ಅಶ್ವಿನ್ ಶತಕ, ಜಡೇಜಾ ಅರ್ಧಶತಕ, ಬಾಂಗ್ಲಾ ಅಗ್ರೆಸ್ಸಿವ್ ಆಟಕ್ಕೆ ಬ್ರೇಕ್; ಮುಗ್ಗರಿಸಿ ನಂತರ ಪಾರಾದ ಭಾರತ
India vs Bangladesh 1st Test: ಬಾಂಗ್ಲಾದೇಶ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಟೀಮ್ ಇಂಡಿಯಾ, ಮೊದಲ ದಿನದ ಅಂತ್ಯಕ್ಕೆ ಉತ್ತಮ ಮೊತ್ತ ಕಲೆ ಹಾಕಿದೆ. ರವಿಚಂದ್ರನ್ ಅಶ್ವಿನ್ ಮತ್ತು ರವೀಂದ್ರ ಜಡೇಜಾ ಅವರ ಅದ್ಭುತ ಬ್ಯಾಟಿಂಗ್ ನೆರವಿನಿಂದ ರೋಹಿತ್ ಪಡೆ ಬೃಹತ್ ಮೊತ್ತದತ್ತ ಹೆಜ್ಜೆ ಹಾಕಿದೆ.
Bangladesh tour of India: ಬಾಂಗ್ಲಾದೇಶ ವಿರುದ್ಧ ರನ್ ಗಳಿಸಲು ಪರದಾಡಿದ ಭಾರತ ತಂಡಕ್ಕೆ ರವಿಚಂದ್ರನ್ ಅಶ್ವಿನ್ ಶತಕ (102*) ಮತ್ತು ರವೀಂದ್ರ ಜಡೇಜಾ (86*) ಅರ್ಧಶತಕ ಸಿಡಿಸಿ ಆಸರೆಯಾಗಿದ್ದಾರೆ. ಪ್ರವಾಸಿ ಬೌಲರ್ಗಳ ದಾಳಿಗೆ ನಲುಗಿದ ಘಟಾನುಘಟಿ ಬ್ಯಾಟರ್ಸ್ ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದರು. ಇದರೊಂದಿಗೆ ಅಲ್ಪಮೊತ್ತಕ್ಕೆ ಕುಸಿಯುವ ಭೀತಿಗೂ ಸಿಲುಕಿತ್ತು. ಆದರೆ, ಇದೀಗ ಭಾರತ ಪಾರಾಗಿದೆ. ಉತ್ತಮ ಮೊತ್ತದತ್ತ ಹೆಜ್ಜೆ ಹಾಕಿದೆ. ಜಡ್ಡು-ಆ್ಯಷ್ ಜೋಡಿ ಜವಾಬ್ದಾರಿಯುತ, ಅಜೇಯ ಅದ್ಭುತ ಜೊತೆಯಾಟದ ಮೂಲಕ ಸಂಕಷ್ಟದಿಂದ ಪಾರು ಮಾಡಿದೆ. ಮೊದಲ ದಿನದ ಅಂತ್ಯಕ್ಕೆ ಟೀಮ್ ಇಂಡಿಯಾ 80 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 339 ರನ್ ಗಳಿಸಿದೆ.
ಚೆನ್ನೈನ ಎಂ ಚಿದಂಬರಂ ಕ್ರಿಕೆಟ್ ಮೈದಾನದಲ್ಲಿ ನಡೆದ ಪ್ರಥಮ ಟೆಸ್ಟ್ನಲ್ಲಿ ಟಾಸ್ ಗೆದ್ದ ಬಾಂಗ್ಲಾ ಬೌಲಿಂಗ್ ಆಯ್ಕೆ ಮಾಡಿಕೊಂಡಿತು. ಅದರಂತೆ ಮೊದಲು ಬ್ಯಾಟಿಂಗ್ ಮಾಡಿದ ಯಶಸ್ವಿ ಜೈಸ್ವಾಲ್ ಉತ್ತಮ ಪ್ರದರ್ಶನ ನೀಡಿದರು. ಸತತ ವಿಕೆಟ್ ಪತನವಾದ ಕಾರಣ ನಿಧಾನಗತಿ ಹಾಗೂ ರಕ್ಷಣಾತ್ಮಕ ಆಟದ ಮೂಲಕ ಆಕರ್ಷಕ ಅರ್ಧಶತಕ ಸಿಡಿಸಿ ಗಮನ ಸೆಳೆದರು. ಆದರೆ ಘಟಾನುಘಟಿ ಬ್ಯಾಟರ್ಗಳು ಕೈಕೊಟ್ಟರು. ರೋಹಿತ್ ಶರ್ಮಾ 6, ಶುಭ್ಮನ್ ಗಿಲ್ 0, ವಿರಾಟ್ ಕೊಹ್ಲಿ 6, ಕೆಎಲ್ ರಾಹುಲ್ 16 ರನ್ ಗಳಿಸಿ ಭಾರಿ ನಿರಾಸೆ ಮೂಡಿಸಿದರು. ರಿಷಭ್ ಪಂತ್ ಕೆಲಹೊತ್ತು ಹೋರಾಡಿ ಗಮನ ಸೆಳೆದರು.
ಮಿಂಚಿದ ಬಾಂಗ್ಲಾ ಬೌಲರ್ಸ್
ಇತ್ತೀಚೆಗೆ ಪಾಕಿಸ್ತಾನ ವಿರುದ್ಧ ಐತಿಹಾಸಿಕ ಸರಣಿ ಗೆದ್ದು ದಾಖಲೆ ಬರೆದ ಬಾಂಗ್ಲಾದೇಶ ಭಾರತದ ವಿರುದ್ಧವೂ ಉತ್ತಮ ಪ್ರದರ್ಶನ ನೀಡುತ್ತಿದೆ. ವೇಗಿ ಹಸನ್ ಮೊಹಮ್ಮದ್ ಬೊಂಬಾಬ್ ಬೌಲಿಂಗ್ಗೆ ಪ್ರಮುಖ ಬ್ಯಾಟರ್ಗಳೇ ಬೇಗನೇ ಔಟಾಗಿ ಪೆವಿಲಿಯನ್ ಸೇರಿದರು. ರೋಹಿತ್, ಗಿಲ್, ಕೊಹ್ಲಿ, ಪಂತ್ ಅವರನ್ನು ಬೇಗನೇ ಡಗೌಟ್ಗೆ ಕಳುಹಿಸಿದರು. 18 ಓವರ್ಗಳಲ್ಲಿ 58 ರನ್ ಬಿಟ್ಟುಕೊಟ್ಟು 4 ವಿಕೆಟ್ ಉರುಳಿಸಿದರು. ಇದರ ಪರಿಣಾಮ ಭಾರತ ಕೇವಲ 144 ರನ್ಗಳಿಗೆ ಪ್ರಮುಖ 6 ವಿಕೆಟ್ಗಳನ್ನು ಕಳೆದುಕೊಂಡಿತು. ನಹಿದ್ ರಾಣಾ, ಮೆಹದಿ ಹಸನ್ ಮಿರಾಜ್ ಕೂಡ ತಲಾ 1 ವಿಕೆಟ್ ಪಡೆದು ಸಾಥ್ ನೀಡಿದರು.
ಸಂಕಷ್ಟದಿಂದ ಪಾರು ಮಾಡಿದ ಜಡ್ಡು-ಅಶ್ವಿನ್
144 ರನ್ಗಳಿಗೆ 6 ವಿಕೆಟ್ ಕಳೆದುಕೊಂಡು ಅಪಾಯದಲ್ಲಿದ್ದ ಭಾರತ ತಂಡಕ್ಕೆ ಆಸರೆಯಾಗಿದ್ದೇ ರವೀಂದ್ರ ಜಡೇಜಾ ಮತ್ತು ರವಿಚಂದ್ರನ್ ಅಶ್ವಿನ್. ಈ ಹಂತದಲ್ಲಿ ಜೊತೆಯಾದ ಜೋಡಿ 200 ರನ್ಗಳ ಸಮೀಪ ರನ್ ಕಲೆ ಹಾಕಿದೆ. 7ನೇ ವಿಕೆಟ್ಗೆ 227 ಎಸೆತಗಳಲ್ಲಿ 195 ರನ್ಗಳ ಅಜೇಯ ಜೊತೆಯಾಟವಾಡಿದೆ. ಇದು ಭಾರತ ತಂಡವನ್ನು 300 ರನ್ಗಳ ಗಡಿ ದಾಟುವಂತೆ ಮಾಡಿತು. ಬಾಂಗ್ಲಾದೇಶ ಬೌಲರ್ಗಳ ಎದುರು ಉತ್ತಮ ಬ್ಯಾಟಿಂಗ್ ಪ್ರದರ್ಶನ ನೀಡಿದ ಅಶ್ವಿನ್ 6ನೇ ಶತಕವನ್ನೂ ಪೂರೈಸಿದ್ದಾರೆ. ಮತ್ತೊಂದೆಡೆ ಜಡೇಜಾ ಶತಕದತ್ತ ಹೆಜ್ಜೆ ಹಾಕಿದ್ದಾರೆ.
ಅಶ್ವಿನ್ ಭರ್ಜರಿ ಶತಕ, ಜಡ್ಡು ಸೆಂಚುರಿಯತ್ತ
ತಂಡ ಸಂಕಷ್ಟದಲ್ಲಿದ್ದರೆ ನಾನಿದ್ದೇನೆ ಎಂದು ಬ್ಯಾಟಿಂಗ್ನಲ್ಲಿ ಸದ್ದು ಮಾಡಿದ ಅಶ್ವಿನ್ ಮತ್ತೊಂದು ಶತಕವನ್ನು ಖಾತೆಗೆ ಹಾಕಿಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್ನಲ್ಲಿ ಅಶ್ವಿನ್ 6ನೇ ಶತಕ ಸಿಡಿಸಿದ್ದು, ಅಜೇಯ ಬ್ಯಾಟಿಂಗ್ ನಡೆಸುತ್ತಿದ್ದಾರೆ. 112 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ 102 ರನ್ ಗಳಿಸಿದ್ದಾರೆ. ಮತ್ತೊಂದೆಡೆ ಅಶ್ವಿನ್ಗೆ ಸಖತ್ ಸಾಥ್ ಕೊಟ್ಟಿರುವ ಜಡ್ಡು ಕೂಡ ಅಮೋಘ ಪ್ರದರ್ಶನ ನೀಡಿದ್ದಾರೆ. ತಾನು ಕೂಡ ಶತಕದ ಸನಿಹದತ್ತ ಹೆಜ್ಜೆ ಹಾಕಿದ್ದಾರೆ. 117 ಎಸೆತಗಳಲ್ಲಿ 10 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 86 ರನ್ ಬಾರಿಸಿದ್ದಾರೆ. ಇದೀಗ 2ನೇ ದಿನದಾಟವು ಮತ್ತಷ್ಟು ಕುತೂಹಲ ಕೆರಳಿಸಿದ್ದು, ಭಾರತದ ಬ್ಯಾಟಿಂಗ್ ಹೇಗಿರಲಿದೆ ಎಂಬುದನ್ನು ಕಾದುನೋಡಬೇಕಿದೆ.