ಐಪಿಎಲ್ 2025 ಮೆಗಾ ಹರಾಜಿಗೆ ಪ್ರವೇಶಿಸಿದ ಜೇಮ್ಸ್ ಆಂಡರ್ಸನ್; 10 ವರ್ಷಗಳ ನಂತರ ಟಿ20ಗೆ ಮರಳಿದ ಇಂಗ್ಲೆಂಡ್ ದಿಗ್ಗಜ
ಕನ್ನಡ ಸುದ್ದಿ  /  ಕ್ರಿಕೆಟ್  /  ಐಪಿಎಲ್ 2025 ಮೆಗಾ ಹರಾಜಿಗೆ ಪ್ರವೇಶಿಸಿದ ಜೇಮ್ಸ್ ಆಂಡರ್ಸನ್; 10 ವರ್ಷಗಳ ನಂತರ ಟಿ20ಗೆ ಮರಳಿದ ಇಂಗ್ಲೆಂಡ್ ದಿಗ್ಗಜ

ಐಪಿಎಲ್ 2025 ಮೆಗಾ ಹರಾಜಿಗೆ ಪ್ರವೇಶಿಸಿದ ಜೇಮ್ಸ್ ಆಂಡರ್ಸನ್; 10 ವರ್ಷಗಳ ನಂತರ ಟಿ20ಗೆ ಮರಳಿದ ಇಂಗ್ಲೆಂಡ್ ದಿಗ್ಗಜ

ಈ ಬಾರಿ ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ಜೇಮ್ಸ್ ಆಂಡರ್ಸನ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ ಐಪಿಎಲ್‌ನಲ್ಲಿ ಆಡುವ ಇರಾದೆ ವ್ಯಕ್ತಪಡಿಸಿದ್ದಾರೆ. ಇದೇ ವೇಳೆ ಇಂಗ್ಲೆಂಡ್ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸುವ ಸಲುವಾಗಿ ಐಪಿಎಲ್ 2025ರ ಹರಾಜಿನಿಂದ ಹಿಂದೆ ಸರಿದಿದ್ದಾರೆ.

ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸಿದ ಜೇಮ್ಸ್ ಆಂಡರ್ಸನ್; ಟಿ20ಗೆ ಮರಳಿದ ಇಂಗ್ಲೆಂಡ್ ದಿಗ್ಗಜ
ಐಪಿಎಲ್ ಮೆಗಾ ಹರಾಜಿಗೆ ಪ್ರವೇಶಿಸಿದ ಜೇಮ್ಸ್ ಆಂಡರ್ಸನ್; ಟಿ20ಗೆ ಮರಳಿದ ಇಂಗ್ಲೆಂಡ್ ದಿಗ್ಗಜ

ಐಪಿಎಲ್ 2025ರ ರಿಟೆನ್ಷನ್‌ ನಂತರ, ಇದೀಗ ಮೆಗಾ ಹರಾಜಿನ ದಿನಾಂಕವನ್ನು ಸಹ ಘೋಷಿಸಲಾಗಿದೆ. ಈ ವರ್ಷ ಸೌದಿ ಅರೇಬಿಯಾದ ಜೆದ್ದಾದಲ್ಲಿ ನವೆಂಬರ್ 24 ಮತ್ತು 25ರಂದು ಐಪಿಎಲ್ 2025 ಮೆಗಾ ಆಕ್ಷನ್ ಆಯೋಜಿಸಲಾಗಿದೆ. ಎರಡು ದಿನಗಳ ಕಾಲ ನಡೆಯಲಿರುವ ಈ ಹರಾಜು ಕುತೂಹಲ ಕೆರಳಿಸಿದೆ. ಈ ಬಾರಿ ಹಲವು ಸ್ಟಾರ್ ಆಟಗಾರರು ಸಹ ಭಾಗವಹಿಸಲಿದ್ದಾರೆ. ಈ ಈವೆಂಟ್‌ಗಾಗಿ ಒಟ್ಟು 1574 ಆಟಗಾರರು ಹೆಸರು ನೋಂದಾಯಿಸಿಕೊಂಡಿದ್ದಾರೆ. ಈ ಪಟ್ಟಿಗೆ ಸೇರ್ಪಡೆಯಾಗಿರುವ ಮತ್ತೊಂದು ದೊಡ್ಡ ಹೆಸರು ಜೇಮ್ಸ್ ಆಂಡರ್ಸನ್.

ಈ ಬಾರಿ ಇಂಗ್ಲೆಂಡ್‌ನ ದಿಗ್ಗಜ ವೇಗದ ಬೌಲರ್ ವಿಶ್ವದ ಅತಿದೊಡ್ಡ ಕ್ರಿಕೆಟ್ ಲೀಗ್‌ನಲ್ಲಿ ಆಡುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್‌ನಿಂದ ನಿವೃತ್ತಿ ಘೋಷಿಸಿರುವ ದಿಗ್ಗಜ, ಮಿಲಿಯನ್‌ ಡಾಲರ್‌ ಟೂರ್ನಿಯಲ್ಲಿ ಆಡುವ ಇರಾದೆ ಹೊಂದಿದ್ದಾರೆ. ಅದೇ ಸಮಯದಲ್ಲಿ, ಇಂಗ್ಲೆಂಡ್ ದೇಶದ ಲೆಜೆಂಡರಿ ಆಲ್‌ರೌಂಡರ್ ಬೆನ್ ಸ್ಟೋಕ್ಸ್ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸುವ ಸಲುವಾಗಿ ಐಪಿಎಲ್ 2025 ಆಕ್ಷನ್​ನಿಂದ ತಮ್ಮ ಹೆಸರನ್ನು ಹಿಂತೆಗೆದುಕೊಂಡಿದ್ದಾರೆ.

ಆಂಡರ್ಸನ್ ಮೌಲ್ಯ ಎಷ್ಟು?

ಜೇಮ್ಸ್ ಆಂಡರ್ಸನ್ ವಿಶ್ವದ ಅತ್ಯುತ್ತಮ ಬೌಲರ್‌ಗಳಲ್ಲಿ ಒಬ್ಬರೆಂದು ಪರಿಗಣಿಸಲ್ಪಟ್ಟಿದ್ದಾರೆ. ಅವರು ತಮ್ಮ ಅಂತಾರಾಷ್ಟ್ರೀಯ ವೃತ್ತಿಜೀವನದಲ್ಲಿ ಒಟ್ಟು 991 ವಿಕೆಟ್​ಗಳನ್ನು ಪಡೆದಿದ್ದಾರೆ. ಟೆಸ್ಟ್‌ನಲ್ಲಿ 704 ಮತ್ತು ಏಕದಿನದಲ್ಲಿ 269 ವಿಕೆಟ್‌ ಕಬಳಿಸಿದ್ದಾರೆ. ಆದರೆ ಇತ್ತೀಚೆಗಷ್ಟೇ ನಿವೃತ್ತಿ ಪಡೆದು ಬೌಲಿಂಗ್ ಕೋಚ್ ಆಗಿರುವ ಆ್ಯಂಡರ್ಸನ್ ಕೇವಲ 19 ಟಿ20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, 18 ವಿಕೆಟ್ ಪಡೆದಿದ್ದಾರೆ. ಅಷ್ಟೇ ಅಲ್ಲ, 10 ವರ್ಷಗಳ ಹಿಂದೆ 2014ರಲ್ಲಿ ಕೊನೆಯ ಟಿ20 ಪಂದ್ಯವನ್ನಾಡಿದ್ದರು. ಆ ನಂತರ ಟೆಸ್ಟ್ ಕ್ರಿಕೆಟ್‌ನತ್ತ ಗಮನ ಹರಿಸಲು ಆರಂಭಿಸಿದ ಅವರು ಇದೀಗ ಐಪಿಎಲ್ ಮೂಲಕ ಟಿ20 ಕಮ್‌ಬ್ಯಾಕ್ ಮಾಡಲು ಹೊರಟಿದ್ದಾರೆ.

ಐಪಿಎಲ್ ಮೆಗಾ ಹರಾಜಿನಲ್ಲಿ ಆಂಡರ್ಸನ್ ತಮ್ಮ ಮೂಲ ಬೆಲೆಯನ್ನು 1.25 ಕೋಟಿ ರೂ. ಗೆ ಇಟ್ಟುಕೊಂಡಿದ್ದಾರೆ. ಟೆಸ್ಟ್ ಕ್ರಿಕೆಟ್‌ನಲ್ಲಿ ಅತಿ ಹೆಚ್ಚು ವಿಕೆಟ್ ಪಡೆದ ವೇಗದ ಬೌಲರ್‌ನ ದಾಖಲೆ ಹೊಂದಿರುವ ಈ ಬೌಲರ್‌ಗೆ ಎಷ್ಟು ತಂಡಗಳು ಆಸಕ್ತಿ ತೋರಿಸುತ್ತವೆ ಎಂಬುದನ್ನು ಈಗ ಕಾದು ನೋಡಬೇಕು. ಏಕೆಂದರೆ ಆ್ಯಂಡರ್ಸನ್ ಹೊರತಾಗಿ ಐಪಿಎಲ್ ಇತಿಹಾಸದ ಅತ್ಯಂತ ದುಬಾರಿ ಆಟಗಾರ ಮತ್ತು ಆಸ್ಟ್ರೇಲಿಯಾದ ವೇಗದ ಬೌಲರ್ ಮಿಚೆಲ್ ಸ್ಟಾರ್ಕ್ ಕೂಡ ಅವರಿಗೆ ಪೈಪೋಟಿ ನೀಡಲು ಹಾಜರಾಗಲಿದ್ದಾರೆ.

ಕಳೆದ ಋತುವಿನ ಹರಾಜಿನಲ್ಲಿ 24.50 ಕೋಟಿ ರೂ. ಗೆ ಮಾರಾಟವಾಗಿದ್ದ ಸ್ಟಾರ್ಕ್ ಅವರನ್ನು ಅವರ ತಂಡ ಕೆಕೆಆರ್ ಉಳಿಸಿಕೊಂಡಿಲ್ಲ ಮತ್ತು ಅವರು 2 ಕೋಟಿ ರೂ ಮೂಲ ಬೆಲೆಯೊಂದಿಗೆ ಹರಾಜಿಗೆ ತಮ್ಮ ಹೆಸರನ್ನು ನೋಂದಾಯಿಸಿದ್ದಾರೆ. ಮತ್ತೊಂದೆಡೆ 150ರ ವೇಗದಲ್ಲಿ ಬೌಲಿಂಗ್ ಮಾಡುವ ಸಾಮರ್ಥ್ಯ ಹೊಂದಿರುವ ಜೋಫ್ರಾ ಆರ್ಚರ್ ಕೂಡ ಮೆಗಾ ಹರಾಜಿಗೆ ಸೇರ್ಪಡೆಯಾಗಲಿದ್ದಾರೆ. ಇವರು 2023ರ ಋತುವಿನಲ್ಲಿ ಮುಂಬೈ ಇಂಡಿಯನ್ಸ್ ಪರ ಕೊನೆಯ ಬಾರಿ ಐಪಿಎಲ್‌ನಲ್ಲಿ ಆಡಿದ್ದರು.

ಈ ಸ್ಟಾರ್ ಆಟಗಾರರ ಮೇಲೂ ಬಿಡ್ಡಿಂಗ್

ಜೇಮ್ಸ್ ಆಂಡರ್ಸನ್ ಹೊರತಾಗಿ ಅನೇಕ ಸ್ಟಾರ್ ಭಾರತೀಯ ಮತ್ತು ವಿದೇಶಿ ಆಟಗಾರರು ಈ ಬಾರಿ ಮೆಗಾ ಹರಾಜಿಗೆ ಪ್ರವೇಶಿಸಲಿದ್ದಾರೆ. ಇದರಲ್ಲಿ ಮೂರು ದೊಡ್ಡ ಹೆಸರುಗಳೆಂದರೆ ಡೆಲ್ಲಿ ಕ್ಯಾಪಿಟಲ್ಸ್ ನಾಯಕ ರಿಷಬ್ ಪಂತ್, ಲಕ್ನೋ ಸೂಪರ್ ಜೈಂಟ್ಸ್ ನಾಯಕ ಕೆಎಲ್ ರಾಹುಲ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಾಯಕ ಶ್ರೇಯಸ್ ಅಯ್ಯರ್. ಮೆಗಾ ಹರಾಜಿನಲ್ಲಿ ಈ ಮೂವರ ಬೆಲೆ 2 ಕೋಟಿ ರೂ. ಆಗಿದೆ. ರಾಜಸ್ಥಾನ್ ರಾಯಲ್ಸ್‌ನ ಇಬ್ಬರು ಅನುಭವಿ ಸ್ಪಿನ್ನರ್‌ಗಳಾದ ಆರ್ ಅಶ್ವಿನ್ ಮತ್ತು ಯುಜ್ವೇಂದ್ರ ಚಾಹಲ್ ಕೂಡ ಇದೇ ಸಾಲಿನಲ್ಲಿದ್ದಾರೆ.

Whats_app_banner