ಜಸ್ಪ್ರೀತ್ ಬುಮ್ರಾ ಸರಿಯಾಗಿ ಬಳಸಿಕೊಳ್ಳದ ಹಾರ್ದಿಕ್ ಪಾಂಡ್ಯ; ಕಳಪೆ ನಾಯಕತ್ವ ವಿರುದ್ಧ ಇರ್ಫಾನ್ ಪಠಾಣ್ ಕಿಡಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಜಸ್ಪ್ರೀತ್ ಬುಮ್ರಾ ಸರಿಯಾಗಿ ಬಳಸಿಕೊಳ್ಳದ ಹಾರ್ದಿಕ್ ಪಾಂಡ್ಯ; ಕಳಪೆ ನಾಯಕತ್ವ ವಿರುದ್ಧ ಇರ್ಫಾನ್ ಪಠಾಣ್ ಕಿಡಿ

ಜಸ್ಪ್ರೀತ್ ಬುಮ್ರಾ ಸರಿಯಾಗಿ ಬಳಸಿಕೊಳ್ಳದ ಹಾರ್ದಿಕ್ ಪಾಂಡ್ಯ; ಕಳಪೆ ನಾಯಕತ್ವ ವಿರುದ್ಧ ಇರ್ಫಾನ್ ಪಠಾಣ್ ಕಿಡಿ

Hardik Pandya Captaincy: ಸನ್​ರೈಸರ್ಸ್ ಹೈದರಾಬಾದ್ ವಿರುದ್ಧ ಸೋಲಿನ ಬೆನ್ನಲ್ಲೇ ಮುಂಬೈ ಇಂಡಿಯನ್ಸ್ ನಾಯಕ ಹಾರ್ದಿಕ್ ಪಾಂಡ್ಯ ಅವರು ತಮ್ಮ ನಾಯಕತ್ವದ ಕುರಿತು ಟೀಕೆಗಳನ್ನು ಎದುರಿಸುತ್ತಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರನ್ನು ಸರಿಯಾಗಿ ಬಳಸಿಕೊಳ್ಳದ ಹಾರ್ದಿಕ್ ಪಾಂಡ್ಯ ವಿರುದ್ಧ ಇರ್ಫಾನ್ ಪಠಾಣ್ ಕಿಡಿ
ಜಸ್ಪ್ರೀತ್ ಬುಮ್ರಾ ಅವರನ್ನು ಸರಿಯಾಗಿ ಬಳಸಿಕೊಳ್ಳದ ಹಾರ್ದಿಕ್ ಪಾಂಡ್ಯ ವಿರುದ್ಧ ಇರ್ಫಾನ್ ಪಠಾಣ್ ಕಿಡಿ

ರಾಯಲ್ ಚಾಲೆಂಜರ್ಸ್ ಬೆಂಗಳೂರಿನ (RCB) 11 ವರ್ಷಗಳ ಹಳೆಯ ದಾಖಲೆಯನ್ನು ಸನ್‌ರೈಸರ್ಸ್ ಹೈದರಾಬಾದ್ (SRH) ಮುರಿದಿದೆ. ಮತ್ತು ಐಪಿಎಲ್ ಇತಿಹಾಸದಲ್ಲಿ ಇದುವರೆಗಿನ ಗರಿಷ್ಠ ಮೊತ್ತವನ್ನು ದಾಖಲಿಸಿದೆ. ಐಪಿಎಲ್ 2024ರ 8ನೇ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್ ಬೌಲರ್‌ಗಳಿಗೆ ಮನಬಂದಂತೆ ದಂಡಿಸಿದ ಪ್ಯಾಟ್ ಕಮಿನ್ಸ್ ನೇತೃತ್ವದ ನೇತೃತ್ವದ ಎಸ್​ಆರ್​ಹೆಚ್, ಸ್ಕೋರ್​​ಬೋರ್ಡ್​​ನಲ್ಲಿ 277 ರನ್‌ಗಳ ಬೃಹತ್ ಮೊತ್ತ ದಾಖಲಿಸಿತು. ಅಲ್ಲದೆ, ಆರ್​ಸಿಬಿ ನಿರ್ಮಿಸಿದ್ದ ಸಾರ್ವಕಾಲಿಕ ದಾಖಲೆಯನ್ನು ಚಿಂದಿ ಉಡಾಯಿಸಿತು.

ಟ್ರಾವಿಸ್ ಹೆಡ್ (62), ಅಭಿಷೇಕ್ ಶರ್ಮಾ (63), ಹೆನ್ರಿಚ್ ಕ್ಲಾಸೆನ್ (80*) ಮತ್ತು ಏಡನ್ ಮಾರ್ಕ್ರಮ್ (42*) ಅವರು ವಿಧ್ವಂಸಕ ಬ್ಯಾಟಿಂಗ್ ನೆರವಿನಿಂದ ಹೈದರಾಬಾದ್ ದೊಡ್ಡ ಮೊತ್ತ ಕಲೆ ಹಾಕಲು ಸಾಧ್ಯವಾಯಿತು. ಈ ಗುರಿ ಬೆನ್ನಟ್ಟಿದ ಮುಂಬೈ ಇಂಡಿಯನ್ಸ್ ಗೆಲುವಿಗೆ ಹೋರಾಟ ನಡೆಸಿತು. ರೋಹಿತ್​ ಶರ್ಮಾ (26), ಇಶಾನ್ ಕಿಶನ್ (35), ನಮನ್ ಧೀರ್​ (30), ತಿಲಕ್ ವರ್ಮಾ (64), ಹಾರ್ದಿಕ್ ಪಾಂಡ್ಯ (24), ಟಿಮ್ ಡೇವಿಡ್ (42) ಹೋರಾಟ ನಡೆಸಿದರು. ಅಂತಿಮವಾಗಿ ಮುಂಬೈ 246 ರನ್​ಗಳಿಗೆ ಸುಸ್ತಾಗಿ 31 ರನ್​ಗಳಿಂದ ಶರಣಾಯಿತು.

ಹಾರ್ದಿಕ್ ಪಾಂಡ್ಯ ನಾಯಕತ್ವ ಪ್ರಶ್ನಿಸಿದ ಇರ್ಫಾನ್ ಪಠಾಣ್

ಪಂದ್ಯದ ಸೋಲಿನ ಬೆನ್ನಲ್ಲೇ ಹಾರ್ದಿಕ್ ಪಾಂಡ್ಯ ಅವರ ನಾಯಕತ್ವದ ಕುರಿತು ಟೀಕೆ ವ್ಯಕ್ತವಾಗಿದೆ. ವಿಶ್ವ ಶ್ರೇಷ್ಠ ಬೌಲಿಂಗ್ ವಿಭಾಗವಿದ್ದರೂ ಸರಿಯಾಗಿ ಬಳಸಿಕೊಳ್ಳಲು ಸಾಧ್ಯವಾಗದ ಕಾರಣಕ್ಕೆ ಟೀಕೆಗಳನ್ನು ಎದುರಿಸುತ್ತಿದ್ದಾರೆ. ಮುಂಬೈನ ಕಳಪೆ ಬೌಲಿಂಗ್​ನಿಂದ ಐಪಿಎಲ್‌ನಲ್ಲಿ ಅತ್ಯಧಿಕ ಸ್ಕೋರ್ ಸೋರಿಕೆ ಮಾಡಲು ಕಾರಣಗಳಲ್ಲಿ ಒಂದಾಗಿದ್ದರೆ, ನಾಯಕತ್ವದ ತಂತ್ರಗಳಲ್ಲಿ ದೋಷಗಳೂ ಇವೆ. ಈ ಪೈಕಿ ಮಾಜಿ ಆಲ್​ರೌಂಡರ್​ ಇರ್ಫಾನ್ ಪಠಾಣ್ ಅವರು ಎಂಐ ಮಾಡಿದ ದೋಷಗಳಲ್ಲಿ ಒಂದನ್ನು ಎತ್ತಿ ತೋರಿಸಿ ಹಾರ್ದಿಕ್ ಪಾಂಡ್ಯ ಅವರನ್ನು ಪ್ರಶ್ನಿಸಿದ್ದಾರೆ.

ಜಸ್ಪ್ರೀತ್ ಬುಮ್ರಾ ಅವರನ್ನು ಸಮರ್ಪಕವಾಗಿ ಬಳಸಿಕೊಳ್ಳದ ಕಾರಣ ಹಾರ್ದಿಕ್ ಅವರನ್ನು ಭಾರತದ ಮಾಜಿ ಆಲ್‌ರೌಂಡರ್ ಪ್ರಶ್ನಿಸಿದ್ದಾರೆ. ಅಲ್ಲದೆ ಎಕ್ಸ್ ಖಾತೆಯಲ್ಲಿ ಈ ಕುರಿತು ಬರೆದು ಬೇಸರ ವ್ಯಕ್ತಪಡಿಸಿದ್ದಾರೆ. ಹಾರ್ದಿಕ್ ಪಾಂಡ್ಯ ನಾಯಕತ್ವ ಕನಿಷ್ಠ ಮತ್ತು ಸಾಮಾನ್ಯವಾಗಿದೆ. ಎದುರಾಳಿ ತಂಡದ ಆಟಗಾರರು ದಂಡಯಾತ್ರೆ ನಡೆಸುತ್ತಿದ್ದರೂ, ಬುಮ್ರಾ ಅವರನ್ನು ಬಹಳ ಕಾಲ ಬೌಲಿಂಗ್ ನೀಡದೆ ದೂರವಿಟ್ಟಿದ್ದು ತಿಳುವಳಿಕೆ ಮೀರಿದ್ದು ಎಂದು ಕಿಡಿಕಾರಿದ್ದಾರೆ.

ಬುಮ್ರಾ ಎಲ್ಲಿ ಎಂದಿದ್ದ ಪಠಾಣ್

ಗುಜರಾತ್ ಟೈಟಾನ್ಸ್ ಎದುರಿನ ಪಂದ್ಯದಲ್ಲೂ ಜಸ್ಪ್ರೀತ್ ಬುಮ್ರಾ ಅವರಿಗೆ ಆರಂಭದಲ್ಲಿ ಬೌಲಿಂಗ್ ನೀಡಲಾಗಿರಲಿಲ್ಲ. ಆಗಲೂ ಇರ್ಫಾನ್ ಪಠಾಣ್ ಎಕ್ಸ್​ ಖಾತೆಯಲ್ಲಿ ಬುಮ್ರಾ ಎಲ್ಲಿ ಎಂದು ಪೋಸ್ಟ್ ಮಾಡಿದ್ದರು. ಇದೀಗ ಮತ್ತೊಮ್ಮೆ ಹಾರ್ದಿಕ್ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಸನ್​ರೈಸರ್ಸ್ ಹೈದರಾಬಾದ್ ಪಂದ್ಯದಲ್ಲಿ ಹೊಸ ಚೆಂಡಿನೊಂದಿಗೆ 2ನೇ ಓವರ್ ಬೌಲಿಂಗ್ ಮಾಡಿದ ಹಾರ್ದಿಕ್, ನಾಲ್ಕನೇ ಓವರ್​​ನಲ್ಲಿ ಬುಮ್ರಾಗೆ ಬೌಲಿಂಗ್​ ನೀಡಿದರು. ಮೊದಲ ನಾಲ್ಕು ಓವರ್​ಗಳಲ್ಲಿ ರನ್ ಸೋರಿಕೆಯಾದ ನಂತರ ಬುಮ್ರಾಗೆ ಚೆಂಡು ನೀಡಲಾಗಿತ್ತು.

ಗುಜರಾತ್ ಟೈಟಾನ್ಸ್​ ಎದುರಿನ ಪಂದ್ಯದಲ್ಲೂ 4ನೇ ಓವರ್‌ನಲ್ಲಿ ಬುಮ್ರಾಗೆ ಬೌಲಿಂಗ್ ನೀಡಲಾಗಿತ್ತು. ಅದ್ಭುತವಾಗಿ ಬೌಲಿಂಗ್ ಮಾಡಿದ್ದ ಬುಮ್ರಾ, ತನ್ನ ಮೊದಲ ಓವರ್‌ನಲ್ಲಿ ಕೇವಲ 5 ರನ್ ನೀಡಿ ಒಂದು ವಿಕೆಟ್ ಪಡೆದರರು. ಆದರೆ ರೋಹಿತ್​ ನಾಯಕತ್ವದಲ್ಲಿ ಜಸ್ಪ್ರೀತ್ ಬುಮ್ರಾ ಇನ್ನಿಂಗ್ಸ್​ನ ಮೊದಲ ಓವರ್ ಎಸೆಯುತ್ತಿದ್ದರು. ಆದರೆ ನಾಯಕ, ಬುಮ್ರಾರನ್ನು ಸರಿಯಾಗಿ ಬಳಸಿಕೊಳ್ಳದ ಕಾರಣ ಸಾಕಷ್ಟು ಟೀಕೆಗೆ ಗುರಿಯಾಗಿದ್ದಾರೆ.

Whats_app_banner