ತಿಂಗಳ ಬಳಿಕ ಬಹಿರಂಗವಾಗಿ ಕಾಣಿಸಿಕೊಂಡ ವಿರಾಟ್ ಕೊಹ್ಲಿ; ನೆಟ್ಟಿಗರ ಗಮನ ಸೆಳೆದ ಡ್ಯಾಡ್ ಬರಹದ ಟಿಶರ್ಟ್
ಮುಂಬೈ ಏರ್‌ಪೋರ್ಟ್‌ನಲ್ಲಿ ವಿರಾಟ್ ಕೊಹ್ಲಿ ಧರಿಸಿದ್ದ ಟಿಶರ್ಟ್ ಎಲ್ಲರ ಗಮನ ಸೆಳೆದಿದೆ. ಬಿಳಿ ಬಣ್ಣದ ಟಿಶರ್ಟ್‌ನ ಹಿಂಬದಿಯಲ್ಲಿ ಡ್ಯಾಡ್ ಎಂಬುದಾಗಿ ಇಂಗ್ಲಿಷ್‌ನಲ್ಲಿ ಬರೆಯಲಾಗಿದೆ. ಇತ್ತೀಚೆಗೆ ವಿರಾಟ್ ಎರಡನೇ ಮಗುವಿನ ತಂದೆಯಾಗಿದ್ದು, ಈ ದೃಶ್ಯ ಇಂಟರ್ನೆಟ್‌ನಲ್ಲಿಯೂ ಓಡಾಡುತ್ತಿದೆ.
ಸುಮಾರು ಒಂದು ತಿಂಗಳ ಅಂತರದ ಬಳಿಕ, ವಿರಾಟ್ ಕೊಹ್ಲಿ ಭಾರತಕ್ಕೆ ಮರಳಿದ್ದಾರೆ. ಎರಡನೇ ಮಗು ಅಕಾಯ್ ಜನನ ಹಿನ್ನೆಲೆಯಲ್ಲಿ ಪತ್ನಿ ಅನುಷ್ಕಾ ಶರ್ಮಾ ಜೊತೆಗೆ ಲಂಡನ್‌ನಲ್ಲಿದ್ದ ವಿರಾಟ್, ಭಾನುವಾರ(ಮಾರ್ಚ್ 17)ವಷ್ಟೇ ಮತ್ತೆ ತವರಿಗೆ ಬಂದಿದ್ದಾರೆ. ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡ ಅವರು, ಮನೆಗೆ ಮರಳಿದ್ದಾರೆ. ಫೆಬ್ರವರಿ 15ರಂದು ವಿರುಷ್ಕ ದಂಪತಿ ತಮ್ಮ ಎರಡನೇ ಮಗುವಿಗೆ ತಂದೆ-ತಾಯಿಯಾಗಿದ್ದಾರೆ. ಈ ಖುಷಿಯನ್ನು ಅಭಿಮಾನಿಗಳೊಂದಿಗೆ ಅವರು ತಡವಾಗಿ ಹಂಚಿಕೊಂಡರು. ಮಗು ಹುಟ್ಟಿದ ಬಳಿಕ ಇದೇ ಮೊದಲ ಬಾರಿಗೆ ವಿರಾಟ್ ಸಾರ್ವಜನಿಕವಾಗಿ ಕಾಣಿಸಿಕೊಂಡಿದ್ದಾರೆ. ಆದರೆ, ಅವರ ಜೊತೆಗೆ ಅನುಷ್ಕಾ ಶರ್ಮಾ ಕಾಣಿಸಿಕೊಂಡಿಲ್ಲ.
ಮುಂಬೈ ಬಂದ ವಿರಾಟ್ ಕೊಹ್ಲಿ, ಭಾನುವಾರ ರಾತ್ರಿ ಮತ್ತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದಾರೆ. ಮುಂದೆ ಐಪಿಎಲ್ ಆರಂಭವಾಗುತ್ತಿದ್ದು, ಆರ್‌ಸಿಬಿ ತಂಡ ಸೇರಿಕೊಳ್ಳುವ ಸಲುವಾಗಿ ಕೊಹ್ಲಿ ವಿಮಾನ ನಿಲ್ದಾಣಕ್ಕೆ ಬಂದಿದ್ದರು. ಅಲ್ಲಿಂದ ಬೆಂಗಳೂರಿಗೆ ಹೊರಟು ಬಂದಿದ್ದಾರೆ. ಬೆಂಗಳೂರಿನಲ್ಲಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ್ದಾರೆ.
ಏರ್‌ಪೋರ್ಟ್‌ನಲ್ಲಿ ಎಲ್ಲರ ಗಮನ ಸೆಳೆದಿದ್ದು ವಿರಾಟ್ ಧರಿಸಿದ್ದ ಟಿಶರ್ಟ್. ಬಿಳಿ ಬಣ್ಣದ ಟಿಶರ್ಟ್‌ನಲ್ಲಿ ಹಿಂಬದಿಯಲ್ಲಿ ಬರೆದಿದ್ದ ಬರವಣಿಗೆ ಅಭಿಮಾನಿಗಳ ಗಮನ ಸೆಳೆದಿದೆ. ಈ ದೃಶ್ಯ ಇಂಟರ್ನೆಟ್‌ನಲ್ಲಿಯೂ ಓಡಾಡುತ್ತಿದ್ದು, ನೆಟ್ಟಿಗರು ಕೂಡಾ ಗಮನಿಸಿದ್ದಾರೆ.
ಇದನ್ನೂ ಓದಿ | ಆರ್‌ಸಿಬಿ vs ಸಿಎಸ್‌ಕೆ ಐಪಿಎಲ್ ಉದ್ಘಾಟನಾ ಪಂದ್ಯದ ಟಿಕೆಟ್ ಬುಕಿಂಗ್ ಆರಂಭ; ಆನ್‌ಲೈನ್ ಕ್ಯೂ ಕಂಡು ಫ್ಯಾನ್ಸ್ ನಿರಾಶೆ
ವಿರಾಟ್ ಟಿಶರ್ಟ್‌ನಲ್ಲಿ ಡ್ಯಾಡ್ (Dad) ಎಂಬ ಬರಹವಿತ್ತು. ವರ್ಷಗಳ ಹಿಂದೆಯೇ ಮೊದಲನೆ ಮಗುವಿನ ತಂದೆಯಾಗಿದ್ದ ವಿರಾಟ್, ಫೆಬ್ರವರಿಯಲ್ಲಿ ಎರಡನೇ ಮಗುವಿನ ತಂದೆಯಾದರು. ಗಂಡು ಮಗು ಅಕಾಯ್ ಜನನದಿಂದ ದಂಪತಿ ಖುಷಿಯಾಗಿದ್ದಾರೆ. ಹೀಗಾಗಿ ವಿರಾಟ್ ಬಟ್ಟೆ ಮೇಲಿದ್ದ ಡ್ಯಾಡ್ ಬರಹ ನೆಟ್ಟಿಗರ ಗಮನ ಸೆಳೆದಿದೆ. ಇದೇ ವೇಳೆ, ವಿರಾಟ್ ಒಬ್ಬರೇ ಏರ್‌ಪೋರ್ಟ್‌ನಲ್ಲಿ ಕಣಿಸಿಕೊಂಡಿದ್ದು, ಅನುಷ್ಕಾ ಶರ್ಮಾ ಇನ್ನೂ ಭಾರತಕ್ಕೆ ಬಂದಿಲ್ಲ.
ವಿರಾಟ್ ಮತ್ತು ಅನುಷ್ಕಾ, ಹಲವಾರು ವರ್ಷಗಳ ಕಾಲ ಡೇಟಿಂಗ್ ನಡೆಸಿದ ಬಳಿಕ 2017ರಲ್ಲಿ ಮದುವೆಯಾದರು. ದಾಂಪತ್ಯ ಜೀವನಕ್ಕೆ ಕಾಲಿಟ್ಟ ನಾಲ್ಕು ವರ್ಷಗಳ ನಂತರ, ಅವರು ತಂದೆ-ತಾಯಿಯಾದರು. ಮೂರ ವರ್ಷಗಳ ಹಿಂದೆ ಮಗಳು ವಮಿಕಾ ಜನಿಸಿದ ಬಳಿಕ, 2024ರ ಫೆಬ್ರವರಿ 15ರಂದು ಅವರು ತಮ್ಮ ಎರಡನೇ ಮಗು ಅಕಾಯ್ ಸ್ವಾಗತಿಸಿದರು. ಇದರೊಂದಿಗೆ ದಂಪತಿಯ ಸಂತಸ ದುಪ್ಪಟ್ಟಾಗಿದೆ.
ಐಪಿಎಲ್ ಪಂದ್ಯಾವಳಿಯು ಮಾರ್ಚ್ 22 ರಿಂದ ಆರಂಭವಾಗಲಿದ್ದು, ಅದಕ್ಕೂ ಮುನ್ನ ಕೊಹ್ಲಿ ಶೀಘ್ರದಲ್ಲೇ ರಾಯಲ್ ಚಾಲೆಂಜರ್ಸ್ ಬೆಂಗಳೂರು ತರಬೇತಿ ಶಿಬಿರದಲ್ಲಿ ಭಾಗಿಯಾಗಿದ್ದಾರೆ. ಇಂದು ತಂಡದ ಸಹ ಆಟಗಾರರೊಂದಿಗೆ ಚಿನ್ನಸ್ವಾಮಿ ಮೈದಾನದಲ್ಲಿ ಅಭ್ಯಾಸ ಆರಂಭಿಸಿದ್ದಾರೆ. ಆರ್‌ಸಿಬಿ ತಂಡವು ಮಾರ್ಚ್ 22ರಂದು ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಸೆಣಸಲಿದೆ. ಅದಕ್ಕೂ ಮುನ್ನ ಆರ್‌ಸಿಬಿ ಫ್ರಾಂಚೈಸಿಯು ಆರ್‌ಸಿಬಿ ಅನ್‌ಬಾಕ್ಸ್ ಈವೆಂಟ್ ನಡೆಯುತ್ತಿದೆ. ಹತ್ತು ಹಲವು ಸರ್‌ಪ್ರೈಸ್ ನಿರೀಕ್ಷೆಯಿರುವ ಕಾರ್ಯಕ್ರಮದಲ್ಲಿ ವಿರಾಟ್ ಕೊಹ್ಲಿ ಭಾಗಿಯಾಗುವ ಸಾಧ್ಯತೆ ಇದೆ.
ವಿರಾಟ್ ಕೊಹ್ಲಿ ಹಿಂದೆ ಕೊನೆಯ ಬಾರಿಗೆ ಅಫ್ಘಾನಿಸ್ತಾನ ವಿರುದ್ಧ ಟಿ20 ಸರಣಿಯಲ್ಲಿ ಆಡಿದ್ದರು. ಆ ಬಳಿಕ ಜನವರಿ ತಿಂಗಳಿಂದ ಬಳಿಕ ಅವರು ಕ್ರಿಕೆಟ್ ಆಡಿಲ್ಲ. ಇದೀಗ ಆರ್‌ಸಿಬಿ ಕ್ಯಾಂಪ್ ಸೇರಿಕೊಂಡಿರುವ ಅವರು, ಐಪಿಎಲ್ ಮೂಲಕ ಆರ್‌ಸಿಬಿ ಪರ ನೇರವಾಗಿ ಕಣಕ್ಕಿಳಿಯುವ ಸಾಧ್ಯತೆ ಇದೆ.