ಕಣ್ಣಲ್ಲೇ ಕದನಕ್ಕೆ ಕಹಳೆ ಊದಿದ ಕೊಹ್ಲಿ-ಗಂಭೀರ್; ಗೌತಿಯನ್ನೇ ಗುರಾಯಿಸಿದ ವಿರಾಟ್, ವಿಡಿಯೋ ವೈರಲ್
Virat Kohli vs Gautam Gambhir : 17ನೇ ಆವೃತ್ತಿಯ ಐಪಿಎಲ್ನಲ್ಲಿ ಮೊದಲ ಬಾರಿಗೆ ಕೆಕೆಆರ್ ಮತ್ತು ಆರ್ಸಿಬಿ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲೂ ಗೌತಮ್ ಗಂಭೀರ್ ಮತ್ತು ವಿರಾಟ್ ಕೊಹ್ಲಿ ನಡುವಿನ ಕಾಳಗವನ್ನು ನಿರೀಕ್ಷಿಸಲಾಗಿದೆ.
ಇಂಡಿಯನ್ ಪ್ರೀಮಿಯರ್ ಲೀಗ್ (IPL) 2024ರ 10ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ಮತ್ತು ಕೋಲ್ಕತಾ ನೈಟ್ ರೈಡರ್ಸ್ (KKR) ನಡುವಿನ ಮುಖಾಮುಖಿಯು ತೀವ್ರ ಕುತೂಹಲ ಮೂಡಿಸಿದೆ. ಕೆಕೆಆರ್ ಮಾಜಿ ನಾಯಕ ಗೌತಮ್ ಗಂಭೀರ್ ಮತ್ತು ಆರ್ಸಿಬಿ ಸೂಪರ್ಸ್ಟಾರ್ ವಿರಾಟ್ ಕೊಹ್ಲಿ (Virat Kohli vs Gautam Gambhir) ಕಾಳಗ ಪಂದ್ಯಕ್ಕೂ ಮುನ್ನವೇ ಆರಂಭಗೊಂಡಿದ್ದು, ಪಂದ್ಯದ ಕಾವು ದುಪ್ಪಟ್ಟುಗೊಳಿಸಿದೆ.
2023ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ತಂಡದ ಮೆಂಟರ್ ಆಗಿದ್ದ ಗಂಭೀರ್ ಈಗ ಮತ್ತೆ ಕೆಕೆಆರ್ ತಂಡವನ್ನು ಸೇರಿಕೊಂಡಿದ್ದಾರೆ. 2024ರ ಋತುವಿಗೆ ಮುಂಚಿತವಾಗಿ ಗಂಭೀರ್ ಕೆಕೆಆರ್ಗೆ ಮೆಂಟರ್ ಆಗಿ ಮರಳಿದ್ದಾರೆ. ಇದೀಗ 17ನೇ ಆವೃತ್ತಿಯಲ್ಲಿ ಮೊದಲ ಬಾರಿಗೆ ಕೆಕೆಆರ್ ಮತ್ತು ಆರ್ಸಿಬಿ ಮುಖಾಮುಖಿಯಾಗುತ್ತಿದ್ದು, ಈ ಪಂದ್ಯದಲ್ಲೂ ಗಂಭೀರ್ ಮತ್ತು ಕೊಹ್ಲಿ ನಡುವಿನ ಕಾಳಗವನ್ನು ನಿರೀಕ್ಷಿಸಲಾಗಿದೆ.
ಕಣ್ಣಲ್ಲೇ ಕದನ ಆರಂಭಿಸಿದ ಕೊಹ್ಲಿ-ಗಂಭೀರ್
ಗಂಭೀರ್ ಮತ್ತು ಕೊಹ್ಲಿ ನಡುವೆ ದೀರ್ಘಕಾಲದಿಂದಲೂ ವೈರತ್ವ ನಡೆಯುತ್ತಿದೆ. ಒಬ್ಬರ ಮೇಲೆ ಒಬ್ಬರಿಗೆ ಅಸಮಾಧಾನ ಇದೆ. ಇಬ್ಬರು ಸಹ ಮುಖಾಮುಖಿಯಾದರೆ ಮಾತಿನ ಚಕಮಕಿ ನಡೆಯುವುದು ಖಂಡಿತ ಎಂದು ನಿರೀಕ್ಷಿಸಲಾಗುತ್ತದೆ. ಆದರೆ ಪಂದ್ಯಕ್ಕೂ ಮುನ್ನವೇ ಗಂಭೀರ್ ಅವರನ್ನು ಕೊಹ್ಲಿ ಗುರಾಯಿಸಿರುವ ಫೋಟೋ ಮತ್ತು ವಿಡಿಯೋ ವೈರಲ್ ಆಗುತ್ತಿದ್ದು, ಅಭಿಮಾನಿಗಳು ಯುದ್ಧ ಇಲ್ಲಿಂದಲೇ ಆರಂಭ ಎನ್ನುತ್ತಿದ್ದಾರೆ.
ಸದ್ಯ ಗಂಭೀರ್-ಕೊಹ್ಲಿ ಪೈಪೋಟಿಯ ಸುತ್ತಲಿನ ನಿರೀಕ್ಷೆಯೇ ಚರ್ಚೆಯ ಕೇಂದ್ರ ಬಿಂದುವಾಗಿ ಉಳಿದಿದೆ. ಉಭಯ ತಂಡಗಳು ಬೆಂಗಳೂರಿನಲ್ಲಿ ಮುಖಾಮುಖಿಯಾಗಲು ತಯಾರಿ ನಡೆಸುತ್ತಿರುವ ಸಂದರ್ಭದಲ್ಲಿ ಕೊಹ್ಲಿ ಮತ್ತು ಗಂಭೀರ್ ಗಂಭೀರವಾಗಿ ನೋಡುತ್ತಿರುವ ಫೋಟೋವನ್ನು ಕೆಕೆಆರ್ ತನ್ನ ಅಧಿಕೃತ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಹಂಚಿಕೊಂಡು ಪೈಪೋಟಿಗೆ ಅನುಮೋದನೆ ನೀಡಿದೆ.
ಕೆಕೆಆರ್ ಎಕ್ಸ್ ಖಾತೆಯಲ್ಲಿ ಎರಡು ಚಿತ್ರಗಳನ್ನು ಪೋಸ್ಟ್ ಮಾಡಿದ್ದಾರೆ. ಮೊದಲನೆ ಚಿತ್ರದಲ್ಲಿ ಗಂಭೀರ್ ಅವರು ತುಂಬಾ ಗಂಭೀರವಾಗಿ ನೋಡುತ್ತಿದ್ದಾರೆ. ಆದರೆ ಹಿಂದೆ ಇರುವ ಕೊಹ್ಲಿಯನ್ನು ಬ್ಲರ್ ಮಾಡಲಾಗಿದೆ. ಮತ್ತೊಂದು ಫೋಟೋಟದಲ್ಲಿ ಕೊಹ್ಲಿಯನ್ನು ಸ್ಪಷ್ಟವಾಗಿ ತೋರಿ ಗಂಭೀರ್ ಅವನ್ನು ಬ್ಲರ್ ಮಾಡಲಾಗಿದೆ. ಕೊಹ್ಲಿ ಕಣ್ಣು ಮಿಟುಕಿಸಿದೆ ಗಂಭೀರ್ರನ್ನು ಗುರಾಯಿಸುತ್ತಿರುವುದನ್ನು ಕಾಣಬಹುದು.
2013ರಿಂದ ಆರಂಭ ಕೊಹ್ಲಿ-ಗಂಭೀರ್ ವೈರತ್ವ
ಗಂಭೀರ್ ಮತ್ತು ಕೊಹ್ಲಿ ನಡುವಿನ ವೈರತ್ವವು 2013ರಿಂದ ಆರಂಭಗೊಂಡಿದೆ. ಅಂದು ಆರ್ಸಿಬಿ ಮತ್ತು ಕೆಕೆಆರ್ ನಡುವಿನ ಪಂದ್ಯದ ಸಮಯದಲ್ಲಿ ಇಬ್ಬರು ವಾಗ್ಯುದ್ಧ ನಡೆಸಿದ್ದರು. ಕೊಹ್ಲಿ ಔಟಾದ ಬಳಿಕ ಇಬ್ಬರ ನಡುವೆ ಘರ್ಷಣೆ ಉಂಟಾಗಿತ್ತು. ಇದಾದ ಮೂರು ವರ್ಷಗಳ ನಂತರ ಮತ್ತೆ ಮಾತಿಕ ಚಕಮಕಿ ನಡೆಸಿದ್ದರು. ಅಲ್ಲದೆ, 2023ರಲ್ಲಿ ಎಲ್ಎಸ್ಜಿ ಮೆಂಟರ್ ಆಗಿದ್ದ ಗಂಭೀರ್ ಮತ್ತು ಕೊಹ್ಲಿ ನಡುವೆ ತೀವ್ರ ಮಾತಿನ ಚಕಮಕಿ ನಡೆದಿತ್ತು. ಈ ಗಲಾಟೆ ಕೈ ಕೈ ಮಿಲಾಯಿಸುವ ಹಂತಕ್ಕೆ ಹೋಗಿತ್ತು.
ಕಳೆದ ವಾರ ನಡೆದ ತನ್ನ ಮೊದಲ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ವಿರುದ್ಧ ನೈಟ್ ರೈಡರ್ಸ್ 4 ರನ್ಗಳ ಭರ್ಜರಿ ಜಯ ದಾಖಲಿಸಿತ್ತು. ಏತನ್ಮಧ್ಯೆ, ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಆರಂಭಿಕ ಪಂದ್ಯದ ಸೋಲಿನ ನಂತರ ಆರ್ಸಿಬಿ ಪುನರಾಗಮನ ಮಾಡಿತ್ತು. ಶಿಖರ್ ಧವನ್ ನೇತೃತ್ವದ ಪಂಜಾಬ್ ಕಿಂಗ್ಸ್ ಅನ್ನು ರೋಮಾಂಚಕ ರನ್ ಚೇಸ್ನಲ್ಲಿ ಸೋಲಿಸಿತು. ಪಿಬಿಕೆಎಸ್ ವಿರುದ್ಧದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಕೊಹ್ಲಿ ಕೇವಲ 49 ಎಸೆತಗಳಲ್ಲಿ 77 ರನ್ ಗಳಿಸಿದ್ದರು.