ಕನ್ನಡ ಸುದ್ದಿ  /  Cricket  /  Rcb Virat Kohli Best Moment With Csk Legend Ms Dhoni In Ipl 2024 Chennai Super Kings Vs Royal Challengers Bengaluru Jra

Video: ಮಾಹಿ ಹೆಗಲಿಗೆ ಕೈಹಾಕಿ ಅಪ್ಪುಗೆಯಿಂದ ಮಾತನಾಡಿದ ಚೀಕು; ವಿರಾಟ್-ಧೋನಿ ಒಟ್ಟೊಟ್ಟಿಗೆ ನೋಡಿ ಅಭಿಮಾನಿಗಳಿಗೆ ಹರ್ಷ

Virat Kohli MS Dhoni: ಐಪಿಎಲ್ 2024ರ ಆವೃತ್ತಿಗೆ ಅದ್ಧುರಿ ಚಾಲನೆ ಸಿಕ್ಕಿದೆ. ಮೊದಲ ಪಂದ್ಯ ಆರಂಭವಾಗುತ್ತಿದ್ದಂತೆಯೇ ಸಾಮಾಜಿಕ ಮಾಧ್ಯಮದಲ್ಲಿ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಖುಷಿಯಿಂದ ಮಾತನಾಡುತ್ತಿರುವ ದೃಶ್ಯ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್ ಆಗಿವೆ.

ವಿರಾಟ್-ಧೋನಿ ಒಟ್ಟೊಟ್ಟಿಗೆ ನೋಡಿ ಅಭಿಮಾನಿಗಳಿಗೆ ಹರ್ಷ
ವಿರಾಟ್-ಧೋನಿ ಒಟ್ಟೊಟ್ಟಿಗೆ ನೋಡಿ ಅಭಿಮಾನಿಗಳಿಗೆ ಹರ್ಷ

ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ನಡೆದ ಐಪಿಎಲ್‌ 2024ರ ಉದ್ಘಾಟನಾ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ತಂಡ ಭರ್ಜರಿ ಜಯ ಸಾಧಿಸಿತು. ದಿಗ್ಗಜ ನಾಯಕ ಎಂಎಸ್ ಧೋನಿ ನಾಯಕತ್ವ ಯುಗಾಂತ್ಯಗೊಂಡ ಬಳಿಕ, ಯುವ ಆಟಗಾರ ಋತುರಾಜ್ ಗಾಯಕ್ವಾಡ್ ಸಿಎಸ್‌ಕೆ ತಂಡದ ನಾಯಕತ್ವದ ಪರಂಪರೆ ಮುನ್ನಡೆಸುವ ಮಹತ್ತರ ಜವಾಬ್ದಾರಿಯನ್ನು ಗೆಲುವಿನೊಂದಿಗೆ ಆರಂಭಿಸಿದ್ದಾರೆ. ಈ ಪಂದ್ಯದಲ್ಲಿ ಆರ್‌ಸಿಬಿಯ ಸ್ಟಾರ್‌ ಆಟಗಾರ ವಿರಾಟ್‌ ಕೊಹ್ಲಿ ಹಾಗೂ ಸಿಎಸ್‌ಕೆ ದಿಗ್ಗಜ ಎಂಎಸ್‌ ಧೋನಿ ಅಭಿಮಾನಿಗಳ ಆಕರ್ಷಣೆಯಾದರು. ಪ್ರಸಕ್ತ ಆವೃತ್ತಿಯ ಮೊದಲ ಪಂದ್ಯ ಆರಂಭವಾದ ಬೆನ್ನಲ್ಲೇ, ಉಭಯ ಆಟಗಾರರ ಫೋಟೋಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿವೆ. ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ಪರಸ್ಪರ ತಬ್ಬಿಕೊಂಡು ಮಾತನಾಡುತ್ತಿರುವ ದೃಶ್ಯ ಇದಾಗಿದೆ.

ಪಂದ್ಯಕ್ಕೂ ಮುನ್ನ ಆರ್‌ಸಿಬಿ ಬೋಲ್ಡ್ ಡೈರೀಸ್‌ ಸಂಭಾಷಣೆಯಲ್ಲಿ ಮಾತನಾಡಿದ್ದ ಕೊಹ್ಲಿ, ಧೋನಿಯನ್ನು ಭೇಟಿಯಾಗಲು ಕಾಯುತ್ತಿರುವುದಾಗಿ ಹೇಳಿದ್ದರು. ಅವರಲ್ಲಿ ಮಾತನಾಡದೆ ತುಂಬಾ ಸಮಯವಾಗಿದೆ ಎಂಬುದಾಗಿ ಹೇಳಿಕೊಂಡಿದ್ದರು.

ಪ್ರಸಕ್ತ ಆವೃತ್ತಿಯ ಉದ್ಘಾಟನಾ ಪಂದ್ಯದಲ್ಲಿ ಟಾಸ್‌ ಗೆದ್ದ ಆರ್‌ಸಿಬಿ ನಾಯಕ ಫಾಫ್ ಡು ಪ್ಲೆಸಿಸ್, ಚೆಪಾಕ್ ಮೈದಾನದಲ್ಲಿ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು. ಬೆಂಗಳೂರು ಪರ ನಾಯಕ ಫಾಫ್‌ ಮತ್ತು ವಿರಾಟ್‌ ಆರಂಭಿಕರಾಗಿ ಕಣಕ್ಕಿಳಿದರು. ಈ ವೇಳೆ ಕೊಹ್ಲಿ ಮತ್ತು ಧೋನಿ ನಡುವಿನ ಸಂಭಾಷಣೆ ದೃಶ್ಯಗಳು ಇಂಟರ್ನೆಟ್‌ನಲ್ಲಿ ಸದ್ದು ಮಾಡಿತು. ಧೋನಿಯ ಭುಜದ ಮೇಲೆ ಕೈಹಾಕಿ ಅವರೊಂದಿಗೆ ಕೊಹ್ಲಿ ಮಾತನಾಡುವಾಗ, ಸಿಎಸ್‌ಕೆ ಮಾಜಿ ನಾಯಕ ನಗುತ್ತಾ ಪ್ರತಿಕ್ರಿಯೆ ನೀಡಿದ್ದಾರೆ.

ಇದನ್ನೂ ಓದಿ | ಉದ್ಘಾಟನಾ ಪಂದ್ಯದಲ್ಲಿ ಸಿಎಸ್​ಕೆಗೆ ಭರ್ಜರಿ ಗೆಲುವು; ಚೆಪಾಕ್​ನಲ್ಲಿ ಆರ್​​ಸಿಬಿ ವಿರುದ್ಧ ಹಾಲಿ ಚಾಂಪಿಯನ್ ಅಜೇಯ ಓಟ

ವಿರಾಟ್‌ ಕೊಹ್ಲಿ ಈಗಾಗಲೇ ನಾಯಕತ್ವಕ್ಕೆ ಗುಡ್‌ ಬಾಯ್‌ ಹೇಳಿದ್ದಾರೆ. ಈ ಬಾರಿ ಧೋನಿ ಕೂಡಾ ತಂಡವನ್ನು ಮುನ್ನಡೆಸುವ ಜವಾಬ್ದಾರಿಗೆ ಒಲ್ಲೆ ಎಂದಿದ್ದಾರೆ. ಅತ್ತ ಮುಂಬೈ ಇಂಡಿಯನ್ಸ್‌ ತಂಡದ ಅನುಭವಿ ನಾಯಕ ರೋಹಿತ್‌ ಶರ್ಮಾ ಅವರನ್ನು ಕೂಡಾ ನಾಯಕ ಸ್ಥಾನದಿಂದ ಕೆಳಗಿಳಿಸಲಾಗಿದೆ. ಹೀಗಾಗಿ ದಿಗ್ಗಜ ಆಟಗಾರರನ್ನು ಕಣ್ತುಂಬಿಕೊಳ್ಳುವುದು‌ ಅಭಿಮಾನಿಗಳಿಗೆ ವಿಶೇಷ ಕ್ಷಣ. ವಿರಾಟ್‌, ಧೋನಿ ಮತ್ತು ರೋಹಿತ್‌ ಶರ್ಮಾ ಅವರನ್ನು ಒಟ್ಟಾಗಿ ನೋಡುವುದು ಫ್ಯಾನ್ಸ್‌ ಕಣ್ಣಿಗೆ ಹಬ್ಬ.

ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಆರ್‌ಸಿಬಿ 173 ರನ್‌ ಗಳಿಸಿತು. ನಾಯಕ ಡು ಪ್ಲೆಸಿಸ್ ಆರಂಭದಲ್ಲೇ ಅಬ್ಬರಿಸಿದರು. 23 ಎಸೆತಗಳಲ್ಲಿ 35 ರನ್ ಗಳಿಸಿದರು. ಬಲು ಬೇಗನೆ 5 ವಿಕೆಟ್‌ ಕಳೆದುಕೊಂಡು ಪರದಾಡಿದ ತಂಡಕ್ಕೆ, ಅನುಭವಿ ಆಟಗಾರ ದಿನೇಶ್​ ಕಾರ್ತಿಕ್​ ಮತ್ತು ಅನುಜ್​ ರಾವತ್ ನೆರವಾದರು. ಭರ್ಜರಿ ಜೊತೆಯಾಟದ ಮೂಲಕ ತಂಡವನ್ನು ಸಂಕಷ್ಟದಿಂದ ಪಾರು ಮಾರು ಮಾಡಿದರು. ಉಭಯ ಆಟಗಾರರು 6ನೇ ವಿಕೆಟ್‌​ಗೆ 95 ರನ್‌ ಪೇರಿಸಿದರು. ಈ ನಡುವೆ ವಿರಾಟ್‌ ಕೊಹ್ಲಿ 20 ಎಸೆತಗಳಲ್ಲಿ 21 ರನ್‌ ಗಳಿಸಿ ಔಟಾದರು. ಆ ಮೂಲಕ ಟಿ20 ಕ್ರಿಕೆಟ್‌ನಲ್ಲಿ 12,000 ರನ್‌ಗಳ ಮೈಲಿಗಲ್ಲು ತಲುಪಿದರು.

ಚೆನ್ನೈನ ನಿಧಾನಗತಿಯ ಪಿಚ್‌ನಲ್ಲಿ 174 ರನ್‌​ಗಳ ಸ್ಪರ್ಧಾತ್ಮಕ ಗುರಿ ಪಡೆದ ಸಿಎಸ್‌ಕೆ ಪರ, ನಾಯಕ ಋತುರಾಜ್ ಗಾಯಕ್ವಾಡ್ ಮತ್ತು ರಚಿನ್ ರವೀಂದ್ರ ಜೋಡಿ ಉತ್ತಮ ಆರಂಭ ಪಡೆದರು. ಋತುರಾಜ್ 15 ರನ್ ಗಳಿಸಿದರೆ, ಮೊಟ್ಟಮೊದಲ ಐಪಿಎಲ್‌ ಪಂದ್ಯವಾಡಿದ ರವೀಂದ್ರ 37 ರನ್‌ ಗಳಿಸಿದರು. ಮತ್ತೊಂದೆಡೆ ರಹಾನೆ ಕೂಡ ಅಬ್ಬರಿಸಿದರು.

ಕೊನೆಯಲ್ಲಿ ಶಿವಂ ದುಬೆ ಹಾಗೂ ರವೀಂದ್ರ ಜಡೇಜಾ ಅಜೇಯ ಆಟವಾಡುವ ಮೂಲಕ ಸಿಎಸ್‌ಕೆ ತಂಡವನ್ನು ಗೆಲುವಿನ ದಡ ಸೇರಿಸಿದರು.

ಕ್ರಿಕೆಟ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ

ಐಪಿಎಲ್‌ ಕುರಿತ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್‌ ಮಾಡಿ