ರಿಷಭ್ ಪಂತ್, ರಿಯಾನ್ ಪರಾಗ್ ಇನ್? ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
Indias Likely Playing XI: ಶ್ರೀಲಂಕಾ ವಿರುದ್ಧದ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡದಲ್ಲಿ ಪ್ರಮುಖ ಎರಡು ಬದಲಾವಣೆಯಾಗುವ ಸಾಧ್ಯತೆ ಇದೆ ಎಂದು ವರದಿಯಾಗಿದೆ.
ಆತಿಥೇಯ ಶ್ರೀಲಂಕಾ ವಿರುದ್ದದ ಮೊದಲ ಏಕದಿನ ಪಂದ್ಯದಲ್ಲಿ ನಿರಾಸೆ ಅನುಭವಿಸಿದ ಟೀಮ್ ಇಂಡಿಯಾ, 2ನೇ ಏಕದಿನದಲ್ಲಿ ಗೆಲುವಿನ ನಗೆ ಬೀರಲು ಸಜ್ಜಾಗುತ್ತಿದೆ. ಇಂದು (ಆಗಸ್ಟ್ 4ರ ಭಾನುವಾರ) ಕೊಲೊಂಬೊದ ಆರ್ ಪ್ರೇಮದಾಸ ಕ್ರಿಕೆಟ್ ಮೈದಾನದಲ್ಲೇ ಈ ಪಂದ್ಯ ಕೂಡ ನಡೆಯಲಿದೆ. ಮೊದಲ ಪಂದ್ಯ ರೋಚಕ ಟೈನಲ್ಲಿ ಅಂತ್ಯವಾದ ಕಾರಣ 3 ಪಂದ್ಯಗಳ ಏಕದಿನ ಸರಣಿ ವಶಪಡಿಸಿಕೊಳ್ಳಲು ರೋಹಿತ್ ಪಡೆ ಉಳಿದ ಎರಡೂ ಪಂದ್ಯಗಳಲ್ಲಿ ಗೆಲ್ಲುವುದು ಅಗತ್ಯ.
ಇದೀಗ ಎರಡನೇ ಏಕದಿನ ಪಂದ್ಯಕ್ಕೆ ಭಾರತ ತಂಡ ತನ್ನ ಆಡುವ 11ರ ಬಳಗದಲ್ಲಿ ಪ್ರಮುಖ 2 ಬದಲಾವಣೆಗೆ ನಿರ್ಧರಿಸಿದೆ. ಬ್ಯಾಟಿಂಗ್ ವಿಭಾಗ ವಿಫಲಗೊಂಡ ಕಾರಣ ಮೊದಲ ಪಂದ್ಯ ಕಳೆದುಕೊಂಡಿತು. ಹಾಗಾಗಿ ಬ್ಯಾಟಿಂಗ್ ವಿಭಾಗ ಬಲಪಡಿಸಲು ಯೋಜನೆ ಹಾಕಿದೆ. ನಾಯಕ ರೋಹಿತ್ ಶರ್ಮಾ ಹೊರತುಪಡಿಸಿ ಭಾರತದ ಬ್ಯಾಟರ್‌ಗಳು ಸವಾಲಿನ ಪರಿಸ್ಥಿತಿಗಳಿಗೆ ಹೊಂದಿಕೊಳ್ಳಲು ವಿಫಲರಾಗಿ ಫ್ಲಾಪ್ ಶೋ ನೀಡಿದರು. ಕೆಳ ಕ್ರಮಾಂಕದಲ್ಲೂ ನೀರಸ ಬ್ಯಾಟಿಂಗ್ ಪ್ರದರ್ಶನ ಹೊರಬಂತು.
ಎರಡು ಬದಲಾವಣೆ ಸಾಧ್ಯತೆ
ಅನುಭವಿ ಆಟಗಾರರಾದ ವಿರಾಟ್ ಕೊಹ್ಲಿ, ಶುಭ್ಮನ್ ಗಿಲ್, ಶ್ರೇಯಸ್ ಅಯ್ಯರ್ ಮತ್ತು ಕೆಎಲ್ ರಾಹುಲ್ ಅವರಿಂದ ಎರಡನೇ ಪಂದ್ಯದಲ್ಲಿ ಸುಧಾರಿತ ಪ್ರದರ್ಶನ ಹೊರ ಬರುವ ಹೆಚ್ಚಿನ ನಿರೀಕ್ಷೆಯಿದೆ. ಆದರೆ, 2ನೇ ಪಂದ್ಯಕ್ಕೆ ಮೊದಲ ಪಂದ್ಯದಲ್ಲೇ ಆಡುತ್ತಾರೆ ಎಂದು ನಿರೀಕ್ಷೆ ಮಾಡಲಾಗಿದ್ದ ವಿಕೆಟ್‌ಕೀಪರ್-ಬ್ಯಾಟರ್ ರಿಷಭ್ ಪಂತ್ ಅವರನ್ನು ವಾಷಿಂಗ್ಟನ್ ಸುಂದರ್ ಬದಲಿಗೆ ಕಣಕ್ಕಿಳಿಸಲು ಟೀಮ್ ಮ್ಯಾನೇಜ್ಮೆಂಟ್ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ.
ಆಗಸ್ಟ್ 2ರ ಶುಕ್ರವಾರ ಸುಂದರ್ ತಮ್ಮ 9 ಓವರ್‌ಗಳ ಕೋಟಾದಲ್ಲಿ 46 ರನ್‌ಗಳಿಗೆ ಒಂದು ವಿಕೆಟ್ ಪಡೆದರಷ್ಟೆ. ನಂತರ 4ನೇ ಕ್ರಮಾಂಕಕ್ಕೆ ಬ್ಯಾಟಿಂಗ್ ಬಡ್ತಿ ಸಿಕ್ಕರೂ 5 ಎಸೆತಗಳಲ್ಲಿ 5 ರನ್‌ಗಳಿಸಿ ಔಟಾದರು. ಪಂತ್ ಸ್ಫೋಟಕ ಮಧ್ಯಮ ಕ್ರಮಾಂಕದ ಬ್ಯಾಟರ್ ಆಗಿದ್ದು, ಅವರ ಸೇರ್ಪಡೆ ಭಾರತದ ಬ್ಯಾಟಿಂಗ್ ಘಟಕಕ್ಕೆ ಬಲವನ್ನು ನೀಡುತ್ತದೆ. ಆದರೆ ಸುಂದರ್ ಕೈಬಿಟ್ಟರೆ, ಸ್ಪಿನ್ ವಿಭಾಗದಲ್ಲಿ ಕೊರತೆ ಎದುರಿಸಬಹುದು. ಇದು ಸಾಧ್ಯವಾಗದಿದ್ದರೂ ಭಾರತಕ್ಕೆ ಇನ್ನೊಂದು ಆಯ್ಕೆ ಇದೆ.
ಸುಂದರ್ ಬದಲಿಗೆ ರಿಯಾನ್ ಪರಾಗ್ ಅವರನ್ನು ಆಡುವ XI ರಲ್ಲಿ ಕಣಕ್ಕಿಳಿಸುವುದು ಭಾರತಕ್ಕೆ ಮತ್ತೊಂದು ಆಯ್ಕೆಯಾಗಿದೆ. ಕಳೆದ ತಿಂಗಳು ಜಿಂಬಾಬ್ವೆ ವಿರುದ್ಧ ಭಾರತದ ಪರ ಟಿ20ಐ ಕ್ರಿಕೆಟ್ಗೆ ಪದಾರ್ಪಣೆ ಮಾಡಿದ ಪರಾಗ್, ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ಕೊಡುಗೆ ನೀಡುವ ಸಾಮರ್ಥ್ಯ ಹೊಂದಿದ್ದಾರೆ. ಶ್ರೀಲಂಕಾ ವಿರುದ್ಧದ ಟಿ20 ಸರಣಿಯಲ್ಲೂ ಪರಾಗ್ ಬೌಲರ್ ಆಗಿ ತಮ್ಮ ಸಾಮರ್ಥ್ಯವನ್ನು ಸಾಬೀತುಪಡಿಸಿದ್ದರು. ಐದು ರನ್‌ಗಳಿಗೆ 3 ವಿಕೆಟ್‌ಗಳನ್ನು ಪಡೆದಿದ್ದರು.
ಭಾರತವು ಪ್ಲೇಯಿಂಗ್ 11ನಲ್ಲಿ ಪರಾಗ್ ಮತ್ತು ಪಂತ್ ಇಬ್ಬರನ್ನೂ ಸೇರಿಸಿಕೊಳ್ಳಬೇಕು ಅಂದರೆ ದುಬೆ ಮತ್ತು ಸುಂದರ್ ಒಬ್ಬರು ಹೊರ ಹೋಗಬೇಕು. ಆದರೆ 3ನೇ ವೇಗದ ಬೌಲಿಂಗ್ ಆಯ್ಕೆಯಾದ ಕಾರಣ ಕೈಬಿಡುವುದು ಅಷ್ಟು ಸುಲಭವಲ್ಲ. ಯಾರು ಪ್ಲೇಯಿಂಗ್ನಿಂದ ಹೊರಬೀಳುತ್ತಾರೆ ಎಂಬುದನ್ನು ಕಾದುನೋಡೋಣ. ದ್ವೀಪರಾಷ್ಟ್ರದ ವಿರುದ್ಧ ಭಾರತ ಇದುವರೆಗೆ ಆಡಿದ 169 ಏಕದಿನಗಳಲ್ಲಿ 99 ಪಂದ್ಯ ಗೆದ್ದಿದೆ. ಇಂದು ಲಂಕಾ ವಿರುದ್ಧ ಗೆಲುವು ಸಾಧಿಸಿದರೆ ಭಾರತವು ಒಂದು ತಂಡದ ವಿರುದ್ಧ 100 ಪಂದ್ಯ ಗೆದ್ದ ಮೊದಲ ತಂಡವಾಗಲಿದೆ.
ಶ್ರೀಲಂಕಾ ವಿರುದ್ಧದ 2ನೇ ಏಕದಿನ ಪಂದ್ಯಕ್ಕೆ ಭಾರತದ ಸಂಭಾವ್ಯ ಪ್ಲೇಯಿಂಗ್ XI
ರೋಹಿತ್ ಶರ್ಮಾ (ನಾಯಕ), ಶುಭ್ಮನ್ ಗಿಲ್, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ಕೆಎಲ್ ರಾಹುಲ್ (ವಿಕೆಟ್ ಕೀಪರ್), ರಿಯಾನ್ ಪರಾಗ್, ಶಿವಂ ದುಬೆ/ರಿಷಭ್ ಪಂತ್, ಅಕ್ಷರ್ ಪಟೇಲ್, ಕುಲ್ದೀಪ್ ಯಾದವ್, ಮೊಹಮ್ಮದ್ ಸಿರಾಜ್, ಅರ್ಷದೀಪ್ ಸಿಂಗ್.