ಶ್ರೀಲಂಕಾ ವಿರುದ್ಧ ಬೃಹತ್ ಅಂತರದ ಗೆಲುವು ಸಾಧಿಸಿದ ಭಾರತ ಮಹಿಳಾ ತಂಡ; ಸೆಮಿಫೈನಲ್ ಲೆಕ್ಕಾಚಾರ ಹೇಗಿದೆ?
IND W vs SL W: ಮಹಿಳಾ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಶ್ರೀಲಂಕಾ ವಿರುದ್ಧ ಭಾರತ ಮಹಿಳಾ ತಂಡವು ಭರ್ಜರಿ 82 ರನ್ಗಳ ಗೆಲುವು ಸಾಧಿಸಿತು. ಆ ಮೂಲಕ ಸೆಮೀಸ್ ಆಸೆ ಮತ್ತಷ್ಟು ಜೀವಂತವಾಯಿತು.
ಮಹಿಳಾ ಟಿ20 ವಿಶ್ವಕಪ್ 2024 ಟೂರ್ನಿಯಲ್ಲಿ ಭಾರತ ವನಿತೆಯರ ತಂಡ 2ನೇ ಗೆಲುವು ದಾಖಲಿಸಿದೆ. ಟೂರ್ನಿಯ 12ನೇ ಪಂದ್ಯದಲ್ಲಿ ಶ್ರೀಲಂಕಾ ತಂಡವನ್ನು 82 ರನ್ಗಳ ಅಂತರದಿಂದ ಮಣಿಸಿದ ಭಾರತ ಎ ಗುಂಪಿನ ಅಂಕಪಟ್ಟಿಯಲ್ಲಿ 2ನೇ ಸ್ಥಾನಕ್ಕೆ ಏರಿದೆ. ಆ ಮೂಲಕ ಸೆಮಿಫೈನಲ್ ಆಸೆ ಮತ್ತಷ್ಟು ಸನಿಹಕ್ಕೆ ಬಂದು ನಿಂತಿದೆ. ನಮ್ಮ ನೆರೆಯ ರಾಷ್ಟ್ರ ಶ್ರೀಲಂಕಾವನ್ನು 82 ರನ್ಗಳಿಂದ ಮಣಿಸಿದ ಹರ್ಮನ್ ಪಡೆ, ಮೈನಸ್ ರನ್ರೇಟ್ನಿಂದ ಪ್ಲಸ್ ರನ್ರೇಟ್ ಬದಲಾಯಿಸಿದೆ. ಆರಂಭಿಕ ಪಂದ್ಯದಲ್ಲಿ ಸೋತರೂ ಇದೀಗ ಸತತ ಎರಡು ಪಂದ್ಯ ಗೆಲ್ಲುವಲ್ಲಿ ಯಶಸ್ವಿಯಾಗಿದೆ. ಮೊದಲು ಬ್ಯಾಟಿಂಗ್ ಮಾಡಿದ ಭಾರತ 20 ಓವರ್ಗಳಲ್ಲಿ 3 ವಿಕೆಟ್ ನಷ್ಟಕ್ಕೆ 173 ರನ್ಗಳಿಸಿತು. ಈ ಗುರಿ ಬೆನ್ನಟ್ಟಿದ ಲಂಕಾ, 19.5 ಓವರ್ಗಳಲ್ಲಿ 90 ರನ್ಗಳಿಗೆ ಆಲೌಟ್ ಆಯಿತು. ಭಾರತ ತಂಡಕ್ಕೆ ದೊಡ್ಡ ಗೆಲುವು ಅನಿವಾರ್ಯವಾಗಿತ್ತು. ಅದರಂತೆ ಗೆದ್ದಿದ್ದಲ್ಲದೆ, ಕಳೆದ ಏಷ್ಯಾಕಪ್ ಫೈನಲ್ ಸೋಲಿಗೆ ಸೇಡು ಕೂಡ ತೀರಿಸಿಕೊಂಡಿದೆ.
ಶಫಾಲಿ ವರ್ಮಾ, ಸ್ಮೃತಿ ಮಂಧಾನ, ಹರ್ಮನ್ ಮಿಂಚು
ಮೊದಲು ಬ್ಯಾಟಿಂಗ್ ಆರಂಭಿಸಿದ ಭಾರತ ಅದ್ಭುತ ಪ್ರದರ್ಶನ ನೀಡಿತು. ಶಫಾಲಿ ವರ್ಮಾ ಮತ್ತು ಸ್ಮೃತಿ ಮಂಧಾನ ಅವರು ಆರಂಭಿಕ ವಿಕೆಟ್ಗೆ 98 ರನ್ ಕಲೆ ಹಾಕಿದರು. ಸ್ಮೃತಿ ಮಂಧಾನ ಅರ್ಧಶತಕ ಸಿಡಿಸಿದರೆ, ಶಫಾಲಿ ಅರ್ಧಶತಕದ ಅಂಚಿನಲ್ಲಿ ಎಡವಿದರು. ಮಂಧಾನ 38 ಎಸೆತಗಳಲ್ಲಿ 4 ಬೌಂಡರಿ, 1 ಸಿಕ್ಸರ್ ಸಹಿತ 50 ರನ್ ಗಳಿಸಿದರೆ, ಶಫಾಲಿ 40 ಎಸೆತಗಳಲ್ಲಿ 4 ಬೌಂಡರಿ ಸಹಿತ 43 ರನ್ ಸಿಡಿಸಿದರು. ಈ ಇಬ್ಬರಲ್ಲಿ ಒಬ್ಬರನ್ನು ಚಾಮರಿ ಅಟ್ಟಪಟ್ಟು ರನೌಟ್ ಮಾಡಿದರೆ, ಮತ್ತೊಬ್ಬರನ್ನು ತನ್ನ ಬೌಲಿಂಗ್ನಲ್ಲಿ ವಿಕೆಟ್ ಪಡೆದರು. ಇವರಿಬ್ಬರ ನಂತರ ಕಣಕ್ಕಿಳಿದಿ ಹರ್ಮನ್ಪ್ರೀತ್ ಕೌರ್ ಭರ್ಜರಿ ಅರ್ಧಶತಕ ಸಿಡಿಸಿ ತಂಡದ ಮೊತ್ತವನ್ನು 170ರ ಗಡಿ ದಾಟಿಸಲು ನೆರವಾದರು. 27 ಎಸೆತಗಳಲ್ಲಿ 8 ಬೌಂಡರಿ, 1 ಸಿಕ್ಸರ್ ಸಹಿತ 52 ರನ್ ಗಳಿಸಿದರು. ಜಮೈಮಾ ರೋಡ್ರಿಗಸ್ 16 ರನ್ ಕಾಣಿಕೆ ನೀಡಿದರು. ರಿಚಾ ಘೋಷ್ 6 ರನ್ ಗಳಿಸಿದರು.
ಈ ಗುರಿ ಬೆನ್ನಟ್ಟಿದ ಲಂಕಾ, ಉತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಯಿತು. ವಿಶ್ಮಿ ಗುಣರತ್ನೆ 0, ಚಾಮರಿ ಅಟ್ಟಾಪಟ್ಟು 1, ಹರ್ಷಿತಾ ಸಮರವಿಕ್ರಮ 3 ರನ್ ಗಳಿಸಿ ಔಟಾದರು. ಪವರ್ ಪ್ಲೇನಲ್ಲಿ 3 ವಿಕೆಟ್ ಕಳೆದುಕೊಂಡಿತು. ರೇಣುಕಾ ಸಿಂಗ್ 2, ಶ್ರೇಯಾಂಕಾ ಪಾಟೀಲ್ 1 ವಿಕೆಟ್ ಪಡೆದರು. ಕವಿಶಾ ದಿಲ್ಹಾರಿ 21, ಅನುಷ್ಕಾ ಸಂಜೀವನಿ 20 ರನ್ ಗಳಿಸಿ ಚೇತರಿಕೆ ನೀಡಲು ಯತ್ನಿಸಿದರು. ಆದರೆ ಅರುಂಧತಿ ರೆಡ್ಡಿ ಮತ್ತು ಆಶಾ ಶೋಭನಾ ಅವರು ಬ್ರೇಕ್ ನೀಡಿದರು. ಅಮ ಕಾಂಚನಾ 19 ರನ್ ಗಳಿಸಿದರೆ, ಸುಗಂದಿಕಾ ಕುಮಾರಿ, ಇನೋಶಿ ಪ್ರಿಯದರ್ಶನಿ ತಲಾ 1 ರನ್ ಗಳಿಸಿದರು. ರೇಣುಕಾ ಸಿಂಗ್ 2 ವಿಕೆಟ್ ಪಡೆದರೆ, ಅರುಂಧತಿ ರೆಡ್ಡಿ, ಆಶಾ ಶೋಭನಾ ಅವರು ತಲಾ 3 ವಿಕೆಟ್ ಪಡೆದರು. ಶ್ರೇಯಾಂಕಾ ಪಾಟೀಲ್, ದೀಪ್ತಿ ಶರ್ಮಾ 1 ವಿಕೆಟ್ ಕಿತ್ತರು. ಈ ಸೋಲಿನೊಂದಿಗೆ ಶ್ರೀಲಂಕಾ ಎಲಿಮಿನೇಟ್ ಆಗಿದೆ.
ಸೆಮಿಫೈನಲ್ ಲೆಕ್ಕಾಚಾರ ಹೇಗೆ?
ಮಹಿಳಾ ತಂಡವು ಆಡಿದ 3 ಪಂದ್ಯಗಳಲ್ಲಿ 2ರಲ್ಲಿ ಗೆದ್ದು 4 ಅಂಕ ಪಡೆದು 2ನೇ ಸ್ಥಾನದಲ್ಲಿದೆ. ನೆಟ್ ರನ್ರೇಟ್ +0.576. ಇದೀಗ ಉಳಿದ ಪಂದ್ಯವನ್ನು ಗೆದ್ದರೆ ಯಾವುದೇ ಆತಂಕವಿಲ್ಲದೆ ಸೆಮಿಫೈನಲ್ ಪ್ರವೇಶಿಸಲಿದೆ. ಆದರೆ ಪಾಕಿಸ್ತಾನ ಮತ್ತು ನ್ಯೂಜಿಲೆಂಡ್ ತಂಡಗಳು ಉಳಿದ ಎರಡೂ ಪಂದ್ಯಗಳನ್ನು ಸೋಲಬೇಕು. ಆದರೆ ಇದು ಅಸಾಧ್ಯ. ಏಕೆಂದರೆ ಕಿವೀಸ್-ಪಾಕ್ ತಂಡಗಳೇ ಮುಖಾಮುಖಿಯಾಗಲಿವೆ. ಆದರೆ ಇಲ್ಲಿ ಯಾವುದೇ ತಂಡ ಗೆದ್ದರೂ ಅದು ಕಡಿಮೆ ಅಂತರದ ಗೆಲುವಾಗಬೇಕಿದೆ. ಪಾಕಿಸ್ತಾನ ತಂಡವು ಆಸ್ಟ್ರೇಲಿಯಾ-ನ್ಯೂಜಿಲೆಂಡ್ ಎದುರು ಆಡಲಿದೆ. ಆದರೆ, ಈ ಎರಡು ಪಂದ್ಯಗಳನ್ನೂ ಸೋಲಬೇಕು. ಆ ಕಡೆ ನ್ಯೂಜಿಲೆಂಡ್, ಶ್ರೀಲಂಕಾ ಮತ್ತು ಪಾಕ್ ವಿರುದ್ಧ ಆಡಬೇಕಿದೆ. ಆದರೆ ಎರಡು ಪಂದ್ಯ ಗೆದ್ದರೂ ಕಡಿಮೆ ಅಂತರದ ಗೆಲುವಾಗಬೇಕು. ಅಲ್ಲದೆ, ಒಂದು ಸೋಲು, ಒಂದು ಗೆಲುವು ಸಾಧಿಸಿದರೆ ಭಾರತಕ್ಕೆ ನೆರವಾಗಲಿದೆ. ಈ ಎಲ್ಲದರ ನಡುವೆ ಭಾರತವು ತನ್ನ ಕೊನೆಯ ಪಂದ್ಯದಲ್ಲಿ ಆಸೀಸ್ ಗೆಲ್ಲಲೇಬೇಕು.