ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ವಿವರ ನೀಡಿದ್ರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌
ಕನ್ನಡ ಸುದ್ದಿ  /  ರಾಷ್ಟ್ರ-ಜಗತ್ತು  /  ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ವಿವರ ನೀಡಿದ್ರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ವಿವರ ನೀಡಿದ್ರು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌

Vijay Mallya: ಭಾರತದಲ್ಲಿ ಬ್ಯಾಂಕುಗಳಿಗೆ ಸಾಲ ಮರುಪಾವತಿಸದೇ ಓಡಿ ಹೋದ ವಿಜಯ್ ಮಲ್ಯ ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು ಎಂಬ ವಿವರನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಸಂಸತ್‌ಗೆ ಒದಗಿಸಿದ್ದಾರೆ. ಇದಲ್ಲದೆ, ನೀರವ್ ಮೋದಿ ಸೇರಿ ಉಳಿದವರ ವಿವರವನ್ನೂ ಒದಗಿಸಿದ್ದಾರೆ. ಆ ವಿವರ ಇಲ್ಲಿದೆ.

ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ (ಬಲ ಚಿತ್ರ) ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ಎಂಬ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (ಎಡ ಚಿತ್ರ) ಸಂಸತ್‌ಗೆ ನೀಡಿದರು.
ಸಾಲ ಮರುಪಾವತಿಸದೆ ಓಡಿಹೋದ ವಿಜಯ ಮಲ್ಯ (ಬಲ ಚಿತ್ರ) ಆಸ್ತಿ ಮಾರಾಟ ಮಾಡಿ ಎಷ್ಟು ಹಣ ಬಂತು; ಎಂಬ ವಿವರವನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ (ಎಡ ಚಿತ್ರ) ಸಂಸತ್‌ಗೆ ನೀಡಿದರು.

Vijay Mallya: ಭಾರತದಲ್ಲಿ ವಿವಿಧ ಬ್ಯಾಂಕುಗಳಿಂದ ಸಾಲ ಪಡೆದು ಹಿಂದಿರುಗಿಸದೇ ತಲೆಮರೆಸಿಕೊಂಡವರ ಆಸ್ತಿ ಮುಟ್ಟುಗೋಲು ಹಾಕಿಕೊಂಡ ಜಾರಿ ನಿರ್ದೇಶನಾಲಯ (ಇಡಿ) 22,280 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಂತ್ರಸ್ತರಿಗೆ ಅಥವಾ ಹಕ್ಕುದಾರರಿಗೆ ಹಿಂದಿರುಗಿಸಿದೆ. ಆರ್ಥಿಕ ಅಪರಾಧಿಗಳ ವಿರುದ್ಧ ಹೋರಾಟ ಮುಂದುವರಿಯುತ್ತದೆ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಮಂಗಳವಾರ ಸಂಸತ್ತಿನಲ್ಲಿ ಹೇಳಿದ್ದಾರೆ.

ವಿಜಯ ಮಲ್ಯ ಆಸ್ತಿಯಿಂದ ಎಷ್ಟು ಹಣ ಬಂತು; ಕೇಂದ್ರ ವಿತ್ತ ಸಚಿವರ ಭಾಷಣದ ಅಂಶಗಳು

ಲೋಕಸಭೆಯಲ್ಲಿ 2024-25ನೇ ಸಾಲಿನ ಅನುದಾನಕ್ಕೆ ಪೂರಕ ಬೇಡಿಕೆಗಳ ಮೊದಲ ಹಂತದ ಚರ್ಚೆಗೆ ಪ್ರತಿಕ್ರಿಯಿಸಿದ ನಿರ್ಮಲಾ ಸೀತಾರಾಮನ್, ಸಾಲ ಮರುಪಾವತಿ ಮಾಡದೇ ಓಡಿಹೋದವರ ಮತ್ತು ಬ್ಯಾಂಕುಗಳಿಗೆ ವಂಚಿಸಿದವರ ಆಸ್ತಿ ಮುಟ್ಟುಗೋಲು ಹಾಕಿ ಎಷ್ಟು ಹಣ ವಶಪಡಿಸಲಾಯಿತು ಎಂಬ ವಿವರ ನೀಡಿದರು.

1) ವಿಜಯ್ ಮಲ್ಯ: ಸಾಲ ಮರುಪಾವತಿಸದೇ ವಿದೇಶಕ್ಕೆ ಓಡಿಹೋದ ವಿಜಯ್ ಮಲ್ಯ ಅವರ 14,131.6 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದರು.

2) ನೀರವ್ ಮೋದಿ: ಬ್ಯಾಂಕುಗಳಿಗೆ ಸಾಲ ಮರುಪಾವತಿಸದೇ ವಂಚಿಸಿದ ನೀರವ್ ಮೋದಿ ಪ್ರಕರಣದಲ್ಲಿ 1,052.58 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಸಾರ್ವಜನಿಕ ವಲಯದ ಬ್ಯಾಂಕ್‌ಗಳು ಮತ್ತು ಖಾಸಗಿ ಬ್ಯಾಂಕ್‌ಗಳಿಗೆ ಹಿಂತಿರುಗಿಸಲಾಗಿದೆ ಎಂದು ನಿರ್ಮಲಾ ಸೀತಾರಾಮನ್‌ ವಿವರಿಸಿದರು.

3) ಮೆಹಲ್‌ ಚೋಕ್ಸಿ: ಮೆಹಲ್ ಚೋಕ್ಸಿ ಮತ್ತು ಇತರರು ಸಾರ್ವಜನಿಕ ವಲಯದ ಬ್ಯಾಂಕುಗಳಿಂದ ಸಾಲ ಪಡೆದು ವಂಚಿಸಿದ್ದು, ಅವರ 2,565.90 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಶಪಡಿಸಿಕೊಳ್ಳಲಾಗಿದ್ದು, ಹರಾಜು ಮಾಡಲಾಗುತ್ತದೆ ಎಂದು ಸಚಿವರು ಹೇಳಿದರು.

4) ಎನ್‌ಎಸ್‌ಇಎಲ್: ನ್ಯಾಷನಲ್ ಸ್ಪಾಟ್ ಎಕ್ಸ್‌ಚೇಂಜ್ ಲಿಮಿಟೆಡ್ (ಎನ್‌ಎಸ್‌ಇಎಲ್) ಪ್ರಕರಣದಲ್ಲಿ 17.47 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ವಂಚನೆಗೆ ಒಳಗಾದ ನಿಜವಾದ ಹೂಡಿಕೆದಾರರಿಗೆ ಹಿಂತಿರುಗಿಸಲಾಗಿದೆ ಎಂದು ಅವರು ಹೇಳಿದರು.

5) ಇತರೆ ಕಂಪನಿಗಳು, ವ್ಯಕ್ತಿಗಳು: ಎಸ್‌ಆರ್‌ಎಸ್‌ ಗ್ರೂಪ್‌ನ 20.15 ಕೋಟಿ ರೂಪಾಯಿ ಮೌಲ್ಯದ ಆಸ್ತಿ, ರೋಸ್‌ ವ್ಯಾಲಿ ಗ್ರೂಪ್‌ನ 19.40 ಕೋಟಿ ರೂಪಾಯಿ ಆಸ್ತಿ, ಸೂರ್ಯ ಫಾರ್ಮಾಸ್ಯೂಟಿಕಲ್ಸ್‌ನ 185.13 ಕೋಟಿ ರೂಪಾಯಿ, ನೌಹೀರಾ ಶೇಖ್‌ ಮತ್ತು ಇತರರ ಹೀರಾ ಗ್ರೂಪ್‌ನ 226 ಕೋಟಿ ರೂಪಾಯಿ, ನಾಯ್ಡು ಅಮೃತೇಶ್ ರೆಡ್ಡಿ ಮತ್ತು ಇತರರ 12.73 ಕೋಟಿ ರೂಪಾಯಿ, ನಫೀಸಾ ಓವರ್‌ಸೀಸ್‌ ಮತ್ತು ಇತರರ 25.38 ಕೋಟಿ ರೂಪಾಯಿ ಆಸ್ತಿ ಮುಟ್ಟುಗೋಲು ಹಾಕಿ ಬ್ಯಾಂಕುಗಳಿಗೆ ಹಣ ಒದಗಿಸುವ ಕೆಲಸ ಪ್ರಗತಿಯಲ್ಲಿದೆ ಎಂದು ಹೇಳಿದರು.

ಕಾಳಧನದ ಬಗ್ಗೆ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದು ಇಷ್ಟು

ವಿದೇಶದಲ್ಲಿರುವ ಕಪ್ಪುಹಣದ ಬಗ್ಗೆ ಕೆಲವು ಸಂಸದರ ಪ್ರಶ್ನೆಗಳಿಗೆ ಪ್ರತಿಕ್ರಿಯಿಸಿದ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು, 2015ರ ಕಾಳಧನ ನಿಗ್ರಹ ಕಾಯ್ದೆಯ ಪರಿಣಾಮ ಅನೇಕರು ತಮ್ಮ ವಿದೇಶಿ ಆಸ್ತಿಯನ್ನು ತಾವೇ ಘೋಷಿಸಿಕೊಂಡಿದ್ದಾರೆ. ಈಗಲೂ ಘೋಷಿಸುತ್ತಿದ್ದಾರೆ. ಈ ರೀತಿ ಆಸ್ತಿ ಘೋ‍ಷಣೆ ಮಾಡುವವರ ಪ್ರಮಾಣ ವರ್ಷದಿಂದ ವರ್ಷಕ್ಕೆ ಹೆಚ್ಚಾಗುತ್ತಿದೆ. ವಿದೇಶಿ ಆಸ್ತಿಯನ್ನು ಘೋಷಿಸುವ ತೆರಿಗೆದಾರರ ಸಂಖ್ಯೆ 2021-22 ರಲ್ಲಿ 60,467 ರಿಂದ 2024-25 ರಲ್ಲಿ ಎರಡು ಲಕ್ಷಕ್ಕೆ ಏರಿದೆ ಎಂದು ಹೇಳಿದರು. ಇದಲ್ಲದೆ ಕಾಳಧನ ಕಾಯ್ದೆ ಪ್ರಕಾರ 2024 ಜೂನ್ ತನಕ 697 ಕೇಸ್‌ಗಳಲ್ಲಿ 17,520 ಕೋಟಿ ರೂಪಾಯಿ ಸಂಗ್ರಹಿಸಲಾಗಿದೆ. 163 ಕೇಸ್‌ಗಳನ್ನು ದಾಖಲಿಸಿಕೊಂಡು ವಿಚಾರಣೆ ನಡೆಸಲಾಗುತ್ತಿದ್ದು, ಅದು ಪ್ರಗತಿಯಲ್ಲಿದೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದರು.

Whats_app_banner
ಭಾರತ ಮತ್ತು ವಿಶ್ವದ ಇತರ ದೇಶಗಳ ತಾಜಾ ಸುದ್ದಿ 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದಲ್ಲಿ ಓದಿ.