಸುತ್ತಿದ್ದರು.
ಅನಸೂಯಾ ಅವರ ಪತಿನಿಷ್ಠೆ, ಧರ್ಮನಿಷ್ಠೆಗೆ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ದೇವಿಯರು ನಿಬ್ಬೆರಗಾಗಿದ್ದರು. ಆ ನಿಷ್ಠೆಯನ್ನೊಮ್ಮೆ ಒರೆಗೆ ಹಚ್ಚಬೇಕಲ್ಲ ಎಂದು ಮಾತನಾಡಿಕೊಂಡರು. ತಮ್ಮತಮ್ಮ ಪತಿಯರ ಬಳಿ ಬೇಡಿಕೆ ಇಟ್ಟೇ ಬಿಟ್ಟರು. ಸರಸ್ವತಿ ದೇವಿಯು ಬ್ರಹ್ಮನ ಬಳಿ, ಲಕ್ಷ್ಮೀ ದೇವಿ ಭಗವಾನ್ ಮಹಾವಿಷ್ಣುವಿನ ಬಳಿ, ಪಾರ್ವತೀದೇವಿ ಪರಮೇಶ್ವರ ಬಳಿ ಅನಸೂಯಾಳ ನಿಷ್ಠೆಯನ್ನು ಪರೀಕ್ಷಿಸಲು ಸಹಕರಿಸಬೇಕು ಎಂದು ವಿನಂತಿಸಿಕೊಂಡರು.
ತ್ರಿಮೂರ್ತಿಗಳು ಈಗ ವೇಷ ಧರಿಸುವುದು ಅನಿವಾರ್ಯವಾಯಿತು. ಬ್ರಹ್ಮ, ವಿಷ್ಣು ಮತ್ತು ಮಹೇಶ್ವರರು ಸಾಧುಗಳ ಅರ್ಥಾತ್ ತಪಸ್ವಿಗಳ ವೇಷಧರಿಸಿದರು. ಭೂಮಿ ಬಂದು ಅತ್ರಿ ಮಹರ್ಷಿಗಳ ಆಶ್ರಮ ಎದುರು ನಿಂತರು. “ಭವತಿ ಭಿಕ್ಷಾಂ ದೇಹಿ” ಎಂದು ಕೂಗಿದರು. ಆಶ್ರಮಕ್ಕೆ ಬಂದ ಸಾಧುಗಳನ್ನು ಕಂಡ ಅನಸೂಯಾ ಅವರನ್ನು ಆದರಿಸಿದರು. ಕೂಡಲೇ ಹಸಿವಾಗಿದೆ ತಾಯಿ, ಆಹಾರ ನೀಡಿ ಎಂದರು ಈ ಸಾಧು ರೂಪದ ತ್ರಿಮೂರ್ತಿಗಳು.
ಆಹಾರ ನೀಡಲು ಸಿದ್ಧಳಾದ ಅನಸೂಯಾರನ್ನು ಉದ್ಧೇಶಿಸಿದ ಮಾತನಾಡಿದ ಸಾಧುಗಳು ಮತ್ತೊಂದು ಬೇಡಿಕೆ ಮುಂದಿಟ್ಟರು. ಏನು ಎಂಬಂತೆ ನೋಡಿದ ಅನಸೂಯಾರ ಬಳಿ, “ಹುಟ್ಟುಡುಗೆಯಲ್ಲೇ ಆಹಾರ ನೀಡಿದರೆ ನಾವು ಸ್ವೀಕರಿಸುತ್ತೇವೆ” ಎಂದರು.
ಸಾಧುಗಳ ಆಗ್ರಹ ಕೇಳಿ ದಿಕ್ಕೆಟ್ಟ ಅನಸೂಯಾ, ಉದ್ವಿಗ್ನಗೊಂಡರು. ಪತಿಯನ್ನು ಮನಪೂರ್ವಕವಾಗಿ ಸ್ಮರಿಸಿಕೊಂಡ ಅನಸೂಯಾಗೆ ಬಂದಿರುವವರು ತ್ರಿಮೂರ್ತಿಗಳೆಂಬುದು ಮನವರಿಕೆ ಆಯಿತು. ಕೂಡಲೇ ಮಹರ್ಷಿ ಅತ್ರಿ ಅವರ ಕಮಂಡಲದಿಂದ ಪುಣ್ಯ ಜಲವನ್ನು ಮೂವರು ತಪಸ್ವಿಗಳ ಮೇಲೆ ಪ್ರೋಕ್ಷಣೆ ಮಾಡಿ ಶಿಶುಗಳಾಗುವಂತೆ ಮಾಡಿದರು. ಆ ಮೂರು ಶಿಶುಗಳಿಗೆ ಅನಸೂಯ ಎದೆಹಾಲುಣಿಸಿದರು.
ಪತಿ ಮಹರ್ಷಿ ಅತ್ರಿಯವರು ಮನೆಗೆ ಬಂದ ಕೂಡಲೇ ನಡೆದ ಘಟನೆಯನ್ನು ಅನಸೂಯ ವಿವರಿಸಿದರು. ಶಿಶುಗಳ ರೂಪದಲ್ಲಿದ್ದ ತ್ರಿಮೂರ್ತಿಗಳನ್ನು ಅವರು ಆಲಿಂಗನ ಮಾಡಿದರು. ಮಹರ್ಷಿ ಅತ್ರಿ ಅವರಿಗೆ ಒಟ್ಟು ವಿದ್ಯಮಾನದ ಅರಿವೂ ಆಯಿತು.
ಅತ್ತ, ಪತಿಯರನ್ನು ಕಾಣದೆ ಸರಸ್ವತಿ, ಲಕ್ಷ್ಮಿ ಮತ್ತು ಪಾರ್ವತಿ ದೇವಿಯರು ಕಂಗಾಲಾಗಿದ್ದರು. ಪತಿನಿಷ್ಠೆಯನ್ನು ಪರೀಕ್ಷಿಸಲು ಹೊರಟು ತಪ್ಪು ಮಾಡಿದೆವೆಂದು ಅರಿತ ಮೂವರು ದೇವಿಯರು ಅತ್ರಿ ಮಹರ್ಷಿಗಳ ಆಶ್ರಮಕ್ಕೆ ಬಂದು, ದಂಪತಿಯ ಕ್ಷಮೆಯಾಚಿಸಿದರು. ಪತಿಯಂದಿರನ್ನು ಹಿಂದಿರುಗಿಸುವಂತೆ ಬೇಡಿಕೊಂಡರು. ತ್ರಿಮೂರ್ತಿಗಳು ಕೂಡ ಕ್ಷಮೆಯಾಚಿಸಿದರು.
ಇದಾದ ಬಳಿಕ, ಅನಸೂಯಾರ ಬೇಡಿಕೆಯಂತೆ ಆಕೆಯ ಗರ್ಭದಿಂದ ಜನಿಸುವ ಮಗುವಿನಲ್ಲಿ ತ್ರಿಮೂರ್ತಿಗಳ ಸ್ವರೂಪವಿರುತ್ತದೆ ಎಂದು ಆಶೀರ್ವದಿಸಿದರು. ಅದರ ನಂತರ ಜನಿಸಿದ ಮಗುವಿನಲ್ಲಿ ತ್ರಿಮೂರ್ತಿಗಳ ಅಂಶವಿತ್ತು. ಅವರಿಗೆ ದತ್ತಾತ್ರೇಯ ಎಂದು ಋಷಿ ದಂಪತಿ ನಾಮಕರಣ ಮಾಡಿದರು.