ಹುಬ್ಬಳ್ಳಿ ಟೈಗರ್ಸ್ ಗೆಲುವಿನ ನಾಗಾಲೋಟ; ಮಂಗಳೂರು ಡ್ರ್ಯಾಗನ್ಸ್ ಮಣಿಸಿದ ಮನೀಶ್ ಬಳಗ
ಕನ್ನಡ ಸುದ್ದಿ  /  ಕ್ರಿಕೆಟ್  /  ಹುಬ್ಬಳ್ಳಿ ಟೈಗರ್ಸ್ ಗೆಲುವಿನ ನಾಗಾಲೋಟ; ಮಂಗಳೂರು ಡ್ರ್ಯಾಗನ್ಸ್ ಮಣಿಸಿದ ಮನೀಶ್ ಬಳಗ

ಹುಬ್ಬಳ್ಳಿ ಟೈಗರ್ಸ್ ಗೆಲುವಿನ ನಾಗಾಲೋಟ; ಮಂಗಳೂರು ಡ್ರ್ಯಾಗನ್ಸ್ ಮಣಿಸಿದ ಮನೀಶ್ ಬಳಗ

Maharaja Trophy: ಮಂಗಳೂರು ಡ್ರ್ಯಾಗನ್ಸ್‌ ವಿರುದ್ಧ ಹುಬ್ಬಳ್ಳಿ ಟೈಗರ್ಸ್‌ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ಹುಬ್ಬಳ್ಳಿ ಟೈಗರ್ಸ್‌ಗೆ ಎಂಟನೇ ಗೆಲುವು
ಹುಬ್ಬಳ್ಳಿ ಟೈಗರ್ಸ್‌ಗೆ ಎಂಟನೇ ಗೆಲುವು (twitter)

ಬೆಂಗಳೂರು: ಮಹಾರಾಜ ಟ್ರೋಫಿಯಲ್ಲಿ (Maharaja Trophy KSCA T20 2023) ಹುಬ್ಬಳ್ಳಿ ಟೈಗರ್ಸ್‌ (Hubli Tigers) ಗೆಲುವಿನ ನಾಗಾಲೋಟ ಮುಂದುವರೆಸಿದೆ. ಶನಿವಾರದ ಪಂದ್ಯದಲ್ಲಿ ಮಂಗಳೂರು ಡ್ರ್ಯಾಗನ್ಸ್‌ (Mangalore Dragons) ವಿರುದ್ಧವೂ 5 ವಿಕೆಟ್‌ಗಳಿಂದ ಭರ್ಜರಿ ಜಯ ಸಾಧಿಸಿದೆ.

ಮೊದಲು ಬ್ಯಾಟಿಂಗ್‌ ಮಾಡಿದ ಡ್ರ್ಯಾಗನ್ಸ್‌, ಆರಂಭಿಕ ಅಬ್ಬರದ ಹೊರತಾಗಿಯೂ ದಿಢೀರ್ ಕುಸಿತ ಕಂಡಿತು. ಅಂತಿಮವಾಗಿ 9 ವಿಕೆಟ್ ಕಳೆದುಕೊಂಡು 167 ರನ್ ಗಳಿಸಿತು. ಗುರಿ ಬೆನ್ನಟ್ಟಿದ ಮನೀಶ್ ಪಾಂಡೆ ನೇತೃತ್ವದ ಹುಬ್ಬಳ್ಳಿ ಟೈಗರ್ಸ್‌, 18.2 ಓವರ್‌ಗಳಲ್ಲಿ ಕೇವಲ 5 ವಿಕೆಟ್‌ ಕಳೆದುಕೊಂಡು 170 ರನ್‌ ಗಳಿಸಿ ಟೂರ್ನಿಯಲ್ಲಿ 8ನೇ ಗೆಲುವು ದಾಖಲಿಸಿತು.

ಮಿಂಚಿದ ಮನೀಶ್‌ ಪಾಂಡೆ

ಮೊಹಮ್ಮದ್ ತಾಹಾ ತಂಡಕ್ಕೆ ಉತ್ತಮ ಆರಂಭ ಒದಗಿಸಿದರು. ಭರ್ಜರಿ 221.74 ಸ್ಟ್ರೈಕ್‌ರೇಟ್‌ನಲ್ಲಿ ಬ್ಯಾಟ್‌ ಬೀಸಿ ಅರ್ಧಶತಕ (51) ಸಿಡಿಸಿದರು. ನಿಯಮಿತವಾಗಿ ವಿಕೆಟ್‌ ಕಳೆದುಕೊಳ್ಳುತ್ತಾ ಹೋದರೂ, ತಂಡವು ಸ್ಥಿರವಾಗಿ ರನ್‌ ಗಳಿಸುತ್ತಾ ಸಾಗಿತು. ಟೂರ್ನಿಯಲ್ಲಿ ಬಹುತೇಕ ವೈಫಲ್ಯ ಅನುಭವಿಸಿದ್ದ ನಾಯಕ ಮನೀಶ್ ಪಾಂಡೆ, ಮಂಗಳೂರು ವಿರುದ್ಧ ಅರ್ಧಶತಕ ಸಿಡಿಸಿ ತಂಡವನ್ನು ಗೆಲುವಿನತ್ತ ಮುನ್ನಡೆಸಿದರು. 33 ಎಸೆತ ಎದುರಿಸಿದ ಅವರು, 1 ಬೌಂಡರಿ ಹಾಗೂ 5 ಸಿಕ್ಸರ್‌ ಸಹಿತ 56 ರನ್‌ ಪೇರಿಸಿದರು.

ಪ್ರಸಕ್ತ ಆವೃತ್ತಿಯಲ್ಲಿ ಹುಬ್ಬಳ್ಳಿ ಟೈಗರ್ಸ್ ಬಲಿಷ್ಠ ಪ್ರದರ್ಶನ ನೀಡುತ್ತಿದೆ. ಆಡಿದ 10 ಪಂದ್ಯಗಳಲ್ಲಿ 8ರಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ. ಅಲ್ಲದೆ ಈಗಾಗಲೇ ಸೆಮಿಫೈನಲ್‌ಗೆ ಲಗ್ಗೆ ಇಟ್ಟಿದೆ.

ಅತ್ತ ಮಂಗಳೂರು ಡ್ರ್ಯಾಗನ್ಸ್‌ ಮುಂದಿನ ಹಂತಕ್ಕೆ ತಲುಪಲು ಮತ್ತೊಂದು ಅವಕಾಶವಿದೆ. ಗುಲ್ಬರ್ಗ ಮಿಸ್ಟ್ರಿಕ್ಸ್‌ ವಿರುದ್ಧದ ನಾಳಿನ ಪಂದ್ಯವನ್ನು ಭರ್ಜರಿಯಾಗಿ ಗೆದ್ದರೆ ತಂಡಕ್ಕೆ ಸೆಮೀಸ್‌ಗೆ ಲಗ್ಗೆ ಹಾಕುವ ಅವಕಾಶವಿದೆ.

ಆಗಸ್ಟ್‌ 28ರಂದು ಮಹಾರಾಜ ಟ್ರೋಫಿ ಸೆಮಿಫೈನಲ್‌ ಪಂದ್ಯಗಳು ನಡೆಯಲಿದ್ದು, 29ರಂದು ಫೈನಲ್‌ ಪಂದ್ಯ ನಡೆಯಲಿದೆ. ಎಲ್ಲಾ ಪಂದ್ಯಗಳು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಯಲಿವೆ.

ಕರ್ನಾಟಕದ ಇತರ ಕ್ರೀಡಾ ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

Whats_app_banner