ಒಬ್ಬರಿಗೆ 25-30 ಕೋಟಿ ಸುರಿದರೆ, ಉಳಿದವರ ಖರೀದಿ ನೆಪಮಾತ್ರಕ್ಕಾ, CSK-RCBಯದ್ದು ಜಾಣ ನಡೆ; ಅಕ್ಷಯ್ ಹೆಗಡೆ ಸರಳ ವಿಶ್ಲೇಷಣೆ
IPL 2025 Mega Auction: ಐಪಿಎಲ್ 2025 ಮೆಗಾ ಹರಾಜಿನಲ್ಲಿ ಒಬ್ಬರಿಗೆ 25-30 ಕೋಟಿ ಸುರಿದರೆ, ಉಳಿದವರ ಖರೀದಿ ನೆಪಮಾತ್ರಕ್ಕೆ ಎಂಬುದನ್ನು ಕೆಲವು ತಂಡಗಳು ಸಾಬೀತುಪಡಿಸಿದವು. ಆದರೆ ಸಿಎಸ್ಕೆ-ಆರ್ಸಿಬಿಯದ್ದು ಜಾಣ ನಡೆ ಎಂದು ಅಕ್ಷಯ್ ಹೆಗಡೆ ಎಂಬವರು ಫೇಸ್ಬುಕ್ನಲ್ಲಿ ಸರಳವಾಗಿ ವಿಶ್ಲೇಷಿಸಿದ್ದಾರೆ.
ಪ್ರತಿ ಹರಾಜಿನಲ್ಲೂ ಸಿಎಸ್ಕೆ ತಂಡದವರ ಹರಾಜು ಪ್ರಕ್ರಿಯೆಯನ್ನು ನೋಡಿದರೆ ಖುಷಿಯ ಜೊತೆಗೆ ಹೆಮ್ಮೆಯೂ ಆಗುತ್ತೆ. ಅವರಿಗೆ ತಮ್ಮ ಕ್ಲಬ್ ತಂಡವನ್ನು ಮ್ಯಾನೇಜ್ ಮಾಡುವ ಅಪಾರ ಅನುಭವ ಇರುವುದು, ಅವರ ಪ್ರತೀ ನಡೆಯಲ್ಲೂ ಕಾಣಿಸುತ್ತದೆ.
ಸಮತೋಲಿತ ತಂಡವನ್ವು ಕಟ್ಟಲು ತಮಗೆ ಯಾವ ಯಾವ ಜಾಗದಲ್ಲಿ ಆಟಗಾರರು ಬೇಕು ಎಂಬ ಬಗ್ಗೆ ಸ್ಪಷ್ಟತೆ, ಆ ಜಾಗಕ್ಕೆಲ್ಲ ಯಾವ ಯಾವ ಆಟಗಾರರು ಅವೇಲೆಬಲ್ ಇದ್ದಾರೆ ಎಂದು ಸರಿಯಾದ ತಯಾರಿ ಮತ್ತು ಆಯ್ಕೆಗಳು, ಯಾವ ಆಟಗಾರನಿಗೆ ಎಷ್ಟು ಎಂದು ಯೋಗ್ಯತೆಗೆ, ತಮ್ಮ ಅನುಕೂಲಕ್ಕೆ ತಕ್ಕಂತೆ ನಿಖರವಾದ ಬಜೆಟ್, ಇವಿಷ್ಟು ಅವರ ಟ್ರೇಡ್ ಮಾರ್ಕ್. ಸುಮ್ಮನೇ ಪರ್ಸನಲ್ ಇಗೋಗೆ ತಗೊಂಡು, ಶೋ ಆಫ್‌ಗೆ ಅಂತೆಲ್ಲ ಎಷ್ಟಾದರೂ ಕೊಡೋ ಸೀನಿಲ್ಲ.
ಆಟಗಾರರನ ಯೋಗ್ಯತೆ ತಕ್ಕಂತೆ ಸಿಎಸ್ಕೆ ಹರಾಜು
ಇವತ್ತಾದರೂ ಭಾರತೀಯ ವೇಗದ ಬೌಲರ್ ಬೇಕು ಅಂತ ಅರ್ಷದೀಪ್, ಶಮಿಯವರಿಗೆ ಬಿಡ್ ಮಾಡಿದರು. ಬಜೆಟ್ ಮೀರಿದಾಗ ನಿಲ್ಲಿಸಿದರು. ಕೆಎಲ್ ರಾಹುಲ್ಗೂ ಅಷ್ಟೇ. ರಹಾನೆ, ರಾಯುಡು, ಉತ್ತಪ್ಪ ಇತ್ಯಾದಿಗಳಿಂದ ತೆರವಾದ ಜಾಗಕ್ಕೆ ಇಂಡಿಯನ್ ಬ್ಯಾಟರ್, ಧೋನಿಯವರಿಂದ ತೆರವಾಗುವ ಜಾಗಕ್ಕೆ ವಿಕೆಟ್ ಕೀಪರ್ ಎಂದು ಹೋಗಿದ್ದು. ಅದೂ ಬಜೆಟ್ ಮೀರಿದಾಗ, ಸರಿಯಾದ ಜಾಗದಲ್ಲೆ ನಿಲ್ಲಿಸಿದರು.
ಯಾವ ಆಟಗಾರನಿಗೆ ಎಷ್ಟು ಕೊಟ್ಟರೂ, ಪ್ರದರ್ಶನ ಹೇಗೆ ಬರುತ್ತದೆ ಎಂಬ ಗ್ಯಾರಂಟಿಯಂತೂ ಇರುವುದಿಲ್ಲ. ಯಾರೂ ಎಲ್ಲೂ ವಿಫಲರಾಗಬಹುದು. ಒಂದೇ ರೀತಿಯ ಕೌಶಲ್ಯದ ಬೇರೆ ಬೇರೇ ಆಟಗಾರರು ದೊರಕಿಯೇ ದೊರಕುತ್ತಾರೆ. ಯಾರೂ ಇಲ್ಲ ಎಂದಾದಾಗ ಪರ್ಸ್ ಖಾಲಿ ಮಾಡಲು ಹೊರಡಬೇಕೇ ಹೊರತೂ, ಸುಮ್ಮನೇ ಆರಂಭದಲ್ಲೇ ಎಕ್ಸೈಟ್ ಆಗಿ ಮನಸ್ಸಿಗೆ ಬಂದಷ್ಟು ಕೂಗೋದ್ರಲ್ಲಿ ಅರ್ಥವಿಲ್ಲ ಎಂಬುದು ಸಿಎಸ್ಕೆ ಮ್ಯಾನೇಜ್ಮೆಂಟಿಗೆ ಚೆನ್ನಾಗಿ ಗೊತ್ತು.
ಚೆನ್ನಾಗಿಯೇ ನಿಭಾಯಿಸಿದ ಆರ್ಸಿಬಿ
ಮೊದಲು ಮುಂಬೈ ಇಂಡಿಯನ್ಸ್ ತಂಡದಲ್ಲೂ ಆ ಸ್ಪಷ್ಟತೆ ಇತ್ತು. ಆದರೆ, ಇಶಾನ್ ಕಿಶನ್‌ಗೆ 15.75 ಕೋಟಿ, ಇಂಜುರ್ ಆದ ಆರ್ಚರ್‌ಗೆ 8-10 ಕೋಟಿ ಕೊಟ್ಟಾಗಿಂದ, ಅವರಲ್ಲಿ ಆ ಸ್ಪಷ್ಟತೆ ಕಾಣಿಸುತ್ತಿಲ್ಲ. ಈ ಸಲ, ಆರ್ಸಿಬಿಯವರೂ ತಕ್ಕಮಟ್ಟಿಗೆ ತಮ್ಮ ಎಕ್ಸೈಟ್ಮೆಂಟನ್ನು ಕಂಟ್ರೋಲ್ ಮಾಡಿಕೊಂಡು, ಇಲ್ಲಿಯವರೆಗೆ ಹರಾಜನ್ನು ಚೆನ್ನಾಗಿಯೇ ನಿಭಾಯಿಸಿದರು.
ಒಂದಿಬ್ಬರಿಗೆ 25-30 ಕೋಟಿ ಕೊಟ್ಟು, ಉಳಿದ ಜಾಗಕ್ಕೆ ಸಿಕ್ಕವರನ್ನು ತಗೊಂಡು ಲೆಕ್ಕಕ್ಕೆ ಮಾತ್ರ ಎಂಬ ಟೀಮ್ ಮಾಡುವುದಕ್ಕಿಂತ, ಎಲ್ಲರಿಗೂ 6-8-10-12 ಕೋಟಿ ಕೊಟ್ಟು ಸಮತೋಲಿತ ತಂಡ ಮಾಡುವುದು ಯಾವತ್ತೂ ಒಳ್ಳೆಯದು. ಎಷ್ಟೋ ಜನ ತಮ್ಮ ದುಃಖವನ್ನು ತೋಡಿಕೊಳ್ಳುತ್ತಿರುವ ಹಾಗೆ, ಆರ್ಸಿಬಿಗೆ ನಾಯಕತ್ವದ ಸಮಸ್ಯೆ ಇಲ್ಲ, ಆ ಬಗ್ಗೆ ಜನ ನಿಶ್ಚಿಂತರಾಗಿರಬಹುದು.
ಐಪಿಎಲ್ 2025 ಮೆಗಾ ಹರಾಜಿನಲ್ಲಿ ಒಬ್ಬರಿಗೆ 25-30 ಕೋಟಿ ಸುರಿದರೆ, ಉಳಿದವರ ಖರೀದಿ ನೆಪಮಾತ್ರಕ್ಕೆ ಎಂಬುದನ್ನು ಕೆಲವು ತಂಡಗಳು ಸಾಬೀತುಪಡಿಸಿದವು. ಆದರೆ ಸಿಎಸ್ಕೆ-ಆರ್ಸಿಬಿಯದ್ದು ಜಾಣ ನಡೆ ಎಂದು ಅಕ್ಷಯ್ ಹೆಗಡೆ ಎಂಬವರು ಫೇಸ್ಬುಕ್ನಲ್ಲಿ ಸರಳವಾಗಿ ವಿಶ್ಲೇಷಿಸಿದ್ದಾರೆ. ಅವರ ಪೋಸ್ಟ್ ಅನ್ನು ಯಥಾವತ್ತಾಗಿ ಪ್ರಕಟಿಸಲಾಗಿದೆ.