ಶೋಯೆಬ್ ಬಶೀರ್ ನಾವು ಪತ್ತೆಹಚ್ಚಿದ ರವಿಚಂದ್ರನ್ ಅಶ್ವಿನ್; ಆತ ನಮ್ಮ ಸೂಪರ್‌ಸ್ಟಾರ್ ಎಂದ ಮೈಕಲ್ ವಾನ್
Michael Vaughan: ಶೋಯೆಬ್ ಬಶೀರ್ ಇಂಗ್ಲೆಂಡ್ ತಂಡದ ಸೂಪರ್‌ಸ್ಟಾರ್. ಟೆಸ್ಟ್ ಸ್ವರೂಪದಲ್ಲಿ ಅವರು ಮುಂದಿನ ರವಿಚಂದ್ರನ್ ಅಶ್ವಿನ್ ಆಗಲಿದ್ದಾರೆ ಎಂದು ಮೈಕಲ್ ವಾನ್ ಉದ್ಘಾರವೆಳೆದಿದ್ದಾರೆ. ಭಾರತ ಮತ್ತು ಇಂಗ್ಲೆಂಡ್ ತಂಡಗಳ ನಡುವಿನ ಐದನೇ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರು ಈ ಹೇಳಿಕೆ ನೀಡಿದ್ದಾರೆ.
ಭಾರತ ಮತ್ತು ಇಂಗ್ಲೆಂಡ್ (India vs England) ತಂಡಗಳ ನಡುವಿನ ಟೆಸ್ಟ್ ಸರಣಿಯಲ್ಲಿ, ಇನ್ನೂ ಒಂದು ಪಂದ್ಯ ಬಾಕಿ ಉಳಿದಿರುವಂತೆಯೇ ರೋಹಿತ್ ಶರ್ಮಾ ಪಡೆ ಸರಣಿ ಗೆಲುವು ಸಾಧಿಸಿದೆ. ಧರ್ಮಶಾಲಾದಲ್ಲಿ ಸರಣಿಯ ಐದನೇ ಹಾಗೂ ಅಂತಿಮ ಟೆಸ್ಟ್ ಪಂದ್ಯ ನಡೆಯಲಿದ್ದು, ಬೆನ್ ಸ್ಟೋಕ್ಸ್ ಪಡೆಯು ಗೆಲುವಿನೊಂದಿಗೆ ಸರಣಿ ಮುಗಿಸುವ ಇರಾದೆಯಲ್ಲಿದೆ. ರಾಂಚಿಯಲ್ಲಿ ಕೊನೆಗೊಂಡ 4ನೇ ಟೆಸ್ಟ್ ಪಂದ್ಯದಲ್ಲಿ ಭಾರತವು 5 ವಿಕೆಟ್‌ಗಳಿಂದ ರೋಚಕ ಜಯ ಸಾಧಿಸಿತ್ತು. ಯುವ ಆಟಗಾರರಾದ ಶುಭ್ಮನ್ ಗಿಲ್ ಮತ್ತು ಧ್ರುವ್ ಜುರೆಲ್ ಜೊತೆಯಾಟವು ಟೀಮ್ ಇಂಡಿಯಾದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿತು.
ಇಂಗ್ಲೆಂಡ್ ತಂಡದ ಯುವ ಸ್ಪಿನ್ನರ್ ಶೋಯೆಬ್ ಬಶೀರ್, ನಾಲ್ಕನೇ ಟೆಸ್ಟ್‌ನ ಮೊದಲ ಇನ್ನಿಂಗ್ಸ್‌ನಲ್ಲಿ ಐದು ವಿಕೆಟ್ ಕಬಳಿಸಿದರು. ಇದು ಅವರ ಮೊದಲ ಐದು ವಿಕೆಟ್ ಗೊಂಚಲು. ಯುವ ಆಟಗಾರನ ಉಜ್ವಲ ಭವಿಷ್ಯದ ಕುರಿತು ಭವಿಷ್ಯ ನುಡಿದ ಇಂಗ್ಲೆಂಡ್ ನ ಮಾಜಿ ನಾಯಕ ಮೈಕಲ್ ವಾನ್, ಪ್ರವಾಸಿ ಆಂಗ್ಲರ ಬಳಗವು ತಮ್ಮ ಟೆಸ್ಟ್ ತಂಡದಲ್ಲಿ ರವಿಚಂದ್ರನ್ ಅಶ್ವಿನ್ ಅವರನ್ನು ಕಂಡುಕೊಂಡಿದ್ದಾರೆ ಎಂದು ಉದ್ಘಾರವೆಳೆದಿದ್ದಾರೆ. ಬಶೀರ್ ಅವರನ್ನು ಇಂಗ್ಲೆಂಡ್ ತಂಡದ ಹೊಸ ಸೂಪರ್‌ಸ್ಟಾರ್ ಎಂದು ಬಣ್ಣಿಸಿದ ವಾನ್, ರಾಂಚಿ ಟೆಸ್ಟ್ ಬಳಿಕ ಈ ಹೇಳಿಕೆ ನೀಡಿದ್ದಾರೆ.
"ಇದು ಇಂಗ್ಲೆಂಡ್ ಕ್ರಿಕೆಟ್‌ಗೆ ಅದ್ಭುತ ವಾರವಾಗಿದೆ. ನಾವು ಕಂಡುಹಿಡಿದ ಮತ್ತೊಬ್ಬ ವಿಶ್ವ ದರ್ಜೆಯ ಸೂಪಸ್ಟಾರ್ ಶೋಯೆಬ್ ಬಶೀರ್ ಅವರನ್ನು ಸಂಭ್ರಮಿಸುವ ಶ್ರೇಷ್ಠ ವಾರ. ಅದನ್ನು ನಾವು ಆಚರಿಸುತ್ತಿದ್ದೇವೆ. ಎರಡನೇ ಟೆಸ್ಟ್ ಪಂದ್ಯದಲ್ಲಿ ಎಂಟು ವಿಕೆಟ್ ಸಾಧನೆ ಮಾಡಿದ್ದಾರೆ. ಅವರು ಹೊಸ ರವಿಚಂದ್ರನ್ ಅಶ್ವಿನ್. ಅವರನ್ನು ನಾವು ಪತ್ತೆಹಚ್ಚಿದ್ದೇವೆ. ಹೀಗಾಗಿ ಇಂಗ್ಲಿಷ್ ಕ್ರಿಕೆಟ್‌ನಲ್ಲಿ ಹೊಸ ಸೂಪಸ್ಟಾರ್ ಅನ್ನು ನಾವು ಸಂಭ್ರಮಾಚರಿಸುತ್ತಿದ್ದೇವೆ," ಎಂದು ವಾನ್ ಯೂಟ್ಯೂಬ್ ಚಾನೆಲ್ (Club Prairie Fire) ಒಂದರಲ್ಲಿ ಹೇಳಿದರು.
ಧರ್ಮಶಾಲಾ ಟೆಸ್ಟ್ ಗೆಲ್ಲುತ್ತೇವೆ
"ಧರ್ಮಶಾಲಾದಲ್ಲಿ ಇಂಗ್ಲೆಂಡ್ ಗೆಲ್ಲುತ್ತದೆ ಎಂದು ನಾನು ನಿರೀಕ್ಷಿಸುತ್ತೇನೆ. ಆಶಸ್‌ನಲ್ಲಿ ಆಡಿದಂತೆ ಈ ಸರಣಿಯಲ್ಲಿ ನಮ್ಮದು ಉತ್ತಮ ತಂಡವಾಗಿದೆ. ಸೆಷನ್‌ನಿಂದ ಸೆಷನ್‌ನಲ್ಲಿ ಇಂಗ್ಲೆಂಡ್ ಉತ್ತಮ ತಂಡವಾಗಿ ಕಾಣುತ್ತದೆ. ನಾವು ಗೆಲ್ಲುವ ಸಲುವಾಗಿ ಸರಣಿಗಳಲ್ಲಿ ಆಡುವುದಿಲ್ಲ. ಯುಕೆಯಲ್ಲಿ ಕ್ರಿಕೆಟ್ ಆಟ ಬದಲಾಗಿದೆ ಎಂಬುದನ್ನು ಜನರು ಅರ್ಥಮಾಡಿಕೊಳ್ಳಬೇಕು. ನಾವು ಮನರಂಜನೆಗಾಗಿ, ಸಂತೋಷಕ್ಕಾಗಿ ಮತ್ತು ಹೊಸ ಪ್ರತಿಭೆಗಳನ್ನು ಹೊರತರಲು ಆಡುತ್ತೇವೆ" ಎಂದು ವಾನ್ ಹೇಳಿದ್ದಾರೆ.
ಇದನ್ನೂ ಓದಿ | ಇಂಗ್ಲೆಂಡ್ ವಿರುದ್ಧದ 5ನೇ ಟೆಸ್ಟ್ಗೆ ಭಾರತ ತಂಡ ಪ್ರಕಟ; ತಂಡಕ್ಕೆ ಮರಳಿದ ಬುಮ್ರಾ, ಕೆಎಲ್ ರಾಹುಲ್ ಹೊರಕ್ಕೆ
(This copy first appeared in Hindustan Times Kannada website. To read more like this please logon to kannada.hindustantimes.com)