ಕನ್ನಡ ಸುದ್ದಿ  /  Elections  /  Lok Sabha Elections 2024 Karnataka Bjp List Announced Former Cm Bs Yadiyuruppa By Vijayayendra Hand Up Kub

Lok Sabha Elections2024: ಬಿಜೆಪಿ ಪಟ್ಟಿಯಲ್ಲಿ ಹಲವರಿಗೆ ಶಾಕ್‌, ಕೆಲವರಿಗೆ ಲಕ್‌, ಯಡಿಯೂರಪ್ಪ ಕೈ ಮೇಲಾಯ್ತ?

Karnataka Politics ಲೋಕಸಭೆ ಚುನಾವಣೆಗೆ ಬಿಡುಗಡೆ ಮಾಡಲಿರುವ ಬಿಜೆಪಿ ಪಟ್ಟಿಯಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಅವರ ಪುತ್ರ ಬಿ.ವೈ.ವಿಜಯೇಂದ್ರ ಅವರ ಕೈ ಮೇಲಾದಂತಿದೆ.

ಬಿಜೆಪಿ ಪಟ್ಟಿಯಲ್ಲಿ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್‌ ಕೊಡಿಸಿದ್ದಾರೆ.
ಬಿಜೆಪಿ ಪಟ್ಟಿಯಲ್ಲಿ ಯಡಿಯೂರಪ್ಪ ತಮ್ಮ ಬೆಂಬಲಿಗರಿಗೆ ಹೆಚ್ಚಿನ ಟಿಕೆಟ್‌ ಕೊಡಿಸಿದ್ದಾರೆ.

ಬೆಂಗಳೂರು: ಕೊನೆಗೂ ಅಳೆದೂ ತೂಗಿ ಬಿಜೆಪಿ ಲೋಕಸಭೆ ಚುನಾವಣೆಗೆ ಕರ್ನಾಟಕದ ಬಹುತೇಕ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಜೆಡಿಎಸ್‌ನ ಕ್ಷೇತ್ರಗಳು ಸೇರಿದಂತೆ ಬಿಜೆಪಿಯ ಐದು ಕ್ಷೇತ್ರ ಮಾತ್ರ ಬಾಕಿ ಉಳಿದಿವೆ. ಪ್ರಕಟಿಸಿರುವ 20 ಲೋಕಸಭಾ ಕ್ಷೇತ್ರಗಳಲ್ಲಿ ಬಹುತೇಕ ಕ್ಷೇತ್ರಗಳಿಗೆ ಮಾಜಿ ಸಿಎಂ ಯಡಿಯೂರಪ್ಪ- ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ,ವಿಜಯೇಂದ್ರ ಅವರ ಹೆಸರೇ ಹೆಚ್ಚು ಇದ್ದಂತಿದೆ. ಕಳೆದ ವಿಧಾನಸಭೆ ಚುನಾವಣೆಯಲ್ಲಿ ಯಡಿಯೂರಪ್ಪ ಅವರನ್ನು ಪಕ್ಕಕ್ಕಿಟ್ಟು ಬಿ.ಎಲ್‌.ಸಂತೋಷ್‌ ಮೂಲಕ ರಾಜಕಾರಣ ಮಾಡಲು ಹೋಗಿದ್ದ ವರಿಷ್ಠರು ಈ ಬಾರಿ ಅದಕ್ಕೆ ಅವಕಾಶ ನೀಡಿದಂತೆ ಕಾಣುತ್ತಿಲ್ಲ.

ಕೆಲವು ಸಂಸದರಿಗೆ ಕೊಕ್‌ ನೀಡಿದ್ದರೆ, ಇನ್ನೂ ಕೆಲವರು ಸಕ್ರಿಯವಾಗಿದ್ದರೂ ರಾಜಕಾರಣಕ್ಕೆ ಟಿಕೆಟ್‌ ಕಳೆದುಕೊಂಡಿದ್ದಾರೆ. ಕುಟುಂಬ ರಾಜಕಾರಣವೂ ಕೆಲಸ ಮಾಡಿದೆ.

 • ಕೊಪ್ಪಳದಲ್ಲಿ ಎರಡು ಬಾರಿ ಸಂಸದರಾಗಿದ್ದ ಕರಡಿ ಸಂಗಣ್ಣ ಎರಡು ಬಾರಿ ಕೊಪ್ಪಳ ವಿಧಾನಸಭೆ ಚುನಾವಣೆಯಲ್ಲಿ ಟಿಕೆಟ್‌ ಬೇರೆಯವರಿಗೆ ಕೊಟ್ಟರೂ ತಮ್ಮ ಕುಟುಂಬಕ್ಕೆ ಇಟ್ಟುಕೊಂಡಿದ್ದರು,. ಒಮ್ಮೆ ಮಗ,ಮತ್ತೊಮ್ಮೆ ಸೊಸೆಗೆ ಟಿಕೆಟ್‌ ಹಂಚಿದ್ದರು. ಇದು ಅವರಿಗೆ ಈ ಬಾರಿ ಚುನಾವಣೆಯಲ್ಲಿ ಕೈ ತಪ್ಪುವ ಮೂಲಕ ಹೊಡೆತ ಕೊಟ್ಟಿದೆ.
 • ಕಳೆದ ವಿಧಾನಸಭೆ ಚುನಾವಣೆಯಲ್ಲಿ ಜಗದೀಶ್‌ ಶೆಟ್ಟರ್‌, ಈಶ್ವರಪ್ಪ ಸಹಿತ ಹಲವರು ಹಿರಿಯರನ್ನು ತೆಗೆಯಲಾಗುತ್ತದೆ ಎಂದು ಹೇಳಿಕೆ ಕೊಟ್ಟು ವಿವಾದ ಸೃಷ್ಟಿಸಿದ್ದ ಆಗಿನ ಕರ್ನಾಟಕ ಬಿಜೆಪಿ ಅಧ್ಯಕ್ಷ, ಮಂಗಳೂರು ಸಂಸದ ನಳೀನ್‌ ಕುಮಾರ್‌ ಕಟೀಲು ಅವರಿಗೆ ಈ ಬಾರಿ ಟಿಕೆಟ್‌ ತಪ್ಪಿದೆ.
 • ಚಾಮರಾಜನಗರ ಸಂಸದ ವಿ.ಶ್ರೀನಿವಾಸಪ್ರಸಾದ್‌ ಚುನಾವಣೆಗೆ ಸ್ಪರ್ಧಿಸುವುದಿಲ್ಲ ಎಂದು ಹೇಳುತ್ತಲೇ ತಮ್ಮ ಅಳಿಯ ಡಾ.ಮೋಹನ್‌ ಪರವಾಗಿದ್ದರು. ಆದರೆ ಅವರಿಗೆ ವರಿಷ್ಠರು ಅವಕಾಶ ನೀಡದೇ ಮಾಜಿ ಶಾಸಕ ಎಸ್.ಬಾಲರಾಜುಗೆ ಮಣೆ ಹಾಕಿದ್ಧಾರೆ.
 • ದಾವಣಗೆರೆಯಲ್ಲಿ ಸಂಸದ ಜಿ.ಎಂ.ಸಿದ್ದೇಶ್ವರ್‌ ಅವರಿಗೆ ವಿರೋಧ ಇದ್ದುದರಿಂದ ಅವರ ಬದಲಿಗೆ ಪತ್ನಿ ಗಾಯತ್ರಿ ಸಿದ್ದೇಶ್ವರ್‌ಗೆ ಅವಕಾಶ ನೀಡಿದ್ಧಾರೆ. ಈ ಮೂಲಕ ಕುಟುಂಬ ರಾಜಕಾರಣಕ್ಕೆ ಒತ್ತು ನೀಡಿರುವುದು ಕಂಡು ಬಂದಿದೆ.
 • ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ ಎರಡು ಬಾರಿ ಗೆದ್ದು ಕೇಂದ್ರದಲ್ಲಿ ಸಚಿವೆಯೂ ಆಗಿರುವ ಶೋಭಾ ಕರಂದ್ಲಾಜೆ ಅವರಿಗೆ ಟಿಕೆಟ್‌ ಸಿಕ್ಕರೂ ಕ್ಷೇತ್ರ ಬದಲಾಗಿದೆ. ಕಳೆದ ವರ್ಷ ತಮಗೆ ರಾಜ್ಯ ಅಧ್ಯಕ್ಷ ಸ್ಥಾನ ಅವಕಾಶ ಬಂದರೂ ಅದನ್ನು ನಿರಾಕರಿಸಿ ವಿಜಯೇಂದ್ರ ಅವರ ಹೆಸರನ್ನು ಹೇಳಿದ್ದಕ್ಕೆ ಯಡಿಯೂರಪ್ಪ ಅವರು ಶೋಭಾ ಅವರ ಕೈ ಹಿಡಿದಿದ್ದಾರೆ.
 • ಬಾಗಲಕೋಟೆ ಹಾಗೂ ವಿಜಯಪುರದಿಂದ ವಯಸ್ಸಾಗಿರುವ ಗದ್ದಿಗೌಡರ್‌ ಹಾಗೂ ರಮೇಶ ಜಿಗಜಿಣಗಿ ಅವರಿಗೆ ಟಿಕೆಟ್‌ ಕೈ ತಪ್ಪುವ ಆತಂಕವಿತ್ತು. ಇಬ್ಬರೂ ಮತ್ತೊಮ್ಮೆ ಟಿಕೆಟ್‌ ತಂದಿದ್ದಾರೆ.
 • ವಿಧಾನಸಭೆ ಚುನಾವಣೆಯಲ್ಲಿ ವರುಣಾ ಹಾಗೂ ಚಾಮರಾಜನಗರದಲ್ಲಿ ಸೋತು ಪಕ್ಷ ಬಿಡುವ ಸೂಚನೆ ನೀಡಿದ್ದ ಮಾಜಿ ಸಚಿವ ವಿ.ಸೋಮಣ್ಣ ಅವರಿಗೆ ನಿರೀಕ್ಷೆಯಂತೆಯೇ ಟಿಕೆಟ್‌ ದೊರಕಿದೆ.
 • ಕಳೆದ ವಿಧಾನಸಭೆ ಚುನಾವಣೆಯಲ್ಲಿಯೇ ಶಿವಮೊಗ್ಗ ಟಿಕೆಟ್‌ ಕೈ ತಪ್ಪಿ ಈ ಬಾರಿ ಮಗನಿಗೆ ಹಾವೇರಿ ಕ್ಷೇತ್ರದಿಂದ ಟಿಕೆಟ್‌ ಕೇಳುತ್ತಿದ್ದ ಕೆ.ಎಸ್‌.ಈಶ್ವರಪ್ಪ ಅವರಿಗೆ ಎರಡನೇ ಬಾರಿ ಶಾಕ್‌ ಆಗಿದೆ. ವರಿಷ್ಠರು ಕೆ.ಇ. ಕಾಂತೇಶ್‌ಗೆ ಅವಕಾಶ ಮಾಡಿಕೊಟ್ಟಿಲ್ಲ.
 • ಶಿವಮೊಗ್ಗದಲ್ಲಿ ಈಗಾಗಲೇ ಶಾಸಕ ಹಾಗೂ ಪಕ್ಷದ ರಾಜ್ಯಾಧ್ಯಕ್ಷರಾಗಿರುವ ಬಿ.ವೈ.ವಿಜಯೇಂದ್ರ ನಂತರ ಅವರ ಸಹೋದರ , ಹಾಲಿ ಸಂಸದ ಬಿ.ವೈ.ರಾಘವೇಂದ್ರಗೆ ಅವಕಾಶ ಮಾಡಿಕೊಟ್ಟು ಕುಟುಂಬ ರಾಜಕಾರಣಕ್ಕೆ ಜೈ ಎಂದಿದ್ದಾರೆ.
 • ಚಿಕ್ಕೋಡಿಯಲ್ಲೂ ಪತ್ನಿ ಶಾಸಕಿಯಿದ್ದರೂ ಪತಿ ಅಣ್ಣಾ ಸಾಹೇಬ್‌ ಜೊಲ್ಲೆಗೆ ಎರಡನೇ ಬಾರಿ ಟಿಕೆಟ್‌ ದೊರೆತಿದೆ. ಅದೇ ರೀತಿ ಕಲಬುರಗಿಯಲ್ಲೂ ಮಗ ಡಾ.ಅವಿನಾಶ್‌ ಶಾಸಕ ಇದ್ದರೂ ಅಪ್ಪ ಡಾ.ಉಮೇಶ್‌ ಜಾಧವ್‌ಗೆ ಎರಡನೇ ಬಾರಿ ಟಿಕೆಟ್‌ ದೊರೆತಿದೆ.
 • ಎರಡು ತಿಂಗಳ ಹಿಂದೆ ಬಿಜೆಪಿ ಸೇರಿದ್ದ ಮಾಜಿ ಸಿಎಂ ಜಗದೀಶ್‌ ಶೆಟ್ಟರ್‌ ಅವರ ಹೆಸರು ಬೆಳಗಾವಿ ಕ್ಷೇತ್ರಕ್ಕೆ ಪ್ರಕಟಿಸುವ ನಿರೀಕ್ಷೆಯಿತ್ತು. ಆದರೆ ಆಗಿಲ್ಲ. ಅವರ ಸೊಸೆಗೆ ಅವಕಾಶ ಸಿಗಬಹುದು ಎನ್ನಲಾಗುತ್ತಿದೆ.