8 ವರ್ಷಗಳ ಬಳಿಕ ಐಪಿಎಲ್ ಹರಾಜಿನ ಭಾಗವಾಗುತ್ತಿರುವುದು ಸಂತಸ ತಂದಿದೆ; ಹಳೆಯ ನೆನಪುಗಳನ್ನು ಬಿಚ್ಚಿಟ್ಟ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್
ಕನ್ನಡ ಸುದ್ದಿ  /  ಕ್ರಿಕೆಟ್  /  8 ವರ್ಷಗಳ ಬಳಿಕ ಐಪಿಎಲ್ ಹರಾಜಿನ ಭಾಗವಾಗುತ್ತಿರುವುದು ಸಂತಸ ತಂದಿದೆ; ಹಳೆಯ ನೆನಪುಗಳನ್ನು ಬಿಚ್ಚಿಟ್ಟ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್

8 ವರ್ಷಗಳ ಬಳಿಕ ಐಪಿಎಲ್ ಹರಾಜಿನ ಭಾಗವಾಗುತ್ತಿರುವುದು ಸಂತಸ ತಂದಿದೆ; ಹಳೆಯ ನೆನಪುಗಳನ್ನು ಬಿಚ್ಚಿಟ್ಟ ರಾಯಲ್ಸ್ ಕೋಚ್ ರಾಹುಲ್ ದ್ರಾವಿಡ್

ಐಪಿಎಲ್ ಹರಾಜಿಗೆ ಕೆಲವೇ ದಿನಗಳಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ತಂಡದ ಕೋಚ್ ಆಗಿ ಆಯ್ಕೆಯಾಗಿರುವ ರಾಹುಲ್ ದ್ರಾವಿಡ್ ಈ ತಂಡದೊಂದಿಗೆ ಹಿಂದಿನ ತಮ್ಮ ಸಂಬಂಧವನ್ನು ಬಿಚ್ಚಿಟ್ಟಿದ್ದಾರೆ. ಅದರಲ್ಲೂ ಈ ಬಾರಿಯ ಐಪಿಎಲ್ ಹರಾಜಿನ ಭಾಗವಾಗುತ್ತಿರುವುದು ಸಂತಸ ತಂದಿದೆ ಎಂದು ಹೇಳಿದ್ದಾರೆ.

ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡದ ಕೋಟ್ ರಾಹುಲ್ ದ್ರಾವಿಡ್ (ಫೋಟೊ-ಬಿಸಿಸಿಐ)
ಐಪಿಎಲ್ ಫ್ರಾಂಚೈಸಿ ರಾಜಸ್ಥಾನ್ ರಾಯಲ್ಸ್ ತಂಡದ ಕೋಟ್ ರಾಹುಲ್ ದ್ರಾವಿಡ್ (ಫೋಟೊ-ಬಿಸಿಸಿಐ)

18ನೇ ಆವೃತ್ತಿಯ ಐಪಿಎಲ್ ಕ್ರಿಕೆಟ್ ಟೂರ್ನಿಗಾಗಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿ ಹರಾಜು ಪ್ರಕ್ರಿಯೆ ನಡೆಯುತ್ತಿದ್ದು, ಪ್ರಮುಖವಾಗಿ ಯಾವ ಆಟಗಾರರು ಯಾವ ತಂಡದ ಪಾಲಾಗುತ್ತಾರೆ ಎಂಬುದು ಭಾರಿ ಕುತೂಹಲ ಮೂಡಿಸಿದ್ದು, ಕೋಟಿ ಕೋಟಿ ಕ್ರಿಕೆಟ್ ಅಭಿಮಾನಿಗಳು ಕಾತುರದಿಂದ ಕಾಯುತ್ತಿದ್ದಾರೆ. ಈ ನಡುವೆ ರಾಜಸ್ಥಾನ್ ರಾಯಲ್ಸ್ ತಂಡದ ನೂತನ ಕೋಚ್ ರಾಹುಲ್ ದ್ರಾವಿಡ್ ಐಪಿಎಲ್ ಹರಾಜಿನಲ್ಲಿ ಭಾಗವಹಿಸುತ್ತಿರುವ ಬಗ್ಗೆ ತಮ್ಮ ಸಂತಸವನ್ನು ಹಂಚಿಕೊಂಡಿದ್ದಾರೆ. ಪ್ರಸ್ತುತ ಐಪಿಎಲ್ ಹರಾಜಿಗಾಗಿ ಸೌದಿ ಅರೇಬಿಯಾದ ಜೆಡ್ಡಾದಲ್ಲಿರುವ ರಾಹುಲ್ ದ್ರಾವಿಡ್ ಮನದ ಮಾತುಗಳನ್ನು ಇಲ್ಲಿ ನೀಡಲಾಗಿದೆ.

ಸುಮಾರು 8 ರಿಂದ 9 ವರ್ಷಗಳ ಕಾಲ ನಾನು ಐಪಿಎಲ್ ಹರಾಜಿನಲ್ಲಿ ಭಾಗವಹಿಸಿರಲಿಲ್ಲ. ನಿಖರವಾಗಿ ಹೇಳಬೇಕೆಂದರೆ ನಾನು 2008 ರಲ್ಲಿ ಮೊದಲ ಹರಾಜಿನಲ್ಲಿ ಭಾಗವಹಿಸಿದ್ದನ್ನು ನೆನಪಿಸಿಕೊಳ್ಳುತ್ತೇನೆ. ಆಗ ಅದೊಂದು ವಿಭಿನ್ನವಾದ ಅನುಭವವಾಗಿತ್ತು. ವರ್ಷಗಳು ಕಳೆದಂತೆ ತಂಡಗಳು ಹೆಚ್ಚು ಸಂಘಟಿವಾಗಿವೆ. ತುಂಬಾ ಬಲಿಷ್ಠವಾಗಿವೆ. ನಮ್ಮ ತಂಡದ (ರಾಜಸ್ಥಾನ್ ರಾಯಲ್ಸ್) ವಿಷಯದಲ್ಲಿ ಖಂಡಿತವಾಗಿ ನಮಗೆ ಉತ್ಸಾಹದ ಮಟ್ಟ ಹೆಚ್ಚಾಗಿಯೇ ಇದೆ. ಬಲವಾದ ತಂಡವನ್ನೇ ಉಳಿಸಿಕೊಂಡಿದ್ದೇವೆ. ಇದರಿಂದಾಗಿ ಸ್ವಲ್ಪ ಆರಾಮವಾಗಿದ್ದೇವೆ ಎಂದಿದ್ದಾರೆ.

ಹರಾಜಿನ ಸಮಯಲ್ಲಿ ಅನಿವಾರ್ಯವಾಗಿ ಆಶ್ಚರ್ಯಗಳನ್ನು ಕಾಣುತ್ತೇವೆ. ಅದು ಸಹಜ ಕೂಡ. ಈ ಬದಲಾವಣೆಗಳಿಗೆ ಹೊಂದಿಕೊಳ್ಳಬೇಕಷ್ಟೇ. ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ವಾಪಸ್ ಆಗಿರುವುದು ನಿಜವಾಗಿಯೂ ಸಂತೋಷದ ವಿಚಾರ. ಈ ಮೊದಲು ಇದೇ ತಂಡದಲ್ಲಿ ಮೂರು ವರ್ಷಗಳ ಕಾಲ ಕ್ರಿಕೆಟ್ ಆಡಿದ್ದೇನೆ. ಕೆಲವು ವರ್ಷಗಳ ಕಾಲ ಮಾರ್ಗದರ್ಶಕನಾಗಿ, ಕೋಚ್ ಕೆಲಸವನ್ನು ಮಾಡಿದ್ದೇನೆ. ಹಳೆಯ ಸ್ನೇಹಿತರೊಂದಿಗೆ ಮತ್ತೇ ಸೇರುತ್ತಿರುವುದು ತಂಡದ ಬೆಳವಣಿಗೆಗೆ ಕೊಡುಗೆ ನೀಡುವುದು ಅಂತಿಮ ಉದ್ದೇಶವಾಗಿರುತ್ತದೆ. ಹರಾಜಿನ ಬಳಿಕ ಹೊಸ ಆಟಗಾರರನ್ನು ಭೇಟಿಯಾಗುತ್ತೇವೆ. ಹೊಸ ಸವಾಲುಗಳು ಯಾವಾಗಲೂ ಉತ್ತೇಜನಕಾರಿಯಾಗಿರುತ್ತವೆ. ಏಕೆಂದರೆ ಇವುಗಳಲ್ಲಿ ಕಲಿಯಲು ಮತ್ತು ಬೆಳೆಯಲು ಸಾಕಷ್ಟು ಅವಕಾಶಗಳು ಇರುತ್ತವೆ. ಈ ಮನಸ್ಥಿತಿ ಎಂದಿಗೂ ಬದಲಾಗುವುದಿಲ್ಲ ಎಂದು ರಾಹುಲ್ ದ್ರಾವಿಡ್ ಹೇಳಿದ್ದಾರೆ.

ರಾಜಸ್ಥಾನ್ ರಾಯಲ್ಸ್ ತಂಡದೊಂದಿಗೆ ಹೊಸ ಇನ್ನಿಂಗ್ಸ್ ಆರಂಭಿಸಿರುವ ದ್ರಾವಿಡ್

ರಾಹುಲ್ ದ್ರಾವಿಡ್ ಅವರು 2012 ಮತ್ತು 2013 ರ ಐಪಿಎಲ್ ಗಳಲ್ಲಿ ರಾಜಸ್ಥಾನ್ ರಾಯಲ್ಸ್ ತಂಡವನ್ನು ಮುನ್ನಡೆಸಿದ್ದರು. ದೆಹಲಿ ಕ್ಯಾಪಿಟಲ್ಸ್ ತೆಗೆ ತೆರಳುವ ಮುನ್ನ ಅಂದರೆ 2014 ಮತ್ತು 2015 ರಲ್ಲಿ ಇದೇ ತಂಡದ ಮಾರ್ಗದರ್ಶಕ ಮತ್ತು ನಿರ್ದೇಶಕರಾಗಿ ಸೇವೆ ಸಲ್ಲಿಸಿದ್ದರು. ಆ ಬಳಿಕ ಟೀಂ ಇಂಡಿಯಾದ ಅಂಡರ್ 19 ತಂಡದ ಕೋಚ್ ಆಗಿ ನೇಮಕವಾದರು. ಟೀಂ ಇಂಡಿಯಾದ ಮಾಜಿ ನಾಯಕ ಹಾಗೂ ಕೋಚ್ ಹುದ್ದೆಯಲ್ಲಿ ಸೇವೆ ಸಲ್ಲಿಸಿರುವ ರಾಹುಲ್ ದ್ರಾವಿಡ್ ಅವರು ರಾಜಸ್ಥಾನ ರಾಯಲ್ಸ್ ನೊಂದಿಗೆ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ. ಆದರೆ ಅವರು ಆಟಗಾರರಾಗಿ ಅಲ್ಲ, ಬದಲಾಗಿ ತಂಡದ ಕೋಚ್ ಆಯ್ಕೆಯಾಗಿದ್ದಾರೆ.

Whats_app_banner