ವಿಶ್ವಕಪ್ ಗೆದ್ದು ಮೊದಲ ಬಾರಿಗೆ ತಾಯ್ನಾಡಿಗೆ ಬಂದಿಳಿದ ಭಾರತ ತಂಡ; ದೆಹಲಿ ಏರ್ಪೋರ್ಟ್ನಲ್ಲಿ ಮುಗಿಲು ಮುಟ್ಟಿದ ಹರ್ಷೋದ್ಘಾರ
Indian cricket Team: ಟಿ20 ವಿಶ್ವಕಪ್ 2024 ಗೆದ್ದು ಚಾಂಪಿಯನ್ ಆದ 5 ದಿನಗಳ ನಂತರ ಟೀಮ್ ಇಂಡಿಯಾ ಆಟಗಾರರು ತಾಯ್ನಾಡಿಗೆ ಆಗಮಿಸಿದ್ದಾರೆ. ವಿಶೇಷ ವಿಮಾನದ ಮೂಲಕ ದೆಹಲಿ ತಲುಪಿದ್ದಾರೆ.
ಐಸಿಸಿ ಟಿ20 ವಿಶ್ವಕಪ್ 2024ರ ಜಯಿಸಿದ ನಂತರ ಇದೇ ಮೊದಲ ಬಾರಿಗೆ ತವರಿಗೆ ಆಗಮಿಸಿದ ಭಾರತ ತಂಡದ ಆಟಗಾರರಿಗೆ (Indian cricket Players) ಭರ್ಜರಿ ಸ್ವಾಗತ ಸಿಕ್ಕಿದೆ. ಬಾರ್ಬಡೋಸ್ನಿಂದ ವಿಶೇಷ ವಿಮಾನದ ಮೂಲಕ ಇಂದು (ಜುಲೈ 4ರ ಗುರುವಾರ) ಮುಂಜಾನೆ ದೆಹಲಿಯ ವಿಮಾನ ನಿಲ್ದಾಣಕ್ಕೆ ವಿಶ್ವಕಪ್ ಟ್ರೋಫಿಯೊಂದಿಗೆ ಬಂದಿಳಿದ ಭಾರತ ತಂಡದ ಪರ ಅಭಿಮಾನಿಗಳ ಘೋಷಣೆ ಮುಗಿ ಮುಟ್ಟಿತು.
ಆಟಗಾರರು, ಕೋಚಿಂಗ್ ಸಿಬ್ಬಂದಿ, ಮತ್ತವರ ಕುಟುಂಬ ಸದಸ್ಯರು ದ್ವೀಪರಾಷ್ಟ್ರಕ್ಕೆ ಅಪ್ಪಳಿಸಿದ್ದ ಬೆರಿಲ್ ಚಂಡಮಾರುತದ ಕಾರಣ ಬಾರ್ಬಡೋಸ್ನಲ್ಲೇ ಸಿಲುಕಿದ್ದ ಭಾರತ ತಂಡದ ಆಟಗಾರರು 3 ದಿನಗಳ ನಂತರ ತಾಯ್ನಾಡಿಗೆ ಬಂದಿಳಿದಿದ್ದಾರೆ. ಬಾರ್ಬಡೋಸ್ ಮೂಲಕ ಹಾದುಹೋದ ಚಂಡಮಾರುತ ಬ್ರಿಡ್ಜ್ಟೌನ್ನ ಗ್ರಾಂಟ್ಲಿ ಆಡಮ್ಸ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ಮೂರು ದಿನಗಳವರೆಗೆ ಮುಚ್ಚಲಾಗಿತ್ತು.
ಭಾರತೀಯ ಕ್ರಿಕೆಟ್ ನಿಯಂತ್ರಣ ಮಂಡಳಿ ಕಾರ್ಯದರ್ಶಿ ಜಯ್ ಶಾ ಆಯೋಜಿಸಿದ್ದ ಈ ವಿಮಾನವು ಜುಲೈ 2 ರಂದು ಹೊರಟು ಗುರುವಾರ ಬೆಳಿಗ್ಗೆ 6 ಗಂಟೆಗೆ ದೆಹಲಿಗೆ ತಲುಪಿತು. ಆಟಗಾರರು, ಕೋಚ್ಗಳ ಜೊತೆಗೆ ಮಂಡಳಿಯ ಅಧಿಕಾರಿಗಳು, ಪಂದ್ಯಾವಳಿಯ ಮಾಧ್ಯಮ ತಂಡದ ಸದಸ್ಯರು ಸಹ ವಿಮಾನದಲ್ಲಿದ್ದರು. ಆಟಗಾರರು ವಿಮಾನ ನಿಲ್ದಾಣಗಳಲ್ಲಿ ಇಳಿದ ಕ್ಷಣ, ಅಭಿಮಾನಿಗಳು 'ಇಂಡಿಯಾ ಇಂಡಿಯಾ' ಎಂದು ಘೋಷಣೆ ಕೂಗಿದರು. ದೆಹಲಿ ಏರ್ಪೋರ್ಟ್ಗೆ ಬಂದಿಳಿದ ಭಾರತ ತಂಡವು ನೇರವಾಗಿ ಐಟಿಸಿ ಮೌರ್ಯ ಹೋಟೆಲ್ಗೆ ಆಗಮಿಸಿತು.
ಐಟಿಸಿ ಮೌರ್ಯ ಹೋಟೆಲ್ ತಲುಪಿದ ಭಾರತ ತಂಡವು ತದನಂತರ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲಿದ್ದು, ಗೆಲುವಿನ ವಿಶ್ಲೇಷಣೆ ಮಾಡಲಿದೆ. ಅದಕ್ಕೂ ಮೊದಲು ಟಿ20 ವಿಶ್ವಕಪ್ ಟ್ರೋಫಿ ಒಳಗೊಂಡ ವಿಶೇಷ ಕೇಕ್ ಅನ್ನು ಹೋಟೆಲ್ನಲ್ಲಿ ಕತ್ತರಿಸಿ ವಿಜಯೋತ್ಸವ ಆಚರಿಸಲಾಗುವುದು. ಇದೆಲ್ಲದರ ನಂತರ ರೋಹಿತ್ ಪಡೆ, ಮುಂಬೈನ ಮರೀನ್ ಡ್ರೈವ್ ಮತ್ತು ಅಪ್ರತಿಮ ವಾಂಖೆಡೆ ಕ್ರೀಡಾಂಗಣದಲ್ಲಿ ಸಂಜೆ 5 ಗಂಟೆಗೆ ತೆರೆದ ಬಸ್ನಲ್ಲಿ ರೋಡ್ಶೋ ಮಾಡಲಾಗುತ್ತದೆ.
ರೋಹಿತ್ ಸೇರಿದಂತೆ ಆಟಗಾರರು ಮಸ್ತ್ ಡ್ಯಾನ್ಸ್
ದೆಹಲಿ ಏರ್ಪೋರ್ಟ್ನಿಂದ ಐಟಿಸಿ ಮೌರ್ಯ ಹೋಟೆಲ್ ತಲುಪಿದ ಆಟಗಾರರಿಗೆ ಭರ್ಜರಿ ಸ್ವಾಗತ ಸಿಕ್ಕಿತು. ಹೋಟೆಲ್ ಮುಂಭಾಗ, ಆಟಗಾರರನ್ನು ಸಾಂಪ್ರದಾಯಿಕವಾಗಿ ಬರಮಾಡಿಕೊಳ್ಳಲಾಯಿತು. ಈ ವೇಳೆ ನಾಯಕ ರೋಹಿತ್ ಶರ್ಮಾ ಸ್ಮೂತ್ ಡ್ಯಾನ್ಸ್ ಮೂಲಕ ಗಮನ ಸೆಳೆದಿದ್ದಾರೆ. ರಿಷಭ್ ಪಂತ್, ಮೊಹಮ್ಮದ್ ಸಿರಾಜ್ ಕೂಡ ಹೆಜ್ಜೆ ಹಾಕಿದ್ದಾರೆ.
ಜೂನ್ 29ರಂದು ಶನಿವಾರ ನಡೆದ ಫೈನಲ್ ಪಂದ್ಯದಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು 7 ರನ್ಗಳಿಂದ ಸೋಲಿಸುವ ಮೂಲಕ ಭಾರತ 11 ವರ್ಷಗಳ ಐಸಿಸಿ ಟ್ರೋಫಿ ಬರವನ್ನು ಕೊನೆಗೊಳಿಸಿತು. ವಿರಾಟ್ ಕೊಹ್ಲಿ ಅವರ 76 ರನ್ಗಳ ನೆರವಿನಿಂದ ಟೀಮ್ ಇಂಡಿಯಾ 7 ವಿಕೆಟ್ ನಷ್ಟಕ್ಕೆ 176 ರನ್ ಗಳಿಸಿದರೆ, ಹಾರ್ದಿಕ್ ಪಾಂಡ್ಯ ಮತ್ತು ಜಸ್ಪ್ರೀತ್ ಬುಮ್ರಾ ಅವರ ಭರ್ಜರಿ ಬೌಲಿಂಗ್ ಸಹಾಯದಿಂದ ಸೌತ್ ಆಫ್ರಿಕಾ 8 ವಿಕೆಟ್ ನಷ್ಟಕ್ಕೆ 169 ರನ್ ಗಳಿಸಿತು.
ಟೂರ್ನಿಯುದ್ದಕ್ಕೂ 4.17 ಎಕಾನಮಿ ರೇಟ್ನಲ್ಲಿ 15 ವಿಕೆಟ್ಗಳನ್ನು ಪಡೆದ ಬುಮ್ರಾ 'ಪ್ಲೇಯರ್ ಆಫ್ ದಿ ಟೂರ್ನಮೆಂಟ್' ಗೌರವಕ್ಕೆ ಪಾತ್ರರಾದರು. ವಿರಾಟ್ ಕೊಹ್ಲಿ ಅವರಿಗೆ ಪಂದ್ಯಶ್ರೇಷ್ಠ ದೊರೆಯಿತು. ಪಂದ್ಯದ ನಂತರ ರೋಹಿತ್ ಶರ್ಮಾ, ವಿರಾಟ್ ಮತ್ತು ರವೀಂದ್ರ ಜಡೇಜಾ ಅವರು ಟಿ20ಐ ಕ್ರಿಕೆಟ್ಗೆ ವಿದಾಯ ಘೋಷಿಸಿದ್ದಾರೆ. ರೋಹಿತ್ ನಾಯಕತ್ವದ ಸ್ಥಾನವನ್ನು ಹಾರ್ದಿಕ್ ಪಾಂಡ್ಯ ತುಂಬುವುದು ಬಹುತೇಕ ಖಚಿತ ಎಂದು ಹೇಳಲಾಗುತ್ತಿದೆ.