ಕನ್ನಡ ಸುದ್ದಿ  /  Elections  /  Hassan News Hassan Witnessing Third Generation Leaders Fight In Lok Sabha Elections2024 Of Devegowda Gp Gowda Family Kub

Lok Sabha Elections2024:ಹಾಸನದ 2 ಕುಟುಂಬಗಳ ಮೂರನೇ ತಲೆಮಾರಿನ ಕುಡಿಗಳ ಚುನಾವಣೆ ಕದನ ಕುತೂಹಲ, ಯಾರ ನಡುವೆ ಸ್ಪರ್ಧೆ

Karnataka Politics ಹಾಸನ ಜಿಲ್ಲೆಯ ರಾಜಕಾರಣ ಮೂರು ಕುಟುಂಬಗಳ ನಡುವೆಯೇ ಕೇಂದ್ರೀಕೃತಗೊಂಡಿದೆ. ಅದರಲ್ಲೂ ಎರಡು ಕುಟುಂಬಗಳ ನಡುವೆ ಹಣಾಹಣಿ ಮೂರನೇ ತಲೆಮಾರಿಗೂ ವಿಸ್ತರಣೆಗೊಂಡಿದೆ. ಇಲ್ಲಿದೆ ಅದರ ಆಸಕ್ತಿದಾಯಕ ನೋಟ.

ಹಾಸನದ ಕುಟುಂಬಗಳ ರಾಜಕಾರಣ ಆಸಕ್ತಿದಾಯಕವಾಗಿದೆ.
ಹಾಸನದ ಕುಟುಂಬಗಳ ರಾಜಕಾರಣ ಆಸಕ್ತಿದಾಯಕವಾಗಿದೆ.

ಹಾಸನ: ಹಾಸನ ಜಿದ್ದಾಜಿದ್ದಿನ ರಾಜಕಾರಣಕ್ಕೆ ಹೆಸರಾದ ಕ್ಷೇತ್ರ. ಇಲ್ಲಿ ಪ್ರತಿ ನಡೆಯ ಹಿಂದೆ ರಾಜಕೀಯ ಇದ್ದೇ ಇರುತ್ತದೆ. ಅದರಲ್ಲೂ ಮಾಜಿ ಪ್ರಧಾನಿ ದೇವೇಗೌಡರ ಕಾರಣಕ್ಕೆ ಹಾಸನಕ್ಕೆ ರಾಜಕೀಯ ನಂಟು ಇನ್ನೂ ಗಟ್ಟಿಯೇ ಆಗಿದೆ. ದೇವೇಗೌಡರೊಂದಿಗೆ ರಾಜಕಾರಣ ಮಾಡಿಕೊಂಡು ಬಂದವರು, ಆನಂತರ ಅವರ ಕುಟುಂಬದ ಮುಂದಿನ ತಲೆಮಾರಿನವರೂ ರಾಜಕೀಯದಲ್ಲಿಯೇ ನೆಲೆಗೊಂಡು ಈ ಲೋಕಸಭೆ ಚುನಾವಣೆ ಮಹತ್ವವನ್ನೇ ಮೂರನೇ ತಲೆಮಾರಿನ ಕುಡಿಗಳ ಜಿದ್ದಾಜಿದ್ದಿನ ಕಣದಿಂದಾಗಿ ಗಮನ ಸಳೆದಿದೆ.

ಎಚ್‌ಡಿ, ಜಿಪಿಪಿ, ಎಚ್‌ಸಿಎಸ್‌..

ಹಾಸನದಲ್ಲಿ ಮಾಜಿ ಪ್ರಧಾನಿ ದೇವೇಗೌಡ ಅವರೊಂದಿಗೆ ರಾಜಕಾರಣ ಮಾಡಿಕೊಂಡು ಬಂದವರು ಜಿ.ಪುಟ್ಟಸ್ವಾಮಿಗೌಡ ಹಾಗೂ ಎಚ್‌.ಸಿ.ಶ್ರೀಕಂಠಯ್ಯ ಅವರು. ದೇವೇಗೌಡರು ಮೊದಲಿನಿಂದಲೂ ಜನತಾಪಕ್ಷ, ಜನತಾದಳ, ಜಾತ್ಯತೀತ ಜನತಾದಳದ ಮೂಲಕ ರಾಜಕಾರಣ ಮಾಡಿಕೊಂಡವರು. ಬೀಗರಾಗಿದ್ದ ಪುಟ್ಟಸ್ವಾಮಿಗೌಡ ಹಾಗೂ ಶ್ರೀಕಂಠಯ್ಯ ಅವರು ಜಿದ್ದಾಜಿದ್ದಿನ ರಾಜಕಾರಣ ಮಾಡಿಕೊಂಡು ಬಂದವರು. ಪುಟ್ಟಸ್ವಾಮಿಗೌಡರು ಹೊಳೆ ನರಸೀಪುರದಲ್ಲಿ ಹಾಗೂ ಶ್ರೀಕಂಠಯ್ಯ ಅವರು ಚನ್ನರಾಯಪಟ್ಟಣ ತಾಲ್ಲೂಕಿನಲ್ಲಿ ರಾಜಕಾರಣದ ಮೂಲಕ ಗಮನ ಸೆಳೆದವರು. ಖಡಕ್‌ ಮಾತಿಗೂ ಹೆಸರಾದವರು. ಮೂವರೂ ವಿಧಾನಸಭೆ ಸದಸ್ಯರಾಗಿದ್ದವರು. ಲೋಕಸಭೆ ಸದಸ್ಯರಾದವರು. ದೇವೇಗೌಡರು ಹಾಸನದಿಂದ ಐದು ಬಾರಿ ಸಂಸದರಾದರೆ, ಶ್ರೀಕಂಠಯ್ಯ ಹಾಗೂ ಪುಟ್ಟಸ್ವಾಮಿಗೌಡರು ತಲಾ ಒಂದೊಂದು ಬಾರಿ ಗೆದ್ದವರು. ಹೊಳೆ ನರಸೀಪುರ ವಿಧಾನಸಭೆ ಚುನಾವಣೆಯಲ್ಲಿ ದೇವೇಗೌಡರು ಹಾಗೂ ಪುಟ್ಟಸ್ವಾಮಿಗೌಡರ ಜಿದ್ದಾಜಿದ್ದಿ ಜೋರು. ಇಬ್ಬರು ಸೋಲು ಗೆಲುವಿನ ರುಚಿ ಕಂಡವರು. ಸಚಿವರಾಗಿ ಕೆಲಸ ಮಾಡಿದವರು. ದೇವೇಗೌಡರ ರಾಜಕಾರಣಕ್ಕೆ ಪುಟ್ಟಸ್ವಾಮಿಗೌಡರು ಅದೇ ರೀತಿ ಪ್ರತ್ಯುತ್ತರ ನೀಡಿದವರು.

ರೇವಣ್ಣ, ಅನುಪಮಾ ಸ್ಪರ್ಧೆ

ದೇವೇಗೌಡರು ರಾಜ್ಯ ಕಾರಣದಿಂದ ದೂರವಾಗಿ ಕೇಂದ್ರದ ರಾಜಕಾರಣಕ್ಕೆ ತೆರಳಿದರು. ಇದೇ ವೇಳೆ ಹೊಳೆ ನರಸೀಪುರ ಕ್ಷೇತ್ರವನ್ನು ತಮ್ಮ ಪುತ್ರ ಎಚ್‌.ಡಿ.ರೇವಣ್ಣಗೆ ಬಿಟ್ಟುಕೊಟ್ಟರು. ಇದಾದ ನಂತರ ಒಂದು ಬಾರಿ ರೇವಣ್ಣ ಇಲ್ಲಿ ಸೋತಿದ್ದು ಬಿಟ್ಟರೆ ಆರನೇ ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ಧಾರೆ. ಇಲ್ಲಿ ಪುಟ್ಟಸ್ವಾಮಿಗೌಡರು ಗೆದ್ದ ನಂತರ ಕಾಂಗ್ರೆಸ್‌ನಿಂದ ಗೆದ್ದಿದ್ದ ದೊಡ್ಡೇಗೌಡರು. ರೇವಣ್ಣ ಅವರ ವಿರುದ್ದ ಎರಡು ಬಾರಿ ವಿಧಾನಸಭೆ ಚುನಾವಣೆಗೆ ಕಣಕ್ಕೆ ಇಳಿದವರು ಪುಟ್ಟಸ್ವಾಮಿಗೌಡರ ಸೊಸೆ ಅನುಪಮಾ ಮಹೇಶ್‌. ಆದರೂ ರೇವಣ್ಣ ವಿರುದ್ದ ಅನುಪಮಾ ಸ್ಪರ್ಧೆ ನೀಡಿದರೂ ಗೆಲ್ಲಲು ಆಗಲಿಲ್ಲ. ಕಾಂಗ್ರೆಸ್‌ನಿಂದ ಅನುಪಮಾ ಕಣಕ್ಕಿಳಿದು ಕ್ಷೇತ್ರದಲ್ಲಿ ಈಗಲೂ ಕಾಂಗ್ರೆಸ್‌ ಬಲ ಇದೆ ಎನ್ನುವುದನ್ನು ತೋರಿಸಿಕೊಟ್ಟಿದ್ದಾರೆ.

ಪ್ರಜ್ವಲ್‌, ಶ್ರೇಯಸ್‌ ಹಣಾಹಣಿ

ಈಗ ಇದೇ ಕುಟುಂಬಗಳ ಮೂರನೇ ತಲೆಮಾರಿನ ಸ್ಪರ್ಧೆ ಈಗ. ಪುಟ್ಟಸ್ವಾಮಿಗೌಡ ಅವರ ಮೊಮ್ಮಗ, ಅನುಪಮಾ ಮಹೇಶ್‌ ಅವರ ಪುತ್ರ ಶ್ರೇಯಸ್‌ ಪಟೇಲ್‌ ಈ ಕುಟುಂಬದ ಮೂರನೇ ತಲೆಮಾರಿನ ಕುಡಿ. ಇತ್ತ ದೇವೇಗೌಡರ ಮೊಮ್ಮಗ, ರೇವಣ್ಣರ ಪುತ್ರ ಪ್ರಜ್ವಲ್‌ ರೇವಣ್ಣ ಈಗಾಗಲೇ ತಾತ ಪ್ರತಿನಿಧಿಸುತ್ತಿದ್ದ ಕ್ಷೇತ್ರ ಹಾಸನದಿಂದ ಒಂದು ಬಾರಿ ಸಂಸದರೂ ಆಗಿದ್ದಾರೆ. ಕಳೆದ ವರ್ಷದ ನಡೆದಿದ್ದ ವಿಧಾನಸಭೆ ಚುನಾವಣೆಯಲ್ಲಿ ಶ್ರೇಯಸ್‌ ಪಟೇಲ್‌ ಕಣಕ್ಕಿಳಿದಿದ್ದು ರೇವಣ್ಣರ ವಿರುದ್ದ. ತೀವ್ರ ಹಣಾಹಣಿ ಏರ್ಪಟ್ಟ ಈ ಕ್ಷೇತ್ರದಲ್ಲಿ ಶ್ರೇಯಸ್‌ ಈ ಬಾರಿ ರೇವಣ್ಣ ಬೆವರು ಇಳಿಯುವಂತೆ ಮಾಡಿದ್ದರು. ಮೂರು ಸಾವಿರ ಮತಗಳ ಅಂತರದಲ್ಲಿ ಶ್ರೇಯಸ್‌ ಸೋತರು. ಆದರೂ ಗಮನ ಸೆಳೆದರು. ಈ ಕಾರಣದಿಂದಲೇ ಶ್ರೇಯಸ್‌ ಅವರಿಗೆ ಲೋಕಸಭೆ ಟಿಕೆಟ್‌ ಅನ್ನು ಮೊದಲ ಪಟ್ಟಿಯಲ್ಲಿಯೇ ಕಾಂಗ್ರೆಸ್‌ ಪ್ರಕಟಿಸಿದೆ. ಜೆಡಿಎಸ್‌ ಹಾಗೂ ಬಿಜೆಪಿ ಸಮ್ಮಿಶ್ರ ಅಭ್ಯರ್ಥಿಯಾಗಿ ಪ್ವಜ್ವಲ್‌ ರೇವಣ್ಣ ಎರಡನೇ ಬಾರಿಗೆ ಸ್ಪರ್ಧಿಸುವುದು ಖಚಿತ. ಇದರಿಂದ ಶ್ರೇಯಸ್‌ ಹಾಗೂ ಪ್ರಜ್ವಲ್‌ ನಡುವೆ ಮೂರನೇ ತಲೆಮಾರಿನ ಸ್ಪರ್ಧೆ ಕುತೂಹಲವನ್ನು ಕೆರಳಿಸಿದೆ.

ಹಾಸನ ಜಿಲ್ಲೆಯ ರಾಜಕಾರಣದಲ್ಲಿ ದೇವೇಗೌಡ, ಪುಟ್ಟಸ್ವಾಮಿಗೌಡ ಹಾಗೂ ಶ್ರೀಕಂಠಯ್ಯ ಅವರ ಹೆಸರು ಗಟ್ಟಿಯಾಗಿಯೇ ಉಳಿದಿದೆ. ಆನಂತರ ರೇವಣ್ಣ ಕೂಡ ಜಿಲ್ಲೆಯಲ್ಲಿ ಪ್ರಬಲ ರಾಜಕಾರಣ ಮಾಡಿದವರೇ. ಪುಟ್ಟಸ್ವಾಮಿಗೌಡ ಹಾಗೂ ಶ್ರೀಕಂಠಯ್ಯ ಅವರು ದೇವೇಗೌಡರ ವಿರುದ್ದ ಪ್ರಬಲ ರಾಜಕಾರಣ ಮಾಡಿದವರೇ. ಪುಟ್ಟಸ್ವಾಮಿಗೌಡರ ಕುಟುಂಬದವರು ಪೈಪೋಟಿ ನೀಡಿದ್ದರೂ ಒಮ್ಮೆಯೂ ಗೆಲ್ಲಲಾಗಿಲ್ಲ. ಶ್ರೀಕಂಠಯ್ಯ ಅವರ ಕುಟುಂಬದಲ್ಲೂ ವಿಜಯಕುಮಾರ್‌ ಜಿಲ್ಲಾಪಂಚಾಯಿತಿಗೆ ಬಂದರೂ ಆನಂತರ ರಾಜಕೀಯಕ್ಕೆ ಮೇಲೆ ಬರಲಾಗಲಿಲ್ಲ. ಈಗ ಈ ರಾಜಕಾರಣ ಮೂರನೇ ತಲೆಮಾರಿಗೂ ಪ್ರವೇಶಿಸಿದೆ. ಈ ಬಾರಿ ಚುನಾವಣೆ ಕಣ ಹೇಗಿರಲಿದೆಯೋ ನೋಡಬೇಕು ಎನ್ನುವುದು ರಾಜಕೀಯ ವಿಶ್ಲೇಷಕರ ನುಡಿ.