BAG vs AFG: ದಿಟ್ಟ ಹೋರಾಟ ತೋರಿ ಸೋತ ಅಫ್ಘಾನಿಸ್ತಾನ; ಬಾಂಗ್ಲಾಗೆ 89 ರನ್‌ಗಳ ಗೆಲುವು
ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಬಾಂಗ್ಲಾದೇಶ 89 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ. ಆದರೆ ಬೃಹತ್ ಮೊತ್ತದ ಗುರಿ ಬೆನ್ನಟ್ಟಿದ ಅಫ್ಘಾನ್ ತೋರಿದ ಪ್ರತಿರೋಧಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ಲಾಹೋರ್ (ಪಾಕಿಸ್ತಾನ): ಇಬ್ರಾಹಿಂ ಝದ್ರಾನ್ ಹಾಗೂ ನಾಯಕ ಹಶ್ಮತುಲ್ಲಾ ಶಾಹಿದಿ ಅವರ ತಲಾ ಅರ್ಧ ಶತಕಗಳ ಹೊರತಾಗಿಯೂ ಬಾಂಗ್ಲಾ ನೀಡಿದ್ದ ಬೃಹತ್ ಮೊತ್ತದ ಗುರಿಯನ್ನು ಮುಟ್ಟುವಲ್ಲಿ ಅಫ್ಘಾನಿಸ್ತಾನ ವಿಫಲವಾಗಿ ಸೋಲನ್ನು ಒಪ್ಪಿಕೊಂಡಿದೆ. ಆದರೆ ಅಫ್ಘಾನ್ ತಂಡ ತೋರಿದ ದಿಟ್ಟ ಹೋರಾಟಕ್ಕೆ ಭಾರಿ ಮೆಚ್ಚುಗೆ ವ್ಯಕ್ತವಾಯಿತು.
ಪಾಕಿಸ್ತಾನದ ಲಾಹೋರ್ನ ಗಡಾಫಿ ಮೈದಾನದಲ್ಲಿ ಅಂತಿಮವಾಗಿ ಬಾಂಗ್ಲಾದೇಶ 89 ರನ್ ಗಳ ಗೆಲುವಿನ ಬಗೆ ಬೀರಿತು. ಶಕೀಬ್ ಅಲ್ ಹಸನ್ ಪಡೆ ನೀಡಿದ್ದ 335 ರನ್‌ಗಳಿಗೆ ಪ್ರತಿಯಾಗಿ ಅಫ್ಘಾನ್ 44.3 ಓವರ್‌ಗಳಲ್ಲಿ 245 ರನ್ ಗಳಿಸಿ ತನ್ನೆಲ್ಲಾ ವಿಕೆಟ್ ಕಳೆದುಕೊಂಡಿತು.
ಅಫ್ಘಾನಿಸ್ತಾನ ಪರ ರಹಮಾನುಲ್ಲಾ ಗುರ್ಬಾಜ್ (1), ಇಬ್ರಾಹಿಂ ಝದ್ರಾನ್ (75), ರಹಮತ್ ಷಾ (33), ಹಶ್ಮತುಲ್ಲಾ ಶಾಹಿದಿ (ನಾಯಕ) (51), ನಜೀಬುಲ್ಲಾ ಝದ್ರಾನ್ (17), ಮೊಹಮ್ಮದ್ ನಬಿ (3), ಗುಲ್ಬದಿನ್ ನೈಬ್ (15), ಕರೀಂ ಜನತ್ (1), ಫಜಲ್ಹಕ್ ಫಾರೂಕಿ ಔಟಾಗದೆ 1 ರನ್, ಮುಜೀಬ್ ಉರ್ರಹ್ಮಾನ್ 4 ರನ್ ಗಳಿಸಿ ಹಿಟ್ ವಿಕೆಟ್ ಆದರು.
ಕೊನೆಯಲ್ಲಿ ಅಬ್ಬರಿಸಿದ ರಶೀದ್ ಖಾನ್
ಗೆಲ್ಲಲು ಅಧಿಕ ರನ್‌ಗಳು ರನ್‌ಗಳ ಸಾವಲು ಮುಂದಿದ್ದರೂ ಕೊನೆಯಲ್ಲಿ ಬ್ಯಾಟ್ ಬೀಸಲು ಬಂದ ರಶೀದ್ ಖಾನ್ ಅಬ್ಬರಿಸಿದರು. 15 ಎಸೆತಗಳಲ್ಲಿ 3 ಬೌಂಡರಿ ಹಾಗೂ 1 ಸಿಕ್ಸರ್ ಸಹಿತ 24 ರನ್ ಸಿಡಿಸಿದರು.
ಏಷ್ಯಾಕಪ್ ಟೂರ್ನಿಯ ಮೊದಲ ಪಂದ್ಯದಲ್ಲಿ ಶ್ರೀಲಂಕಾ ವಿರುದ್ಧ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ಹೀನಾಯ ಸೋಲನುಭವಿಸಿದ್ದ ಬಾಂಗ್ಲಾದೇಶ, ತನ್ನ 2ನೇ ಪಂದ್ಯದಲ್ಲಿ ಗೆಲ್ಲುವ ಮೂಲಕ ಅಂಕಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿದೆ.
ಟಾಸ್ ಗೆದ್ದು ಮೊದಲು ಬ್ಯಾಟ್ ಮಾಡಿದ ಬಾಂಗ್ಲಾದೇಶ ಮೆಹಿದಿ ಹಸನ್ ಮತ್ತು ನಜ್ಮುಲ್ ಹೊಸೈನ್ ಶಾಂಟೋ ಅವರ ಅಬ್ಬರದ ಶತಕಗಳ ನೆರವಿನಿಂದ ನಿಗದಿತ 50 ಓವರ್‌ಗಳಿಗೆ 5 ವಿಕೆಟ್ ಕಳೆದುಕೊಂಡು 334 ರನ್‌ಗಳ ಬೃಹತ್ ಮೊತ್ತ ಪೇರಿಸಿತ್ತು.
ನಾಯಕನ ಬ್ಯಾಟಿಂಗ್ ಆಯ್ಕೆ ಸರ್ಮಥಿಸಿಕೊಂಡ ಬ್ಯಾಟರ್‌ಗಳು
ನಾಯಕನ ಆಯ್ಕೆಯನ್ನು ಸಮರ್ಥಿಸುವಂತೆ ಬ್ಯಾಟ್ ಬೀಸಿದ ಆರಂಭಿಕರಾದ ಮೊಹಮ್ಮದ್ ನಯೀಮ್ ಮತ್ತು ಮೆಹಿದಿ ಹಸನ್ ಮೊದಲ ವಿಕೆಟ್ಗೆ 60 ರನ್ ಪೇರಿಸಿದರು. ಆದರೆ ನಯೀಮ್ 28 ರನ್ ಗಳಿಸಿ ಮುಜೀಬ್ಗೆ ವಿಕೆಟ್ ಒಪ್ಪಿಸಿ ಹೊರ ನಡೆದರು. ಇದರ ಬೆನ್ನಲ್ಲೇ ತೌಹಿದ್ ಹೃದಯೊಯ್ ಕೂಡ ಡಕೌಟ್ ಆದರು.
ಉತ್ತಮ ಆರಂಭದ ನಡುವೆಯೂ ಸತತ 2 ವಿಕೆಟ್ ಕಳೆದುಕೊಂಡ ಬಳಿಕ ಮೆಹಿದಿ ಜವಾಬ್ದಾರಿಯುತ ಮತ್ತು ರಕ್ಷಣಾತ್ಮಕ ಆಟಕ್ಕೆ ಒತ್ತು ನೀಡಿದರು. ಆ ಮೂಲಕ ಸಂಕಷ್ಟದಿಂದ ತಂಡವನ್ನು ಪಾರು ಮಾಡಿದರು. ಅಲ್ಲದೆ, ಅಫ್ಘನ್ ಬೌಲರ್ಗಳ ಬೆವರಿಳಿಸಿದರು. ಅದ್ಭುತ ಬ್ಯಾಟಿಂಗ್ ನಡೆಸುವ ಮೂಲಕ ಗಮನ ಸೆಳೆದ ಮೆಹಿದಿ ಹಸನ್, ವೃತ್ತಿ ಜೀವನದ 2ನೇ ಏಕದಿನ ಶತಕ ಸಿಡಿಸಿ ಮಿಂಚಿದರು. ಆದರೆ ಶತಕದ ನಂತರ ಎಡಗೈಗೆ ಗಾಯವಾದ ಕಾರಣ ರಿಟೈರ್ಡ್ ಹರ್ಟ್ ಆಗಿ ಹೊರ ನಡೆದರು.
ಮೆಹದಿ ಹಸನ್, ನಜ್ಮುಲ್ ಹೊಸೈನ್ ಶಾಂಟೊ ಶತಕಗಳಿಂದ ಬೃಹತ್ ಗುರಿ
ಮೊದಲ ಪಂದ್ಯದಲ್ಲಿ 89 ರನ್ ಸಿಡಿಸಿದ್ದ ನಜ್ಮುಲ್ ಹೊಸೈನ್ ಶಾಂಟೋ ಈ ಎರಡನೇ ಪಂದ್ಯದಲ್ಲೂ ಅಬ್ಬರದ ಪ್ರದರ್ಶನ ತೋರಿದರು. ಮೆಹಿದಿ ಹಸನ್ಗೆ ಅಮೋಘ ಸಾಥ್ ನೀಡುವ ಭರ್ಜರಿ ಶತಕದ ಜೊತೆಯಾಟಕ್ಕೆ ಕಾರಣವಾದ ಶಾಂಟೋ ಕೂಡ ಮೂರಂಕಿ ದಾಟುವಲ್ಲಿ ಯಶಸ್ವಿಯಾದರು. ಅಫ್ಘನ್ ಬೌಲರ್ಗಳಿಗೆ ಬೆಂಡೆತ್ತಿದ ಶಾಂಟೋ ಏಕದಿನ ಕ್ರಿಕೆಟ್ನಲ್ಲಿ 2ನೇ ಶತಕ ಸಿಡಿಸಿ ಸಂಭ್ರಮಿಸಿದರು. ಆದರೆ ಸೆಂಚುರಿ ಬೆನ್ನಲ್ಲೇ ರನೌಟ್ ಆಗಿ ಹೊರ ನಡೆದರು. ಮೆಹದಿ ಹಸನ್ 119 ಎಸೆತಗಳಲ್ಲಿ 7 ಬೌಂಡರಿ, 2 ಸಿಕ್ಸರ್ಗಳ ಸಹಾಯದಿಂದ 112 ರನ್ ಗಳಿಸಿದರು. ಶಾಂಟೋ 105 ಎಸೆತಗಳಲ್ಲಿ 9 ಬೌಂಡರಿ, 2 ಸಿಕ್ಸರ್ ಸಹಿತ 104 ರನ್ ಸಿಡಿಸಿದರು.