ರಿಕಿ ಭುಯಿ ಔಟ್, ಪೃಥ್ವಿ ಶಾ ಇನ್; ಹ್ಯಾಟ್ರಿಕ್ ಗೆಲುವಿನ ಮೇಲೆ ಕಣ್ಣಿಟ್ಟ ಸಿಎಸ್ಕೆ ವಿರುದ್ಧದ ಪಂದ್ಯಕ್ಕೆ ಡೆಲ್ಲಿ ಪ್ಲೇಯಿಂಗ್ XI
DC vs CSK IPL 2024 : ಮಾರ್ಚ್ 31ರ ಭಾನುವಾರ 17ನೇ ಆವೃತ್ತಿಯ ಐಪಿಎಲ್ 13ನೇ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ತಂಡಗಳು ಮುಖಾಮುಖಿಯಾಗಲಿವೆ.
17ನೇ ಆವೃತ್ತಿಯ ಐಪಿಎಲ್ನಲ್ಲಿ 2 ಸೋಲುಗಳ ನಂತರ ಮೊದಲ ಗೆಲುವಿನ ಹುಡುಕಾಟ ನಡೆಸುತ್ತಿರುವ ಡೆಲ್ಲಿ ಕ್ಯಾಪಿಟಲ್ಸ್, ಮಾರ್ಚ್ 31ರ ಸಂಜೆ ಟೇಬಲ್-ಟಾಪರ್ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಕಠಿಣ ಪರೀಕ್ಷೆಗೆ ಸಜ್ಜಾಗುತ್ತಿದೆ. ವಿಶಾಖಪಟ್ಟಣದ ಡಾ.ವೈಎಸ್ ರಾಜಶೇಖರ್ ರೆಡ್ಡಿ ಮೈದಾನದಲ್ಲಿ ಪಂದ್ಯ ನಡೆಯಲಿದೆ. ಸತತ 2 ಪಂದ್ಯಗಳನ್ನು ಗೆದ್ದಿರುವ ಸಿಎಸ್ಕೆ ಹ್ಯಾಟ್ರಿಕ್ ಜಯದ ಮೇಲೆ ಕಣ್ಣಿಟ್ಟಿದೆ.
ನಾಯಕ ರಿಷಭ್ ಪಂತ್ ಹಂತ ಹಂತವಾಗಿ ಲಯ ಕಂಡುಕೊಳ್ಳುತ್ತಿದ್ದು ಮೊದಲ ಗೆಲುವು ಸಾಧಿಸುವ ವಿಶ್ವಾಸದಲ್ಲಿದ್ದಾರೆ. ಡೆಲ್ಲಿ ತಂಡವು ಆರಂಭಿಕರಾದ ಡೇವಿಡ್ ವಾರ್ನರ್ ಮತ್ತು ಮಿಚೆಲ್ ಮಾರ್ಷ್ ಮೇಲೆ ಹೆಚ್ಚು ಅವಲಂಬಿತವಾಗಿದೆ. ಬ್ಯಾಟಿಂಗ್ ವಿಭಾಗ ಬಲಿಷ್ಠಗೊಳಿಸಲು ಆರಂಭಿಕ ಆಟಗಾರ ಪೃಥ್ವಿ ಶಾ ಅವರಿಗೆ ಅವಕಾಶ ನೀಡುವ ಸಾಧ್ಯತೆ ಇದೆ. ನಿರಾಸೆ ಮೂಡಿಸಿದ ರಿಕಿ ಭುಯಿ ಅವರನ್ನು ಕೈಬಿಡಲಾಗುತ್ತದೆ.
ಆರಂಭಿಕರು ಹೊರತುಪಡಿಸಿ ಉಳಿದವರು, ತಂಡಕ್ಕೆ ಬಲ ತುಂಬಲು ವಿಫಲರಾಗಿದ್ದಾರೆ. ಟ್ರಿಸ್ಟಾನ್ ಸ್ಟಬ್ಸ್, ಅಕ್ಷರ್ ಪಟೇಲ್ ಕೂಡ ತಂಡದ ಗೆಲುವಿಗೆ ರನ್ ಗಳಿಸಬೇಕಿದೆ. ಬೌಲಿಂಗ್ನಲ್ಲೂ ಕಳಪೆ ಪ್ರದರ್ಶನ ನೀಡುತ್ತಿದೆ. 2 ಪಂದ್ಯಗಳಲ್ಲಿ ಡೆತ್ ಓವರ್‌ಗಳಲ್ಲಿ ವೇಗಿಗಳು ರನ್ ಸೋರಿಕೆ ಮಾಡಿದ್ದು, ತಲೆನೋವು ಹೆಚ್ಚಿಸಿದೆ. ಆನ್ರಿಚ್ ನೋಕಿಯಾ, ಖಲೀಲ್ ಅಹ್ಮದ್ ವಿಕೆಟ್ ಬೇಟೆಯ ಮೂಲಕ ಲಯಕ್ಕೆ ಮರಳಬೇಕಿದೆ.
ಏತನ್ಮಧ್ಯೆ, ಸಿಎಸ್ಕೆ ತನ್ನ ಗೆಲುವಿನ ಓಟವನ್ನು ಮುಂದುವರಿಸಲು ಎದುರು ನೋಡುತ್ತಿದೆ. ಬ್ಯಾಟಿಂಗ್ ಮತ್ತು ಬೌಲಿಂಗ್ ಎರಡರಲ್ಲೂ ಅದ್ಭುತ ಪ್ರದರ್ಶನ ನೀಡುತ್ತಿದೆ. ಬ್ಯಾಟಿಂಗ್ನಲ್ಲಿ ಲೋಪಗಳು ಕಾಣದಿದ್ದರೂ ಬೌಲರ್ಗಳು ಇನ್ನಷ್ಟು ಆಕ್ರಮಣಕಾರಿಯಾಗಬೇಕಿದೆ. ಅದ್ಭುತ ಫಾರ್ಮ್ನಲ್ಲಿರುವ ಬ್ಯಾಟರ್ಗಳು, ಫಾರ್ಮ್ನಲ್ಲಿಲ್ಲದ ಡೆಲ್ಲಿ ಬೌಲರ್ಗಳಿಗೆ ಚಿಂದಿ ಉಡಾಯಿಸುವ ನಿರೀಕ್ಷೆ ಇದೆ. ಆದರೆ ಕುಲ್ದೀಪ್ ಯಾದವ್ ಮತ್ತು ಅಕ್ಷರ್ ಪಟೇಲ್ ಬೌಲಿಂಗ್ನಲ್ಲಿ ಎಚ್ಚರ ಅಗತ್ಯ.
ಡೆಲ್ಲಿ ಕ್ಯಾಪಿಟಲ್ಸ್ ಸಂಭಾವ್ಯ XI
ಪೃಥ್ವಿ ಶಾ, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್ (ವಿಕೆಟ್ ಕೀಪರ್/ನಾಯಕ), ಟ್ರಿಸ್ಟಾನ್ ಸ್ಟಬ್ಸ್, ಅಕ್ಸರ್ ಪಟೇಲ್, ಸುಮಿತ್ ಕುಮಾರ್, ಕುಲ್ದೀಪ್ ಯಾದವ್, ಆನ್ರಿಚ್ ನೊಕಿಯಾ, ಖಲೀಲ್ ಅಹ್ಮದ್, ಮುಕೇಶ್ ಕುಮಾರ್.[ಇಂಪ್ಯಾಕ್ಟ್ ಪ್ಲೇಯರ್ - ಲಲಿತ್ ಯಾದವ್]
ಚೆನ್ನೈ ಸೂಪರ್ ಕಿಂಗ್ಸ್ ಸಂಭಾವ್ಯ XI
ಋತುರಾಜ್ ಗಾಯಕ್ವಾಡ್ (ನಾಯಕ), ರಚಿನ್ ರವೀಂದ್ರ, ಅಜಿಂಕ್ಯ ರಹಾನೆ, ಡೇರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಸಮೀರ್ ರಿಜ್ವಿ, ಎಂಎಸ್ ಧೋನಿ (ವಿಕೆಟ್ ಕೀಪರ್), ದೀಪಕ್ ಚಹರ್, ತುಷಾರ್ ದೇಶಪಾಂಡೆ, ಮುಸ್ತಫಿಜುರ್ ರೆಹಮಾನ್. [ಇಂಪ್ಯಾಕ್ಟ್ ಪ್ಲೇಯರ್: ಮತೀಶ ಪತಿರಾಣ]
DC vs CSK ಹೆಡ್-ಟು-ಹೆಡ್ ದಾಖಲೆಗಳು
ಡೆಲ್ಲಿ ಮತ್ತು ಸಿಎಸ್ಕೆ ಇದುವರೆಗೆ 29 ಐಪಿಎಲ್ ಪಂದ್ಯಗಳಲ್ಲಿ ಪರಸ್ಪರ ಮುಖಾಮುಖಿಯಾಗಿವೆ. ಆ ಪೈಕಿ ಡಿಸಿ 10 ಮತ್ತು ಚೆನ್ನೈ 19 ಗೆದ್ದಿದೆ. ಸಿಎಸ್ಕೆ ವಿರುದ್ಧ ಡೆಲ್ಲಿ ಗರಿಷ್ಠ ಮೊತ್ತ 198, ಡಿಸಿ ವಿರುದ್ಧ ಚೆನ್ನೈನ ಅತ್ಯಧಿಕ ಸ್ಕೋರ್ 223 ಆಗಿದೆ.
DC vs CSK ಪಿಚ್ ವರದಿ
ವೈಜಾಗ್ ಪಿಚ್ ಬ್ಯಾಟರ್ಗಳಿಗೆ ಹೆಚ್ಚು ನೆರವು ನೀಡಲಿದೆ. ಆದಾಗ್ಯೂ, ಈ ಮೈದಾನದಲ್ಲಿ ಹೆಚ್ಚು 200+ ಸ್ಕೋರ್ ಬಂದೇ ಇಲ್ಲ. ಇಲ್ಲಿಯವರೆಗೆ ಇಲ್ಲಿ 13 ಐಪಿಎಲ್ ಪಂದ್ಯಗಳನ್ನು ಆಡಲಾಗಿದ್ದು, 7 ಪಂದ್ಯಗಳನ್ನು 2ನೇ ಬ್ಯಾಟಿಂಗ್ ಮಾಡಿದ ತಂಡಗಳು ಗೆದ್ದಿವೆ. 2016ರಲ್ಲಿ ಡಿಸಿ ವಿರುದ್ಧ ಮುಂಬೈ ಇಂಡಿಯನ್ಸ್ 206/4 ರನ್ ಗಳಿಸಿದ್ದೇ ಅತ್ಯಧಿಕ ಸ್ಕೋರ್ ಆಗಿದೆ. ಮೊದಲ ಇನಿಂಗ್ಸ್‌ನ ಸರಾಸರಿ ಸ್ಕೋರ್ 158 ಆಗಿದ್ದರೆ 2ನೇ ಇನ್ನಿಂಗ್ಸ್ ಸರಾಸರಿ 131 ಆಗಿದೆ.