ತಾಳ್ಮೆ ಕಳೆದುಕೊಂಡು 4ನೇ ಅಂಪೈರ್ ಜೊತೆ ವಾಗ್ವಾದ ನಡೆಸಿದ ರಿಕಿ ಪಾಂಟಿಂಗ್-ಸೌರವ್ ಗಂಗೂಲಿ, ವಿಡಿಯೋ ವೈರಲ್
Ricky Ponting and Ricky Ponting : ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಐಪಿಎಲ್ ಪಂದ್ಯದಲ್ಲಿ ಡಿಸಿ ಹೆಡ್ ಕೋಚ್ ರಿಕಿ ಪಾಂಟಿಂಗ್ ಅವರು ತಾಳ್ಮೆ ಕಳೆದುಕೊಂಡು ವಾಗ್ವಾದ ನಡೆಸಿದ್ದಾರೆ.
2024ರ ಐಪಿಎಲ್ನ 9ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವೆ ನಡೆಯಿತು. ಈ ಪಂದ್ಯದಲ್ಲಿ ರಾಜಸ್ಥಾನ್ ಭರ್ಜರಿ 12 ರನ್ಗಳ ಗೆಲುವು ಸಾಧಿಸಿತು. ಮತ್ತೊಂದೆಡೆ ರಿಷಭ್ ಪಂತ್ ಬಳಗ ಸತತ 2ನೇ ಸೋಲಿಗೆ ಶರಣಾಯಿತು. ಆದರೆ, ಜೈಪುರದ ಸವಾಯಿ ಮಾನ್ಸಿಂಗ್ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ಡೆಲ್ಲಿ ಕೋಚ್ ರಿಕಿ ಪಾಂಟಿಂಗ್, ತಂಡದ ನಿರ್ದೇಶಕ ಸೌರವ್ ಗಂಗೂಲಿ ಅವರು ತಾಳ್ಮೆ ಕಳೆದುಕೊಂಡು ಅಂಪೈರ್ ಜೊತೆ ವಾಗ್ದಾದ ನಡೆಸಿರುವ ಪ್ರಸಂಗ ನಡೆದಿದೆ.
ಆರ್ಆರ್ ತಂಡದ ಇಂಪ್ಯಾಕ್ಟ್ ಪ್ಲೇಯರ್ ವಿಚಾರಕ್ಕೆ ಸಂಬಂಧಿಸಿ ರಿಕಿ ಪಾಂಟಿಂಗ್ ಗೊಂದಲಕ್ಕೆ ಒಳಗಾಗಿದ್ದರು. ಆತಿಥೇಯ ತಂಡವು ಜೋಸ್ ಬಟ್ಲರ್, ಶಿಮ್ರಾನ್ ಹೆಟ್ಮೆಯರ್, ಟ್ರೆಂಟ್ ಬೋಲ್ಟ್ ಹೆಸರನ್ನು ಮಾತ್ರ ಪ್ಲೇಯಿಂಗ್ ಇಲೆವೆನ್ನಲ್ಲಿ ನೀಡಿದ್ದ ಕಾರಣ ಇಂಪ್ಯಾಕ್ಟ್ ಪ್ಲೇಯರ್ ಆಗಿ ವಿದೇಶಿ ಆಟಗಾರ ಕಣಕ್ಕಿಳಿಯುವ ಅವಕಾಶ ಇತ್ತು. ಅದರಂತೆ ವೇಗಿ ನಾಂಡ್ರೆ ಬರ್ಗರ್ ಇಂಪ್ಯಾಕ್ಟ್ ಪ್ಲೇಯರ್ ಹೆಸರು ಕೊಡಲಾಗಿತ್ತು. ಆದರೆ, ಫೀಲ್ಡಿಂಗ್ ವೇಳೆ ರೊವ್ಮನ್ ಪೊವೆಲ್ ಬಂದಿದ್ದು, ಗೊಂದಲ ಸೃಷ್ಟಿಸಿತು.
ಇಂಪ್ಯಾಕ್ಟ್ ಪ್ಲೇಯರ್ ಆಗಿ ನಾಂಡ್ರೆ ಬರ್ಗರ್ ಆಯ್ಕೆಯಾಗಿದ್ದರೂ ರೋವ್ಮನ್ ಪೊವೆಲ್ ಬಂದಿದ್ದೇಕೆ ಎಂದು ರಿಕಿ ಪಾಂಟಿಂಗ್ ನಾಲ್ಕನೇ ಅಂಪೈರ್ಗೆ ಪ್ರಶ್ನಿಸಿದ್ದಾರೆ. ಈ ವಾಗ್ವಾದದ ಕಾರಣದಿಂದ ಪಂದ್ಯ ಕೆಲಕಾಲ ಸ್ಥಗಿತವೂ ಆಯಿತು. ಒಟ್ಟು ಐವರು ವಿದೇಶಿ ಆಟಗಾರರು ಮೈದಾನಕ್ಕೆ ಬಂದ ಕಾರಣ ಗಂಗೂಲಿ ಮತ್ತು ಪಾಂಟಿಂಗ್ ಅಂಪೈರ್ಗೆ ಪ್ರಶ್ನಿಸಿದರು. ಈ ವೇಳೆ ಆರ್ಆರ್ ನಾಯಕ ಸಂಜು ಸ್ಯಾಮ್ಸನ್ ಮತ್ತು ಜೋಸ್ ಬಟ್ಲರ್ ಆನ್ಫೀಲ್ಡ್ ಅಂಪೈರ್ ಜೊತೆ ಚರ್ಚೆ ಕೂಡ ನಡೆಸುತ್ತಿದ್ದರು.
ಆದರೆ, ರಿಯಾನ್ ಪರಾಗ್ ಬದಲಿಗೆ ಪೊವೆಲ್ ಮೈದಾನಕ್ಕೆ ಫೀಲ್ಡಿಂಗ್ ನಡೆಸಲು ಬಂದಿದ್ದರು. ಹಾಗಾಗಿ ರಾಜಸ್ಥಾನ್ ಐವರು ವಿದೇಶಿ ಆಟಗಾರರನ್ನು ಕಣಕ್ಕಿಳಿಸಿದೆ ಎಂದು ಡೆಲ್ಲಿ ಕೋಚ್ ಭಾವಿಸಿ ಅಂಪೈರ್ ಜೊತೆ ತೀವ್ರ ವಾಗ್ವಾದಕ್ಕಿಳಿದ್ದರು. 4ನೇ ಅಂಪೈರ್ ಮದನಗೋಪಾಲ್ ಕುಪ್ಪುರಾಜ್ ಸಂದರ್ಭವನ್ನು ವಿವರಿಸಿ, ಮತ್ತೊಮ್ಮೆ ತಂಡದ ಆಟಗಾರರ ಪಟ್ಟಿ ಪಾಂಟಿಂಗ್ಗೆ ತೋರಿಸಿ ಸಮಾಧಾನಪಡಿಸಿದರು. ಬರ್ಗರ್ ಇಂಪ್ಯಾಕ್ಟ್ ಪ್ಲೇಯರ್, ಪೊವೆಲ್ ಅಲ್ಲ. ಪರಾಗ್ಗೆ ಬದಲಿಗೆ ವಿಂಡೀಸ್ ಆಟಗಾರ ಕಣಕ್ಕಿಳಿದಿದ್ದಾರೆ ಎಂದು ಸ್ಪಷ್ಟಪಡಿಸಿದ್ದಾರೆ.
ಐಪಿಎಲ್ ನಿಯಮ ಹೇಳುವುದೇನು?
ಐಪಿಎಲ್ ನಿಯಮಗಳ ಪ್ರಕಾರ 4 ವಿದೇಶಿ ಆಟಗಾರರು ಮಾತ್ರ ಪಂದ್ಯವೊಂದರಲ್ಲಿ ಕಣಕ್ಕಿಳಿಯಬಹುದು. ಪ್ಲೇಯಿಂಗ್ ಇಲೆವೆನ್ನಲ್ಲಿ ಮೂವರು ಫಾರಿನ್ ಪ್ಲೇಯರ್ಗಳನ್ನು ಕಣಕ್ಕಿಳಿಸಿದ್ದ ರಾಜಸ್ಥಾನ, ಬರ್ಗರ್‌ನನ್ನು ಇಂಪ್ಯಾಕ್ಟ್ ಆಟಗಾರನನ್ನಾಗಿ ಆಡಿಸಿತು. ಆದರೆ ಬದಲಿ ಸ್ಥಾನಕ್ಕಾಗಿ ಪೊವೆಲ್ ಮೈದಾನಕ್ಕೆ ಬಂದಿದ್ದರು. ಆಗ ಐವರು ವಿದೇಶಿ ಆಟಗಾರರು ಆಡಿದಂತಾಯಿತು.
ನಿಯಮ 1.2.6 ರ ಪ್ರಕಾರ, ಎಲ್ಲಾ 4 ವಿದೇಶಿ ಆಟಗಾರರನ್ನು ಇಲೆವೆನ್ನಲ್ಲಿ ಹೆಸರಿಸಿದ್ದರೆ, ವಿದೇಶಿ ಆಟಗಾರನು ಇನ್ನೊಬ್ಬರಿಗೆ ಬದಲಿಯಾಗಿ ಮಾತ್ರ ಕಣಕ್ಕೆ ಇಳಿಯಬಹುದು. ಸಾಕಷ್ಟು ಸಂಭಾಷಣೆಯ ನಂತರ, ಪಾಂಟಿಂಗ್, ಗಂಗೂಲಿ ಮತ್ತು ಡಿಸಿ ಆರ್ಆರ್ ತಂತ್ರಗಳಲ್ಲಿ ಯಾವುದೇ ತಪ್ಪಿಲ್ಲ ಎಂದು ಅರಿತುಕೊಂಡಿದ್ದರಿಂದ ಚರ್ಚೆಯನ್ನು ಕೊನೆಗೊಳಿಸಲಾಯಿತು.
ಪಂದ್ಯದ ಸಂಕ್ಷಿಪ್ತ ಸ್ಕೋರ್
ಮೊದಲು ಬ್ಯಾಟಿಂಗ್ ನಡೆಸಿದ ರಾಜಸ್ಥಾನ್ ರಾಯಲ್ ತಂಡವು ರಿಯಾನ್ ಪರಾಗ್ ಅವರ (84*) ಪರಾಕ್ರಮದಿಂದ 5 ವಿಕೆಟ್ ನಷ್ಟಕ್ಕೆ 185 ರನ್ ಕಲೆ ಹಾಕಿತು. ಆದರೆ 186 ರನ್ಗಳ ಗುರಿ ಹಿಂಬಾಲಿಸಿದ ಡೆಲ್ಲಿ 12 ರನ್ಗಳ ಅಂತರದಿಂದ ಸೋಲನುಭವಿಸಿತು. ಡೇವಿಡ್ ವಾರ್ನರ್ (49) ಮತ್ತು ಟ್ರಿಸ್ಟಾನ್ ಸ್ಟಬ್ಸ್ (44*) ಅವರ ಹೋರಾಟದ ನಡುವೆಯೂ ಸತತ ಎರಡನೇ ಸೋಲಿಗೆ ಡೆಲ್ಲಿ ಶರಣಾಯಿತು. ನಾಂಡ್ರೆ ಬರ್ಗರ್ ಮತ್ತು ಯುಜ್ವೇಂದ್ರ ಚಹಲ್ ಡೆಲ್ಲಿ ಓಟಕ್ಕೆ ಕಡಿವಾಣ ಹಾಕಿದರು.