ಐಪಿಎಲ್‌ನಲ್ಲಿ 4ನೇ ಅತಿ ವೇಗದ ಶತಕ ಸಿಡಿಸಿದ ಟ್ರಾವಿಸ್ ಹೆಡ್; ಆರ್‌ಸಿಬಿ ಬೌಲರ್‌ಗಳ ಬೆವರಿಳಿಸಿದ ಎಸ್‌ಆರ್‌ಎಚ್ ಆಟಗಾರ
ಆರ್‌ಸಿಬಿ ವಿರುದ್ಧ ಎಸ್‌ಆರ್‌ಎಚ್ ಬ್ಯಾಟರ್ ಟ್ರಾವಿಸ್ ಹೆಡ್ ಸ್ಫೋಟಕ ಶತಕ ಸಿಡಿಸಿದ್ದಾರೆ. ಇದು ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ಅತಿ ವೇಗದ ಶತಕವಾಗಿದೆ.
ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ (Royal Challengers Bengaluru vs Sunrisers Hyderabad) ಅಬ್ಬರಿಸಿದೆ. ಬೆಂಗಳೂರಿನ ಚಿನ್ನಸ್ವಾಮಿ ಮೈದಾನದಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ಎಸ್‌ಆರ್‌ಎಚ್ ಆರಂಭಿಕ ಆಟಗಾರ ಟ್ರಾವಿಸ್ ಹೆಡ್ ಸ್ಫೋಟಕ ಶತಕ ಸಿಡಿಸಿ ಮಿಂಚಿದ್ದಾರೆ. ಟಾಸ್ ಸೋತು ಬ್ಯಾಟಿಂಗ್ ನಡೆಸಿದ ತಂಡವು, ಆರಂಭದಿಂದಲೇ ಸ್ಫೋಟಕ ಆಟಕ್ಕೆ ಕೈ ಹಾಕಿತು. ಅಭಿಷೇಕ್ ಶರ್ಮಾ ಔಟಾದ ಬಳಿಕವೂ ಸಿಡಿದ ಹೆಡ್, ಐಪಿಎಲ್ ಇತಿಹಾಸದಲ್ಲೇ ನಾಲ್ಕನೇ ವೇಗದ ಶತಕ ಸಿಡಿಸಿ ಮಿಂಚಿದರು.
ಐಪಿಎಲ್ 2024ರಲ್ಲಿ ಅದ್ಭುತ ಫಾರ್ಮ್ ಮುಂದುವರೆಸಿರುವ ಆರಂಭಿಕ ಆಟಗಾರ, ಬೆಂಗಳೂರು ಬೌಲರ್‌ಗಳನ್ನು ಹಿಗ್ಗಾಮುಗ್ಗ ದಂಡಿಸಿದರು. ಆಕರ್ಷಕ ಶತಕದೊಂದಿಗೆ ಎಸ್ಆರ್‌ಎಚ್ ಕೇವಲ 13 ಓವರ್‌ಗಳಲ್ಲಿ 171 ರನ್ ಗಳಿಸಲು ನೆರವಾದರು.
ಕೇವಲ 39 ಎಸೆತಗಳಲ್ಲಿ ಹೆಡ್ ಶತಕ ಪೂರೈಸಿದರು. ಇದು ಐಪಿಎಲ್ ಇತಿಹಾಸದ ನಾಲ್ಕನೇ ವೇಗದ ಶತಕ. ಪಂದ್ಯದಲ್ಲಿ ಒಟ್ಟು 41 ಎಸೆತಗಳನ್ನು ಎದುರಿಸಿದ ಅವರು, 9 ಬೌಂಡರಿ ಹಾಗೂ 8 ಸ್ಫೋಟಕ ಸಿಕ್ಸರ್ ಸಹಿತ 102 ರನ್ ಗಳಿಸಿ ಔಟಾದರು.
ಐಪಿಎಲ್‌ನಲ್ಲಿ ವೇಗವಾಗಿ ಶತಕ ಸಿಡಿಸಿದ ಆಟಗಾರರು
- ಕ್ರಿಸ್ ಗೇಲ್ (ಬೆಂಗಳೂರು 2013) -30 ಎಸೆತ
- ಯೂಸುಫ್ ಪಠಾಣ್ (ಮುಂಬೈ ಬಿಎಸ್ 2010) -37 ಎಸೆತ
- ಡೇವಿಡ್ ಮಿಲ್ಲರ್ (ಮೊಹಾಲಿ 2013) -38 ಎಸೆತ
- ಟ್ರಾವಿಸ್ ಹೆಡ್ (ಬೆಂಗಳೂರು 2024)-39 ಎಸೆತ
- ಆಡಂ ಗಿಲ್‌ಕ್ರಿಸ್ಟ್ (ಮುಂಬೈ ಡಿವೈಪಿ 2008) -42 ಎಸೆತ
(ಸುದ್ದಿ ಅಪ್ಡೇಟ್ ಆಗಲಿದೆ)