ಧರ್ಮಶಾಲಾದಲ್ಲಿ ಗುಡುಗು ಸಹಿತ ಮಳೆ; ಭಾರತ ನ್ಯೂಜಿಲ್ಯಾಂಡ್ ವಿಶ್ವಕಪ್ ಪಂದ್ಯ ರದ್ದಾಗುವ ಭೀತಿ
India vs New Zealand Weather Report: ಬಹುನಿರೀಕ್ಷಿತ ಇಂಡೋ-ಕಿವೀಸ್ ಪಂದ್ಯಕ್ಕೆ ಮಳೆಯ ಆತಂಕ ಎದುರಾಗಿದೆ. ಧರ್ಮಶಾಲಾದಲ್ಲಿ ಮೋಡ ಕವಿದ ವಾತಾವರಣವಿದ್ದು, ಭಾನುವಾರವೂ ಮಳೆಯ ಮುನ್ಸೂಚನೆ ಸಿಕ್ಕಿದೆ.
ಏಕದಿನ ವಿಶ್ವಕಪ್ 2023ರಲ್ಲಿ (ICC ODI World Cup 2023) ಭಾನುವಾರ ರೋಚಕ ಪಂದ್ಯ ನಡೆಯುತ್ತಿದೆ. ಆತಿಥೇಯ ಭಾರತ ತಂಡವು ಅಂಕಪಟ್ಟಿಯ ಅಗ್ರಸ್ಥಾನಿ ನ್ಯೂಜಿಲ್ಯಾಂಡ್ (India vs New Zealand) ತಂಡವನ್ನು ಎದುರಿಸುತ್ತಿದೆ. ಧರ್ಮಶಾಲಾದ ಭಾರತದ ಅತ್ಯಂತ ಸುಂದರವಾದ ಹಿಮಾಚಲ ಪ್ರದೇಶ ಕ್ರಿಕೆಟ್ ಅಸೋಸಿಯೇಷನ್ (HPCA) ಕ್ರೀಡಾಂಗಣದಲ್ಲಿ ಏಕದಿನ ವಿಶ್ವಕಪ್‌ನ 21ನೇ ಪಂದ್ಯದಲ್ಲಿ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ.
ಪ್ರಸಕ್ತ ಆವೃತ್ತಿಯಲ್ಲಿ ಉಭಯ ತಂಡಗಳು ಈವರೆಗೆ ತಲಾ ನಾಲ್ಕು ಪಂದ್ಯಗಳನ್ನು ಆಡಿದ್ದು, ಆಡಿದ ಎಲ್ಲಾ ನಾಲ್ಕು ಪಂದ್ಯಗಳಲ್ಲಿ ಭಾರತ ಮತ್ತು ನ್ಯೂಜಿಲ್ಯಾಂಡ್ ತಂಡಗಳು ಗೆಲುವು ಸಾಧಿಸಿವೆ. ವಿಶ್ವಕಪ್‌ನಲ್ಲಿ ಟೀಮ್ ಇಂಡಿಯಾವು ಕೊನೆಯ ಬಾರಿಗೆ ನ್ಯೂಜಿಲ್ಯಾಂಡ್ ವಿರುದ್ಧವೇ ಸೋತಿತ್ತು. ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ನಡೆದ 2019ರ ವಿಶ್ವಕಪ್ ಸೆಮಿಫೈನಲ್ ಪಂದ್ಯದಲ್ಲಿ ಭಾರತವು ಕೇವಲ 18 ರನ್‌ಗಳಿಂದ ಸೋತಿತ್ತು. ಅಲ್ಲದೆ ಟೂರ್ನಿಯಿಂದ ಹೊರಬಿದ್ದಿತ್ತು.
ಉಭಯ ತಂಡಗಳು ಇದೀಗ ಮತ್ತೊಮ್ಮೆ ವಿಶ್ವಕಪ್‌ನಲ್ಲಿ ಮುಖಾಮುಖಿಯಾಗುತ್ತಿವೆ. ಈ ಪಂದ್ಯದಲ್ಲಿ ಗೆಲ್ಲುವ ತಂಡವು ಅಜೇಯ ಓಟದೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೆ ಬಡ್ತಿ ಪಡೆಯುತ್ತದೆ. ಆದರೆ, ಬಹುನಿರೀಕ್ಷಿತ ಪಂದ್ಯಕ್ಕೆ ವರುಣ ಅಡ್ಡಿಪಡಿಸುವ ಸಾಧ್ಯತೆ ದಟ್ಟವಾಗಿದೆ.
ಧರ್ಮಾಶಾಲಾದಲ್ಲಿ ಗುಡುಗು ಸಹಿತ ಮಳೆ
ಧರ್ಮಶಾಲಾದಲ್ಲಿ ಭಾನುವಾರ ನಡೆಯುತ್ತಿರುವ ಪಂದ್ಯಕ್ಕೆ ಮಳೆಯ ಮುನ್ಸೂಚನೆ ಇದೆ. ಬರೀ ಮಳೆ ಮಾತ್ರವಲ್ಲದೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಇದೆ. ಭಾರತೀಯ ಹವಾಮಾನ ಇಲಾಖೆಯ ಮುನ್ಸೂಚನೆ ಪ್ರಕಾರ, ಪಂದ್ಯದ ಟಾಸ್ ವೇಳೆಗೆ ಗುಡುಗು ಸಹಿತ ಮಳೆಯಾಗುವ ಸಾಧ್ಯತೆಗಳಿವೆ. ಶೇಕಡಾ 43ರಷ್ಟು ವರುಣಾಗಮನದ ಸಾಧ್ಯತೆಯಿಂದಾಗಿ ಟಾಸ್ ಪ್ರಕ್ರಿಯೆ ವಿಳಂಬವಾಗಬಹುದು.
ದಕ್ಷಿಣ ಆಫ್ರಿಕಾ - ನೆದರ್ಲೆಂಡ್ಸ್ ಪಂದ್ಯವೂ ವಿಳಂಬವಾಗಿತ್ತು
ಇದೇ ಮೈದಾನದಲ್ಲಿ ಅಕ್ಟೋಬರ್ 17ರಂದು ನಡೆದ ಕೊನೆಯ ಪಂದ್ಯದ ವೇಳೆಯೂ ಮಳೆಯಾಗಿತ್ತು. ದಕ್ಷಿಣ ಆಫ್ರಿಕಾ ಮತ್ತು ನೆದರ್ಲೆಂಡ್ಸ್ ನಡುವಿನ ಕೊನೆಯ ವಿಶ್ವಕಪ್ ಪಂದ್ಯದ ಆರಂಭದ ವೇಳೆ ಮಳೆ ಅಡ್ಡಿಪಡಿಸಿದ ಕಾರಣದಿಂದಾಗಿ ಪಂದ್ಯವನ್ನು ತಲಾ 43 ಓವರ್‌ಗಳಿಗೆ ಇಳಿಸಲಾಗಿತ್ತು. ಇದೀಗ ಇಂಡೋ-ಕಿವೀಸ್ ಪಂದ್ಯಕ್ಕೂ ಮಳೆಯ ಮುನ್ಸೂಚನೆ ಸಿಕ್ಕಿದ್ದು, ಅಭಿಮಾನಿಗಳಿಗೆ ನಿರಾಸೆಯಾಗಿದೆ.
ಶನಿವಾರದಂದು ಧರ್ಮಶಾಲಾದಲ್ಲಿ ಗರಿಷ್ಠ 13 ಡಿಗ್ರಿಗಳಷ್ಟು ತಾಪಮಾನವಿದ್ದು, ಉಭಯ ತಂಡಗಳಿಗೆ ಚಳಿಯ ಅನುಭವವಾಗಲಿದೆ. ಶೇಕಡಾ 74ರಷ್ಟು ಮೋಡ ಕವಿದ ವಾತಾವರಣವಿರಲಿದ್ದು, ಸಂಜೆಯ ವೇಳೆಗೆ ತಾಪಮಾನವು ಮತ್ತಷ್ಟು ಕುಸಿಯಲಿದೆ ಒಂದು ವೇಳೆ ಭಾನುವಾರದ ಪಂದ್ಯವು ಮಳೆಯಿಂದಾಗಿ ರದ್ದಾಗಿದ್ದರೆ, ಭಾರತ ಮತ್ತು ನ್ಯೂಜಿಲ್ಯಾಂಡ್ ತಲಾ ಒಂದು ಅಂಕಗಳನ್ನು ನೀಡಲಾಗುತ್ತದೆ.
ಧರ್ಮಶಾಲಾ ಪಿಚ್ ಹೇಗಿದೆ?
ಮೈದಾನವು ಎತ್ತರದಲ್ಲಿರುವುದರಿಂದ, ಚೆಂಡು ವೇಗವಾಗಿ ಚಲಿಸುತ್ತದೆ. ಸೆಪ್ಟೆಂಬರ್‌ನಿಂದ ಮಾರ್ಚ್ ಅವಧಿಯಲ್ಲಿ ಪಂದ್ಯಗಳಿದ್ದಾಗ ಸಂಜೆಯ ಅವಧಿಯಲ್ಲಿ ಇಬ್ಬನಿ ಪ್ರಮುಖ ಪಾತ್ರ ವಹಿಸುತ್ತದೆ. ಹೀಗಾಗಿ ತಂಡಗಳು ಈ ಮೈದಾನದಲ್ಲಿ ಚೇಸ್ ಮಾಡಲು ಆದ್ಯತೆ ನೀಡುತ್ತವೆ. ಭಾರತದ ಸಾಮಾನ್ಯ ಪಿಚ್‌ಗಳಂತೆ ಇಲ್ಲಿಯೂ ಹೆಚ್ಚು ರನ್ ಹರಿದು ಬರುತ್ತದೆ. ಪ್ರಸಕ್ತ ಟೂರ್ನಿಯಲ್ಲಿ ಈ ಮೈದಾನದಲ್ಲಿ ಚೆಂಡು ಸ್ವಲ್ಪ ಸ್ವಿಂಗ್ ಆಗುತ್ತಿದೆ. ಹೀಗಾಗಿ ವೇಗದ ಸ್ವಿಂಗ್ ಬೌಲರ್‌ಗಳಿಗೆ ಮೈದಾನ ನೆರವಾಗಬಲ್ಲದು.
ನ್ಯೂಜಿಲ್ಯಾಂಡ್ ವಿರುದ್ಧದ ಪಂದ್ಯಕ್ಕೆ ಭಾರತ ಸಂಭಾವ್ಯ ತಂಡ
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ಉಪನಾಯಕ/ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ರವೀಂದ್ರ ಜಡೇಜಾ, ಆರ್ ಅಶ್ವಿನ್, ಜಸ್ಪ್ರೀತ್ ಬುಮ್ರಾ, ಮೊಹಮ್ಮದ್ ಸಿರಾಜ್, ಕುಲ್ದೀಪ್ ಯಾದವ್.