ಟಿ20ಯಲ್ಲಿ 10,961 ರನ್, 14 ಎಸೆತಗಳಲ್ಲಿ ಫಿಫ್ಟಿ; ವಿಶ್ವಕಪ್ಗೆ ಅವಕಾಶ ಸಿಗದ್ದಕ್ಕೆ ಕಿವೀಸ್ ಸ್ಟಾರ್ ಬ್ಯಾಟರ್ ನಿವೃತ್ತಿ
Colin Munro : ಟಿ20 ವಿಶ್ವಕಪ್ ಟೂರ್ನಿಗೆ ತಂಡದಲ್ಲಿ ಅವಕಾಶ ನೀಡದ ಕಾರಣ ನ್ಯೂಜಿಲೆಂಡ್ ಸ್ಫೋಟಕ ಬ್ಯಾಟರ್ ಕಾಲಿನ್ ಮುನ್ರೊ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ವಿದಾಯ ಹೇಳಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ ಟೂರ್ನಿಗೆ ನ್ಯೂಜಿಲೆಂಡ್ ಕ್ರಿಕೆಟ್ ತಂಡದಲ್ಲಿ ಅವಕಾಶ ಕಳೆದುಕೊಂಡ ನಂತರ ಎಡಗೈ ಸ್ಟಾರ್ ಬ್ಯಾಟರ್ ಕಾಲಿನ್ ಮನ್ರೋ ಅವರು ತಮ್ಮ 37ನೇ ವಯಸ್ಸಿನಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಿಸಿದ್ದಾರೆ. ಮುನ್ರೊ 2020 ರಿಂದ ನ್ಯೂಜಿಲೆಂಡ್ ಪರ ಅಂತಾರಾಷ್ಟ್ರೀಯ ಪಂದ್ಯವನ್ನಾಡದಿದ್ದರೂ ಫ್ರಾಂಚೈಸಿ ಲೀಗ್ಗಳಲ್ಲಿ ಅತ್ಯಮೋಘ ಪ್ರದರ್ಶನ ನೀಡುವ ಮೂಲಕ ಮುಂಬರುವ ವಿಶ್ವಕಪ್ಗೆ ಆಯ್ಕೆಯ ನಿರೀಕ್ಷೆಯಲ್ಲಿದ್ದರು.
ನ್ಯೂಜಿಲೆಂಡ್ ಕೋಚ್ ಗ್ಯಾರಿ ಸ್ಟೆಡ್ 15 ಸದಸ್ಯರ ತಂಡ ಪ್ರಕಟಿಸುವ ಅವಧಿಯಲ್ಲಿ ಮುನ್ರೊ ಅವರ ಆಯ್ಕೆ ಕುರಿತು ಚರ್ಚಿಸಲಾಗಿತ್ತು ಎಂದು ದೃಢಪಡಿಸಿದ್ದರು. ಆದರೆ ಅಂತಿಮ ತಂಡದಲ್ಲಿ ಸ್ಥಾನ ಸಿಗಲಿಲ್ಲ. ಕಳೆದ ನಾಲ್ಕು ವರ್ಷಗಳಲ್ಲಿ ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಪೂರ್ಣ ಪ್ರಮಾಣದಲ್ಲಿ ತೊಡಗಿಸಿಕೊಂಡಿದ್ದ 37 ವರ್ಷದ ಮುನ್ರೊ, ನ್ಯೂಜಿಲೆಂಡ್ ಪರ 3 ಫಾರ್ಮೆಟ್ಗಳಲ್ಲೂ ಸೇರಿ 121 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಫ್ರಾಂಚೈಸ್ ಕ್ರಿಕೆಟ್‌ನಲ್ಲಿ ಮುಂದುವರಿಯುತ್ತಾರೆ. ಅಂತಾರಾಷ್ಟ್ರೀಯ ಮತ್ತು ಫ್ರಾಂಚೈಸ್ ಲೀಗ್ ಸೇರಿ ಒಟ್ಟು 428 ಟಿ20ಗಳಲ್ಲಿ ಆಡಿದ್ದಾರೆ.
ಟಿ20 ಕ್ರಿಕೆಟ್‌ನಲ್ಲಿ 10 ಸಾವಿರ ರನ್
ಒಟ್ಟಾರೆ 428 ಟಿ20 ಪಂದ್ಯಗಳಲ್ಲಿ 10.961 ರನ್ ಕಲೆ ಹಾಕಿರುವ ಮುನ್ರೊ, 67 ಅರ್ಧಶತಕ, 5 ಶತಕ ಸಿಡಿಸಿದ್ದಾರೆ. 141.25ರ ಸ್ಟ್ರೈಕ್ರೇಟ್ನಲ್ಲಿ ರನ್ ಕಲೆ ಹಾಕಿರುವ ಸ್ಟಾರ್ ಬ್ಯಾಟರ್, 30.44 ಬ್ಯಾಟಿಂಗ್ ಸರಾಸರಿ ಹೊಂದಿದ್ದಾರೆ. ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್‌ನಲ್ಲಿ 65 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದು, 156.44ರ ಸ್ಟ್ರೈಕ್ರೇಟ್ನಲ್ಲಿ 1724 ರನ್ ಗಳಿಸಿದ್ದಾರೆ. 11 ಅರ್ಧಶತಕ, 3 ಶತಕ ಸಿಡಿಸಿದ್ದಾರೆ. ಆದರೂ ಅವಕಾಶ ಪಡೆಯುವಲ್ಲಿ ವಿಫಲರಾಗಿದ್ದಾರೆ ಎಡಗೈ ಆಟಗಾರ.
2012ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮುನ್ರೊ, 23 ರನ್ ಸಿಡಿಸಿದ್ದರು. ತನ್ನ ಕೊನೆಯ ಟಿ20 ಪಂದ್ಯವನ್ನು ಭಾರತದ ವಿರುದ್ಧ 2020ರಲ್ಲಿ ಆಡಿದ್ದರು. ಈ ಪಂದ್ಯದಲ್ಲಿ 15 ರನ್ ಗಳಿಸಿದ್ದರು. 2023ರಲ್ಲಿ ಸೌತ್ ಆಫ್ರಿಕಾ ವಿರುದ್ಧ ಏಕದಿನ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ್ದ ಮುನ್ರೋ, 57 ಪಂದ್ಯಗಳಲ್ಲಿ 1271 ರನ್ ಗಳಿಸಿದ್ದಾರೆ. ತನ್ನ ಕೊನೆಯ ಏಕದಿನವನ್ನು 2019ರ ವಿಶ್ವಕಪ್ನಲ್ಲಿ ಆಡಿದ್ದರು. ಆ ಪಂದ್ಯದಲ್ಲಿ ಪಾಕ್ ವಿರುದ್ಧ 12 ರನ್ ಗಳಿಸಿದ್ದರು. ಒಂದೇ ಒಂದು ಟೆಸ್ಟ್ ಪಂದ್ಯದಲ್ಲಿ ಕಣಕ್ಕಿಳಿದಿದ್ದಾರೆ.
ದೇಶದ ಪರ ಆಡುವುದೇ ದೊಡ್ಡ ಸಾಧನೆ
ತನ್ನ ನಿವೃತ್ತಿಯ ಕುರಿತು ಮಾತನಾಡಿದ ಕಾಲಿನ್ ಮುನ್ರೊ, 'ಬ್ಲ್ಯಾಕ್ ಕ್ಯಾಪ್ಸ್‌ಗಾಗಿ ಆಡುವುದು ಯಾವಾಗಲೂ ನನ್ನ ಕ್ರಿಕೆಟ್ ವೃತ್ತಿಜೀವನದಲ್ಲಿ ದೊಡ್ಡ ಸಾಧನೆಯಾಗಿದೆ' ಎಂದು ಹೇಳಿದ್ದಾರೆ. ಆ ಜರ್ಸಿಯನ್ನು ಧರಿಸುವುದೇ ನನಗೆ ಹೆಮ್ಮೆ. ಎಲ್ಲಾ ಸ್ವರೂಪಗಳಲ್ಲಿ ಆ ಜೆರ್ಸಿಯನ್ನು 123 ಬಾರಿ ಧರಿಸಿದ್ದೇನೆ ಎಂಬ ಅಂಶವು ನನಗೆ ಯಾವಾಗಲೂ ಹೆಮ್ಮೆ ನೀಡುತ್ತದೆ. ನಾನು ರಾಷ್ಟ್ರೀಯ ತಂಡದ ಪರ ಆಡಿ ಸಾಕಷ್ಟು ವರ್ಷಗಳೇ ಕಳೆದರೂ ಫ್ರಾಂಚೈಸಿ ಟಿ20 ಲೀಗ್ಗಳ ಮೂಲಕ ಕಂಬ್ಯಾಕ್ ಮಾಡುತ್ತೇನೆ ಎಂಬ ವಿಶ್ವಾಸ ಇತ್ತು ಎಂದಿದ್ದಾರೆ.
2018ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ 47 ಎಸೆತಗಳಲ್ಲಿ ಶತಕ ಸೇರಿದಂತೆ 3 ಟಿ20 ಶತಕಗಳನ್ನು ಗಳಿಸುವ ಮೂಲಕ ಚುಟುಕು ಫಾರ್ಮೆಟ್ನಲ್ಲಿ ಮಿಂಚಿದ್ದರು. ಇದು ನ್ಯೂಜಿಲೆಂಡ್ ಪರ ದಾಖಲೆಯಾಗಿದೆ. ಅವರು ಶ್ರೀಲಂಕಾ ವಿರುದ್ಧ 14 ಎಸೆತಗಳಲ್ಲಿ ಅರ್ಧಶತಕ ಸಿಡಿಸಿದ್ದಾರೆ. ಇದು ಬ್ಲ್ಯಾಕ್ ಕ್ಯಾಪ್ಸ್ ಪರ ದಾಖಲೆಯಾಗಿ ಉಳಿದಿದೆ. ಟಿ20ಐ ಕ್ರಿಕೆಟ್‌ನಲ್ಲಿ ನಾಲ್ಕನೇ ವೇಗದ ಅರ್ಧಶತಕ ಸಿಡಿಸಿದ ಆಟಗಾರರಾಗಿದ್ದಾರೆ. ಐಪಿಎಲ್ನಲ್ಲಿ 13 ಪಂದ್ಯಗಳನ್ನಾಡಿದ್ದು 117 ರನ್ಗಳಿಸಿದ್ದಾರೆ.