RR vs LSG: ಆವೇಶ್‌, ಪೊವೆಲ್‌ ಪದಾರ್ಪಣೆ; ಲಕ್ನೋ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ ಹೀಗಿದೆ
ಕನ್ನಡ ಸುದ್ದಿ  /  ಕ್ರಿಕೆಟ್  /  Rr Vs Lsg: ಆವೇಶ್‌, ಪೊವೆಲ್‌ ಪದಾರ್ಪಣೆ; ಲಕ್ನೋ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ ಹೀಗಿದೆ

RR vs LSG: ಆವೇಶ್‌, ಪೊವೆಲ್‌ ಪದಾರ್ಪಣೆ; ಲಕ್ನೋ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ ಹೀಗಿದೆ

Rajasthan Royals: ಪ್ರಸಕ್ತ ಆವೃತ್ತಿಯ ಐಪಿಎಲ್‌ಗಾಗಿ ನಡೆದ ಹರಾಜಿಗೂ ಮುನ್ನ ರಾಜಸ್ಥಾನ್ ರಾಯಲ್ಸ್ ಹಾಗೂ‌ ಲಕ್ನೋ ಸೂಪರ್ ಜೈಂಟ್ಸ್‌ ತಂಡಗಳ ನಡುವೆ ಬದಲಾವಣೆಯೊಂದು ನಡೆದಿದೆ. ದೇವದತ್ ಪಡಿಕ್ಕಲ್ ಅವರನ್ನು ಲಕ್ನೋಗೆ ಕಳಿಸಿರುವ ರಾಜಸ್ಥಾನ, ಆವೇಶ್ ಖಾನ್ ಅವರನ್ನು ತಂಡಕ್ಕೆ ಕರೆಸಿಕೊಂಡಿದೆ.

ಲಕ್ನೋ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ ಹೀಗಿದೆ
ಲಕ್ನೋ ವಿರುದ್ಧದ ಪಂದ್ಯಕ್ಕೆ ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ತಂಡ ಹೀಗಿದೆ (PTI)

ಐಪಿಎಲ್ 2024ರ ಆವೃತ್ತಿಯ 4ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ (Rajasthan Royals vs Lucknow Super Giants) ತಂಡಗಳು ಮುಖಾಮುಖಿಯಾಗುತ್ತಿವೆ. ಮಾರ್ಚ್‌ 23ರ ಭಾನುವಾರ ಅಭಿಮಾನಿಗಳಿಗೆ ಎರಡೆರಡು ಮನರಂಜನೆ ಖಚಿತವಾಗಿದ್ದು, ದಿನದ ಮೊದಲ ಪಂದ್ಯವು ರಾಯಲ್ಸ್‌ ತವರು ಜೈಪುರದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆಯಲಿದೆ. ಪಂದ್ಯವು ಮಧ್ಯಾಹ್ನ 3.30ಕ್ಕೆ ಆರಂಭವಾಗಲಿದ್ದು, ಈ ಬಾರಿಯ ಆವೃತ್ತಿಯಲ್ಲಿ ಎರಡನೇ ಟ್ರೋಫಿ ಗೆಲುವಿಗೆ ಸಂಜು ಸ್ಯಾಮ್ಸನ್‌ ಪಡೆ ತೊಡೆ ತಟ್ಟಿ ನಿಂತಿದೆ.

ಪ್ರಸಕ್ತ ಆವೃತ್ತಿಯ ಟೂರ್ನಿಯ ಮೊದಲ ಹಂತದಲ್ಲಿ ಒಟ್ಟು ನಾಲ್ಕು ಪಂದ್ಯಗಳನ್ನು ಆಡುತ್ತಿರುವ ರಾಜಸ್ಥಾನವು, ತವರು ನೆಲದಲ್ಲೇ ಮೂರು ಪಂದ್ಯಗಳನ್ನು ಆಡಲಿದೆ. ಮೊದಲ ಪಂದ್ಯದಲ್ಲಿ ಕೆಎಲ್‌ ರಾಹುಲ್‌ ನಾಯಕತ್ವದ ಲಕ್ನೋ ಸೂಪರ್‌ ಜೈಂಟ್ಸ್ ತಂಡವು ರಾಜಸ್ಥಾನದ ಎದುರಾಳಿ.

ಪಂದ್ಯಾವಳಿಯ ಆರಂಭಕ್ಕೂ ಮುನ್ನ ನಡೆದ ಐಪಿಎಲ್ 2024ರ ಹರಾಜಿನಲ್ಲಿ ಉದ್ಘಾಟನಾ ಆವೃತ್ತಿಯ ಚಾಂಪಿಯನ್‌ ರಾಜಸ್ಥಾನವು ಬಲಿಷ್ಠ ಆಟಗಾರರನ್ನು ತೆಕ್ಕೆಗೆ ಹಾಕಿಕೊಂಡಿತು. ಹೊಸ ಆಟಗಾರರಲ್ಲಿ ರೋವ್‌ಮನ್ ಪೊವೆಲ್ ಮೇಲೆ ತಂಡಕ್ಕೆ ಹೆಚ್ಚು ಭರವಸೆ ಇದೆ. ಹರಾಜಿಗೂ ಮುನ್ನ ರಾಯಲ್ಸ್ ಹಾಗೂ ಜೈಂಟ್ಸ್‌ ತಂಡಗಳ ನಡುವೆ ಬದಲಾವಣೆಯೊಂದು ನಡೆದಿದ್ದು, ದೇವದತ್ ಪಡಿಕ್ಕಲ್ ಅವರನ್ನು ಲಕ್ನೋಗೆ ಕಳಿಸಿರುವ ರಾಜಸ್ಥಾನವು, ಆವೇಶ್ ಖಾನ್ ಅವರನ್ನು ತಂಡಕ್ಕೆ ಕರೆಸಿಕೊಂಡಿದೆ.

ಇದನ್ನೂ ಓದಿ | ಧೋನಿ ಈ ಬಾರಿಯ ಎಲ್ಲಾ ಐಪಿಎಲ್‌ ಪಂದ್ಯ ಆಡಲ್ಲ, ನಡುವೆ ವಿರಾಮ ತೆಗೆದುಕೊಳ್ಳಬಹುದು ಎಂದ ಕ್ರಿಸ್ ಗೇಲ್

ತಂಡವು ಬ್ಯಾಟಿಂಗ್‌ ಹಾಗೂ ಬೌಲಿಂಗ್‌ ಎರಡರಲ್ಲೂ ಬಲಿಷ್ಠವಾಗಿದೆ. ಅನುಭವಿ ಹಾಗೂ ಸ್ಫೊಟಕ ಆಟಗಾರರು ತಂಡದಲ್ಲಿದ್ದಾರೆ. ಬ್ಯಾಟಿಂಗ್‌ ಮಾತ್ರವಲ್ಲದೆ, ವೇಗ ಹಾಗೂ ಸ್ಪಿನ್‌ ಬೌಲಿಂಗ್‌ ಕೂಡಾ ಖರಾರುವಕ್‌ ಆಗಿದೆ.

ಐಪಿಎಲ್‌ನ ಕಳೆದ ಆವೃತ್ತಿಯಲ್ಲಿ ಆರಂಭಿಕರಾಗಿ ಯಶಸ್ಸು ಕಂಡಿದ್ದ ಯಶಸ್ವಿ ಜೈಸ್ವಾಲ್‌ ಮತ್ತು ಜೋಸ್‌ ಬಟ್ಲರ್‌, ಈ ಬಾರಿಯೂ ಅಗ್ರ ಕ್ರಮಾಂಕದಲ್ಲಿ ಆಡಲಿದ್ದಾರೆ. ಮೂರನೇ ಕ್ರಮಾಂಕದಲ್ಲಿ ನಾಯಕ ಸಂಜು ಸ್ಯಾಮ್ಸನ್‌ ಆಡಿದರೆ, ಮಧ್ಯಮ ಕ್ರಮಾಂಕದಲ್ಲಿ ಈಗಾಗಲೇ ಶಿಮ್ರಾನ್ ಹೆಟ್ಮೆಯರ್, ರಿಯಾನ್ ಪರಾಗ್ ಅವರಂಥ ಸ್ಫೋಟಕ ಬ್ಯಾಟರ್‌ಗಳಿದ್ದು, ಅವರೊಂದಿಗೆ ಪೊವೆಲ್‌ ಸೇರಿಕೊಳ್ಳಲಿದ್ದಾರೆ. ವೆಸ್ಟ್ ಇಂಡೀಸ್‌ನ ಸ್ಪೋಟಕ ಆಟಗಾರ ರೋವ್‌ಮನ್ ಪೊವೆಲ್, ರಾಜಸ್ಥಾನ್ ರಾಯಲ್ಸ್‌ ತಂಡದಲ್ಲಿ ಫಿನಿಶರ್‌ ಪಾತ್ರ ನಿಭಾಯಿಸುವ ಸಾಧ್ಯತೆ ಇದೆ. ಜೊತೆಗೆ ಧ್ರುವ್ ಜುರೆಲ್ ಕೂಡಾ ಕ್ರೀಸ್‌ಕಚ್ಚಿ ಆಡಲಿದ್ದಾರೆ.

ಟೂರ್ನಿಯ ಆರಂಭಕ್ಕೂ ಮುನ್ನವೇ ತಂಡವು ವೇಗಿ ಪ್ರಸಿದ್ಧ್ ಕೃಷ್ಣ ಅವರನ್ನು ಕಳೆದುಕೊಂಡಿದೆ. ಗಾಯದಿಂದಾಗಿ ಶಸ್ತ್ರಚಿಕಿತ್ಸೆಗೆ ಒಳಗಾದ ಕನ್ನಡಿಗ ಪ್ರಸಕ್ತ ಋತುವಿನಿಂದ ಹೊರಗುಳಿಯುತ್ತಾರೆ. ಅತ್ತ ಪ್ರಸಿದ್ಧ್‌ ಕೃಷ್ಣ ಸ್ಥಾನಕ್ಕೆ ಆವೇಶ್‌ ಆಡುವ ಬಳಗ ಸೇರುವ ಸಾಧ್ಯತೆ ಹೆಚ್ಚಿದೆ.‌ ಇದೇ ವೇಳೆ ಅನುಭವಿ ಆಟಗಾರರಾದ ಆರ್‌ ಅಶ್ವಿನ್‌ ಮತ್ತು ಯುಜ್ವೇಂದ್ರ ಚಾಹಲ್ ಸ್ಪಿನ್ನರ್‌ಗಳ ಪಾತ್ರ ನಿಭಾಯಿಸಲಿದ್ದಾರೆ. ಟ್ರೆಂಟ್‌ ಬೋಲ್ಟ್‌ ತಂಡದ ಪ್ರಮುಖ ವೇಗಿ.

ರಾಜಸ್ಥಾನ್‌ ರಾಯಲ್ಸ್‌ ಸಂಭಾವ್ಯ ಆಡುವ ಬಳಗ

ಜೋಸ್ ಬಟ್ಲರ್, ಯಶಸ್ವಿ ಜೈಸ್ವಾಲ್, ಸಂಜು ಸ್ಯಾಮ್ಸನ್ (ನಾಯಕ ಮತ್ತು ವಿಕೆಟ್‌ ಕೀಪರ್), ರಿಯಾನ್ ಪರಾಗ್, ಶಿಮ್ರಾನ್ ಹೆಟ್ಮೆಯರ್, ರೋವ್ಮನ್ ಪೊವೆಲ್, ಧ್ರುವ್ ಜುರೆಲ್, ಆರ್ ಅಶ್ವಿನ್, ಯುಜ್ವೇಂದ್ರ ಚಾಹಲ್, ಆವೇಶ್ ಖಾನ್, ಟ್ರೆಂಟ್ ಬೋಲ್ಟ್.

Whats_app_banner