ಬಚ್ಚನ್ ದೀವಾರ್ ಸ್ಟೈಲ್‌ನಲ್ಲಿ ಕಾಣಿಸಿಕೊಂಡ ದ್ರಾವಿಡ್; ಹೊಸ ಅವತಾರ ಕಂಡು ಬೆರಗಾದ ಅಭಿಮಾನಿಗಳು, VIDEO
Asia Cup 2023: ಟೀಂ ಇಂಡಿಯಾ ಮುಖ್ಯ ಕೋಚ್ ರಾಹುಲ್ ದ್ರಾವಿಡ್ (Rahul Dravid) ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ. ಅವರ ಈ ಸ್ಟೈಲ್‌ಗೆ ನೆಟ್ಟಿಗರು ಫಿದಾ ಆಗಿದ್ದಾರೆ.
ಏಷ್ಯಾಕಪ್ ಟೂರ್ನಿಯ (Asia Cup 2023) ಬಹುನಿರೀಕ್ಷಿತ ಭಾರತ-ಪಾಕಿಸ್ತಾನ (India vs Pakistan) ಪಂದ್ಯವು ಮಳೆಯಿಂದ ರದ್ದುಗೊಂಡಿತು. ಶ್ರೀಲಂಕಾದ ಪಲ್ಲೆಕೆಲೆ ಕ್ರಿಕೆಟ್ ಮೈದಾನದಲ್ಲಿ ನಡೆದ ಗ್ರೂಪ್ ಬಿ 2ನೇ ಪಂದ್ಯದಲ್ಲಿ ಭಾರತ ತನ್ನ ಮೊದಲ ಇನ್ನಿಂಗ್ಸ್ನಲ್ಲಿ 266 ರನ್ಗಳ ಸವಾಲಿನ ಮೊತ್ತ ಕಲೆ ಹಾಕಿತ್ತು. ಆದರೆ ಇನ್ನೇನು ಪಾಕಿಸ್ತಾನ ಇನ್ನಿಂಗ್ಸ್ ಆರಂಭಿಸಬೇಕಿತ್ತು ಎನ್ನುವಾಗ ಆರಂಭಗೊಂಡ ಮಳೆ ನಿರಂತರವಾಗಿ ಸುರಿಯತೊಡಗಿತು. ಸತತವಾಗಿ ಮಳೆ ಸುರಿದ ಹಿನ್ನೆಲೆ ಪಂದ್ಯವನ್ನು ರದ್ದುಗೊಳಿಸಲಾಯಿತು.
ಪಂದ್ಯ ರದ್ದಾದ ಹಿನ್ನೆಲೆ ಉಭಯ ತಂಡಗಳು ತಲಾ ಒಂದೊಂದು ಅಂಕ ಪಡೆದುಕೊಂಡಿವೆ. ಮತ್ತೊಂದೆಡೆ ಮೊದಲ ಪಂದ್ಯದಲ್ಲಿ ನೇಪಾಳ ವಿರುದ್ಧ ಗೆದ್ದಿದ್ದ ಪಾಕಿಸ್ತಾನ ಸೂಪರ್-4 ಹಂತಕ್ಕೂ ಪ್ರವೇಶ ನೀಡಿತು. ಇದರ ನಡುವೆ ಭಾರತ ಬ್ಯಾಟರ್ಗಳು ಸಿಕ್ಕಾಪಟ್ಟೆ ಟ್ರೋಲ್ ಆಗುತ್ತಿದ್ದಾರೆ. ಅಗ್ರ ಕ್ರಮಾಂಕದ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ವೈಫಲ್ಯ ಅನುಭವಿಸಿದರು. ಹಾಗಾಗಿ ನಿರೀಕ್ಷೆ ಹುಸಿಗೊಳಿಸಿದ ಹಿನ್ನೆಲೆ ನೆಟ್ಟಿಗರು ಟ್ರೋಲ್ ಮಾಡುತ್ತಿದ್ದಾರೆ.
ಹೊಸ ಅವತಾರದಲ್ಲಿ ದ್ರಾವಿಡ್
ಇದೆಲ್ಲದರ ನಡುವೆ ಟೀಮ್ ಇಂಡಿಯಾ ಕೋಚ್ ರಾಹುಲ್ ದ್ರಾವಿಡ್ (Rahul Dravid) ಹೊಸ ಅವತಾರದಲ್ಲಿ ಕಾಣಿಸಿಕೊಂಡು ಸಾಮಾಜಿಕ ಜಾಲತಾಣವನ್ನು ಶೇಕ್ ಮಾಡುತ್ತಿದ್ದಾರೆ. ಅವರ ಖದರ್ ಲುಕ್ಗೆ ಫಿದಾ ಆಗಿರುವ ಫ್ಯಾನ್ಸ್ ವಾರೆವ್ಹಾ ಎನ್ನುತ್ತಿದ್ದಾರೆ. ರಾಜ ಗಾಂಭೀರ್ಯದ ಲುಕ್ಗೆ ಮನಸೋತ ಅಭಿಮಾನಿಗಳು ಸೋಷಿಯಲ್ ಮೀಡಿಯಾದಲ್ಲಿ ಶೇರ್ ಮಾಡುತ್ತಿದ್ದು, ಕೊಂಡಾಡುತ್ತಿದ್ದಾರೆ. ಬಗೆಬಗೆ ಕಾಮೆಂಟ್ಗಳ ಮೂಲಕ ದ್ರಾವಿಡ್ಗೆ, ಸಿನಿಮಾ ರಂಗಕ್ಕೆ ಬಂದು ಬಿಡಿ ಎಂದು ಸಲಹೆ ನೀಡುತ್ತಿದ್ದಾರೆ.
ಜಾಹೀರಾತಿನಲ್ಲಿ ಬಚ್ಚನ್ ಸ್ಟೈಲ್ ಕಾಪಿ
ಭಾರತದ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ಅವರು ತಮ್ಮ ಐಕಾನಿಕ್ ಚಿತ್ರ ದೀವಾರ್ನಲ್ಲಿ ಕಾಣಿಸಿಕೊಂಡ ಅಮಿತಾಬ್ ಬಚ್ಚನ್ ಪಾತ್ರದಲ್ಲಿ ಕಾಣಿಸಿಕೊಂಡಿರುವ ಜಾಹೀರಾತು ಗಮನ ಸೆಳೆದಿದೆ. ಜನಪ್ರಿಯ ಸ್ಟೈಲ್‌ನಲ್ಲಿ ರಾಹುಲ್ ದ್ರಾವಿಡ್ ಕೂಡ ಕಾಣಿಸಿಕೊಂಡು ಗಮನ ಸೆಳೆದಿದ್ದಾರೆ. ಡ್ರೈಪ್ರುಟ್ ಮತ್ತು ನಟ್ಸ್ ಕಂಪನಿಯ ಫಾರ್ಮ್ಲಿಯ ಜಾಹೀರಾತಿನಲ್ಲಿ ದ್ರಾವಿಡ್, ಬಚ್ಚನ್ ಅನುಕರಣೆ ಮಾಡಿದ್ದಾರೆ.
ಶಾಂತ ಮತ್ತು ಸೌಮ್ಯ ಸ್ವಭಾವ ವ್ಯಕ್ತಿತ್ವವನ್ನು ಹೊಂದಿರುವ ರಾಹುಲ್ ದ್ರಾವಿಡ್, ಜಾಹೀರಾತಿನ ಲುಕ್ನಲ್ಲಿ ಮಾತ್ರವಲ್ಲದೆ ಧ್ವನಿಯಲ್ಲೂ ಬಚ್ಚನ್ ಅವರನ್ನೇ ಅನುಕರಣೆ ಮಾಡಿರುವುದು ವಿಶೇಷ ಎನಿಸಿದೆ. ಈ ಜಾಹೀರಾತು ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದ್ದಂತೆ ಅಭಿಮಾನಿಗಳು ಅಚ್ಚರಿ ವ್ಯಕ್ತಪಡಿಸಿದ್ದಾರೆ. ದ್ರಾವಿಡ್ ಹಿಂದೆಂದೂ ಕಾಣದ ರೀತಿ ಕಾಣಿಸಿಕೊಂಡಿರುವುದು ವಿಶೇಷ.
ಕ್ರೆಡ್ ಆ್ಯಪ್ನಲ್ಲಿ ದ್ರಾವಿಡ್ ವೀರಾವೇಷ
ಮೈದಾನದಲ್ಲಿ ಸದಾ ತಾಳ್ಮೆಯಿಂದ ಇರುವ ದ್ರಾವಿಡ್ ಕ್ರೆಡ್ ಆ್ಯಪ್ಗೆ ನೀಡಿದ ಜಾಹೀರಾತಿನಲ್ಲಿ ಈ ಪಾಟಿ ಕೋಪನಾ ಎನ್ನುವಷ್ಟರ ಮಟ್ಟಿಗೆ ಜನರು ಮೂಗಿನ ಮೇಲೆ ಬೆರಳಿಟ್ಟು ಆಶ್ಚರ್ಯಪಡುವಂತೆ ನಟಿಸಿದ್ದರು. ಟ್ರಾಫಿಕ್ ಜಾಮ್ನಲ್ಲಿ ಸಿಲುಕಿಕೊಳ್ಳುವ ದ್ರಾವಿಡ್, ಏಕಾಏಕಿ ಕೋಪಗೊಂಡು, ನಾನು ಇಂದಿರಾನಗರ ಕಾ ಗೂಂಡಾ ಎಂದು ಬ್ಯಾಟ್ ಹಿಡಿದು ಪಕ್ಕದಲ್ಲಿದ್ದ ಕಾರಿನ ಗಾಜು ಹೊಡೆದು ಹಾಕುತ್ತಾರೆ. ಹಾರ್ನ್ ಹೊಡೆದವರಿಗೆ ಅವಾಜ್ ಹಾಕುತ್ತಾರೆ. ಈ ಜಾಹೀರಾತು ಬಿಡುಗಡೆಯಾದಾಗ ಸಂಚಲನ ಸೃಷ್ಟಿಸಿತ್ತು.
ಟಿ20 ವಿಶ್ವಕಪ್ನಲ್ಲೂ ಅಗ್ರೆಸ್ಸಿವ್ ಸೆಲೆಬ್ರೇಷನ್
ಕಳೆದ ವರ್ಷ ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ಎದುರು ಟೀಮ್ ಇಂಡಿಯಾ ರಣರೋಚಕ ಗೆಲುವು ಸಾಧಿಸಿದ ನಂತರ ಡಗೌಟ್ನಲ್ಲಿದ್ದ ರಾಹುಲ್ ದ್ರಾವಿಡ್ ಅಗ್ರೆಸ್ಸಿವ್ ಆಗಿ ಸೆಲೆಬ್ರೇಟ್ ಮಾಡಿದ್ದರು. ಏಕೆಂದರೆ ಈ ಪಂದ್ಯದಲ್ಲಿ ಭಾರತ ಸೋಲು ಖಚಿತ ಎಂದು ಭಾವಿಸಲಾಗಿತ್ತು. ಆದರೆ ವಿರಾಟ್ ಕೊಹ್ಲಿ ಏಕಾಂಗಿ ಹೋರಾಟ ನಡೆಸಿ ರೋಚಕ ಜಯ ತಂದುಕೊಟ್ಟಿದ್ದರು. ಇಡೀ ಜಗತ್ತೇ ಭಾರತದ ಗೆಲುವು ಸಂಭ್ರಮಿಸಿತ್ತು.