ಒಂದು ಟ್ರೋಫಿ ಗೆದ್ದಿಲ್ಲ, ಆದರೆ ಎಷ್ಟೋ ಕಪ್ ಗೆದ್ದಂತೆ ಆಡ್ತಾರೆ; ಆರ್ಸಿಬಿ ಆಟಗಾರರನ್ನು ಟೀಕಿಸಿದ ಗೌತಮ್ ಗಂಭೀರ್
Gautam Gambhir: ಐಪಿಎಲ್ನಲ್ಲಿ ಆರ್ಸಿಬಿ ವರ್ತನೆಯನ್ನು ಟೀಕಿಸಿದ ಗೌತಮ್ ಗಂಭೀರ್, ‘ಐಪಿಎಲ್ ಇತಿಹಾಸದಲ್ಲಿ ಟ್ರೋಫಿ ಜಯಿಸದಿದ್ದರೂ ಎಷ್ಟೋ ಪ್ರಶಸ್ತಿಯನ್ನು ಗೆದ್ದಿರುವಂತೆ ಆಡುತ್ತದೆ’ ಎಂದಿದ್ದಾರೆ.
ಇಂಡಿಯನ್ ಪ್ರೀಮಿಯರ್ ಲೀಗ್ನಲ್ಲಿ (IPL) ನಾನು ಸೋಲಿಸಲು ಬಯಸುವ ತಂಡಗಳಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಕೂಡ ಒಂದು ಎಂದು ಆರ್ಸಿಬಿ ಎದುರಿನ ಪಂದ್ಯಕ್ಕೂ ಮುನ್ನ ಕೋಲ್ಕತ್ತಾ ನೈಟ್ ರೈಡರ್ಸ್ (KKR) ತಂಡದ ಮೆಂಟರ್ ಗೌತಮ್ ಗಂಭೀರ್ (Gautam Gambhir) ಹೇಳಿದ್ದಾರೆ. ಕಳೆದ ಐಪಿಎಲ್ನಲ್ಲಿ ಲಕ್ನೋ ಸೂಪರ್ ಜೈಂಟ್ಸ್ (LSG) ತಂಡದ ಮೆಂಟರ್ ಆಗಿದ್ದ ಗೌತಿ, ಈ ಬಾರಿ ತಾನು ಎರಡು ಬಾರಿ ಟ್ರೋಫಿ ಗೆಲ್ಲಿಸಿಕೊಟ್ಟಿದ್ದ ಕೆಕೆಆರ್ ತಂಡಕ್ಕೆ ಮೆಂಟರ್ ಆಗಿ ಸೇರ್ಪಡೆಗೊಂಡಿದ್ದಾರೆ.
ಮಾರ್ಚ್ 29ರಂದು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಕದನಕ್ಕೂ ಮುನ್ನ ಸ್ಟಾರ್ ಸ್ಪೋರ್ಟ್ಸ್ನಲ್ಲಿ ಮಾತನಾಡಿರುವ ಗಂಭೀರ್, ಹಿಂದೆಂದೂ ಮಾತನಾಡದ ವಿಷಯಗಳ ಕುರಿತು ಬಹಿರಂಗಪಡಿಸಿದ್ದಾರೆ. ಒಂದು ಟ್ರೋಫಿ ಗೆಲ್ಲದ ಆರ್ಸಿಬಿ ಎಷ್ಟೋ ಪ್ರಶಸ್ತಿ ಗೆದ್ದಿರುವಂತೆ ಆಡುತ್ತದೆ ಎಂದು ಗೌತಿ ಹೇಳುವ ಮೂಲಕ ಬೆಂಗಳೂರು ಅಭಿಮಾನಿಗಳನ್ನು ಕೆರಳಿಸಿದ್ದಾರೆ. ಆರ್ಸಿಬಿ ಕುರಿತು ಗೌತಮ್ ಮಾತನಾಡಿರುವ ವಿಡಿಯೋವನ್ನು ಸ್ಟಾರ್ ಸ್ಪೋರ್ಟ್ಸ್ ಪೋಸ್ಟ್ ಮಾಡಿದೆ.
ಆರ್ಸಿಬಿ ಬಗ್ಗೆ ಗಂಭೀರ್ ಹೇಳಿದ್ದೇನು?
ಆರ್ಸಿಬಿ ತಂಡದ ವರ್ತನೆಯನ್ನು ಟೀಕಿಸಿದ ಗಂಭೀರ್, ‘ಐಪಿಎಲ್ ಇತಿಹಾಸದಲ್ಲಿ ಟ್ರೋಫಿ ಜಯಿಸದಿದ್ದರೂ ಎಷ್ಟೋ ಪ್ರಶಸ್ತಿಯನ್ನು ಗೆದ್ದಿರುವಂತೆ ಆಡುತ್ತದೆ’ ಎಂದಿದ್ದಾರೆ. ‘ನಾನು ಯಾವಾಗಲೂ ಮತ್ತು ಪ್ರತಿ ಬಾರಿಯೂ ಸೋಲಿಸಲು ಬಯಸುವ ಒಂದು ತಂಡ ಆರ್ಸಿಬಿ. ಅದು ನನ್ನ ಕನಸು ಕೂಡ ಆಗಿದೆ’ ಎಂದು ಅವರು ಹೇಳಿದರು. ಇದರ ಬೆನ್ನಲ್ಲೇ ನಿರೂಪಕ ಕುತೂಹಲದಿಂದ ‘ಏಕೆ’ ಎಂದು ಕೇಳಿದರು.
‘ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್ ಅವರನ್ನೊಳಗೊಂಡ ತಂಡವು 2ನೇ ಅತ್ಯಂತ ಉನ್ನತ ಮಟ್ಟದ ತಂಡವಾಗಿತ್ತು. ಆದರೆ ಆರ್ಸಿಬಿ ಏನನ್ನೂ (ಟ್ರೋಫಿ) ಗೆದ್ದಿಲ್ಲ, ಆದರೆ ಎಷ್ಟೋ ಪ್ರಶಸ್ತಿ ಗೆದ್ದಿರುವಂತೆ ವರ್ತಿಸುತ್ತಾರೆ. ನನಗೆ ಅಂತಹ ರೀತಿಯ ಮನೋಭಾವವನ್ನು ಸಹಿಸಲು ಸಾಧ್ಯವಿಲ್ಲ’ ಎಂದು ಎರಡು ಬಾರಿ ಐಪಿಎಲ್ ವಿಜೇತ ನಾಯಕ ಹೇಳಿದರು. ‘ಆರ್ಸಿಬಿ ವಿರುದ್ಧ ಕೆಕೆಆರ್ ತಮ್ಮ ಅತ್ಯುತ್ತಮ ಐಪಿಎಲ್ ಪಂದ್ಯಗಳನ್ನು ಆಡಿದೆ’ ಎಂದು ಹೇಳುವ ಮೂಲಕ ಗಮನ ಸೆಳೆದರು. ಇದೇ ವೇಳೆ ಆರ್ಸಿಬಿ ವಿರುದ್ಧ ನೀಡಿರುವ ಮೂರು ಅತ್ಯುತ್ತಮ ಪ್ರದರ್ಶನಗಳನ್ನು ನೆನಪಿಸಿಕೊಂಡರು.
ಈ ಮೂರು ಇನ್ನಿಂಗ್ಸ್ಗಳು ಉತ್ತಮ
‘ಬೆಂಗಳೂರು ತಂಡದ ಎದುರು ಕೆಕೆಆರ್ ಇದುವರೆಗೆ ಮೂರು ಅತ್ಯುತ್ತಮ ಗೆಲುವುಗಳನ್ನು ಪಡೆದಿದೆ. ಆರ್ಸಿಬಿ ವಿರುದ್ಧ 2008ರ ಐಪಿಎಲ್ನ ಉದ್ಘಾಟನಾ ಪಂದ್ಯ. ಆ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಭರ್ಜರಿ 158 ರನ್ ಸಿಡಿಸಿದ್ದರು. ಮತ್ತೊಂದು ಪಂದ್ಯವೆಂದರೆ, ಆರ್ಸಿಬಿಯನ್ನು 49 ರನ್ಗಳಿಗೆ ಆಲೌಟ್ ಮಾಡಿದ್ದು. ಮೂರನೇ ಉತ್ತಮ ಪ್ರದರ್ಶನ ಅಂದರೆ 2017ರಲ್ಲಿ ಪವರ್ ಪ್ಲೇನಲ್ಲಿ ಆರ್ಸಿಬಿ ವಿರುದ್ಧ 100 ರನ್ ಗಳಿಸಿತ್ತು. ಈ 3 ಪ್ರದರ್ಶನ ಅತ್ಯುತ್ತಮ ಎಂದು ಭಾವಿಸುತ್ತೇನೆ’ ಎಂದು ಹೇಳಿದ್ದಾರೆ.
‘ಆರ್ಸಿಬಿ ಬಲವಾದ ತಂಡವನ್ನು ಹೊಂದಿತ್ತು. ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಘಟಕವನ್ನು ಹೊಂದಿದೆ ಎಂದು ನಮಗೆ ಯಾವಾಗಲೂ ತಿಳಿದಿತ್ತು. ಗೇಲ್, ಕೊಹ್ಲಿ, ಡಿವಿಲಿಯರ್ಸ್. ಇದಕ್ಕಿಂತ ಉತ್ತಮ ಆಟಗಾರರು ಬೇಕೆ? ನನ್ನ ಐಪಿಎಲ್ ವೃತ್ತಿಜೀವನದಲ್ಲಿ ನಾನು ಬಯಸುವ ಒಂದು ವಿಷಯವೆಂದರೆ, ಕ್ರಿಕೆಟ್ ಮೈದಾನಕ್ಕೆ ಹೋಗಿ ಆರ್ಸಿಬಿಯನ್ನು ಸೋಲಿಸುವುದು’ ಎಂದು ಅವರು ಹೇಳಿದ್ದಾರೆ. ಗಂಭೀರ್ ಅವರು 2017ರಲ್ಲಿ ಕೊನೆಯ ಬಾರಿಗೆ ತಂಡವನ್ನು ಮುನ್ನಡೆಸಿದ್ದರು. ಈಗ ಮೆಂಟರ್ ಆಗಿ ಅದೇ ತಂಡವನ್ನು ಸೇರಿದ್ದಾರೆ.