‘ಸಾವಿರ ಮೆಟ್ಟಿಲು’ ಹತ್ತೋದಕ್ಕೆ 38 ವರ್ಷ ಬೇಕಾಯ್ತು, ವಜ್ರಮುನಿಯ ಮೊದಲ ಚಿತ್ರವೇ ಅವರ ಕೊನೇ ಚಿತ್ರವಾಯ್ತು! ಸಿನಿಸ್ಮೃತಿ ಅಂಕಣ
ಕನ್ನಡ ಸುದ್ದಿ  /  ಮನರಂಜನೆ  /  ‘ಸಾವಿರ ಮೆಟ್ಟಿಲು’ ಹತ್ತೋದಕ್ಕೆ 38 ವರ್ಷ ಬೇಕಾಯ್ತು, ವಜ್ರಮುನಿಯ ಮೊದಲ ಚಿತ್ರವೇ ಅವರ ಕೊನೇ ಚಿತ್ರವಾಯ್ತು! ಸಿನಿಸ್ಮೃತಿ ಅಂಕಣ

‘ಸಾವಿರ ಮೆಟ್ಟಿಲು’ ಹತ್ತೋದಕ್ಕೆ 38 ವರ್ಷ ಬೇಕಾಯ್ತು, ವಜ್ರಮುನಿಯ ಮೊದಲ ಚಿತ್ರವೇ ಅವರ ಕೊನೇ ಚಿತ್ರವಾಯ್ತು! ಸಿನಿಸ್ಮೃತಿ ಅಂಕಣ

ಇತಿಹಾಸವನ್ನು ಕೆದಕುತ್ತಾ ಹೋದರೆ, ಯಾವಾಗಲೋ ಶುರುವಾಗಿ, ಇನ್ಯಾವಾಗಲೋ ಬಿಡುಗಡೆ ಆದ ಹಲವು ಚಿತ್ರಗಳು ಸಿಗುತ್ತವೆ. ಕನ್ನಡದಲ್ಲಿ ಈ ತರಹದ ಬೆರಳಣಿಕೆಯಷ್ಟು ಉದಾಹರಣೆಗಳಿವೆ. ಅಂತಹ ಕೆಲವು ಸಿನಿಮಾಗಳ ಬಗ್ಗೆ ಈ ವಾರದ ಸಿನಿಸ್ಮೃತಿ ಅಂಕಣದಲ್ಲಿ ಮಾಹಿತಿ ನೀಡಿದ್ದಾರೆ ಹಿರಿಯ ಪತ್ರಕರ್ತ ಚೇತನ್‌ ನಾಡಿಗೇರ್.‌

‘ಸಾವಿರ ಮೆಟ್ಟಿಲು’ ಹತ್ತೋದಕ್ಕೆ 38 ವರ್ಷ ಬೇಕಾಯ್ತು, ವಜ್ರಮುನಿಯ ಮೊದಲ ಚಿತ್ರವೇ ಅವರ ಕೊನೇ ಚಿತ್ರವಾಯ್ತು! ಸಿನಿಸ್ಮೃತಿ ಅಂಕಣ
‘ಸಾವಿರ ಮೆಟ್ಟಿಲು’ ಹತ್ತೋದಕ್ಕೆ 38 ವರ್ಷ ಬೇಕಾಯ್ತು, ವಜ್ರಮುನಿಯ ಮೊದಲ ಚಿತ್ರವೇ ಅವರ ಕೊನೇ ಚಿತ್ರವಾಯ್ತು! ಸಿನಿಸ್ಮೃತಿ ಅಂಕಣ

Kannada Film Industry: ಮರೆತೇ ಹೋಗಿದ್ದ ಉಪೇಂದ್ರ ಅಭಿನಯದ ‘ಭೀಮೂಸ್‍ ಬ್ಯಾಂಗ್‍ ಬ್ಯಾಂಗ್‍ ಕಿಡ್ಸ್’ ಚಿತ್ರಕ್ಕೆ ಮತ್ತೆ ಜೀವ ಬಂದಿದೆ. ಸುಮಾರು 17 ವರ್ಷಗಳ ಹಿಂದೆ ಶುರುವಾದ ಚಿತ್ರವದು. ಅದಕ್ಕೆ ಈಗ ‘ರಕ್ತ ಕಾಶ್ಮೀರ’ ಎಂಬ ಹೆಸರನ್ನಿಟ್ಟು ಚಿತ್ರ ಬಿಡುಗಡೆ ಮಾಡುವುದಕ್ಕೆ ಮುಂದಾಗುತ್ತಿದ್ದಾರೆ ನಿರ್ದೇಶಕ ಎಸ್‍.ವಿ. ರಾಜೇಂದ್ರ ಸಿಂಗ್ ಬಾಬು.

ಇತಿಹಾಸವನ್ನು ಕೆದಕುತ್ತಾ ಹೋದರೆ, ಯಾವಾಗಲೋ ಶುರುವಾಗಿ, ಇನ್ಯಾವಾಗಲೋ ಬಿಡುಗಡೆ ಆದ ಹಲವು ಚಿತ್ರಗಳು ಸಿಗುತ್ತವೆ. ಕನ್ನಡದಲ್ಲಿ ಈ ತರಹದ ಬೆರಳಣಿಕೆಯಷ್ಟು ಉದಾಹರಣೆಗಳಿವೆಯಾದರೂ, ಹಿಂದಿಯಲ್ಲಿ ಹಲವು ಚಿತ್ರಗಳು ಉದಾಹರಣೆಯಾಗಿ ಸಿಗುತ್ತವೆ. ಈ ಸಾಲಿನಲ್ಲಿ ಮೊದಲು ನಿಲ್ಲುವುದು ದಿಲೀಪ್‍ ಕುಮಾರ್ ಮತ್ತು ಮಧುಬಾಲ ಅಭಿನಯದ ‘ಮೊಘಲ್-ಎ-ಆಜಮ್'. ಈ ಚಿತ್ರ 1951ರಲ್ಲಿ ಪ್ರಾರಂಭವಾಗಿ 1960ರಲ್ಲಿ ಬಿಡುಗಡೆಯಾಗುತ್ತದೆ. ಅಲ್ಲಿಗೆ ಒಂಬತ್ತು ವರ್ಷಗಳ ಕಾಲ ಈ ಚಿತ್ರವು ನಿರ್ಮಾಣದ ಹಂತದಲ್ಲಿತ್ತು ಎನ್ನಬಹುದು. ಆದರೆ, ಅಷ್ಟಕ್ಕೇ ಮುಗಿಯುವುದಿಲ್ಲ. ನಿರ್ದೇಶಕ ಕೆ. ಆಸಿಫ್‍ ಈ ಚಿತ್ರವನ್ನು ಮಾಡಬೇಕೆಂದು ಮೊದಲು ಹೆಜ್ಜೆ ಇಟ್ಟಿದ್ದು 1944ರಲ್ಲಿ. ಬೇರೆ ನಟ-ನಟಿಯರೊಂದಿಗೆ ಶುರುವಾದ ಈ ಚಿತ್ರದಲ್ಲಿ ಸಾಕಷ್ಟು ಬದಲಾವಣೆಗಳಾಗಿ, ಕೊನೆಗೆ 16 ವರ್ಷಗಳ ನಂತರ ಬಿಡುಗಡೆಯಾಗುತ್ತದೆ.

ಹಿಂದಿಯಲ್ಲಿ ಈ ತರಹದ ಸಾಕಷ್ಟು ಚಿತ್ರಗಳಿವೆ

ಮೀನಾ ಕುಮಾರಿ ಅಭಿನಯದ ‘ಪಾಕೀಜ', ಶುರುವಾಗಿ 15 ವರ್ಷಗಳ ನಂತರ ಬಿಡುಗಡೆಯಾಯಿತು. ಅಮಿತಾಭ್ ಬಚ್ಚನ್ ಮತ್ತು ಶತ್ರುಘ್ನ ಸಿನ್ಹಾ ಅಭಿನಯದಲ್ಲಿ 70ರ ದಶಕದ ಕೊನೆಯಲ್ಲಿ ಶುರುವಾದ ‘ಯಾರ್ ಮೇರಿ ಜಿಂದಗಿ’ ಚಿತ್ರವು ಮೂರು ದಶಕಗಳ ನಂತರ 2008ರಲ್ಲಿ ಚಿತ್ರ ಬಿಡುಗಡೆಯಾಗಿದೆ. ಅದೇ ರೀತಿ ಜಾಯ್‍ ಮುಖರ್ಜಿ ಅಭಿನಯದ ‘ಲವ್‍ ಇನ್‍ ಬಾಂಬೆ’ 1971ರಲ್ಲಿ ಶುರುವಾಗಿ, ಅದಾಗಿ 42 ವರ್ಷಗಳ ನಂತರ 2013ರಲ್ಲಿ ಬಿಡುಗಡೆಯಾಯಿತು. ಇತ್ತೀಚೆಗೆ, ಅಜಯ್‍ ದೇವಗನ್‍ ಅಭಿನಯದ ‘ನಾಮ್‍’ ಎಂಬ ಚಿತ್ರ ಬಿಡುಗಡೆಯಾಯಿತು. 2004ರಲ್ಲಿ ಶುರುವಾದ ಈ ಚಿತ್ರ, 20 ವರ್ಷಗಳ ನಂತರ ಈಗ ಬಿಡುಗಡೆಯಾಗಿದೆ. ಶಾರೂಖ್ ಖಾನ್, ಸಲ್ಮಾನ್ ಖಾನ್ ಮತ್ತು ಮಾಧುರಿ ದೀಕ್ಷಿತ್ ಅಭಿನಯದ ‘ಹಮ್ ತುಮ್ಹಾರೆ ಸನಮ್' ಶುರುವಾಗಿ ಎಂಟು ವರ್ಷಗಳ ನಂತರ ಬಿಡುಗಡೆಯಾಗಿದೆ.

38 ವರ್ಷಗಳ ನಂತರ ಬಿಡುಗಡೆಯಾಯ್ತು ‘ಸಾವಿರ ಮೆಟ್ಟಿಲು’

ಕನ್ನಡದಲ್ಲಿ ಬಿಡುಗಡೆಯಾಗುವುದಕ್ಕೆ ಅತೀ ಹೆಚ್ಚು ಸಮಯ ತೆಗೆದುಕೊಂಡ ಚಿತ್ರವೆಂದರೆ, ಅದು ಪುಟ್ಟಣ್ಣ ಕಣಗಾಲ್‍ ನಿರ್ದೇಶನದ ‘ಸಾವಿರ ಮೆಟ್ಟಿಲು’. ಈ ಚಿತ್ರ ಶುರುವಾಗಿ 38 ವರ್ಷಗಳ ನಂತರ ಬಿಡುಗಡೆಯಾಗುವ ಮೂಲಕ ಕನ್ನಡದ ಚಿತ್ರರಂಗದಲ್ಲೇ ಹೊಸ ದಾಖಲೆಯನ್ನು ಬರೆದಿದೆ. ಏಕೆಂದರೆ, ಇಷ್ಟೊಂದು ತಡವಾಗಿ ಬಿಡುಗಡೆಯಾದ ಇನ್ನೊಂದು ಉದಾಹರಣೆ ಕನ್ನಡ ಚಿತ್ರರಂಗದಲ್ಲಿ ಸಿಗುವುದಿಲ್ಲ. ‘ಸಾವಿರ ಮೆಟ್ಟಿಲು' ಚಿತ್ರವು ಪುಟ್ಟಣ್ಣ ಕಣಗಾಲ್ ನಿರ್ದೇಶನದ ಎರಡನೆಯ ಕನ್ನಡ ಚಿತ್ರವಾಗಿತ್ತು. ಈ ಚಿತ್ರವನ್ನು ಹಾಸನದ ಬಸವೇಗೌಡರು ತಮ್ಮ ಸ್ನೇಹಿತರೊಂದಿಗೆ ನಿರ್ಮಿಸುವುದಕ್ಕೆ ಮುಂದೆ ಬಂದಿದ್ದರು. ಕಲ್ಯಾಣ್ ಕುಮಾರ್, ಜಯಂತಿ ಅಭಿನಯದ ಈ ಚಿತ್ರ ಕಾರಣಾಂತರಗಳಿಂದ ಚಿತ್ರ ಮುಂದುವರೆಯಲಿಲ್ಲ.

ಅರ್ಧ ಕಪ್ಪು-ಬಿಳುಪಿನಲ್ಲಿ, ಇನ್ನರ್ಧ ಕಲರ್‌ನಲ್ಲಿ

2005ರ ಸುಮಾರಿಗೆ ಈ ಚಿತ್ರವನ್ನು ಮುಂದುವರೆಸಿ, ಬಿಡುಗಡೆ ಮಾಡುವುದಕ್ಕೆ ಬಸವೇಗೌಡರು ಮುಂದಾದರು. ಆದರೆ, ಆ ಚಿತ್ರದಲ್ಲಿ ನಟಿಸಿದ ಎಷ್ಟೋ ಕಲಾವಿದರಿಗೆ ವಯಸ್ಸಾಗಿತ್ತು. ಇನ್ನೂ ಕೆಲವರು ಅಷ್ಟರಲ್ಲಾಗಲೇ ನಿಧನರಾಗಿದ್ದರು. ಹಾಗಾಗಿ ಕಥೆಯನ್ನು ಸಾಕಷ್ಟು ಬದಲಾಯಿಸಿ, ಒಂದಿಷ್ಟು ಹೊಸದಾಗಿ ಚಿತ್ರೀಕರಣ ಮಾಡಲಾಯಿತು. ಚಿತ್ರವು ಅರ್ಧ ಕಲರ್ ಮತ್ತು ಅರ್ಧ ಕಪ್ಪು-ಬಿಳುಪಿನಲ್ಲಿದೆ. ಮೂಲ ಚಿತ್ರದಲ್ಲಿ ಜಯಂತಿ ಅವರಿಗೆ ಅಪಘಾತವಾಗುತ್ತದೆ. ಅವರು ಕೋಮಾಗೆ ಜಾರಿದ್ದಾರೆ ಎಂದು ತೋರಿಸಿ, ಹಲವು ವರ್ಷಗಳ ನಂತರ ಕೋಮಾದಿಂದ ಹೊರಬರುತ್ತಾರೆ ಎಂದು ಚಿತ್ರವನ್ನು ಮುಂದುವರೆಸಲಾಯಿತು. ಕಲ್ಯಾಣ್ ಕುಮಾರ್ ಅವರು ಮಾಡಿದ ಪಾತ್ರವನ್ನು ಹಿರಿಯ ನಟ ರಾಮಕೃಷ್ಣ ಮುಂದುವರೆಸಿದರು. ಇನ್ನು ಅಂಬರೀಶ್, ಅನು ಪ್ರಭಾಕರ್ ಸೇರಿದಂತೆ ಇನ್ನೊಂದಿಷ್ಟು ಕಲಾವಿದರು ಹೊಸದಾಗಿ ಸೇರ್ಪಡೆಯಾದರು. ಇದೆಲ್ಲಾ ಬದಲಾವಣೆಗಳೊಂದಿಗೆ ಸಂಪೂರ್ಣಗೊಳಿಸಿ, ಹೊಸ ರೂಪದಲ್ಲಿ ಚಿತ್ರವನ್ನು ಬಿಡುಗಡೆ ಮಾಡಲಾಯಿತು. ಈ ಹಿಂದೆ ಪುಟ್ಟಣ್ಣ ನಿಧನದಿಂದ ಅರ್ಧಕ್ಕೇ ನಿಂತಿದ್ದ ‘ಮಸಣದ ಹೂವು’ ಚಿತ್ರವನ್ನು ಪೂರ್ತಿಗೊಳಿಸಿದವರು ಹಿರಿಯ ನಿರ್ದೇಶಕ ಕೆ.ಎಸ್.ಎಲ್. ಸ್ವಾಮಿ. ‘ಸಾವಿರ ಮೆಟ್ಟಿಲು’ ಚಿತ್ರವನ್ನು ಮುಗಿಸಿಕೊಟ್ಟಿದ್ದೂ ಅವರೇ.

ವಜ್ರಮುನಿ ಅಭಿನಯದ ಮೊದಲ ಚಿತ್ರವೇ ಅವರ ಕೊನೆಯ ಚಿತ್ರವಾಯ್ತು

ವಿಶೇಷವೆಂದರೆ, ‘ಮಲ್ಲಮ್ಮನ ಪವಾಡ' ಚಿತ್ರವು ನಟ ವಜ್ರಮುನಿ ಅವರ ಬಿಡುಗಡೆಯಾದ ಮೊದಲ ಚಿತ್ರವಾದರೂ, ಅವರು ಮೊದಲು ಬಣ್ಣ ಹಚ್ಚಿದ್ದು ‘ಸಾವಿರ ಮೆಟ್ಟಿಲು' ಚಿತ್ರಕ್ಕೆ. ಈ ಚಿತ್ರವು ವಜ್ರಮುನಿ ಅವರ ನಿಧನದ ನಂತರ ಬಿಡುಗಡೆಯಾಯಿತು. ಒಬ್ಬ ನಟನ ಮೊದಲ ಚಿತ್ರ, ಅವರ ಕೊನೆಯ ಚಿತ್ರವಾಗಿ, ಅವರ ನಿಧನದ ನಂತರ ಬಿಡುಗಡೆಯಾಗಿದ್ದು ಚಿತ್ರರಂಗದ ಇತಿಹಾಸದಲ್ಲೇ ಅಪರೂಪ.

ಬೇರೆ ಹೆಸರಿನೊಂದಿಗೆ ಬಂತು ‘ಸುಂದರ ಲೋಕ’

1988ರ ಆಸುಪಾಸಿನಲ್ಲಿ ಶುರುವಾದ ರವಿಚಂದ್ರನ್, ರಜನಿ, ಶ್ರೀಪ್ರಿಯಾ ಮುಂತಾದವರು ನಟಿಸಿದ್ದ ‘ಸುಂದರ ಲೋಕ’ ಚಿತ್ರವು 14 ವರ್ಷಗಳ ನಂತರ ಬೇರೆ ಹೆಸರಿನೊಂದಿಗೆ, ಬೇರೆ ಕಲಾವಿದರೊಂದಿಗೆ ಬಿಡುಗಡೆ ಆಯಿತು. ಬಿ.ಎನ್. ಗಂಗಾಧರ್ ನಿರ್ಮಾಣದ ಈ ಚಿತ್ರದ ಹಾಡುಗಳು, ಫೈಟ್ ಸೇರಿದಂತೆ ಹಲವು ಭಾಗದ ಚಿತ್ರೀಕರಣ ಮುಗಿದಿತ್ತು. ಈ ಸಂದರ್ಭದಲ್ಲಿ ಆದ ಒಂದು ಗಲಾಟೆಯಿಂದಾಗಿ ಚಿತ್ರವೇ ನಿಂತುಹೋಯಿತು. ಹಲವು ವರ್ಷಗಳ ನಂತರ ಚಿತ್ರೀಕರಣವಾದ ದೃಶ್ಯಗಳಿಗೆ ಪೂರಕವಾಗಿ ಒಂದು ಕಥೆ ರಚಿಸಿ, ಹೊಸ ಕಲಾವಿದರನ್ನಿಟ್ಟುಕೊಂಡು ಚಿತ್ರೀಕರಣ ಮಾಡಲಾಯಿತು. ಅಪಘಾತವೊಂದರಲ್ಲಿ ರವಿಚಂದ್ರನ್ ಅವರು ಸತ್ತಿದ್ದಾರೆ ಎಂದು ತೋರಿಸಿ, ಹೊಸ ಜೋಡಿಯೊಂದಿಗೆ ಹಳೆಯ ಕಥೆಯನ್ನು ಮುಂದುವರೆಸಲಾಯಿತು.

14 ವರ್ಷಗಳ ವನವಾಸ ಅನುಭವಿಸಿದ ‘ಕರ್ಣನ ಸಂಪತ್ತು’

ಅಂಬರೀಶ್ ಅಭಿನಯದ `ಕರ್ಣನ ಸಂಪತ್ತು' ಚಿತ್ರ ಸಹ 14 ವರ್ಷಗಳ ವನವಾಸದ ನಂತರ ಬಿಡುಗಡೆಯಾಯಿತು. ಶಾಂತಾರಾಮ್ ನಿರ್ದೇಶನದ ಈ ಚಿತ್ರವು 1991ರಲ್ಲಿ ಪ್ರಾರಂಭವಾಗಿತ್ತು. ಚಿತ್ರೀಕರಣ ಮುಗಿದರೂ, ಹಣಕಾಸಿನ ವಿಷಯದಲ್ಲಿ ಸಮಸ್ಯೆ ಎದುರಾದ ಕಾರಣ ಚಿತ್ರ ಬಿಡುಗಡೆ ಆಗಿರಲಿಲ್ಲ. ಕೊನೆಗೆ ೨೦೦೫ರಲ್ಲಿ ಚಿತ್ರ ಬಿಡುಗಡೆಯಾಯಿತು. ಈ ಚಿತ್ರದಲ್ಲಿ ಅಂಬರೀಶ್ ಅವರು ನಟ ಅಂಬರೀಶ್ ಆಗಿಯೇ ಕಾಣಿಸಿಕೊಂಡಿದ್ದು ವಿಶೇಷ. ಒಬ್ಬ ನಟ ಮತ್ತು ಅವರ ಅಭಿಮಾನಿಗಳ ಪ್ರೀತಿಯ ಕುರಿತಾದ ಕಥೆ ಈ ಚಿತ್ರದ್ದು. ಅಂಬರೀಶ್ ಜೊತೆಗೆ ತಾರಾ, ಕೆ.ಎಸ್. ಅಶ್ವತ್ಥ್, ಉಮಾಶ್ರೀ, ಮುಖ್ಯಮಂತ್ರಿ ಚಂದ್ರು ಸೇರಿದಂತೆ ಹಲವು ಕಲಾವಿದರು ನಟಿಸಿದ್ದರು.

17 ವರ್ಷಗಳ ನಂತರ ಬರುತ್ತಿದೆ ‘ರಕ್ತ ಕಾಶ್ಮೀರ’

2007 ರಲ್ಲಿ ಎಸ್‍.ವಿ. ರಾಜೇಂದ್ರ ಸಿಂಗ್‍ ಬಾಬು ನಿರ್ದೇಶನದಲ್ಲಿ ಉಪೇಂದ್ರ ಮತ್ತು ರಮ್ಯಾ ಅಭಿನಯದಲ್ಲಿ ‘ಭೀಮೂಸ್‍ ಬ್ಯಾಂಗ್‍ ಬ್ಯಾಂಗ್‍ ಕಿಡ್ಸ್’ ಎಂಬ ಚಿತ್ರ ಪ್ರಾರಂಭವಾಗಿತ್ತು. ಆ ಕಾಲಕ್ಕೆ ಅತ್ಯಂತ ದುಬಾರಿ ಬಜೆಟ್‍ನ ಚಿತ್ರವಾಗಿತ್ತು ಅದು. ಫ್ಯಾಂಟಸಿ ಅಂಶಗಳಿರುವ ಈ ಚಿತ್ರವನ್ನು ಸುಮಾರು ಆರು ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವ ಸುದ್ದಿಯಾಗಿತ್ತು. ಗ್ರಾಫಿಕ್ಸ್ ಬಳಕೆ ಕಡಿಮೆ ಇದ್ದ ಕಾಲದಲ್ಲಿ, ಚಿತ್ರಕ್ಕೆ ದೊಡ್ಡ ಮಟ್ಟದಲ್ಲಿ ಗ್ರಾಫಿಕ್ಸ್ ಬಳಸುವುದಾಗಿ ಚಿತ್ರತಂಡ ಹೇಳಿಕೊಂಡಿತ್ತು. ವಿಷ್ಣುವರ್ಧನ್‍ ಮತ್ತು ಅಂಬರೀಶ್‍ ಅವರ ಸಮ್ಮುಖದಲ್ಲಿ ಈ ಚಿತ್ರವು ಅಶೋಕ ಹೋಟೆಲ್‍ನಲ್ಲಿ ದೊಡ್ಡ ಪ್ರಮಾಣದಲ್ಲಿ ಸೆಟ್ಟೇರಿತ್ತು. ಈ ಚಿತ್ರದ ಚಿತ್ರೀಕರಣ ಮತ್ತು ಪೋಸ್ಟ್ ಪ್ರೊಡಕ್ಷನ್‍ ಕೆಲಸಗಳು ಮುಗಿದರೂ, ಕಾರಣಾಂತರಗಳಿಂದ ಬಿಡುಗಡೆಯಾಗಿರಲಿಲ್ಲ. ಈಗ ಇದೇ ಚಿತ್ರವು 17 ವರ್ಷಗಳ ನಂತರ ‘ರಕ್ತ ಕಾಶ್ಮೀರ’ ಎಂಬ ಹೆಸರಿನಲ್ಲಿ ಜನವರಿಯಲ್ಲಿ ಬಿಡುಗಡೆಯಾಗುತ್ತಿದೆ.

ವಿಷ್ಣುವರ್ಧನ್‍, ಅಂಬರೀಶ್‍ ಕೊನೆಯ ಚಿತ್ರ

ಈ ಚಿತ್ರವು ವಿಷ್ಣುವರ್ಧನ್‍ ಮತ್ತು ಅಂಬರೀಶ್‍ ಅವರ ಕೊನೆಯ ಚಿತ್ರಾಗಲಿದೆ. ಅದು ಹೇಗೆಂದರೆ, ಈ ಚಿತ್ರಕ್ಕಾಗಿ ಮಲ್ಟಿಸ್ಟಾರರ್ ಹಾಡೊಂದನ್ನು ಚಿತ್ರೀಕರಿಸಲಾಗಿದ್ದು, ಇದರಲ್ಲಿ ವಿಷ್ಣುವರ್ಧನ್‍, ಅಂಬರೀಶ್‍, ಜಗ್ಗೇಶ್‍, ಶಿವರಾಜಕುಮಾರ್‍, ಪುನೀತ್‍ ರಾಜಕುಮಾರ್, ದರ್ಶನ್‍, ಆದಿತ್ಯ, ರಮೇಶ್‍ ಅರವಿಂದ್‍ ಮುಂತಾದವರು ಹೆಜ್ಜೆ ಹಾಕಿದ್ದಾರೆ. ಕನ್ನಡ ಚಿತ್ರರಂಗದಲ್ಲಿ ಒಂದೇ ಹಾಡಿನಲ್ಲಿ ಇಷ್ಟೊಂದು ಸಂಖ್ಯೆಯ ಸ್ಟಾರ್ ನಟರು ಬೇರ್ಯಾವ ಚಿತ್ರದಲ್ಲೂ ನಟಿಸಿರಲಿಲ್ಲ. ಈ ಹಾಡಿನಲ್ಲಿ ವಿಷ್ಣುವರ್ಧನ್‍ ಮತ್ತು ಅಂಬರೀಶ್ ಅತಿಥಿಗಳಾಗಿ ಬಂದು ಹೋಗಿದ್ದರಿಂದ, ಇದು ಅವರಿಬ್ಬರ ಕೊನೆಯ ಚಿತ್ರವಾಗಲಿದೆ.

ಇದು ಕನ್ನಡದ ವಿಳಂಬಿತ ಚಿತ್ರಗಳ ಪಟ್ಟಿ. ಈ ಚಿತ್ರಗಳು ಹಲವು ವರ್ಷಗಳ ಕಾಲ ನಿಂತಿದ್ದಾಗ, ಪುನಃ ಈ ಚಿತ್ರಗಳು ಶುರುವಾಗುತ್ತದೆ ಎಂದು ಯಾರೂ ಊಹಿಸಿರಲಿಲ್ಲ. ಆದರೂ ಈ ಚಿತ್ರಗಳು ಪುನಃ ಪ್ರಾರಂಭವಾಗಿ ಬಿಡುಗಡೆಯಾದವು. ಅದೇ ರೀತಿ, ನಿಂತು ಹೋಗಿರುವ ಅದೆಷ್ಟೋ ಚಿತ್ರಗಳ ಪೈಕಿ ಯಾವುದು ಮುಂದೊಂದು ದಿನ ಎದ್ದು ಬಂದು ಬಿಡುಗಡೆಯಾಗುತ್ತದೋ, ಹೇಳುವುದು ಕಷ್ಟ.

ಚೇತನ್ ನಾಡಿಗೇರ್ ಪರಿಚಯ

ಕಳೆದ ಎರಡು ದಶಕಗಳಿಂದ ಸಿನಿಮಾ ಪತ್ರಕರ್ತರಾಗಿ ಕೆಲಸ ಮಾಡುತ್ತಿರುವ ಚೇತನ್‍ ನಾಡಿಗೇರ್, ‘ಉದಯವಾಣಿ’, ‘ರೂಪತಾರಾ’, ‘ಕನ್ನಡ ಪ್ರಭ’, ‘ವಿಜಯವಾಣಿ’ ಮತ್ತು ‘ವಿಜಯ ಕರ್ನಾಟಕ’ ಪತ್ರಿಕೆಗಳಲ್ಲಿ ಸಿನಿಮಾ ವರದಿಗಾರರಾಗಿ, ವಿಮರ್ಶಕರಾಗಿ ಕಾರ್ಯನಿರ್ವಹಿಸಿದ್ದಾರೆ. ರಮೇಶ್‍ ಅರವಿಂದ್‍ ಅವರ ‘ಖುಷಿಯಿಂದ ರಮೇಶ್‍’ ಪುಸ್ತಕದ ನಿರೂಪಣೆ ಮಾಡುವುದರ ಜೊತೆಗೆ, ಭಾರತೀಯ ಚಿತ್ರರಂಗದ ಹಲವು ಹೆಗ್ಗಳಿಕೆ ಮತ್ತು ದಾಖಲೆಗಳನ್ನು ಸಾರುವ ‘ಸ್ಕ್ರೀನ್‍ ಶಾಟ್‍ - ದಾಖಲಾಗದ ದಾಖಲೆಗಳು’ ಎಂಬ ಪುಸ್ತಕವನ್ನು ಬರೆದಿದ್ದಾರೆ. ಸದ್ಯ ಸ್ವತಂತ್ರ ಪರ್ತಕರ್ತರಾಗಿ ಕಾರ್ಯನಿರ್ವಹಿಸುತ್ತಿರುವ ಅವರು 'ಹಿಂದೂಸ್ಥಾನ್‍ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ‘ಸಿನಿಸ್ಮೃತಿ’ ಅಂಕಣದ ಮೂಲಕ ಮನರಂಜನಾ ಕ್ಷೇತ್ರದ ಹಲವು ವಿಷಯಗಳನ್ನು ಹಂಚಿಕೊಳ್ಳಲಿದ್ದಾರೆ.

Whats_app_banner