Mandya Sahitya Sammelana: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮುನ್ನವೇ ಎದುರಾದ 5 ವಿವಾದಗಳು
ಕನ್ನಡ ಸುದ್ದಿ  /  ಕರ್ನಾಟಕ  /  Mandya Sahitya Sammelana: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮುನ್ನವೇ ಎದುರಾದ 5 ವಿವಾದಗಳು

Mandya Sahitya Sammelana: ಮಂಡ್ಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಆರಂಭಕ್ಕೂ ಮುನ್ನವೇ ಎದುರಾದ 5 ವಿವಾದಗಳು

Mandya Sahitya Sammelana: ಮಂಡ್ಯದಲ್ಲಿ ಶುಕ್ರವಾರದಿಂದ ಮೂರು ದಿನಗಳ ಕನ್ನಡ ಸಾಹಿತ್ಯ ಜಾತ್ರೆಯ ಸಡಗರ. ಇದನ್ನು ಆಯೋಜಿಸುವ ಮುನ್ನವೇ ವಿವಾದಗಳೂ ಎದುರಾದವು. ಅವುಗಳ ಪಟ್ಟಿ ಇಲ್ಲಿದೆ.

ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೂ ಮುನ್ನವೇ ಎದುರಾದ ವಿವಾದಗಳು.
ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೂ ಮುನ್ನವೇ ಎದುರಾದ ವಿವಾದಗಳು.

ಮಂಡ್ಯದಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಮೂರು ತಿಂಗಳಿನಿಂದ ನಿರಂತರ ತಯಾರಿ ನಡೆದು ಮೂರು ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡುವ ಹಂತಕ್ಕೂ ಬಂದಾಗಿದೆ. ಅದರಲ್ಲೂ ಸಕ್ಕರೆ ನಾಡಿನಲ್ಲಿ ಅಕ್ಕರೆ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ವೇದಿಕೆಯೂ ಅಣಿಯಾಗಿದೆ. ಇದರ ನಡುವೆ ಸಮ್ಮೇಳನ ಆಯೋಜನೆಯಿಂದ ಆರಂಭಿಸಿ, ಸಮ್ಮೇಳನ ಅಧ್ಯಕ್ಷರ ಆಯ್ಕೆಯಿಂದ ಹಿಡಿದು ಊಟದವರೆಗೂ ಸಾಕಷ್ಟು ವಿವಾದಗಳು ಆದವು. ಮಂಡ್ಯ ಎಂದರೆ ಕೊಂಚ ಪ್ರತಿಕ್ರಿಯೆ ಹೆಚ್ಚೇ ನೀಡುವ, ಕನ್ನಡದ ಅಭಿಮಾನವನ್ನು ಈಗಲೂ ಕಾಪಿಟ್ಟುಕೊಂಡಿರುವ ನೆಲ. ಅದರಲ್ಲೂ ಭಾಷೆ ವಿಚಾರ ಬಂದಾಗ ಇಲ್ಲಿನ ಜನ ಎಂಥ ತ್ಯಾಗಕ್ಕಾದರೂ ಸಿದ್ದ. ಈಗಲೂ ಅಪ್ಪಟ ಕನ್ನಡ ಭಾಷೆಯ ನಾಡು ಮಂಡ್ಯ. ಇಲ್ಲಿ ಮೂರು ದಶಕದ ನಂತರ ಸಾಹಿತ್ಯ ಸಮ್ಮೇಳನ ನಡೆಯುತ್ತಿದ್ದು, ಸಣ್ಣಪುಟ್ಟ ವಿವಾದಗಳು ನಡುವೆ ಸಮ್ಮೇಳನ ಆಯೋಜನೆಗೊಂಡಿದೆ.

ಈ ಬಾರಿ ಸಮ್ಮೇಳನಕ್ಕೂ ಮುನ್ನ ಎದುರಾದ ವಿವಾದಗಳ ಪಟ್ಟಿ ಹೀಗಿದೆ

  1. ಸಾಹಿತ್ಯ ಸಮ್ಮೇಳನವನ್ನು ಮಂಡ್ಯದಲ್ಲಿ ಆಯೋಜಿಸಲು ಎರಡು ವರ್ಷದ ಹಿಂದೆ ಹಾವೇರಿಯಲ್ಲಿ ನಡೆದಿದ್ದ ಸಾಹಿತ್ಯ ಸಮ್ಮೇಳನದಲ್ಲಿ ನಿರ್ಣಯಿಸಲಾಗಿತ್ತು. ವರ್ಷದ ಹಿಂದೆಯೇ ಸಮ್ಮೇಳನ ನಡೆಯಬೇಕಿತ್ತಾದರೂ ಕರ್ನಾಟಕದಲ್ಲಿ ಚುನಾವಣೆ, ನಂತರ ಹೊಸ ಸರ್ಕಾರ ರಚನೆ, ಬರದ ಸನ್ನಿವೇಶ ಸೇರಿ ನಾನಾ ಕಾರಣಗಳಿಂದ ಮೂರು ಬಾರಿ ಮುಂದೆ ಹೋಯಿತು. ಮಂಡ್ಯದಲ್ಲಿ ಸಮ್ಮೇಳನ ನಡೆಯುವುದೋ ಇಲ್ಲವೋ ಎನ್ನುವ ಚರ್ಚೆಗಳೂ ನಡೆದಿದ್ದವು. ಕೊನೆಗೂ ಎಲ್ಲವೂ ಬಗೆಹರಿದು ಮಂಡ್ಯದಲ್ಲಿ ಸಮ್ಮೇಳನ ಆಯೋಜಿಸುವ ಅಂತಿಮ ತೀರ್ಮಾನವಾಯಿತು.
  2. ಮಂಡ್ಯ ಸಾಹಿತ್ಯ ಸಮ್ಮೇಳನಕ್ಕೆ ಅಧ್ಯಕ್ಷರನ್ನು ಆಯ್ಕೆ ಮಾಡುವ ವಿಚಾರ ಮುನ್ನಲೆಗೆ ಬಂದಿತು. ಆಗ ಸಾಹಿತ್ಯೇತರ ಕ್ಷೇತ್ರದವರೂ ಸಮ್ಮೇಳನ ಅಧ್ಯಕ್ಷರಾಗಬಹುದು ಎಂದು ಕಸಾಪ ಅಧ್ಯಕ್ಷ ಡಾ.ಮಹೇಶ ಜೋಶಿ ಹೇಳಿಕೆ ನೀಡಿದ್ದು ವಿವಾದ ಹುಟ್ಟು ಹಾಕಿತು. ಇದು ಕನ್ನಡ ಸಾಹಿತ್ಯ ಸಮ್ಮೇಳನ. ಇಲ್ಲಿ ಕನ್ನಡದ ಸಾಹಿತಿಯೇ ಅಧ್ಯಕ್ಷರಾಗಬೇಕು. ಸಾಹಿತ್ಯೇತರಿಗೆ ಹಲವು ವೇದಿಕೆಗಳಿವೆ. ಅವರಿಗ ಅಲ್ಲಿ ಅವಕಾಶ ಮಾಡಿಕೊಡಬಹುದು. ಸಾಹಿತ್ಯದ ಹಿನ್ನೆಲೆಯವರನ್ನೇ ಸಮ್ಮೇಳನ ಅಧ್ಯಕ್ಷರನ್ನಾಗಿ ಮಾಡಿ ಎನ್ನುವ ಬಲವಾದ ಅಭಿಪ್ರಾಯ ವ್ಯಕ್ತವಾಯಿತು.

    ಇದನ್ನೂ ಓದಿರಿ: ಅಂದು ಮಂಡ್ಯ ಸಾಹಿತ್ಯ ಸಮ್ಮೇಳನ ಸಂಘಟಕ, ಈಗ ಮಂಡ್ಯದಲ್ಲೇ ಸಮ್ಮೇಳನಾಧ್ಯಕ್ಷ: 95 ವಯಸ್ಸಿನಲ್ಲೂ ಸಕ್ರಿಯ, ಇದು ಗೊರುಚ ಪರಿಚಯ
  3. ಮಂಡ್ಯ ಸಾಹಿತ್ಯ ಸಮ್ಮೇಳನದಲ್ಲಿ ಊಟದ ವಿವಾದವೂ ಕಾವು ತೆಗೆದುಕೊಂಡಿತು. ಅದರಲ್ಲೂ ಕನ್ನಡ ಸಾಹಿತ್ಯ ಸಮ್ಮೇಳನಕ್ಕೆ ಸರ್ಕಾರವೇ ಅನುದಾನ ನೀಡುತ್ತಿದೆ. ಇಲ್ಲಿ ಸಸ್ಯಾಹಾರದ ಜತೆಗೆ ಮಾಂಸಾಹಾರವನ್ನೂ ನೀಡಿ ಎನ್ನುವ ಬಲವಾದ ಬೇಡಿಕೆ ಕೇಳಿ ಬಂದಿತು. ಮೊಟ್ಟೆಯನ್ನೂ ಕೊಡಬೇಕು ಎನ್ನುವ ಒತ್ತಾಯ ಬಲವಾಯಿತು. ಸಾಮಾಜಿಕ ಮಾಧ್ಯಮಗಳಲ್ಲೂ ಇದು ಚರ್ಚೆಗೆ ಆಸ್ಪದ ಮಾಡಿಕೊಟ್ಟಿತು. ಮಂಡ್ಯದಲ್ಲಿ ಕೆಲವರು ಪ್ರತಿಭಟನೆಯನ್ನೂ ನಡೆಸಿದರು. ಇತರೆಡೆಯೂ ಹಕ್ಕೊತ್ತಾಯಗಳು ಕೇಳಿ ಬಂದವು. ಆದರೆ ಇದು ಕಸಾಪ ತೀರ್ಮಾನವಲ್ಲ. ಇದಕ್ಕಾಗಿಯೇ ಆಹಾರ ಸಮಿತಿ ಇದ್ದು ಅವರೇ ಮೂರು ದಿನದ ಊಟದ ಪಟ್ಟಿ ತಯಾರಿ ವ್ಯವಸ್ಥೆ ಮಾಡುತ್ತಾರೆ ಎಂದು ಕಸಾಪ ಅಧ್ಯಕ್ಷರು ಸ್ಪಷ್ಟನೆ ನೀಡಿದರು. ಸಾಹಿತ್ಯ ಸಮ್ಮೇಳನ ಅಧ್ಯಕ್ಷ ಗೊ.ರು.ಚನ್ನಬಸಪ್ಪ ಅವರೂ ಪ್ರತಿಕ್ರಿಯೆ ನೀಡಿದರು. ಈಗ ಆ ವಿವಾದ ತಣ್ಣಗಾದರೂ ಸಮ್ಮೇಳನದ ವೇಳೆ ಮತ್ತೆ ಚರ್ಚೆಗೆ ಬರುವ, ಪ್ರತಿಭಟನೆ ಸಾಧ್ಯತೆ ತಳ್ಳಿ ಹಾಕುವಂತಿಲ್ಲ
  4. ಮಂಡ್ಯಸಾಹಿತ್ಯ ಸಮ್ಮೇಳನದ ಸ್ಥಳ ಆಯ್ಕೆ ಹಾಗೂ ಸಮಿತಿಗಳಿಗೆ ಪದಾಧಿಕಾರಿಗಳನ್ನು ನೇಮಿಸುವಾಗ ಕಸಾಪ ಅಧ್ಯಕ್ಷ ಮಹೇಶ್‌ ಜೋಶಿ ಏಕಪಕ್ಷೀಯವಾಗಿ ನಡೆದುಕೊಂಡಿದ್ದು. ಯಾರಿಗೂ ಅವಕಾಶ ನೀಡಿಲ್ಲ ಎನ್ನುವ ಟೀಕೆಗಳು ಎದುರಾದವು. ಇದಕ್ಕೆ ಮಂಡ್ಯದ ಹಲವು ಸಾಹಿತಿಗಳು, ಕಸಾಪ ಪ್ರತಿನಿಧಿಗಳು ಸ್ಪಷ್ಟನೆ ನೀಡಬೇಕಾಯಿತು.

    ಇದನ್ನೂ ಓದಿರಿ: ಬೆಂಗಳೂರು ಮೈಸೂರು ಹೆದ್ದಾರಿ ಪಕ್ಕದಲ್ಲೇ ಮಂಡ್ಯದ ಕನ್ನಡ ಸಾಹಿತ್ಯ ಸಮ್ಮೇಳನ ಸ್ಥಳ ನಿಗದಿ; ಒಂದು ದಿನದ ವೇತನ ನೀಡಲಿದ್ದಾರೆ ಸರ್ಕಾರಿ ನೌಕರರು
  5. ಸಮ್ಮೇಳನದಲ್ಲಿ ಮಳಿಗೆಗಳನ್ನು ಹಾಕಲಾಗಿದ್ದು, ಪುಸ್ತಕ ಮಾರಾಟ ಮಾಡುವವರಿಗೆ ದುಬಾರಿ ದರದಲ್ಲಿ ಮಳಿಗೆ ನೀಡಲಾಗುತ್ತಿದೆ. ಇದನ್ನು ಕಡಿಮೆ ಮಾಡಬೇಕು. ಸರ್ಕಾರವೇ ಹಣ ನೀಡುವಾಗ ಹೆಚ್ಚಿನ ದರ ಮಳಿಗೆಗೆ ನಿಗದಿಪಡಿಸುವುದು ಬೇಡ. ಈಗ ಪುಸ್ತಕೋದ್ಯಮವೂ ಸಂಕಷ್ಟದಲ್ಲಿರುವಾಗ ಪುಸ್ತಕ ಪ್ರಕಾಶಕರು, ವ್ಯಾಪಾರಿಗಳಿಗೆ ಹೊರೆಯಾಗಲಿದೆ ಎನ್ನುವ ಅಭಿಪ್ರಾಯವೂ ವ್ಯಕ್ತವಾಯಿತು.

Whats_app_banner