ಏಷ್ಯನ್ ಗೇಮ್ಸ್ ಸೆಮೀಸ್​ನಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ; ಪದಕ ಖಚಿತ
ಕನ್ನಡ ಸುದ್ದಿ  /  ಕ್ರಿಕೆಟ್  /  ಏಷ್ಯನ್ ಗೇಮ್ಸ್ ಸೆಮೀಸ್​ನಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ; ಪದಕ ಖಚಿತ

ಏಷ್ಯನ್ ಗೇಮ್ಸ್ ಸೆಮೀಸ್​ನಲ್ಲಿ ಬಾಂಗ್ಲಾ ವಿರುದ್ಧ ಗೆದ್ದು ಫೈನಲ್ ತಲುಪಿದ ಭಾರತ; ಪದಕ ಖಚಿತ

Asian Games Cricket: ಏಷ್ಯನ್ ಗೇಮ್ಸ್​​ ಪುರುಷರ ಕ್ರಿಕೆಟ್ ವಿಭಾಗದಲ್ಲಿ ಭಾರತ ಕ್ರಿಕೆಟ್ ತಂಡವು ಭರ್ಜರಿ ಪ್ರದರ್ಶನ ನೀಡಿದೆ. ಬಾಂಗ್ಲಾದೇಶ ಎದುರಿನ ಸೆಮಿಫೈನಲ್ ಪಂದ್ಯದಲ್ಲಿ 9 ವಿಕೆಟ್​​ಗಳ ಗೆಲುವು ಸಾಧಿಸಿದ ಭಾರತ ಫೈನಲ್​ ಪ್ರವೇಶಿಸಿದೆ. ಆ ಮೂಲಕ ಭಾರತಕ್ಕೆ ಪದಕ ಖಚಿತ ಪಡಿಸಿದೆ.

ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ತಿಲಕ್ ವರ್ಮಾ ಬ್ಯಾಟಿಂಗ್ ವೈಖರಿ.
ಭಾರತ ಕ್ರಿಕೆಟ್ ತಂಡದ ಯುವ ಆಟಗಾರ ತಿಲಕ್ ವರ್ಮಾ ಬ್ಯಾಟಿಂಗ್ ವೈಖರಿ.

ಏಷ್ಯನ್ ಗೇಮ್ಸ್​ನ ಪುರುಷರ ಕ್ರಿಕೆಟ್ (Asian Games Men's Cricket) ವಿಭಾಗದ ಸೆಮಿಫೈನಲ್​ ಪಂದ್ಯದಲ್ಲಿ ಭಾರತ ತಂಡವು, ಬಾಂಗ್ಲಾದೇಶ ತಂಡವನ್ನು (India vs Bangladesh) ಮಣಿಸಿ ಫೈನಲ್​ ಪ್ರವೇಶಿಸಿದೆ. ಇದರೊಂದಿಗೆ ಭಾರತಕ್ಕೆ ಪದಕ ಖಚಿತಪಡಿಸಿದೆ. ಚೀನಾದ ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಬಾಂಗ್ಲಾ ವಿರುದ್ಧ ಋತುರಾಜ್ ಗಾಯಕ್ವಾಡ್ (Ruturaj Gaikwad) ಪಡೆ, 9 ವಿಕೆಟ್​​ಗಳ ಭರ್ಜರಿ ಗೆಲುವು ಸಾಧಿಸಿತು. ಇದರೊಂದಿಗೆ ಚೊಚ್ಚಲ ಏಷ್ಯನ್ ಗೇಮ್ಸ್​ನಲ್ಲೇ ಫೈನಲ್ ಪ್ರವೇಶಿಸಿದ ಸಾಧನೆ ಮಾಡಿದೆ.

ಮೊದಲು ಬ್ಯಾಟಿಂಗ್ ನಡೆಸಿದ ಬಾಂಗ್ಲಾದೇಶ, ಭಾರತೀಯ ಬೌಲರ್​​ಗಳ ಆರ್ಭಟಕ್ಕೆ ತತ್ತರಿಸಿತು. ತನ್ನ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ಕಳೆದುಕೊಂಡು 96 ರನ್ ಗಳಿಸಿತು. ತಂಡದ ಜಾಕರ್ ಅಲಿ (24), ಪರ್ವೈಜ್ ಹೊಸೈನ್ ಎಮೋನ್ (23) ತಂಡದ ಪರ ಗರಿಷ್ಠ ಸ್ಕೋರರ್ ಎನಿಸಿಕೊಂಡರು. ಸಾಯಿ ಕಿಶೋರ್​​ 3, ವಾಷಿಂಗ್ಟನ್ ಸುಂದರ್​ 2 ವಿಕೆಟ್, ಆರ್ಷ್​ದೀಪ್ ಸಿಂಗ್, ತಿಲಕ್ ವರ್ಮಾ, ರವಿ ಬಿಷ್ಣೋಯ್, ಶಹಬಾಜ್ ಅಹ್ಮದ್ ತಲಾ 1 ವಿಕೆಟ್ ಪಡೆದರು.

64 ಎಸೆತಗಳು ಬಾಕಿ ಇರುವಂತೆಯೇ ಜಯ

ಈ ಸಾಧಾರಣ ಗುರಿ ಬೆನ್ನತ್ತಿದ ಭಾರತ 9.2 ಓವರ್​​ಗಳಲ್ಲಿ ಜಯದ ನಗೆ ಬೀರಿತು. ಕ್ವಾರ್ಟರ್​ ಫೈನಲ್ ಪಂದ್ಯದಲ್ಲಿ ಶತಕ ಸಿಡಿಸಿ ಅಬ್ಬರಿಸಿದ್ದ ಆರಂಭಿಕ ಆಟಗಾರ ಯಶಸ್ವಿ ಜೈಸ್ವಾಲ್​, ಈ ಪಂದ್ಯದಲ್ಲಿ ಶೂನ್ಯಕ್ಕೆ ನಿರ್ಗಮಿಸಿ ನಿರಾಸೆ ಮೂಡಿಸಿದರು. ಈ ಹಿನ್ನಡೆಯ ನಡುವೆಯೂ ಭಾರತ ಭರ್ಜರಿ ಬ್ಯಾಟಿಂಗ್ ನಡೆಸಿತು. ಇನ್ನೂ 64 ಎಸೆತಗಳು ಬಾಕಿ ಇರುವಂತೆಯೇ ಗೆದ್ದು ಫೈನಲ್ ಪ್ರವೇಶಿಸಿದೆ. ಇದರೊಂದಿಗೆ ಚಿನ್ನ ಅಥವಾ ಬೆಳ್ಳಿ ಪದಕ ಗೆಲ್ಲುವುದನ್ನು ಖಚಿತಪಡಿಸಿದೆ.

ತಿಲಕ್ ವರ್ಮಾ ಅರ್ಧಶತಕ

ಜೈಸ್ವಾಲ್ ಔಟಾದ ಬೆನ್ನಲ್ಲೇ 3ನೇ ಕ್ರಮಾಂಕದಲ್ಲಿ ಕಣಕ್ಕಿಳಿದ ತಿಲಕ್ ವರ್ಮಾ, ಆರಂಭದಿಂದಲೂ ಬಿರುಸಿನ ಬ್ಯಾಟಿಂಗ್ ನಡೆಸಿದರು. ಮತ್ತೊಂದೆಡೆ ನಾಯಕ ಋತುರಾಜ್ ಗಾಯಕ್ವಾಡ್ ಜವಾಬ್ದಾರಯುತ ಆಟವಾಡಿ ಗಮನ ಸೆಳೆದರು. ಬಾಂಗ್ಲಾ ಬೌಲರ್​​ಗಳಿಗೆ ಬೆಂಡೆತ್ತಿದ ತಿಲಕ್ ವರ್ಮಾ ಸ್ಫೋಟಕ ಅರ್ಧಶತಕ ಸಿಡಿಸಿದರು. 26 ಎಸೆತಗಳಲ್ಲಿ 6 ಸಿಕ್ಸರ್, 2 ಬೌಂಡರಿ ಸಹಿತ ಅಜೇಯ 55 ರನ್ ಗಳಿಸಿದರು. ಋತುರಾಜ್ ಗಾಯಕ್ವಾಡ್, 26 ಎಸೆತಗಳಲ್ಲಿ 4 ಬೌಂಡರಿ, 3 ಸಿಕ್ಸರ್​ ಸಹಿತ ಅಜೇಯ 40 ರನ್ ಗಳಿಸಿ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದರು.

ಗೋಲ್ಡ್ ಮೆಡಲ್ ಪಂದ್ಯ ಯಾವಾಗ?

ಏಷ್ಯನ್ ಗೇಮ್ಸ್ ಕ್ರಿಕೆಟ್​ನಲ್ಲಿ ಚಿನ್ನದ ಪದಕದ ಪಂದ್ಯವು ಅಕ್ಟೋಬರ್​ 7ರಂದು ಬೆಳಿಗ್ಗೆ 11.30ಕ್ಕೆ (ಭಾರತೀಯ ಕಾಲಮಾನ) ನಡೆಯಲಿದೆ. ಚೀನಾದ ಹ್ಯಾಂಗ್‌ಝೌನಲ್ಲಿರುವ ಪಿಂಗ್‌ಫೆಂಗ್ ಕ್ಯಾಂಪಸ್ ಕ್ರಿಕೆಟ್ ಮೈದಾನದಲ್ಲೇ ಈ ಪಂದ್ಯವು ಜರುಗಲಿದೆ. 2ನೇ ಸೆಮಿಫೈನಲ್ ಪಂದ್ಯದಲ್ಲಿ ಪಾಕಿಸ್ತಾನ ಮತ್ತು ಅಫ್ಘಾನಿಸ್ತಾನ ನಡುವೆ ನಡೆಯುವ ಪಂದ್ಯದಲ್ಲಿ ಗೆದ್ದವರು ಫೈನಲ್ ಪ್ರವೇಶಿಸುತ್ತಾರೆ. ಆ ತಂಡದ ವಿರುದ್ಧ ಭಾರತ ಚಿನ್ನದ ಪದಕಕ್ಕಾಗಿ ಹೋರಾಟ ನಡೆಸಲಿದೆ.

ಭಾರತ ಮಹಿಳಾ ಕ್ರಿಕೆಟ್​ ತಂಡಕ್ಕೆ ಚಿನ್ನದ ಪದಕ

ಭಾರತ ಪುರುಷರ ಕ್ರಿಕೆಟ್ ತಂಡವು ಫೈನಲ್ ಪ್ರವೇಶಿಸಿದ್ದು, ಚಿನ್ನ ಗೆಲ್ಲುವ ಆತ್ಮವಿಶ್ವಾಸದಲ್ಲಿದ್ದಾರೆ. ಆದರೆ ಈಗಾಗಲೇ ಭಾರತ ಮಹಿಳಾ ತಂಡವು ಚಿನ್ನ ಗೆದ್ದು ಬೀಗಿದೆ. ಶ್ರೀಲಂಕಾ ಎದುರಿನ ಫೈನಲ್ ಪಂದ್ಯದಲ್ಲಿ ಹರ್ಮನ್ ಪ್ರೀತ್​ ಕೌರ್​ ಪಡೆ ಗೆದ್ದು, ಚೊಚ್ಚಲ ಏಷ್ಯನ್ ಗೇಮ್ಸ್​​ನಲ್ಲೇ ಐತಿಹಾಸಿಕ ಚಿನ್ನಕ್ಕೆ ಮುತ್ತಿಕ್ಕಿದೆ. ಇದೀಗ ಚೊಚ್ಚಲ ಏಷ್ಯನ್ ಗೇಮ್ಸ್​​ನಲ್ಲೇ ಪುರುಷರ ತಂಡವು ಚಿನ್ನ ಗೆಲ್ಲುವ ಉತ್ತಮ ಅವಕಾಶವನ್ನು ಹೊಂದಿದೆ.

ಭಾರತ ತಂಡ

ಋತುರಾಜ್ ಗಾಯಕ್ವಾಡ್ (ನಾಯಕ), ಯಶಸ್ವಿ ಜೈಸ್ವಾಲ್, ತಿಲಕ್ ವರ್ಮಾ, ಜಿತೇಶ್ ಶರ್ಮಾ (ವಿಕೆಟ್ ಕೀಪರ್), ಶಿವಂ ದುಬೆ, ರಿಂಕು ಸಿಂಗ್, ವಾಷಿಂಗ್ಟನ್ ಸುಂದರ್, ಶಹಬಾಜ್ ಅಹ್ಮದ್, ರವಿ ಬಿಷ್ಣೋಯ್, ಸಾಯಿ ಕಿಶೋರ್, ಆರ್ಷ್​ದೀಪ್ ಸಿಂಗ್

ಬಾಂಗ್ಲಾದೇಶ ತಂಡ

ಪರ್ವೇಜ್ ಹೊಸೈನ್ ಎಮನ್, ಮಹ್ಮುದುಲ್ ಹಸನ್ ಜಾಯ್, ಝಾಕಿರ್ ಹಸನ್, ಸೈಫ್ ಹಸನ್ (ನಾಯಕ), ಅಫೀಫ್ ಹೊಸೈನ್, ಶಾಹದತ್ ಹೊಸೈನ್, ಜಾಕರ್ ಅಲಿ (ವಿಕೆಟ್ ಕೀಪರ್​), ರಾಕಿಬುಲ್ ಹಸನ್, ಹಸನ್ ಮುರಾದ್, ಮೃತುನ್ಜೋಯ್ ಚೌಧರಿ, ರಿಪೋನ್ ಮೊಂಡೋಲ್.

Whats_app_banner