ಭಾರತ vs ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯ: ತ್ರಿಶತಕದತ್ತ ರವೀಂದ್ರ ಜಡೇಜಾ ಕಣ್ಣು, ಸೃಷ್ಟಿಯಾಗುತ್ತಾ ಇತಿಹಾಸ-india vs bangladesh 2nd test in kanpur ravindra jadeja needs one wicket to create history vbt ,ಕ್ರಿಕೆಟ್ ಸುದ್ದಿ
ಕನ್ನಡ ಸುದ್ದಿ  /  ಕ್ರಿಕೆಟ್  /  ಭಾರತ Vs ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯ: ತ್ರಿಶತಕದತ್ತ ರವೀಂದ್ರ ಜಡೇಜಾ ಕಣ್ಣು, ಸೃಷ್ಟಿಯಾಗುತ್ತಾ ಇತಿಹಾಸ

ಭಾರತ vs ಬಾಂಗ್ಲಾದೇಶ ಎರಡನೇ ಟೆಸ್ಟ್ ಪಂದ್ಯ: ತ್ರಿಶತಕದತ್ತ ರವೀಂದ್ರ ಜಡೇಜಾ ಕಣ್ಣು, ಸೃಷ್ಟಿಯಾಗುತ್ತಾ ಇತಿಹಾಸ

ರವೀಂದ್ರ ಜಡೇಜಾ ಟೆಸ್ಟ್ ಕ್ರಿಕೆಟ್​ನಲ್ಲಿ 300 ವಿಕೆಟ್‌ಗಳನ್ನು ಪಡೆದ ಗಣ್ಯ ಭಾರತೀಯ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಯಾಗಲಿದ್ದಾರೆ. ಒಂದು ವೇಳೆ ಅವರು ಈ ಸಾಧನೆ ಮಾಡಿದರೆ, ಟೆಸ್ಟ್‌ನಲ್ಲಿ 300 ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್ ಕೂಡ ಆಗಲಿದ್ದಾರೆ. (ವರದಿ: ವಿನಯ್ ಭಟ್)

ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ (ಫೋಟೊ-ಪಿಟಿಐ)
ಟೀಂ ಇಂಡಿಯಾ ಆಲ್‌ರೌಂಡರ್ ರವೀಂದ್ರ ಜಡೇಜಾ (ಫೋಟೊ-ಪಿಟಿಐ)

ಭಾರತ ಕ್ರಿಕೆಟ್ ತಂಡ ಪ್ರಸ್ತುತ ಕಾನ್ಪುರದ ಗ್ರೀನ್ ಪಾರ್ಕ್ ಅಂತಾರಾಷ್ಟ್ರೀಯ ಸ್ಟೇಡಿಯಂನಲ್ಲಿ ಎರಡು ಪಂದ್ಯಗಳ ಸರಣಿಯ ಅಂತಿಮ ಟೆಸ್ಟ್​ನಲ್ಲಿ ಬಾಂಗ್ಲಾದೇಶವನ್ನು ಎದುರಿಸುತ್ತಿದೆ. ಚೆನ್ನೈನಲ್ಲಿ ನಡೆದ ಮೊದಲ ಟೆಸ್ಟ್‌ನಲ್ಲಿ 280 ರನ್‌ಗಳ ದೊಡ್ಡ ಅಂತರದ ಗೆಲುವು ಸಾಧಿಸಿದ ರೋಹಿತ್ ಪಡೆ ಇದೀಗ ಎರಡನೇ ಟೆಸ್ಟ್​​ನಲ್ಲೂ ಗೆದ್ದು ಸರಣಿ ಕ್ಲೀನ್​ಸ್ವೀಪ್ ಮಡುವತ್ತ ಚಿತ್ತ ನೆಟ್ಟಿದೆ. ಮೊದಲ ಟೆಸ್ಟ್​ನಲ್ಲಿ ತಂಡದ ಗೆಲುವಿಗೆ ಪ್ರಮುಖ ಕಾರಣರಾದವರು ರವೀಂದ್ರ ಜಡೇಜಾ. ಇವರು ಮೊದಲ ಇನ್ನಿಂಗ್ಸ್‌ನಲ್ಲಿ ಅರ್ಧಶತಕವನ್ನು ಗಳಿಸಿ ಒಟ್ಟು 5 ವಿಕೆಟ್‌ಗಳನ್ನು ಪಡೆದಿದ್ದರು. ಈ ಮೂಲಕ ಜಡೇಜಾ 147 ವರ್ಷಗಳಲ್ಲಿ ದೊಡ್ಡ ಸಾಧನೆ ಮಾಡಿದ ಮೊದಲ ಆಟಗಾರ ಎನಿಸಿಕೊಂಡರು. ಇದೀಗ ಮತ್ತೊಮ್ಮೆ ಇತಿಹಾಸ ಸೃಷ್ಟಿಸಲು ರವೀಂದ್ರ ಜಡೇಜಾಗೆ ಒಂದು ವಿಕೆಟ್ ಅಗತ್ಯವಿದೆ.

ಭಾರತ ಪರ ಜಡ್ಡು ಇದುವರೆಗೆ 73 ಟೆಸ್ಟ್ ಪಂದ್ಯಗಳಲ್ಲಿ 299 ವಿಕೆಟ್ ಪಡೆದಿದ್ದಾರೆ. ಬಾಂಗ್ಲಾದೇಶ ವಿರುದ್ಧ ಕಾನ್ಪುರದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನದಾಟದಲ್ಲಿ ಜಡೇಜಾ 1 ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರೆ, ಟೆಸ್ಟ್ ಕ್ರಿಕೆಟ್‌ನಲ್ಲಿ 300 ವಿಕೆಟ್ ಪೂರೈಸಿ ಇತಿಹಾಸ ಸೃಷ್ಟಿಸಲಿದ್ದಾರೆ. ಜಡೇಜಾ ದೀರ್ಘ ಸ್ವರೂಪದಲ್ಲಿ 300 ವಿಕೆಟ್‌ಗಳನ್ನು ಪಡೆದ ಗಣ್ಯ ಭಾರತೀಯ ಬೌಲರ್‌ಗಳ ಪಟ್ಟಿಗೆ ಸೇರ್ಪಡೆಯಾಗುತ್ತಾರೆ. ಒಂದು ವೇಳೆ ಅವರು ಈ ಸಾಧನೆ ಮಾಡಿದರೆ, ಟೆಸ್ಟ್‌ನಲ್ಲಿ 300 ವಿಕೆಟ್‌ಗಳನ್ನು ಪಡೆದ ಭಾರತದ ಮೊದಲ ಎಡಗೈ ಸ್ಪಿನ್ನರ್ ಕೂಡ ಆಗಲಿದ್ದಾರೆ.

ಜಡೇಜಾ ಟೆಸ್ಟ್ ಪಂದ್ಯಗಳಲ್ಲಿ 13 ಬಾರಿ ಇನ್ನಿಂಗ್ಸ್‌ನಲ್ಲಿ 5 ವಿಕೆಟ್ ಪಡೆದಿದ್ದಾರೆ. ಇದಲ್ಲದೇ ಎರಡು ಬಾರಿ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದಿದ್ದಾರೆ. ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಅಗ್ರಸ್ಥಾನದಲ್ಲಿದ್ದಾರೆ. ಅನುಭವಿ ಲೆಗ್ ಸ್ಪಿನ್ನರ್ ಅನಿಲ್ ಕುಂಬ್ಳೆ ಭಾರತ ಪರ ಅತಿ ಹೆಚ್ಚು ಟೆಸ್ಟ್ ವಿಕೆಟ್ ಪಡೆದವರಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅನಿಲ್ ಕುಂಬ್ಳೆ ಟೆಸ್ಟ್ ಕ್ರಿಕೆಟ್‌ನಲ್ಲಿ 619 ವಿಕೆಟ್ ಪಡೆದಿದ್ದಾರೆ.

ಇದಲ್ಲದೇ ರವೀಂದ್ರ ಜಡೇಜಾ 197 ಏಕದಿನ ಪಂದ್ಯಗಳಲ್ಲಿ 220 ವಿಕೆಟ್ ಹಾಗೂ 74 ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 54 ವಿಕೆಟ್ ಪಡೆದಿದ್ದಾರೆ. ಏಕದಿನ ಪಂದ್ಯಗಳಲ್ಲಿ 2756 ರನ್ ಮತ್ತು ಟಿ20 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ 515 ರನ್ ಗಳಿಸಿದ್ದಾರೆ. 240 ಐಪಿಎಲ್ ಪಂದ್ಯಗಳಲ್ಲಿ ರವೀಂದ್ರ ಜಡೇಜಾ 160 ವಿಕೆಟ್ ಹಾಗೂ 2,959 ರನ್ ಗಳಿಸಿದ್ದಾರೆ.

ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ಭಾರತೀಯ ಬೌಲರ್

1. ಅನಿಲ್ ಕುಂಬ್ಳೆ - 619 ಟೆಸ್ಟ್ ವಿಕೆಟ್

2. ರವಿಚಂದ್ರನ್ ಅಶ್ವಿನ್ - 523 ಟೆಸ್ಟ್ ವಿಕೆಟ್

3. ಕಪಿಲ್ ದೇವ್ - 434 ಟೆಸ್ಟ್ ವಿಕೆಟ್

4. ಹರ್ಭಜನ್ ಸಿಂಗ್ - 417 ಟೆಸ್ಟ್ ವಿಕೆಟ್

5. ಇಶಾಂತ್ ಶರ್ಮಾ/ಜಹೀರ್ ಖಾನ್ – 311 ಟೆಸ್ಟ್ ವಿಕೆಟ್

6. ರವೀಂದ್ರ ಜಡೇಜಾ - 299 ಟೆಸ್ಟ್ ವಿಕೆಟ್

ಮೊದಲ ಟೆಸ್ಟ್‌ನಲ್ಲಿ ರವೀಂದ್ರ ಜಡೇಜಾ:

ಮೊದಲ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಭಾರತ 144 ರನ್‌ಗಳಿಗೆ 6 ವಿಕೆಟ್ ಕಳೆದುಕೊಂಡಿದ್ದಾಗ, ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್ 199 ರನ್‌ಗಳ ಜೊತೆಯಾಟದೊಂದಿಗೆ ಇನ್ನಿಂಗ್ಸ್ ಅನ್ನು ಮರಳಿ ಟ್ರ್ಯಾಕ್‌ಗೆ ತಂದರು. ಅಶ್ವಿನ್ ಶತಕ ಗಳಿಸಿದ ಸಂದರ್ಭದಲ್ಲಿ, ಜಡೇಜಾ 86 ರನ್ ಗಳಿಸಿದರು. ಅವರು ಎರಡನೇ ಇನ್ನಿಂಗ್ಸ್‌ನಲ್ಲಿ ಎರಡು ಮತ್ತು ಮೂರನೇ ಇನ್ನಿಂಗ್ಸ್‌ನಲ್ಲಿ ಮೂರು ವಿಕೆಟ್‌ಗಳನ್ನು ಕೂಡ ಪಡೆದರು. ಇದೀಗ ಮತ್ತೊಂದು ದಾಖಲೆಗೆ ಕಾಯುತ್ತಿದ್ದಾರೆ. (ವರದಿ: ವಿನಯ್ ಭಟ್)

mysore-dasara_Entry_Point