ಕೊಹ್ಲಿ ಜೊತೆ ಕಿರಿಕ್ ಮಾಡಿಕೊಂಡಿದ್ದ ನವೀನ್ ಉಲ್ ಹಕ್ ಏಕದಿನ ಕ್ರಿಕೆಟ್ಗೆ ನಿವೃತ್ತಿ; ವಿಶ್ವಕಪ್ ಬಳಿಕ 24 ವರ್ಷದ ಅಫ್ಘನ್ ಬೌಲರ್ ವಿದಾಯ
Naveen-ul-Haq Retire: ಮುಂಬರುವ ಏಕದಿನ ವಿಶ್ವಕಪ್ ಟೂರ್ನಿಯ ನಂತರ ಏಕದಿನ ಕ್ರಿಕೆಟ್ನಿಂದ ಹಿಂದೆ ಸರಿಯುವುದಾಗಿ ಅಫ್ಘಾನಿಸ್ತಾನದ 24 ವರ್ಷದ ಯುವ ಬೌಲರ್ ನವೀನ್ ಉಲ್ ಹಕ್ ಘೋಷಿಸಿದ್ದಾರೆ.
ಅಫ್ಘಾನಿಸ್ತಾನ ಕ್ರಿಕೆಟ್ ತಂಡದ ಯುವ ಬೌಲರ್ ನವೀನ್ ಉಲ್ ಹಕ್ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್ಗೆ ವಿದಾಯ (Naveen-ul-Haq Retire) ಘೋಷಿಸಿದ್ದಾರೆ. ಅಕ್ಟೋಬರ್ 5ರಿಂದ ಭಾರತದಲ್ಲಿ ನಡೆಯಲಿರುವ ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ (ICC ODI World Cup 2023) ಬಳಿಕ ಏಕದಿನ ಕ್ರಿಕೆಟ್ನಿಂದ ಬದಿಗೆ ಸರಿಯುವುದಾಗಿ ಅಚ್ಚರಿ ನಿರ್ಧಾರ ಪ್ರಕಟಿಸಿದ್ದಾರೆ. 24 ವರ್ಷದ ನವೀನ್ ಉಲ್ ಹಕ್, ಟಿ20 ಕ್ರಿಕೆಟ್‌ನಲ್ಲಿ ಮುಂದುವರೆಯುವುದಾಗಿ ತಮ್ಮ ಹೇಳಿಕೆಯಲ್ಲಿ ಉಲ್ಲೇಖಿಸಿದ್ದಾರೆ.
2021ರಿಂದ ಏಕದಿನ ಕ್ರಿಕೆಟ್‌ನಲ್ಲಿ (ODI Cricket) ಕಾಣಿಸಿಕೊಳ್ಳದ ನವೀನ್, ಕೇವಲ ಟಿ20 ಕ್ರಿಕೆಟ್‌ನಲ್ಲಿ ಬ್ಯುಸಿಯಾಗಿದ್ದರು. ಫ್ರಾಂಚೈಸಿ ಲೀಗ್ಗಳಲ್ಲಿ ನವೀನ್ ಹೆಚ್ಚು ಕಾಣಿಸಿಕೊಂಡಿದ್ದಾರೆ. 2021ರ ಜನವರಿಯಿಂದ ಅಫ್ಘಾನಿಸ್ತಾನ ಏಕದಿನ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗದ ನವೀನ್, ಏಕದಿನ ವಿಶ್ವಕಪ್ ಆಯ್ಕೆಯಾಗಿದ್ದೂ ಕೂಡ ಅಚ್ಚರಿಯಾಗಿತ್ತು. ಅವರ ವೃತ್ತಿಜೀವನದಲ್ಲಿ ಈವರೆಗೂ 7 ಏಕದಿನ ಪಂದ್ಯಗಳಲ್ಲಿ ಮಾತ್ರ ಕಾಣಿಸಿಕೊಂಡಿದ್ದಾರೆ. ತಮ್ಮ ಸೋಷಿಯಲ್ ಮೀಡಿಯಾ ಖಾತೆಗಳಲ್ಲಿ ತಮ್ಮ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ.
ಎಲ್ಲರಿಗೂ ಧನ್ಯವಾದಗಳು
ನನ್ನ ದೇಶವನ್ನು ಪ್ರತಿನಿಧಿಸುವುದು ಒಂದು ಸಂಪೂರ್ಣ ಗೌರವ ಸೂಚಕ. ಈ ವಿಶ್ವಕಪ್ ಬಳಿಕ ಏಕದಿನ ಸ್ವರೂಪದಿಂದ ನಿವೃತ್ತಿ ಘೋಷಿಸಲು ಬಯಸುತ್ತೇನೆ. ಮತ್ತು ನನ್ನ ದೇಶಕ್ಕಾಗಿ ಟಿ20 ಕ್ರಿಕೆಟ್‌ನಲ್ಲಿ ಈ ನೀಲಿ ಜರ್ಸಿಯನ್ನು ಧರಿಸುವುದನ್ನು ಮುಂದುವರಿಸುತ್ತೇನೆ. ಇದು ಸುಲಭದ ನಿರ್ಧಾರವಲ್ಲ. ನನ್ನ ವೃತ್ತಿಜೀವನ ವಿಸ್ತರಿಸಲು ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಬೇಕಾಗಿತ್ತು. ಅಫ್ಘಾನಿಸ್ತಾನ ಕ್ರಿಕೆಟ್ ಮಂಡಳಿಗೆ ನನ್ನ ಧನ್ಯವಾದಗಳು ಮತ್ತು ನನ್ನೆಲ್ಲಾ ಅಭಿಮಾನಿಗಳ ಅವರ ಬೆಂಬಲ ಮತ್ತು ಅಚಲ ಪ್ರೀತಿಗಾಗಿ ನಾನು ಸದಾ ಋಣಿ ಎಂದು ಇನ್ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದಾರೆ ನವೀನ್.
ಮೊಣಕಾಲಿನ ಗಾಯದಿಂದ ನವೀನ್, ಇದೇ ಜುಲೈನಲ್ಲಿ ಬಾಂಗ್ಲಾದೇಶ ಎದುರಿನ ಎರಡು ಪಂದ್ಯಗಳ ಟಿ20 ಸರಣಿಗೆ ದೂರವಾಗಿದ್ದ ನವೀನ್, ಶಸ್ತ್ರಚಿಕಿತ್ಸೆಗೆ ಇಂಗ್ಲೆಂಡ್‌ಗೆ ತೆರಳಿದ್ದರು. ತನ್ನ ನಿವೃತ್ತಿಯ ಕುರಿತು ಕ್ರಿಕ್ಬಜ್ ಜೊತೆ ಮಾತನಾಡಿದ್ದು, ವೈದ್ಯರ ಸಲಹೆಯ ಮೇರೆಗೆ ಏಕದಿನದಿಂದ ಹೊರಬರಲು ನಿರ್ಧರಿಸಿರುವುದಾಗಿ ತಿಳಿಸಿದ್ದಾರೆ. ಕೆಲಸದ ಹೊರೆ ಇಳಿಸಲು ವೈದ್ಯರು ಮತ್ತು ಭೌತ ಚಿಕಿತ್ಸಕರು ನನಗೆ ಸಲಹೆ ನೀಡಿದ್ದಾರೆ. ಹಾಗಾಗಿ ದೀರ್ಘ ಸ್ವರೂಪದ ಕ್ರಿಕೆಟ್ ತ್ಯಜಿಸಿ ಕಡಿಮೆ ಸ್ವರೂಪದ ಕ್ರಿಕೆಟ್‌ನತ್ತ ಗಮನಹರಿಸುವುದಾಗಿ ಹೇಳಿದ್ದಾರೆ.
ನವೀನ್ ಉಲ್ ಹಕ್ ವೃತ್ತಿಜೀವನ
ಏಕದಿನ ಕ್ರಿಕೆಟ್‌ನಲ್ಲಿ 7 ಪಂದ್ಯಗಳಲ್ಲಿ ಕಾಣಿಸಿಕೊಂಡಿದ್ದು, 14 ವಿಕೆಟ್ ಉರುಳಿಸಿದ್ದಾರೆ. ಹಾಗೆಯೇ 27 ಟಿ20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು 34 ವಿಕೆಟ್ ಪಡೆದಿದ್ದಾರೆ. ಇನ್ನು ಇದೇ ವರ್ಷ ಐಪಿಎಲ್ನಲ್ಲೂ ಭಾಗವಹಿಸಿದ ನವೀನ್ ಉಲ್ ಹಕ್ ಅವರು ಲಕ್ನೋ ಸೂಪರ್ ಜೈಂಟ್ಸ್ ತಂಡದ ಭಾಗವಾಗಿದ್ದಾರೆ. 8 ಪಂದ್ಯಗಳಲ್ಲಿ ಬೌಲಿಂಗ್ ಮಾಡುವ ಅವಕಾಶ ಪಡೆದಿದ್ದು, 8 ಪಂದ್ಯಗಳಲ್ಲಿ 11 ವಿಕೆಟ್ ಪಡೆದಿದ್ದಾರೆ.
2 ವರ್ಷಗಳ ನಂತರ ಒಡಿಐ ತಂಡಕ್ಕೆ ಕಂಬ್ಯಾಕ್
2016ರ ಸೆಪ್ಟೆಂಬರ್ ಬಾಂಗ್ಲಾದೇಶ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ನವೀನ್, 2021ರ ಜನವರಿ 26ರಂದು ಐರ್ಲೆಂಡ್ ವಿರುದ್ಧ ಕೊನೆಯದಾಗಿ ಕಾಣಿಸಿಕೊಂಡಿದ್ದಾರೆ. ಇದೀಗ 2 ವರ್ಷಗಳ ತಂಡಕ್ಕೆ ಮರಳಿದ್ದು, ತಂಡಕ್ಕೆ ಚೊಚ್ಚಲ ಏಕದಿನ ವಿಶ್ವಕಪ್ ಗೆದ್ದುಕೊಡುವ ವಿಶ್ವಾಸದಲ್ಲಿದ್ದಾರೆ. 50 ಓವರ್ಗಳ ಕ್ರಿಕೆಟ್ಗಿಂತ ಅಂತಾರಾಷ್ಟ್ರೀಯ ಟಿ20 ಸೇರಿ ಫ್ರಾಂಚೈಸಿ ಚುಟುಕು ಲೀಗ್ಗಳಲ್ಲಿ ಹೆಚ್ಚಾಗಿ ಕಾಣಿಸಿಕೊಂಡಿದ್ದಾರೆ. ಒಟ್ಟಾರೆ ಟಿ20 ಕ್ರಿಕೆಟ್‌ನಲ್ಲಿ 145 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 175 ವಿಕೆಟ್ಗಳ ಸಾಧನೆ ಮಾಡಿದ್ದಾರೆ. ಲಂಕಾ ಪ್ರೀಮಿಯರ್ ಲೀಗ್, ಬಿಗ್ಬ್ಯಾಷ್ ಲೀಗ್, ಟಿ20 ಬ್ಲಾಸ್ಟ್ ಲೀಗ್, ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಅವರು ಕಾಣಿಸಿಕೊಂಡಿದ್ದಾರೆ.
ಐಪಿಎಲ್ನಲ್ಲಿ ಕೊಹ್ಲಿ ಜೊತೆ ಕಿರಿಕ್
ಐಪಿಎಲ್ನಲ್ಲಿ ಮೇ 1ರಂದು ನಡೆದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಲಕ್ನೋ ಸೂಪರ್ ಜೈಂಟ್ಸ್ ತಂಡಗಳ ನಡುವಿನ ಪಂದ್ಯ ಮುಕ್ತಾಯದ ಬಳಿಕ ವಿರಾಟ್ ಕೊಹ್ಲಿ ಜೊತೆ ನವೀನ್ ಉಲ್ ಹಕ್ ಕಿರಿಕ್ ಮಾಡಿಕೊಂಡಿದ್ದರು. ನವೀನ್ ಬ್ಯಾಟಿಂಗ್ ಮಾಡುತ್ತಿದ್ದ ಅವಧಿಯಲ್ಲಿ ಕೊಹ್ಲಿ ಗುರಾಯಿಸಿದ್ದರು. ಇದೇ ವಿಚಾರವನ್ನಿಟ್ಟುಕೊಂಡು ಪಂದ್ಯ ಮುಗಿದ ನಂತರ ಹಸ್ತಲಾಘವ ವೇಳೆ ನವೀನ್ ಕ್ಯಾತೆ ತೆಗೆದಿದ್ದರು. ಇದು ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿತ್ತು. ಕೊಹ್ಲಿಯನ್ನೇ ಗುರಿಯಾಗಿಸಿಕೊಂಡು ಇನ್ಸ್ಟಾಗ್ರಾಂ ಪೋಸ್ಟ್ಗಳು ಹಾಕುತ್ತಿದ್ದರು. ಹಾಗಾಗಿ ಕೊಹ್ಲಿ ಅಭಿಮಾನಿಗಳು ಟ್ರೋಲ್ ಮಾಡುತ್ತಿದ್ದರು.